
ಮುಂಬಯಿ : ಎನ್ ಕೆ ಇಎಸ್ ಶಾಲೆಯ ಹಳೆ ವಿದ್ಯಾರ್ಥಿಗಳೆ , ನೀವು ಕಲಿತ ಶಾಲೆ… ನಿಮ್ಮ ಬಾಲ್ಯದ ನೆನಪುಗಳ ತಾಣ… ಬದುಕಿನ ಮೊದಲ ಪಾಠ ಕಲಿಸಿದ ಅಂಗಳ. ಇದೀಗ ದೇಶ- ವಿದೇಶಗಳಲ್ಲಿ ನೆಲೆಸಿರುವ ಎನ್.ಕೆ.ಇ.ಎಸ್. ಶಾಲೆಯ ಎಲ್ಲ ಹಳೆವಿದ್ಯಾರ್ಥಿಗಳು ಮರಳಿ ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಳ್ಳಲು ಮತ್ತು ಆಗಿನ ನಿಮ್ಮ ಶಾಲಾ ಕಟ್ಟಡವನ್ನು ವೀಕ್ಷಿಸಲು ಅಂತಿಮ ಅವಕಾಶವೊಂದು ಒದಗಿ ಬಂದಿದೆ.
ವಡಾಲದ ಐತಿಹಾಸಿಕ ಕನ್ನಡ ಶಾಲೆ (NKES) ಎನ್ ಕೆ ಇ ಎಸ್ ಶಾಲಾ ಕಟ್ಟಡ ಇದೀಗ ಕೆಡವಲು ಸಿದ್ಧತೆ ನಡೆಯುತ್ತಿದ್ದು ನವೀಕೃತ ಕಟ್ಟಡದ ನಿರ್ಮಾಣಕ್ಕೆ ಮುಂದಾಗಿದೆ. ಈ ಪ್ರಯುಕ್ತ ಹಳೆ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಮರುಭೇಟಿಯ ಒಂದು ಅಪೂರ್ವ ಮತ್ತು ಕೊನೆಯ ಅವಕಾಶವಿದ್ದು ಅದನ್ನು ಸದುಪಯೋಗಮಾಡಿಕೊಳ್ಳಲು ವಿನಂತಿಸಲಾಗಿದೆ.
ವಡಾಲದಲ್ಲಿರುವ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆ (NKES) ಪ್ರೌಢಶಾಲೆಯ ಬಹು-ಶ್ರೇಣಿಯ ದೇವಾಲಯದಂತಹ ರಚನೆಯ ಶಾಲಾ ಕಟ್ಟಡವು ಅಂತಿಮ ವಿದಾಯ ಹೇಳಲು ಇದೀಗ ಸಿದ್ಧತೆಗಳು ನಡೆಯುತ್ತಿದೆ.
ಆ ಪ್ರಯುಕ್ತ 2026 ರ ನವೆಂಬರ್ 2ರಿಂದ ನವಂಬರ್ 21ರ ಒಳಗೆ ದೇಶ ವಿದೇಶಗಳ ಹಳೆವಿದ್ಯಾರ್ಥಿಗಳು ನಿಮ್ಮ ನಿಮ್ಮ ಬಿಡುವಿನ ವೇಳೆಯಲ್ಲಿ ಒಮ್ಮೆ ಈ ಶಾಲೆಗೆ ಭೇಟಿ ನೀಡಿ. ನಿಮ್ಮ ಬಾಲ್ಯದ ನೆನಪುಗಳನ್ನು ಮತ್ತೊಮ್ಮೆ ಬಿಚ್ಚಿಕೊಳ್ಳಿ. ಗೆಳೆಯರೊಂದಿಗೆ ಕಳೆದ ಆ ಸುಂದರ ಕ್ಷಣಗಳನ್ನು ನೆನಪಿಸಿಕೊಳ್ಳಿ. ನೀವು ಅಕ್ಷರ ಕಲಿತ ತರಗತಿಗಳಲ್ಲಿ ಒಮ್ಮೆ ಹೆಜ್ಜೆ ಹಾಕಿ, ಹಳೆಯ ದಿನಗಳ ಸವಿ ನೆನಪುಗಳನ್ನು ಮೆಲುಕು ಹಾಕಿ.
ಶಾಲೆ ಎಂದರೆ ಕೇವಲ ಕಟ್ಟಡವಲ್ಲ; ಅದು ನಮ್ಮ ಬಾಲ್ಯ, ನಮ್ಮ ಸ್ನೇಹ, ನಮ್ಮ ಬದುಕಿನ ಅಮೂಲ್ಯ ಅಧ್ಯಾಯ.
ಇದೀಗ ಅತ್ಯಾಧುನಿಕ ಶೈಕ್ಷಣಿಕ ಸಂಕೀರ್ಣಕ್ಕೆ ದಾರಿ ಮಾಡಿಕೊಡಲು ಆಧುನಿಕ ಪುನರಾಭಿವೃದ್ಧಿಗೆ ನಿರ್ಧರಿಸಲಾಗಿದೆ. ವಾಸ್ತುಶಿಲ್ಪ ಇತಿಹಾಸದ ಈ ಶಾಲಾ ಕಟ್ಟಡವನ್ನು ಗೌರವಿಸಲು, ಶಾಲಾ ಆಡಳಿತ ಮಂಡಳಿಯು ದೇಶ ವಿದೇಶಗಳ ಹಳೆವಿದ್ಯಾರ್ಥಿಗಳಿಗಾಗಿ ಎನ್ ಕೆ ಇ ಎಸ್ ಕ್ಯಾಂಪಸ್ ನ ‘ವಿಶೇಷ ವಿದಾಯ ಭೇಟಿ’ ಗಾಗಿ ತನ್ನ ಬಾಗಿಲುಗಳನ್ನು ತೆರೆಯುತ್ತಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ಮುಂದಿನ ದಿನಗಳಲ್ಲಿ ಈ ಶಾಲಾ ಕಟ್ಟಡ ಹೊಸ ರೂಪ ಪಡೆದುಕೊಳ್ಳಬಹುದು. ಹಾಗಾಗಿ, ಶಾಲಾ ಕಟ್ಟಡದ ಸ್ವರೂಪ ಬದಲಾವಣೆಗೆ ಮುನ್ನ ಒಮ್ಮೆ ಬನ್ನಿ… ನಿಮ್ಮ ಶಾಲೆಯ ಹಳೆಯ ರೂಪವನ್ನು ಕಣ್ತುಂಬಿಕೊಳ್ಳಿ. ನಿಮ್ಮ ನೆನಪುಗಳೊಂದಿಗೆ ಮತ್ತೆ ಒಂದಾಗಿರಿ ಎಂದು ಹಳೆವಿದ್ಯಾರ್ಥಿಗಳಲ್ಲಿ ವಿನಂತಿಸಿದೆ.
ನವೆಂಬರ್ 2 ರಿಂದ ನವಂಬರ್ 21, 2026 ರ ವರೆಗೆ ಶಾಲಾಭೇಟಿಯ ಸಮಯವನ್ನು ಸುಗಮಗೊಳಿಸಲು ಹಳೆ ವಿದ್ಯಾರ್ಥಿಗಳು ತಮ್ಮ ಶಾಲಾ ಅವಧಿಯ ವರ್ಷವನ್ನು ಮತ್ತು ಯಾವ ದಿನ ಮರಳಿ ಶಾಲೆಯತ್ತ ಬರುವಿರಿ … ಎಂದು .ತಿಳಿಸಲು ಶಾಲಾ ಆಡಳಿತವನ್ನು ಸಂಪರ್ಕಿಸಲು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ. ವಾಟ್ಸಪ್ 99675 46652 ಸಂಪರ್ಕಿಸಬಹುದು ಎಂದು ಶಾಲಾ ಪ್ರಕಟಣೆ ತಿಳಿಸಿದೆ.



