
ಡಾ. ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಸಹಕಾರ ರಂಗ ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ: ಯು. ಟಿ. ಖಾದರ್
ಮಂಗಳೂರು: “ಸಹಕಾರ ರತ್ನ” ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮದ ಅಂಗವಾಗಿ ಅಭಿವಂದನಾ ಕಾರ್ಯಕ್ರಮ ಹಾಗೂ 77 ಅರ್ಹ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಸಮಾರಂಭವು ಮಂಗಳೂರಿನ ಕೊಡಿಯಾಲ್ ಬೈಲ್ ಬಳಿ ಇರುವ ಎಸ್ಸಿಡಿಸಿಸಿ (SCDCC) ಬ್ಯಾಂಕಿನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಅವರು, “ಸಹಕಾರಿ ರಂಗದಲ್ಲಿ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಪರಿಶ್ರಮ ಹಾಗೂ ಛಲದಿಂದ ಮಾಡಿದ ಸಾಧನೆ ಅಪಾರ. ಸಹಕಾರಿ ಬ್ಯಾಂಕನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಇಂತಹ ಸಾಧಕರಿಗೆ ಸನ್ಮಾನ ಮಾಡುವುದರಿಂದ ಭವಿಷ್ಯದಲ್ಲಿ ಯುವಜನರಿಗೆ ಇಂತಹ ಸಾಧನೆ ಮಾಡಲು ಪ್ರೇರಣೆ ಸಿಗಲಿದೆ. ಅವರ ನೇತೃತ್ವದಲ್ಲಿ ಸಹಕಾರ ರಂಗವು ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ” ಎಂದು ಶುಭ ಹಾರೈಸಿದರು.
ಅಭಿವಂದನಾ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು, “ಸಹಕಾರಿ ರಂಗದ ಸ್ಥಾನಕ್ಕೆ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ನ್ಯಾಯ ಒದಗಿಸಿ ದಾಖಲೆ ನಿರ್ಮಿಸಿದ್ದಾರೆ. ಜೊತೆಗೆ ಸಾಕಷ್ಟು ಪ್ರತಿಭಾವಂತರನ್ನು ಬೆಳೆಸಿದ್ದಾರೆ. ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಧ್ಯೇಯದೊಂದಿಗೆ ನೆಹರೂ ಅವರ ಕನಸಿನಂತೆ ಸಹಕಾರ ರಂಗವನ್ನು ಮುನ್ನಡೆಸಿದ್ದಾರೆ. ಅವರ 45 ವರ್ಷಗಳ ಸಹಕಾರ ರಂಗದ ಸಾಧನೆಯನ್ನು ಗಮನಿಸಿದಾಗ, ಅವರು ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಧ್ರುವತಾರೆಯಂತೆ ಕಂಗೊಳಿಸುತ್ತಿದ್ದಾರೆ. ಸಹಕಾರಿ ರಂಗದ ಮೂಲಕ ಸಾಮಾಜಿಕ ನ್ಯಾಯಕ್ಕೆ ಕೊಡುಗೆ ನೀಡಿದ ಮಹಾನುಭಾವರ ಸಾಲಿನಲ್ಲಿ ರಾಜೇಂದ್ರ ಕುಮಾರ್ ನಿಲ್ಲುತ್ತಾರೆ. ಈ ಹಿಂದೆ 64 ಕೋಟಿ ರೂ. ಠೇವಣಿಯಿದ್ದ ಎಸ್ಸಿಡಿಸಿಸಿ ಬ್ಯಾಂಕ್ ಇಂದು 7,500 ಕೋಟಿ ರೂ.ಗೂ ಅಧಿಕ ಠೇವಣಿ ಸಂಗ್ರಹಿಸಲು ಸಾಧ್ಯವಾಗಿರುವುದು ಮತ್ತು ಬ್ಯಾಂಕಿನ ಶಾಖೆಗಳು 25ರಿಂದ 113ಕ್ಕೆ ಏರಿಕೆಯಾಗಿರುವುದು ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಸಾಕ್ಷಿ” ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ವಹಿಸಿದ್ದರು. ಶ್ರೀ ಕಟೀಲು ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಅವರು ಆಶೀರ್ವಚನ ನೀಡಿದರು.

ಮುನಿರಾಜು (ಸಿಎಂಡಿ, ಆಕಾಶ್ ಎಜುಕೇಶನ್ ಟ್ರಸ್ಟ್ ಬೆಂಗಳೂರು), ಕಣಚೂರು ಮೋನು (ಸಿಎಂಡಿ, ಕಣಚೂರು ಎಜುಕೇಶನ್ ಟ್ರಸ್ಟ್), ಬಾಲಶೇಖರ್ (ಅಪರ ನಿಬಂಧಕರು, ಸಹಕಾರ ಇಲಾಖೆ), ಕೆ. ಜಗದೀಶ (ಡಿಜಿಎಂ, ನಬಾರ್ಡ್), ದೇವರಾಜ್ (ಎಂ.ಡಿ., ಅಪೆಕ್ಸ್ ಬ್ಯಾಂಕ್ ಬೆಂಗಳೂರು), ಲಿಂಗರಾಜು (ಎಂ.ಡಿ., ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು), ಮೇಘರಾಜ್ ಜೈನ್ (ಮ್ಯಾನೇಜಿಂಗ್ ಟ್ರಸ್ಟೀ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್), ಬ್ಯಾಂಕಿನ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್.
ಭಾಸ್ಕರ್ ಎಸ್. ಕೋಟ್ಯಾನ್, ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೊಟ್ಟು, ದೇವಿಪ್ರಸಾದ್ ಶೆಟ್ಟಿ ಬೆಳಪು, ಮಹೇಶ್ ಹೆಗ್ಡೆ ಎಂ., ಅಶೋಕ್ ಕುಮಾರ್ ಶೆಟ್ಟಿ, ಸದಾಶಿವ ಉಳ್ಳಾಲ್, ಮೋನಪ್ಪ ಶೆಟ್ಟಿ ಎಕ್ಕಾರು, ಎಸ್. ಬಿ. ಜಯರಾಮ್ ರೈ, ರಾಜೇಶ್ ರಾವ್, ಜೈರಾಜ್ ಬಿ. ರೈ, ಎಸ್. ಎನ್. ಮನ್ಮಥ, ಕುಶಲಪ್ಪ ಗೌಡ.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಎಚ್. ಎನ್., ಲಾವಣ್ಯ, ಮಂಗಳೂರು ಕೆಎಂಎಫ್ (KMF) ಅಧ್ಯಕ್ಷ ರವಿರಾಜ್ ಹೆಗ್ಡೆ.
ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು. ನಿತೇಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

ರಾಜ್ಯದ ಲಕ್ಷಾಂತರ ರೈತರಿಗೆ ಸಹಾಯ ಮಾಡಿದ್ದೇವೆ: ಡಾ. ಎಂ. ಎನ್. ರಾಜೇಂದ್ರ ಕುಮಾರ್
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು, “ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳ ಪೈಕಿ ಎಸ್ಸಿಡಿಸಿಸಿ ಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ ಎಂದು ನಬಾರ್ಡ್ ನೀಡಿರುವ ಗೌರವ ತನಗೆ ತೃಪ್ತಿ ತಂದಿದೆ. ದೇಶದ ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕುಗಳು ವಿಲೀನಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ, ಸಹಕಾರಿ ಬ್ಯಾಂಕ್ ಗ್ರಾಮೀಣ ಪ್ರದೇಶಗಳಲ್ಲಿ ಶಾಖೆಗಳನ್ನು ಆರಂಭಿಸಿ ಸೇವೆ ನೀಡುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ನೀಡದ ಸಾಲದ ಸೌಲಭ್ಯವನ್ನು ಸಹಕಾರಿ ಬ್ಯಾಂಕುಗಳು ಸಕಾಲದಲ್ಲಿ ನೀಡಿವೆ. ಈ ಮೂಲಕ ರಾಜ್ಯದ ಲಕ್ಷಾಂತರ ರೈತರಿಗೆ ಸಹಾಯ ಮಾಡಿದ್ದೇವೆ. ಜಿಲ್ಲೆಯ ಪತ್ತಿನ ಸಹಕಾರಿ ಬ್ಯಾಂಕುಗಳು ಉತ್ತಮ ಲಾಭ ಗಳಿಸುತ್ತಿವೆ. ಒಂಬತ್ತು ಜಿಲ್ಲೆಗಳಲ್ಲಿ ‘ನವೋದಯ’ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಗೆ ಸಹಕಾರ ನೀಡಲಾಗಿದೆ. ಎಲ್ಲರ ಆಶೀರ್ವಾದದಿಂದ ಸಮಾಜ ಸೇವೆ ಮಾಡಲು ಸಾಧ್ಯವಾಗಿದೆ” ಎಂದರು.
ಚಿತ್ರ ವರದಿ: ಎಸ್. ಜಗದೀಶ್ಚಂದ್ರ ಅಂಚನ್, ಸೂಟರ್ಪೇಟೆ




