ಮದರ್ ಇಂಡಿಯಾ ಕನ್ನಡ ಧರ್ಮಾರ್ಥ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಫೌಂಡೇಶನ್ ಹಾಗೂ 19ನೇ ಈಸ್ಟ್ ಬಾಂಬೆ ಸ್ಕೌಟ್ ಗ್ರೂಪ್ ವತಿಯಿಂದ ಸನ್ಮಾನ
ಜಯ ಸಿ. ಪೂಜಾರಿ, ಕೆಳಾರ್ಕಳ ಬೆಟ್ಟು
ಮುಂಬಯಿ : ಮನುಷ್ಯನ ಜೀವನದಲ್ಲಿ ಧರ್ಮ, ಯಶಸ್ಸು, ನೀತಿ, ದಕ್ಷತೆ, ಒಳ್ಳೆಯ ನಡತೆ, ಸಹನೆ, ತಾಳ್ಮೆ, ಮಾನವೀಯತೆ ಹಾಗೂ ಪರೋಪಕಾರದ ಗುಣಗಳು ಅತ್ಯಂತ ಮಹತ್ವದ್ದಾಗಿವೆ. ಇಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕುವ ವ್ಯಕ್ತಿಗಳು ಎಲ್ಲರ ಗೌರವಕ್ಕೆ ಪಾತ್ರರಾಗುತ್ತಾರೆ. ಅಂತಹ ಅಪರೂಪದ ವ್ಯಕ್ತಿತ್ವಗಳಲ್ಲಿ ಸುಂದರ ಡಿ. ಪೂಜಾರಿ ಅವರೂ ಒಬ್ಬರು.
ಬಾಲ್ಯದಿಂದಲೇ ಶಿಸ್ತು, ಸಂಯಮ ಹಾಗೂ ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡ ಸುಂದರ ಪೂಜಾರಿ ಅವರು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಹಲವು ಸವಾಲುಗಳನ್ನು ಎದುರಿಸಿ ಸಾಧನೆಯ ಹಾದಿಯಲ್ಲಿ ಮುನ್ನಡೆದವರು. ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಆತ್ಮವಿಶ್ವಾಸ ಕಳೆದುಕೊಳ್ಳದೆ, ಪರಿಶ್ರಮ ಮತ್ತು ನಿರಂತರ ಪ್ರಯತ್ನದ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಬಾಲ್ಯದಲ್ಲಿಯೇ ಸ್ಕೌಟ್ಸ್ ಚಟುವಟಿಕೆಗಳತ್ತ ಆಕರ್ಷಿತರಾಗಿ, ಅದರ ಶಿಸ್ತು, ಸೇವಾ ಮನೋಭಾವ ಮತ್ತು ನಾಯಕತ್ವದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರು.
ಮುಂಬಯಿಗೆ ಬಂದ ನಂತರ ಆರಂಭದಲ್ಲಿ ದುಡಿಯಲು ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಪಾನ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಾ ತಮ್ಮ ಬದುಕಿನ ಬಂಡಿಯನ್ನು ಮುನ್ನಡೆಸಿದರು. ಬಾಲ್ಯದಿಂದಲೇ ಕಲಿಕೆಯ ಆಸಕ್ತಿ ಹೊಂದಿದ್ದ ಅವರು 1971ರಲ್ಲಿ ಏಳನೇ ತರಗತಿಗೆ ಪ್ರವೇಶ ಪಡೆದು, 1974ರಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಿದರು. 1981ರಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದರು.
ಶಾಲಾ ದಿನಗಳಲ್ಲಿಯೇ 1971ರಲ್ಲಿ ಸ್ಕೌಟ್ಸ್ ಚಟುವಟಿಕೆಗೆ ಭರ್ತಿ ಪಡೆದು, ಒಟ್ಟು 17 ಸ್ಕೌಟ್ ಬ್ಯಾಡ್ಜ್ಗಳನ್ನು ಗಳಿಸಿ ಪ್ರತಿಭೆಯನ್ನು ಮೆರೆದರು. ಬಳಿಕ ಬ್ಯಾಂಕ್ ಒಫ್ ಬರೋಡದಲ್ಲಿ ಉದ್ಯೋಗಿಯಾಗಿ ತಮ್ಮ ಸೇವೆಯನ್ನು ಮುಂದುವರಿಸಿ, ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಬ್ಯಾಂಕ್ ಒಫ್ ಬರೋಡ ಉದ್ಯೋಗ ಕ್ಷೇತ್ರದಲ್ಲಿ ಅವರ 37 ವರ್ಷಗಳ ನಿರಂತರ ಸೇವೆಯನ್ನು ಗುರುತಿಸಿ 2007ರಲ್ಲಿ ವಿಶೇಷ ಗೌರವಕ್ಕೆ ಪಾತ್ರರಾದರು.
ಗೌರವ ಸಮಾರಂಭ
ಮದರ್ ಇಂಡಿಯಾ ಕನ್ನಡ ಧರ್ಮಾರ್ಥ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಫೌಂಡೇಶನ್ ಹಾಗೂ 19ನೇ ಈಸ್ಟ್ ಬಾಂಬೆ ಸ್ಕೌಟ್ ಗ್ರೂಪ್ ಬೋರಾ ಬಜಾರ್ ಮುಂಬಯಿ ಇವರ ವತಿಯಿಂದ ಆಯೋಜಿಸಲಾಗಿರುವ ಏಳನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ಸುಂದರ ಡಿ. ಪೂಜಾರಿ ಅವರನ್ನು ಗೌರವಿಸಲಾಗುತ್ತಿದೆ.
ನವೆಂಬರ್ 21 ಮತ್ತು 22ರಂದು ಭಾಯಂದರ್ ಪಶ್ಚಿಮದ ಪಾಲಿ ಬೀಚ್ ರೆಸಾರ್ಟ್ ವಾಟರ್ ಪಾರ್ಕ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಮದರ್ ಇಂಡಿಯಾ ಕನ್ನಡ ಧರ್ಮಾರ್ಥ ರಾತ್ರಿ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಸ್ಕೌಟ್ ಮಿತ್ರರು ಕೂಡಿ ಸ್ಕೌಟ್ಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸುಂದರ ಡಿ. ಪೂಜಾರಿ ಅವರ ಸೇವೆ, ಸಾಧನೆ ಮತ್ತು ಶಿಸ್ತಿನ ಜೀವನವನ್ನು ಗುರುತಿಸಿ ಗೌರವಿಸಲಾಗುತ್ತಿದೆ.
ಸಂಘಟಕರ ಮೆಚ್ಚುಗೆ
ಈ ಸಂಸ್ಥೆಗಳ ಮೂಲಕ ಹಲವು ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ ಹಾಗೂ ಸ್ಕೌಟ್ಸ್ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಂಘಟನೆಯ ಬೆಳವಣಿಗೆಗೆ ಶ್ರಮಿಸಿದ ಹಿರಿಯರು ಹಾಗೂ ಸೇವಾ ಮನೋಭಾವದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.
ಮದರ್ ಇಂಡಿಯಾ ಶಾಲೆಯ ಹಳೆ ವಿದ್ಯಾರ್ಥಿ ಸ್ಕೌಟ್ ಶಿಕ್ಷಕರಾದ ರಾಮದಾಸ್ ಎಚ್ . ನಾಯಕ್, ಮಂದಾರ ಎನ್. ಹೆಗ್ಡೆ ಹಾಗೂ ಮುದ್ದು ಕೆ. ಪೂಜಾರಿ ಅಲ್ಲದೆ ಮದರ್ ಇಂಡಿಯಾ ಹಳೆ ವಿದ್ಯಾರ್ಥಿ ಫೌಂಡೇಶನ್ ನ ಅಧ್ಯಕ್ಷ ಹಾಗೂ ಪ್ರೆಸಿಡೆಂಟ್ ಸ್ಕೌಟ್ ಆಗಿರುವ ಸುರೇಂದ್ರ ಎ ಪೂಜಾರಿ ಅವರೆಲ್ಲರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ, ಶಾಲೆಯ ಹಳೆ ವಿದ್ಯಾರ್ಥಿಗಳು, ಸ್ಕೌಟ್ಸ್ ಪದಾಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮದರ್ ಇಂಡಿಯಾ ಸ್ಕೌಟ್ ಗ್ರೂಪ್ನ ಕಲಿಕಾ ಚಟುವಟಿಕೆಗಳು, ಸೇವಾ ಮನೋಭಾವ ಮತ್ತು ನಿಯಮಾನುಸರಣೆಯನ್ನು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡಿರುವ ಸುಂದರ ಡಿ. ಪೂಜಾರಿ ಅವರ ಸಾಧನೆಯನ್ನು ಸಂಘಟಕರು ಶ್ಲಾಘಿಸಿದ್ದಾರೆ.ಅಲ್ಲದೆ ಇವರೊಂದಿಗೆ ಸ್ಕೌಟ್ ಗಾರದ ಗಣೇಶ್ ಎಚ್ ದೇವಾಡಿಗ, ದಿನೇಶ್ ಹೆಮ್ಮಾಡಿ, ವಿನಯ ಪೂಜಾರಿ, ಗಣೇಶ್ ಶೆಟ್ಟಿ, ನಾಭಿರಾಜ್ ಜೈನ್, ಗುಣಪಾಲ್ ಶೆಟ್ಟಿ, ರಿತೇಶ್ ಶೆಟ್ಟಿ ರಶೀಕರ ಪೂಜಾರಿ ಇವರನ್ನೂ ಕೂಡ ಸನ್ಮಾನಿಸಲಾಗುವುದು
ಇಂತಹ ಸೇವಾನಿಷ್ಠ ವ್ಯಕ್ತಿಗಳನ್ನು ಗುರುತಿಸಿ, ಗೌರವಿಸುವ ಮೂಲಕ ಮುಂದಿನ ಪೀಳಿಗೆಯ ಯುವಜನರಲ್ಲಿ ಸೇವಾ ಮನೋಭಾವ, ಶಿಸ್ತು ಮತ್ತು ಸಮಾಜಮುಖಿ ಚಿಂತನೆಗಳನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂಬ ಆಶಯವನ್ನು ಸ್ಕೌಟ್ ಸಂಘಟಕರು ವ್ಯಕ್ತಪಡಿಸಿದ್ದಾರೆ.





















