July 20, 2026
Mumbai News Kannada
ಲೇಖನ

ಉದಯೋನ್ಮುಖ ತಾರೆ ಐಶ್ವರ್ಯಾ ಶೆಟ್ಟಿ: ಕನ್ನಡ ಚಿತ್ರರಂಗದ ಹೊಸ ಆಯಾಮ









‘ತದ್ವಿರುದ್ಧ’ ಎಂಬ ವಿಭಿನ್ನ ಶೀರ್ಷಿಕೆಯ ಕನ್ನಡ ಚಲನಚಿತ್ರದ ಮೂಲಕ ಬೆಳ್ಳಿಪರದೆಯ ಮೇಲೆ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದ್ದಾರೆ ನಟಿ ಐಶ್ವರ್ಯಾ ಬಾಲಕೃಷ್ಣ ಶೆಟ್ಟಿ. ಮುಂಬೈ ಹುಡುಗಿ, ಕನಸುಗಾರ್ತಿ ಹಾಗೂ ಅದ್ಭುತ ಅಭಿನೇತ್ರಿಯಾದ ಇವರ ಸಿನಿ ಪಯಣವು ತೀವ್ರ ಉತ್ಸಾಹ, ಕಠಿಣ ಶಿಸ್ತು ಮತ್ತು ಅಚಲ ನಿರ್ಧಾರಗಳ ಒಂದು ಸಮ್ಮಿಶ್ರಣವಾಗಿದೆ. ಜುಲೈ 31 ರಂದು ಬಿಡುಗಡೆಯಾಗಲಿರುವ ತಮ್ಮ ಚೊಚ್ಚಲ ಚಿತ್ರದ ಮೂಲಕ ಪ್ರೇಕ್ಷಕರಿಗೆ ಒಂದು ಶಕ್ತಿಯುತ ಅಭಿನಯವನ್ನು ಉಡುಗೊರೆಯಾಗಿ ನೀಡಲು ಅವರು ಸಿದ್ಧರಾಗಿದ್ದಾರೆ.

​ಮೂಲತಃ ಬ್ರಹ್ಮಾವರ ತಾಲೂಕಿನ ಕುಂಜಾಲು ಸಮೀಪದ ಆರೂರು ಗ್ರಾಮದ ಕುರುಡುಂಜೆ ನಡುಮನೆ ಬಾಲಕೃಷ್ಣ ಶೆಟ್ಟಿ ಹಾಗೂ ಕೋಟ, ಆಚ್ಲಾಡಿ, ಮಧುವನ ಕೋಮೇ ನಿವಾಸಿ ಶ್ರೀಮತಿ ಹೇಮಲತಾ ಬಾಲಕೃಷ್ಣ ಶೆಟ್ಟಿ ದಂಪತಿಗಳ ಪ್ರೀತಿಯ ಮುದ್ದಿನ ಮಗಳೇ ಈ ಐಶ್ವರ್ಯಾ ಶೆಟ್ಟಿ (ಆರೂರು ನಡುಮನೆ). ಮುಂಬೈನಲ್ಲಿ ಹುಟ್ಟಿ ಬೆಳೆದ ಇವರು, ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಮುಂಬೈ ಸೆಂಟ್ರಲ್‌ನ ಸಾತ್ ರಸ್ತೆಯ ಸೈಂಟ್ ಇಗ್ನೇಷಿಯಸ್ ಹೈಸ್ಕೂಲ್ ಹಾಗೂ ಉನ್ನತ ವ್ಯಾಸಂಗವನ್ನೂ ವಿಲ್ಸನ್ ಕಾಲೇಜ್ ಮುಂಬೈನಲ್ಲಿ ಪೂರೈಸಿದರು.
​ಇವರ ಬಾಲ್ಯದ ದಿನಗಳ ಮೇಲೆ ತಾಯಿಯ ತವರೂರಿನ ಪ್ರಭಾವ ಗಾಢವಾಗಿತ್ತು. ಬಾಲ್ಯದಲ್ಲೇ ತಮ್ಮ ಚಿಕ್ಕಪ್ಪ (ಯಕ್ಷಕಲಾ ಸಂಘಟಕ, ಯಕ್ಷಪ್ರಿಯ, ಯಕ್ಷ ಕಲಾವಿದರುಗಳ ಕಾಮಧೇನು ಎಂದು ಮುಂಬೈ ಮಹಾನಗರದಲ್ಲಿ ಪ್ರಸಿದ್ಧಿ ಪಡೆದ) ಶ್ರೀ ಸೀತಾರಾಮ ಶೆಟ್ಟಿ ಆರೂರು ಇವರೊಂದಿಗೆ ಯಕ್ಷಗಾನ, ತಾಳಮದ್ದಳೆ ಹಾಗೂ ಕೋಲ ಮುಂತಾದ ಕರಾವಳಿಯ ಸಾಂಸ್ಕೃತಿಕ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಹೋಗಿ ಅದರ ಸವಿಯನ್ನು ಸವಿದಿದ್ದರು. ಚಿಕ್ಕಪ್ಪ ಸೀತಾರಾಮ ಶೆಟ್ಟಿ ಅವರ ಮುದ್ದಿನ ಮಗಳಾದ ಇವರು, ಚಿಕ್ಕಪ್ಪನ ಎಲ್ಲಾ ಯಕ್ಷಗಾನ ಲೀಲೆಗಳನ್ನು ಬಹಳ ಹತ್ತಿರದಿಂದ ನೋಡುತ್ತಾ ಬೆಳೆದವರು.

​ಬಾಲ್ಯದಿಂದಲೇ ನಾಟಕೀಯ ಕಲೆಯತ್ತ ವಿಶೇಷ ಒಲವು ಹೊಂದಿದ್ದ ಐಶ್ವರ್ಯಾ, ಶಾಲೆಯ ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಮುಂದೆ ಮುಂಬೈನ ಪ್ರಖ್ಯಾತ ‘ಅನುಪಮ್ ಖೇರ್ ಸಂಸ್ಥೆ’ಯಿಂದ ಅಭಿನಯದ ತರಬೇತಿಯನ್ನು ಹಾಗೂ ‘ಶಿಯಾಮಾಕ್ ದಾವರ್ ನೃತ್ಯ ಸಂಸ್ಥೆ’ಯಿಂದ ವೃತ್ತಿಪರ ನೃತ್ಯ ತರಬೇತಿಯನ್ನು ಪಡೆದು ತಮ್ಮ ಪ್ರತಿಭೆಗೆ ಮತ್ತಷ್ಟು ಮೆರುಗು ನೀಡಿದರು.
​ತಮ್ಮ ಕಠಿಣ ಪರಿಶ್ರಮದಿಂದ ಅಂತರರಾಷ್ಟ್ರೀಯ ವೇದಿಕೆಗಳಲ್ಲೂ ಭಾರತವನ್ನು ಪ್ರತಿನಿಧಿಸುವ ಹೆಗ್ಗಳಿಕೆ ಇವರದ್ದಾಗಿದೆ. ಫಿಲಿಪೈನ್ಸ್‌ನಲ್ಲಿ ನಡೆದ ಪ್ರತಿಷ್ಠಿತ ‘ಮಿಸ್ ವರ್ಲ್ಡ್ ಟೂರಿಸಂ’ ಸ್ಪರ್ಧೆಯಲ್ಲಿ ಜಗತ್ತಿನ 50 ದೇಶಗಳ ಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಿ, ‘ಬೆಸ್ಟ್ ಇನ್ ಟ್ಯಾಲೆಂಟ್’ (ಅತ್ಯುತ್ತಮ ಪ್ರತಿಭೆ) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅಲ್ಲದೆ, ಈ ಜಾಗತಿಕ ಸ್ಪರ್ಧೆಯಲ್ಲಿ ಅಗ್ರ 10 ಅಂತಿಮ ಸ್ಪರ್ಧಿಗಳಲ್ಲಿ (Top 10 finalists) ಒಬ್ಬರಾಗಿ ಹೊರಹೊಮ್ಮಿದರು.

​ತಂದೆಯ ಸಿನಿ/ರಂಗಭೂಮಿ ಆಸಕ್ತಿಗಳೇ ಇವರಿಗೆ ಪ್ರೇರಣೆಯಾಗಿದ್ದು, ಇವರ ಪ್ರತಿಯೊಂದು ಹೆಜ್ಜೆಯಲ್ಲೂ ತಂದೆ ಬಾಲಕೃಷ್ಣ ಶೆಟ್ಟಿ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಮಗಳ ಆಸೆ-ಆಕಾಂಕ್ಷೆಗಳನ್ನು ಈಡೇರಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ತಾಯಿ ಹೇಮಲತಾ ಶೆಟ್ಟಿ ಇವರ ಪ್ರಮುಖ ಶಕ್ತಿ. ಇದರೊಂದಿಗೆ ಐಶ್ವರ್ಯಾ ಅವರ ಮುದ್ದಿನ ಸಹೋದರ ಅಕ್ಷಯ್ ಶೆಟ್ಟಿ ಅವರು ದುಬೈನಲ್ಲಿ ಉದ್ಯೋಗದಲ್ಲಿದ್ದು, ತನ್ನ ಮುದ್ದಿನ ತಂಗಿಯ ಪ್ರತಿಯೊಂದು ಸಾಧನೆಗೂ ಸದಾ ಪ್ರೋತ್ಸಾಹ ಹಾಗೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಜೊತೆಗೆ ಇವರು ಅತ್ತಿಗೆ ಮಹೇಕ್ ರವರ ಮುದ್ದಿನ ನಾದಿನಿಯಾಗಿದ್ದಾರೆ.

​ಅಷ್ಟೇ ಅಲ್ಲದೆ ಚಿಕ್ಕಮ್ಮ ಶಶಿಕಲಾ ರವಿರಾಜ್ ಶೆಟ್ಟಿ, ಚಿಕ್ಕಪ್ಪ ರವಿರಾಜ್ ಶೆಟ್ಟಿ ಗೋವಾ, ಮಾವ ನವೀನ್ ಶೆಟ್ಟಿ, ಮಾಮಿ ಅಂಬಿಕಾ ನವೀನ್ ಶೆಟ್ಟಿ, ಅಜ್ಜಿ ಪ್ರೇಮ ಶೆಟ್ಟಿ ಅವರ ಕುಟುಂಬದ ಹಿರಿಯರೆಲ್ಲರ ಆಶೀರ್ವಾದ ಮತ್ತು ಪ್ರೋತ್ಸಾಹ ಇವರ ಬೆನ್ನಿಗಿದೆ.

​ತಮ್ಮದೇ ಆದ ಸ್ವಂತ ಅನುಭವಗಳಿಂದ ಜೀವನದ ಅಮೂಲ್ಯ ಪಾಠವನ್ನು ಕಲಿತಿರುವ ಐಶ್ವರ್ಯಾ ಶೆಟ್ಟಿ ಅವರ ಮಾತುಗಳಲ್ಲೇ ಹೇಳುವುದಾದರೆ:
​”ಜೀವನವು ಯಾವಾಗಲೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಆದರೆ ಅಲ್ಲಿಂದಲೇ ನಮ್ಮ ನಿಜವಾದ ಬೆಳವಣಿಗೆ ಆರಂಭವಾಗುತ್ತದೆ. ನಮ್ಮ ಯೋಜನೆಗಳು, ಸಮಯ ಎಲ್ಲವೂ ಪರಿಪೂರ್ಣವಾಗಿರಬೇಕು ಎಂದು ನಂಬಿದ್ದ ನನಗೆ ಜೀವನವು ವಿಭಿನ್ನ ಪಾಠ ಕಲಿಸಿತು. ನಮ್ಮ ನಿಯಂತ್ರಣದಲ್ಲಿಲ್ಲದ ವಿಷಯಗಳನ್ನು ಬಿಟ್ಟುಬಿಟ್ಟು, ನಾವು ಏನಾಗಬಹುದು ಎಂಬುದರ ಕಡೆಗೆ ಗಮನ ಹರಿಸಬೇಕು. ಪ್ರತಿಯೊಂದು ತಿರಸ್ಕಾರಗಳು, ವೈಫಲ್ಯಗಳು ಮತ್ತು ನೋವುಗಳು ಬದುಕಿನ ಅಂತ್ಯವಲ್ಲ, ಅವು ನಮ್ಮನ್ನು ಬಲಶಾಲಿಯಾಗಿಸುವ ಮರುನಿರ್ದೇಶನಗಳು.”
​ಅವರನ್ನು ಸದಾ ಮುನ್ನಡೆಸುವ ಪ್ರಮುಖ ಶಕ್ತಿಗಳು:
​ಕುಟುಂಬ ಮತ್ತು ಅವರಲ್ಲಿರುವ ಅಚಲ ನಂಬಿಕೆ.
​ಹೊಸ ವಿಷಯಗಳನ್ನು ಕಲಿಯುವ ಆನಂದ.
​ಕಠಿಣ ದಿನಗಳಲ್ಲೂ ಕಾಯ್ದುಕೊಳ್ಳುವ ಶಿಸ್ತು.
​ಬದುಕಿನ ಸಣ್ಣಪುಟ್ಟ ವಿಷಯಗಳಿಗೂ ಸಲ್ಲಿಸುವ ಕೃತಜ್ಞತೆ.
​”ನೀವು ಎಲ್ಲವನ್ನೂ ಮೊದಲೇ ಅರಿತಿರಬೇಕಾದ ಅಗತ್ಯವಿಲ್ಲ, ಕೇವಲ ಮುಂದಿನ ಸರಿಯಾದ ಹೆಜ್ಜೆಯನ್ನು ಇರಿಸುತ್ತಾ ಸಾಗಿ” ಎಂದು ನಂಬುವ ಐಶ್ವರ್ಯಾ ಶೆಟ್ಟಿ ಅವರ ಮುಂಬರುವ ಚಿತ್ರ ‘ತದ್ವಿರುದ್ಧ’ ದೊಡ್ಡ ಯಶಸ್ಸನ್ನು ಕಾಣಲಿ ಹಾಗೂ ಕನ್ನಡ ಚಿತ್ರರಂಗದಲ್ಲಿ ಅವರು ಉನ್ನತ ಶಿಖರವನ್ನು ಏರಲಿ ಎಂದು ಹಾರೈಸೋಣ.



Related posts

ಹನಿ ಕತೆ: ಪರಿಹಾರ

Vani Prasad

ಭಾರತ – ಚೀನಾ 62 ರ ಯುದ್ಧದನೆನಪುಗಳ ಅರುಣಾಚಲಕ್ಕೊಂದು ಸುತ್ತು

Mumbai News Desk

ರಾಜಪ್ರಭುತ್ವದ ಕನ್ನಡಿಯಲ್ಲಿ ಕಂಡ ‘ಕಾಮಾಗ್ನಿಮಿತ್ರ’

Chandrahas

ಮೈಸಂದಾಯೆ

Mumbai News Desk

ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಜೆರಿಮರಿ – ತಿರುಪತಿಯಲ್ಲಿ ಹತ್ತು ವರ್ಷಗಳಿಂದ ನಿರಂತರ ಭಜನಾ ಸೇವೆ.

Mumbai News Desk

“ಜ್ಞಾನ ವಿಕಾಸ ಮಂಡಳದ ಮೆಹತಾ ಕಾಲೇಜಿನ ನಲ್ಲಿ ಕನ್ನಡ ನಾಟಕ ಚಾಮ ಚಲುವೆ ಮತ್ತು ಸೋಲಿಗರ ಬಾಲೆ ಯಶಸ್ವಿ ಪ್ರದರ್ಶನ.”

Mumbai News Desk