28 C
Mumbai
October 5, 2026
Mumbai News Kannada
ಮುಂಬಯಿ

ಶ್ರೀ ರಜಕ ಸಂಘ ಡೊಂಬಿವಲಿ ವಲಯದ ವತಿಯಿಂದ ಸಂಭ್ರಮದ ‘ಆಟಿಡ್ ಒಂಜಿ ದಿನ’ ಕಾರ್ಯಕ್ರಮ



ಡೊಂಬಿವಲಿ: ಶ್ರೀ ರಜಕ ಸಂಘ ಡೊಂಬಿವಲಿ ಪ್ರಾದೇಶಿಕ ವಲಯದ ವತಿಯಿಂದ ತುಳು ಸಂಸ್ಕೃತಿಯ ಒಂದು ಭಾಗವಾದ ಆಟಿ ತಿಂಗಳ ವಿಶೇಷತೆಯನ್ನು ಸಾರುವ ‘ಆಟಿಡ್ ಒಂಜಿ ದಿನ’ ಕಾರ್ಯಕ್ರಮವು ದಿನಾಂಕ 16-08-2026ರ ಭಾನುವಾರದಂದು ಡೊಂಬಿವಲಿ ವಲಯದ ಕಚೇರಿಯಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ವಲಯದ ಸದಸ್ಯರಿಂದ ಶ್ರದ್ಧಾ-ಭಕ್ತಿಯ ಭಜನೆ ನಡೆಯಿತು. ವೇದಿಕೆಯಲ್ಲಿ ವಲಯದ ಅಧ್ಯಕ್ಷರಾದ ಶ್ರೀ ಜಯರಾಜ್ ಆರ್. ಬಂಗೇರ, ಉಪಾಧ್ಯಕ್ಷರಾದ ಶ್ರೀ ಬಿ. ಕೆ. ಜಗನ್ನಾಥ್, ಮಹಿಳಾ ಅಧ್ಯಕ್ಷರಾದ ಶ್ರೀಮತಿ ಗೀತಾ ಆರ್. ಕುಂದರ್, ಯುವ ರಜಕದ ಅಧ್ಯಕ್ಷರಾದ ಶ್ರೀ ಶ್ರೀಜಿತ್ ಕುಂದರ್, ಸಂಯೋಜಕರು ಹಾಗೂ ಹಿರಿಯ ಮಾರ್ಗದರ್ಶಕರಾದ ಶ್ರೀ ಬಿ. ಎಂ. ಸಾಲ್ಯಾನ್ ಮತ್ತು ಶ್ರೀ ಬಿ. ಡಿ. ಸಾಲ್ಯಾನ್ ಉಪಸ್ಥಿತರಿದ್ದರು.

ಬಳಿಕ ಸಂಘದ ಏಳಿಗೆಗಾಗಿ ಶ್ರಮಿಸಿ ದಿವಂಗತರಾದ ಹಿರಿಯ-ಕಿರಿಯ ಸದಸ್ಯರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ವಲಯದ ಕಾರ್ಯಕಾರಿ ಸಮಿತಿಯ ಸದಸ್ಯೆ ಶ್ರೀಮತಿ ಜಯಶ್ರೀ ಪಿ. ಕುಂದರ್ ಅವರು ತುಳುನಾಡಿನ ಆಟಿ ತಿಂಗಳ ಮಹತ್ವ, ಅಂದಿನ ಕಷ್ಟದ ದಿನಗಳ ಜೀವನಶೈಲಿ, ಆಟಿ ಅಮಾವಾಸ್ಯೆಯಂದು ಹಾಲೆ ಮರದ ಕೆತ್ತೆಯ ಕಷಾಯ ಸೇವನೆಯ ಮಹತ್ವ, ಆಟಿ ಕಳೆಂಜನ ಹಿನ್ನೆಲೆ ಹಾಗೂ ಆಟಿ ತಿಂಗಳ ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು.

ಸಂಯೋಜಕರು ಹಾಗೂ ಹಿರಿಯ ಸದಸ್ಯರಾದ ಶ್ರೀ ಬಿ. ಎಂ. ಸಾಲ್ಯಾನ್ ಮಾತನಾಡಿ, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಘದ ಏಳಿಗೆಗಾಗಿ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಆಶಿಸಿದರು. ಮತ್ತೊಬ್ಬ ಹಿರಿಯ ಸದಸ್ಯರಾದ ಶ್ರೀ ಬಿ. ಡಿ. ಸಾಲ್ಯಾನ್ ಅವರು ಮಹಿಳಾ ಸದಸ್ಯರ ಒಗ್ಗಟ್ಟನ್ನು ಶ್ಲಾಘಿಸಿ, ಯುವ ಸದಸ್ಯರು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಜಯರಾಜ್ ಆರ್. ಬಂಗೇರ ಅವರು ಮಾತನಾಡಿ, ‘ಆಟಿಡ್ ಒಂಜಿ ದಿನ’ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಮಹಿಳಾ ಕಾರ್ಯಕಾರಿ ಸಮಿತಿಯನ್ನು ಅಭಿನಂದಿಸಿದರು. ಜತೆಗೆ ವಲಯದ ಮುಂದಿನ ಯೋಜನೆಗಳನ್ನು ವಿವರಿಸಿ ಎಲ್ಲರ ಸಹಕಾರ ಕೋರಿದರು.

ನಂತರ ಸದಸ್ಯರಿಂದ ಹಾಡು, ಒಗಟುಗಳು ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. ವಲಯದ ಕಾರ್ಯದರ್ಶಿ ಶ್ರೀ ನಿತೀಶ್ ಸಾಲ್ಯಾನ್, ಯುವ ರಜಕದ ಉಪಾಧ್ಯಕ್ಷ ಶ್ರೀ ಸಾಹಿಲ್ ಹೆಚ್. ಮಡಿವಾಳ ಹಾಗೂ ಕಾರ್ಯದರ್ಶಿ ಕುಮಾರಿ ಲಾಸ್ಯ ಜೆ. ಬಂಗೇರ ಅವರು ಸದಸ್ಯರಿಗಾಗಿ ಆಕರ್ಷಕ ಆಟಗಳನ್ನು (ಫನ್ ಗೇಮ್ಸ್) ನಡೆಸಿ ಗಮನ ಸೆಳೆದರು.

ಮಹಿಳಾ ಕಾರ್ಯಕಾರಿ ಸಮಿತಿಯ ಆಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವು ಯುವ ರಜಕ ಹಾಗೂ ಸಮಸ್ತ ಸದಸ್ಯರ ಸಹಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ಉಷಾ ಎನ್. ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಸದಸ್ಯರು ಮನೆಯಲ್ಲೇ ಪ್ರೀತಿಯಿಂದ ತಯಾರಿಸಿ ತಂದಿದ್ದ ಆಟಿ ತಿಂಗಳ ಬಗೆಬಗೆಯ ಸಾಂಪ್ರದಾಯಿಕ ಹಾಗೂ ರುಚಿಕರ ಖಾದ್ಯಗಳ ರಸದೌತಣವನ್ನು ಎಲ್ಲರೂ ಸವಿದರು.



Related posts

ಮುಂಬೈನಲ್ಲಿ ಗಣೇಶನ ಆಗಮನಾ ಮೆರವಣಿಗೆ ವೇಳೆ ದುರಂತ: ಭುಲೇಶ್ವರಚಾ ರಾಜನ ಮೂರ್ತಿ ವಾಲಿ ಇಬ್ಬರ ಸಾವು, ಹಲವರಿಗೆ ಗಂಭೀರ ಗಾಯ

Mumbai News Desk

ಅಂಧೇರೀ ಪಶ್ಚಿಮದ ಶ್ರೀ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ಗೋವಿಂದ ಪುತ್ರನ್ ಒಡೆಯರಬೆಟ್ಟು ಆಯೋಜನೆಯಲ್ಲಿ ಕುಳಿತು ಹಾಗೂ ಕುಣಿತ ಭಜನೆ ಸ್ಪರ್ಧೆ .

Mumbai News Desk

2023/24 ಎಚ್ ಎಸ್ ಸಿ . ಪರೀಕ್ಷೆಯಲ್ಲಿ  ಆಶಿಶ್ ಅಶೋಕ್ ಕುಲಾಲ್ ಶೇ.84.33%

Mumbai News Desk

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ )ಥಾಣೆ ಸಮಿತಿಯ ಅಧ್ಯಕ್ಷರಾಗಿ ಗೋಪಾಲ ಎಸ್ ಚಂದನ್ ಆಯ್ಕೆ.

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷರಾಗಿ ಹರೀಶ್ ಜಿ ಅಮೀನ್ ಆಯ್ಕೆ

Mumbai News Desk