
ಚಿತ್ರ ವರದಿ: ದಿನೇಶ್ ಕುಲಾಲ್
ಮುಂಬೈ: ಶತಮಾನೋತ್ಸವದ ಸಂಭ್ರಮದಲ್ಲಿರುವ ಮುಂಬೈನ ಪ್ರತಿಷ್ಠಿತ ಮೈಸೂರು ಅಸೋಸಿಯೇಷನ್, ಕನ್ನಡದ ಧೀಮಂತ ನಾಟಕಕಾರ ಶ್ರೀರಂಗರ ನೆನಪಿನಲ್ಲಿ ಆಯೋಜಿಸಿರುವ ಮೂರು ದಿನಗಳ(ಫೆಬ್ರವರಿ 27, 28 ಮತ್ತು ಮಾರ್ಚ್ 1) ‘ಶ್ರೀರಂಗ ಸ್ಮರಣೆ’ ನಾಟಕೋತ್ಸವಕ್ಕೆ ಶುಕ್ರವಾರ ಅದ್ಧೂರಿ ಚಾಲನೆ ದೊರೆಯಿತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಶ್ರೀಮತಿ ಉಷಾ ದೇಸಾಯಿ ಮತ್ತು ಪರಿವಾರದ ಸಹಯೋಗದೊಂದಿಗೆ ಮಾಟುಂಗದ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ಈ ಉತ್ಸವ ಹಮ್ಮಿಕೊಳ್ಳಲಾಗಿದೆ.

ಕಲೆ-ಕಲಾವಿದರ ಆಶ್ರಯತಾಣ: ಉಷಾ ದೇಸಾಯಿ
ನಾಟಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀರಂಗರ ಪುತ್ರಿ ಉಷಾ ದೇಸಾಯಿ ಮಾತನಾಡಿ, “ಮೈಸೂರು ಅಸೋಸಿಯೇಷನ್ ಕಳೆದ ಒಂದು ಶತಮಾನದಿಂದ ಕಲೆ ಮತ್ತು ಕಲಾವಿದರಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ನನ್ನ ತಂದೆಯವರು ರಂಗಭೂಮಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವ ಮೂಲಕ ಈ ಸಂಸ್ಥೆಯು ಕಲಾವಿದರಿಗೆ ಆಶ್ರಯತಾಣವಾಗಿದೆ,” ಎಂದು ಹಾರೈಸಿದರು.
ಸೃಜನಶೀಲತೆಯ ಕೇಂದ್ರ: ಡಾ. ಕೆ.ವಿ. ನಾಗರಾಜ ಮೂರ್ತಿ
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ. ವಿ. ನಾಗರಾಜ ಮೂರ್ತಿ ಮಾತನಾಡಿ, “ಹಲವಾರು ಭಾಷೆಗಳ ನಡುವೆ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಮೈಸೂರು ಅಸೋಸಿಯೇಷನ್ ಪಾತ್ರ ದೊಡ್ಡದು. ಇದು ಕೇವಲ ಕ್ರಿಯಾಶೀಲ ಸಂಸ್ಥೆಯಲ್ಲ, ಸೃಜನಶೀಲತೆಯ ಕೇಂದ್ರವೂ ಹೌದು. ನೂರು ವರ್ಷ ಪೂರೈಸಿ, 101ನೇ ವರ್ಷದ ಮೊದಲ ದಿನವೇ ಈ ವೇದಿಕೆಯಲ್ಲಿ ನಾಟಕ ಪ್ರದರ್ಶನಗೊಳ್ಳುತ್ತಿರುವುದು ಅಭಿಮಾನದ ಸಂಗತಿ,” ಎಂದರು. ಅಲ್ಲದೆ, ಹೊರನಾಡಿನಲ್ಲಿ ಕನ್ನಡ ಕಲೆ ಪ್ರಸಾರ ಮಾಡುತ್ತಿರುವ ಸಂಸ್ಥೆಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಡಾ. ಬಿ.ಆರ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, “ಸಂಸ್ಥೆಯು ನೂರು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಮರಾಠಿ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಯೋಗಿಸುವ ಮೂಲಕ ನಾವು ಭಾಷೆ ಮತ್ತು ಸಂಸ್ಕೃತಿಗೆ ಮಹತ್ವ ನೀಡುತ್ತಾ ಬಂದಿದ್ದೇವೆ. ಸರ್ಕಾರದ ಆರ್ಥಿಕ ಸಹಕಾರದೊಂದಿಗೆ ಈ ಶತಮಾನೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕನ್ನಡಿಗರು ಸಹಕರಿಸಬೇಕು,” ಎಂದು ಕೋರಿದರು.
ವೇದಿಕೆಯಲ್ಲಿ ಪ್ರೊ. ಬನ್ನಟ್ಟಿ ಉಪಸ್ಥಿತರಿದ್ದರು. ಅಸೋಸಿಯೇಷನ್ ಜೊತೆ ಕಾರ್ಯದರ್ಶಿ ನಾರಾಯಣ ನವಿಲೇಕರ್ ಕಾರ್ಯಕ್ರಮ ನಿರೂಪಿಸಿದರು.
ಪ್ರೇಕ್ಷಕರ ಮನಗೆದ್ದ ‘ದೊರೆ ಈಡಿಪಸ್’
ಸಭಾ ಕಾರ್ಯಕ್ರಮದ ಬಳಿಕ ಶಶಿಧರ್ ಭಾರಿಘಾಟ್ ನಿರ್ದೇಶನದ, ಪಿ. ಲಂಕೇಶ್ ಅನುವಾದಿತ ವಿಶ್ವಪ್ರಸಿದ್ಧ ಗ್ರೀಕ್ ರುದ್ರನಾಟಕ ‘ದೊರೆ ಈಡಿಪಸ್’ ಪ್ರದರ್ಶನಗೊಂಡಿತು. ‘ರಂಗ ಭಾರತಿ’ ತಂಡದ ಕಲಾವಿದರು ವಿಧಿ ಮತ್ತು ಮನುಷ್ಯನ ನಡುವಿನ ಸಂಘರ್ಷವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟರು. ತಂದೆಯನ್ನೇ ಕೊಂದು, ತಾಯಿಯನ್ನು ಮದುವೆಯಾಗುವ ವಿಧಿಯ ಆಟಕ್ಕೆ ಸಿಲುಕಿ ನಲುಗುವ ಈಡಿಪಸ್ನ ದುರಂತ ಕಥೆ ಪ್ರೇಕ್ಷಕರಲ್ಲಿ ಕರುಣಾರಸ ಹಾಗೂ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಯಶಸ್ವಿಯಾಯಿತು.




