April 1, 2025
ಕ್ರೀಡೆಲೇಖನ

ದುಬೈನಲ್ಲಿ ಟೀಮ್ ಇಂಡಿಯಾದ ಐವರು ಸ್ಪಿನ್ನರ್ ಗಳ ರಣನೀತಿಯ ‘ಯಶಸ್ಸಿನ ರೂವಾರಿ ’ವರುಣ್ ಚಕ್ರವರ್ತಿ

ಬರಹ: ಪ್ರಥ್ವಿಶ್ ಶೆಟ್ಟಿ, ಮಂಗಳೂರು.

ಟೀಮ್ ಇಂಡಿಯಾ ದುಬೈನಲ್ಲಿ ರವಿವಾರ ನ್ಯೂಝಿಲ್ಯಾಂಡ್ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿ 12 ವರ್ಷಗಳ ನಂತರ 3ನೇ ಬಾರಿ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯಿತು. ಇದುವರೆಗೆ ಯಾವ ತಂಡವು 3 ಬಾರಿ ಈ ಟ್ರೋಫಿಯನ್ನು ಗೆದ್ದಿಲ್ಲ. ಪಂದ್ಯಾವಳಿಯಲ್ಲಿ ಫೈನಲ್ ಸೇರಿದಂತೆ ಆಡಿರುವ ಎಲ್ಲ 5 ಪಂದ್ಯಗಳಲ್ಲಿ ಜಯಶಾಲಿಯಾಗಿರುವ ರೋಹಿತ್ ಶರ್ಮಾ ಬಳಗ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ತಂಡದ ಈ ಯಶಸ್ಸಿನಲ್ಲಿ ಎಲ್ಲರ ಕೊಡುಗೆ ಅಪಾರವಿದೆ.
ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಸೋತ ನಿರಾಶೆಯಲ್ಲಿದ್ದ ಭಾರತಕ್ಕೆ ಈ ಬಾರಿ ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದ ಟೀಮ್ ಮ್ಯಾನೇಜ್ ಮೆಂಟ್ ಹೆಣೆದಿದ್ದ ರಣತಂತ್ರ ಕೈ ಹಿಡಿದಿದೆ.
ದುಬೈ ಕ್ರಿಕೆಟ್ ಪಿಚ್ ನಲ್ಲಿ ಐವರು ಸ್ಪಿನ್ನರ್ ಗಳನ್ನು ಆಡಿಸುವ ತಂಡದ ರಣನೀತಿಗೆ ಆರಂಭದಲ್ಲಿ ತೀವ್ರ ಟೀಕೆ ಕೇಳಿಬಂದರೂ ಅಂತಿಮವಾಗಿ ಅದರಿಂದ ಭಾರತ ತಂಡವು ಭರ್ಜರಿ ಯಶಸ್ಸು ಕಂಡಿದೆ.
ಐವರು ಸ್ಪಿನ್ನರ್ ಗಳ ಪೈಕಿ ಎಲ್ಲರ ಗಮನ ಸೆಳೆದವರು ನಮ್ಮ ಬೀದರ್ ನಲ್ಲಿ ಹುಟ್ಟಿ, ಚೆನ್ನೈನಲ್ಲಿ ಬೆಳೆದಿರುವ 33ರ ವಯಸ್ಸಿನ ಲೆಗ್ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ. 2021ರ ಜುಲೈನಲ್ಲಿ ಮೊತ್ತ ಮೊದಲ ಟಿ-20 ಪಂದ್ಯವನ್ನು ಆಡಿ ಅಂತರ್ ರಾಷ್ಟ್ರೀಯ ಕ್ರಿಕೆಟಿಗೆ ತಡವಾಗಿ ಕಾಲಿಟ್ಟ ವರುಣ್ ವೇಗದ ಬೌಲರ್ ಆಗಿ ತನ್ನ ವೃತ್ತಿಜೀವನ ಆರಂಭಿಸಿದ್ದರು. 2017ರಲ್ಲಿ ಕಾಣಿಸಿಕೊಂಡ ಮಂಡಿನೋವಿನಿಂದಾಗಿ ಸ್ಪಿನ್ ಬೌಲಿಂಗ್ ನತ್ತ ಒಲವು ತೋರಿದರು.
ದೇಶೀಯ ಕ್ರಿಕೆಟ್ ನಲ್ಲಿ ತಮಿಳುನಾಡು ತಂಡ, ಐಪಿಎಲ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದ ವರುಣ್ 2025ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ಪಾದಾರ್ಪಣೆಗೈದಿದ್ದರು.

ಕರ್ನಾಟಕದ ಬೀದರ್ ನಲ್ಲಿ 1991ರ ಆ.29ರಂದು ಜನಿಸಿರುವ ವರುಣ್ ಚೆನ್ನೈನ ಅಡ್ಯಾರ್ ನಲ್ಲಿ ಶಿಕ್ಷಣ ಪಡೆದರು. ಆರ್ಕಿಟೆಕ್ಚರ್ ಆಗಿ ತನ್ನವೃ್ತ್ತಿಜೀವನ ಆರಂಭಿಸಿದ ವರುಣ್ 25ನೇ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್ ನತ್ತ ಒಲವು ತೋರಿ ತನ್ನ ಉದ್ಯೋಗವನ್ನು ತೊರೆದರು. 2018-19 ರಲ್ಲಿ ತಮಿಳುನಾಡು ಪರ ರಣಜಿ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಗೆ ಕಾಲಿಟ್ಟಿದ್ದರು.
ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುವಾಗ ಅವರಿಗೆ ಕೇವಲ 1 ಏಕದಿನ ಪಂದ್ಯ ಆಡಿದ ಅನುಭವವಿತ್ತು 2021ರ ಟಿ-20 ವಿಶ್ವಕಪ್ ಆಡಲು ದುಬೈಗೆ ಹೋಗಿದ್ದ ಚಕ್ರವರ್ತಿ ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ನ್ಯೂಝಿಲ್ಯಾಂಡ್ ವಿರುದ್ಧ ಕೊನೆಯ ಗ್ರೂಪ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ವರುಣ್ ಐದು ವಿಕೆಟ್ ಗೊಂಚಲು ಪಡೆದು ಎಲ್ಲರ ಮನ ಗೆದ್ದರು.
ವರುಣ್ ಪ್ರದರ್ಶನದಿಂದ ಪ್ರಭಾವಿತರಾದ ನಾಯಕ ರೋಹಿತ್ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ವರುಣ್ ಗೆ ಅವಕಾಶ ನೀಡಿದರು.
ಭಾರತಕ್ಕೆ ಸದಾ ‘ತಲೆನೋವಾಗಿ’ ಕಾಡುವ ಆಸ್ಟ್ರೇಲಿಯದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಸಹಿತ ಎರಡು ವಿಕೆಟ್ ಪಡೆದು ಸೆಮಿ ಫೈನಲ್ ನಲ್ಲಿ ಮಿಂಚಿದ್ದ ವರುಣ್ ಅವರು ಫೈನಲ್ ನಲ್ಲಿ ನ್ಯೂಝಿಲ್ಯಾಂಡ್ ವಿಕೆಟ್ ಕೀಪರ್ ಬ್ಯಾಟರ್ ಲ್ಯಾಥಮ್ ವಿಕೆಟ್ ಸಹಿತ ಇನ್ನೂ 2 ವಿಕೆಟ್ ಪಡೆದರು. ಈ ಮೂಲಕ ಟೂರ್ನಿಯಲ್ಲಿ ತಾನಾಡಿದ ಕೇವಲ 3 ಪಂದ್ಯಗಳಲ್ಲಿ ಒಟ್ಟು 9 ವಿಕೆಟ್ ಗಳನ್ನು ಪಡೆದರು. ಪಂದ್ಯಾವಳಿಯಲ್ಲಿ ಮುಹಮ್ಮದ್ ಶಮಿ ಅವರಷ್ಟೇ ವಿಕೆಟ್ ಪಡೆದ ಸಾಧನೆ ಮಾಡಿದರು.
ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ಹಿರಿಯ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ, ಯುವ ಆಟಗಾರರಾದ ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಹಾಗೂ ಅಕ್ಷರ್ ಪಟೇಲ್ ಅವರ ಕೊಡುಗೆಯನ್ನು ಮರೆಯಲಾಗದು.
ಗಾಯದಿಂದ ಚೇತರಿಸಿಕೊಂಡು ವಾಪಸಾಗಿದ್ದ ಮುಹಮ್ಮದ್ ಶಮಿ ಎಲ್ಲ 5 ಪಂದ್ಯಗಳಲ್ಲೂ ಆಡಿದ್ದು, ಒಟ್ಟು 9 ವಿಕೆಟ್ ಗಳನ್ನು ಪಡೆದಿದ್ದರು.
ವರುಣ್ ಚಕ್ರವರ್ತಿ ಎಂಬ ಹೆಸರು ಕೇಳಿದಾಗ ಅವರು ಪಶ್ಚಿಮ ಬಂಗಾಳದವರೇ ಎಂಬ ಪ್ರಶ್ನೆ ತಟ್ಟನೆ ಬರಬಹುದು. ಆದರೆ ಅವರು ದಕ್ಷಿಣ ಭಾರತದವರು ಎಂಬುದು ಹೆಮ್ಮೆಯ ವಿಚಾರ. ಕನ್ನಡನಾಡಿನಲ್ಲಿ ಹುಟ್ಟಿ ತಮಿಳುನಾಡಿನಲ್ಲಿ ಬದುಕು ಕಟ್ಟಿಕೊಂಡವರು.
ಕೊರೋನ ಸಾಂಕ್ರಾಮಿಕ ರೋಗ ಕಾಡಿದ ಸಂದರ್ಭದಲ್ಲಿ ಕನ್ನಡದಲ್ಲೇ ಮಾತನಾಡಿ ಬೀದರ್ ಜನತೆಗೆ ಧೈರ್ಯ ತುಂಬಿದ್ದ ವರುಣ್ ಚಕ್ರವರ್ತಿ ನೆರೆಯ ತಮಿಳುನಾಡನ್ನು ಪ್ರತಿನಿಧಿಸುತ್ತಿದ್ದರೂ ಅವರು ನಮ್ಮವರೇ ಆಗಿದ್ದಾರೆ. ಮುಂಬರುವ ದಿನಗಳಲ್ಲಿ ವರುಣ್ ಗೆ ಇನ್ನಷ್ಟು ಅವಕಾಶ ಲಭಿಸಿ ಟೀಮ್ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರವಾಗಿ ಬೆಳೆಯಲಿ ಅನ್ನುವುದು ಕ್ರಿಕೆಟ್ ಪ್ರೇಮಿಗಳ ಹಾರೈಕೆ.

Related posts

*ಸರ್ವ ಬಂಟರ ಕ್ರೀಡಾ ಕೂಟದ *ವಾರ್ಷಿಕ ಕ್ರಿಕೆಟ್ ಬಂಟ್ಸ್ ಕಪ್,*ಸತತ ಎರಡನೆಯ ಬಾರಿ  ” ಜಲದುರ್ಗಾ “ತಂಡಕ್ಕೆ ಟ್ರೋಫ಼ಿ

Mumbai News Desk

ವಿಶ್ವ ಬಂಟರ  ಕ್ರೀಡಾಕೂಟದಲ್ಲಿ ಮುಂಬೈ ಬಂಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಗೆ ಸಮಗ್ರ ಚಾಂಪಿಯನ್

Mumbai News Desk

ವಸಯಿ ಕಲಾ ಕ್ರಿಡೋತ್ಸವ ದಲ್ಲಿ  ಥ್ರೋ ಬಾಲ್ ಆಟದಲ್ಲಿ ಉಷಾ ಶ್ರೀಧರ ಶೆಟ್ಟಿ  ಕರ್ನಿರೆ ಇವರ ನಾಯಕತ್ವ ತಂಡಕ್ಕೆ  ಪ್ರಥಮ ಸ್ಥಾನ . 

Mumbai News Desk

ತುಳು-ಕನ್ನಡಿಗರ ಮನ ಸೆಳೆದ ಅಭಿನಯ ಮಂಟಪ ಮುಂಬೈಯ ತುಳು ಜಾನಪದ ಐತಿಹಾಸಿಕ ನಾಟಕ – ಕಲ್ಕುಡ-ಕಲ್ಲುರ್ಟಿ, 

Mumbai News Desk

ಸಂಘಟಕ, ರಂಗ ನಟ, ಭಾಸ್ಕರ ಸುವರ್ಣ ಸಸಿಹಿತ್ಲುರವರಿಗೆ ವಿಶ್ವೇಶತೀರ್ಥ ಜೀವಮಾನ ಪ್ರಶಸ್ತಿ*

Mumbai News Desk

ಸಿದ್ಧಕಟ್ಟೆ: ಕೊಡಂಗೆ ವೀರವಿಕ್ರಮ ಜೋಡುಕರೆ ಕಂಬಳ :166 ಜೋಡಿ ಭಾಗಿ

Mumbai News Desk