October 18, 2026
Mumbai News Kannada
ಕರ್ನಾಟಕ

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳದ ವೈಭವ: ಮೊದಲ ಬಾರಿಗೆ ಕಂಬಳಕ್ಕೆ ಚಾಲನೆ, 150ಕ್ಕೂ ಹೆಚ್ಚು ಕೋಣಗಳ ಜೋಡಿ ಭಾಗಿ



ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆ ಕಂಬಳ ಹೊಸ ಮೆರುಗು ನೀಡಿದೆ. ಸಾತಗಳ್ಳಿಯ ವಿ.ಟಿ.ಯು. ಕಾಲೇಜು ಸಮೀಪ ಇದೇ ಮೊದಲ ಬಾರಿಗೆ ಆಯೋಜಿಸಿರುವ ಕಂಬಳ ಕ್ರೀಡಾಕೂಟಕ್ಕೆ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಕರಾವಳಿಯ ಮಣ್ಣಿನ ಸೊಗಡು, ಜನಪದ ಪರಂಪರೆ ಮತ್ತು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿರುವ ಕಂಬಳವನ್ನು ಮೈಸೂರು ದಸರಾದಲ್ಲಿ ಆಯೋಜಿಸಿರುವುದು 2026ರ ದಸರಾ ಸಂಭ್ರಮಕ್ಕೆ ಮತ್ತಷ್ಟು ಆಕರ್ಷಣೆ ತಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಕ್ರೀಡೆಗೆ ಪ್ರೋತ್ಸಾಹ ನೀಡುವುದು ಹಾಗೂ ಯುವಜನತೆಗೆ ಕರಾವಳಿಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಂಬಳದಲ್ಲಿ ಭಾಗವಹಿಸಲು ಕರಾವಳಿ ಭಾಗದಿಂದ 150ಕ್ಕೂ ಹೆಚ್ಚು ಜೋಡಿ ಕೋಣಗಳ ತಂಡಗಳು ಉತ್ಸಾಹದಿಂದ ಆಗಮಿಸಿವೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕೋಣಗಳಿಗೆ ಅತ್ಯುತ್ತಮ ಮೇವು ಮತ್ತು ಆಹಾರದ ವ್ಯವಸ್ಥೆ ಕಲ್ಪಿಸಲಾಗಿದ್ದು, ಅವುಗಳ ಆರೋಗ್ಯದ ಕಾಳಜಿಗಾಗಿ ವಿಶೇಷ ಪಶುವೈದ್ಯಕೀಯ ಸೌಲಭ್ಯಗಳನ್ನೂ ಒದಗಿಸಲಾಗಿದೆ. ಕಂಬಳದ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿರುವ ಅಪಾರ ಸಂಖ್ಯೆಯ ಪ್ರೇಕ್ಷಕರಿಗೂ ಅಗತ್ಯ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗಿದೆ.

ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯನ್ನು ಮೈಸೂರು ದಸರಾ ಮಹೋತ್ಸವದ ಭಾಗವಾಗಿಸುವ ಮೂಲಕ ನಾಡಿನ ವೈವಿಧ್ಯಮಯ ಜನಪದ ಸಂಸ್ಕೃತಿಗೆ ಗೌರವ ಸಲ್ಲಿಸಲಾಗಿದೆ. ಕಂಬಳದ ಮೂಲಕ ಕರಾವಳಿಯ ಕ್ರೀಡಾ ಪರಂಪರೆಯನ್ನು ರಾಜ್ಯದ ಇತರ ಭಾಗಗಳಿಗೂ ಪರಿಚಯಿಸುವುದರ ಜೊತೆಗೆ, ಮುಂದಿನ ಪೀಳಿಗೆಗೆ ಈ ಪರಂಪರೆಯನ್ನು ಪರಿಚಯಿಸುವ ಮಹತ್ವದ ಪ್ರಯತ್ನವೂ ಇದಾಗಿದೆ.

ಕ್ರೀಡಾಕೂಟದ ಆಯೋಜನೆಗಾಗಿ ಹಗಲಿರುಳು ಶ್ರಮಿಸಿದ ಜಿಲ್ಲಾಡಳಿತ ಹಾಗೂ ಕಂಬಳ ಸಮಿತಿಯ ಪದಾಧಿಕಾರಿಗಳಿಗೆ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ ಮತ್ತು ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಕೆ. ಶಿವಕುಮಾರ್, ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್‌ನ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ, ಮೈಸೂರು ದಸರಾ ಕಂಬಳ ಉಪಸಮಿತಿಯ ಅಧ್ಯಕ್ಷ ರವಿರಾಜ್, ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಸಾಧು ಸನಿಲ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.



Related posts

ಮೈಸೂರು ದಸರಾದಲ್ಲಿ ಕಂಬಳ ವೈಭವ: ವಿಧಾನಸೌಧದಲ್ಲಿ ಮಹತ್ವದ ಪೂರ್ವಭಾವಿ ಸಭೆ

Mumbai News Desk

ಬೈಂದೂರು ಅಗ್ನಿಶಾಮಕ ಅಧಿಕಾರಿ ರಾಜೇಶ್ ಶೆಟ್ಟಿಯವರಿಗೆ ಮುಖ್ಯಮಂತ್ರಿ ಪದಕ

Mumbai News Desk

ಅಕ್ಷಯಧಾರಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಾಪು: ವಾರ್ಷಿಕ ಮಹಾಸಭೆ

Mumbai News Desk

ಕರ್ನಾಟಕ : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಿಜೆಪಿ

Mumbai News Desk

ಕರ್ನಾಟಕ ವಿಧಾನಸಭಾ ಉಪಚುನಾವಣೆ – ಮೂರೂ ಕ್ಷೇತ್ರಗಳ್ಳಲ್ಲಿ ಕಾಂಗ್ರೇಸ್ ಭರ್ಜರಿ ಜಯ

Mumbai News Desk

ದಕ್ಷಿಣ ಕನ್ನಡ ಜಿಲ್ಲೆಯ ಮರುನಾಮಕರಣಕ್ಕೆ ಸಾರ್ವಜನಿಕರ ಅಭಿಪ್ರಾಯ ಆಹ್ವಾನ

Mumbai News Desk