September 23, 2026
Mumbai News Kannada
ಸುದ್ದಿ

ಶ್ರೀ ವಿಶ್ವೇಶತೀರ್ಥ ಜನ್ಮಶತಾಬ್ದಿ ಪಂಚವಾರ್ಷಿಕ ಯೋಜನೆ ಲಾಂಛನ ಬಿಡುಗಡೆ: ಉಡುಪಿ-ದ್ವಾರಕೆ ಬೆಸೆಯುವ ಯೋಜನೆ ರೂಪಿಸಲು ಪೇಜಾವರ ಶ್ರೀಗಳ ಸಲಹೆ



ದೆಹಲಿ: “ಶ್ರೀ ವಿಶ್ವೇಶತೀರ್ಥರು ಮತ್ತು ಪೇಜಾವರ ಮಠವು ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳು ಸದಾ ಪ್ರೇರಣಾದಾಯಿ. ಗುರುಗಳ ಜನ್ಮಶತಾಬ್ದಿ ಯೋಜನೆಗಳು ಯಶಸ್ವಿಯಾಗಿ ಸಮಾಜಕ್ಕೆ, ದೇಶಕ್ಕೆ ಮತ್ತಷ್ಟು ಬಲ ನೀಡುವಂತಾಗಲಿ. ಉಡುಪಿಗೂ ದ್ವಾರಕೆಗೂ ಬಹಳ ಗಾಢ ಸಂಬಂಧವಿದೆ; ಆದ್ದರಿಂದ ಜನ್ಮಶತಾಬ್ದಿ ಯೋಜನೆಯಲ್ಲಿ ದ್ವಾರಕೆಯನ್ನೂ ಸೇರಿಸಿಕೊಂಡು ವಿಶೇಷ ಯೋಜನೆಯೊಂದನ್ನು ರೂಪಿಸಿ” ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಸಲಹೆ ನೀಡಿದರು.

ಮಂಗಳವಾರ ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅವರ ಅಧಿಕೃತ ನಿವಾಸದಲ್ಲಿ ಪೇಜಾವರ ಶ್ರೀಗಳು ಭೇಟಿ ಮಾಡಿದರು. ಸ್ವಾಮೀಜಿಯವರನ್ನು ಆದರದಿಂದ ಬರಮಾಡಿಕೊಂಡ ಪ್ರಧಾನಿಯವರು ಉಭಯ ಕುಶಲೋಪರಿ ವಿಚಾರಿಸಿದರು.

ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವವು 2031ರಲ್ಲಿ ನಡೆಯಲಿದೆ. ಈ ಪ್ರಯುಕ್ತ ಪಂಚವಾರ್ಷಿಕ ಯೋಜನೆಯನ್ನು ಶ್ರೀಗಳು ಹಮ್ಮಿಕೊಂಡಿದ್ದು, ಅದರ ಅಧಿಕೃತ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆಗೊಳಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರಿಗೆ ಯಕ್ಷಗಾನದ ರಾಜಕಿರೀಟ ತೊಡಿಸಿ, ಶಾಲು ಹೊದಿಸಿ, ಸ್ವರ್ಣ ಲೇಪಿತ ಕಾಳಿಂಗ ಮರ್ದನ ಕೃಷ್ಣನ ಪ್ರತಿಮೆ ಹಾಗೂ ಫಲ-ಮಂತ್ರಾಕ್ಷತೆ ನೀಡಿ ಸ್ವಾಮೀಜಿಯವರು ಸನ್ಮಾನಿಸಿದರು. ಅಲ್ಲದೆ, ಪ್ರಧಾನಿಯವರ ಜನ್ಮದಿನದ ಅಂಗವಾಗಿ ಅವರ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ, ಅವರ ಹೆಸರು, ಗೋತ್ರ, ನಕ್ಷತ್ರ ಮತ್ತು ರಾಶಿಯಲ್ಲಿ ಸಂಕಲ್ಪ ನೆರವೇರಿಸಿ ವೇದವ್ಯಾಸ ಗುರುಕುಲದಲ್ಲಿ ನಡೆಸಲಾದ ನವಗ್ರಹ ಹೋಮದ ಪೂರ್ಣಪ್ರಸಾದವನ್ನೂ ನೀಡಿ ಹಾರೈಸಿದರು.

ಬಳಿಕ ಮಾತನಾಡಿದ ಸ್ವಾಮೀಜಿಯವರು, “ದೆಹಲಿಯ ಇಂದ್ರಪ್ರಸ್ಥದಲ್ಲಿ ನಡೆಸಿದ ಚಾತುರ್ಮಾಸ್ಯ ವ್ರತವು ಅತ್ಯಂತ ಸಂತೋಷ ತಂದಿದೆ. ದೆಹಲಿಯಲ್ಲಿ ನೆಲೆಸಿ ದೇಶ-ಧರ್ಮದ ಒಳಿತಿಗಾಗಿ ಹೋಮ-ಹವನಗಳು, ಸತ್ಸಂಗಗಳು, ಜಪಯಜ್ಞಗಳೇ ಮೊದಲಾದ ಧಾರ್ಮಿಕ ವಿಧಿಗಳನ್ನು ನೆರವೇರಿಸುವುದರ ಜೊತೆಗೆ, ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಮಂತ್ರೋಪದೇಶ ನೀಡಿದ್ದು ಸಾರ್ಥಕತೆ ಮೂಡಿಸಿದೆ. ಈ ಪುಣ್ಯದಿನದಂದು ಪ್ರಧಾನಿಯವರ ಅಮೃತಹಸ್ತದಿಂದ ಗುರುಗಳ ಜನ್ಮಶತಾಬ್ದಿ ಪಂಚವಾರ್ಷಿಕ ಯೋಜನೆಗಳ ಲಾಂಛನ ಅನಾವರಣಗೊಂಡಿರುವುದು ಬಹಳ ಅರ್ಥಪೂರ್ಣವಾಗಿದೆ. ದೇಶ ಮತ್ತು ಧರ್ಮದ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಪ್ರಧಾನಿಗಳು, ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿ ಅತ್ಯಂತ ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಾ ಭಾರತೀಯರ ಗೌರವವನ್ನು ಜಾಗತಿಕ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಅವರು ಇನ್ನೂ ಬಹುಕಾಲ ಯಶಸ್ವಿಯಾಗಿ ದೇಶವನ್ನು ಮುನ್ನಡೆಸಲಿ” ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ, ಎಂ.ಆರ್.ಜಿ. ಗ್ರೂಪ್ ಮುಖ್ಯಸ್ಥರೂ ಉದ್ಯಮಿಯೂ ಆದ ಕೆ. ಪ್ರಕಾಶ್ ಶೆಟ್ಟಿ ಅವರನ್ನು ಶ್ರೀಗಳು ಪ್ರಧಾನಿಯವರಿಗೆ ಪರಿಚಯಿಸಿದರು.

ವರದಿ: ದಿನೇಶ್ ಕುಲಾಲ್, ಮುಂಬೈ



Related posts

ಕನ್ನಡದ ಮೊದಲ ಮಹಿಳಾ ಸೂಪರ್ಸ್ಟಾರ್ ಬಿ ಸರೋಜಾ ದೇವಿ ಇನ್ನಿಲ್ಲ

Mumbai News Desk

ಮುಂಬಯಿಯ ಹಿರಿಯ ಪತ್ರಕರ್ತ ರವಿ ಬಿ ಅಂಚನ್ ರಿಗೆ ಮಾತೃ ವಿಯೋಗ.

Mumbai News Desk

ಥಾಣೆ  :ಜಯರಾಮ ಸಾಂತ ನಿಧನ

Mumbai News Desk

ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ, ಮೇ 12ಕ್ಕೆ ಮತ್ತೆ ಮಾತುಕತೆ; ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟನೆ

Mumbai News Desk

ಆಂಧ್ರಪ್ರದೇಶ : ಶ್ರೀಕಾಕುಲಂ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ಮಹಿಳೆಯರು ಮಕ್ಕಳು ಸೇರಿ 9 ಸಾವು

Mumbai News Desk

ಗಣೇಶಪುರಿ ಶ್ರೀ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ವಿಜೃಂಭಣೆಯ ಪುನರ್ ಪ್ರತಿಷ್ಟಾಪನಾ ಕಾರ್ಯಕ್ರಮ

Mumbai News Desk