
ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ – ಮುಖ್ಯ ಅತಿಥಿ ಸುರೇಶ ಧಾಕಪ್ಪಾ ಕರೆ.
ಜ್ಞಾನ ವಿಕಾಸ ಮಂಡಳದ ಮೆಹ್ತಾ ಡಿಗ್ರಿ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ ಶನಿವಾರ ಎಪ್ರಿಲ್ 12 ರಂದು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಜ್ಞಾನ ವಿಕಾಸ ಮಂಡಳದ ಮೆಹ್ತಾ ಡಿಗ್ರಿ ಕಾಲೇಜಿನ ಪ್ರಥಮ ಪ್ರಾಚಾರ್ಯ ಡಾ. ಸುರೇಶ ಧಾಕಪ್ಪಾ ಇವರನ್ನು ಆಹ್ವಾನಿಸಲಾಗಿತ್ತು. ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಲಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಥಮ ಪ್ರಚಾರ್ಯನಾಗಿ ಕಾಲೇಜಿನ ಕಟ್ಟಡಕ್ಕೆ ಬೇಕಾದ ಭೂಮಿಯನ್ನು ಕೊಡಿಸುವಲ್ಲಿ ಅಂದಿನ ಆಡಳಿತ ಮಂಡಳಿ ಜೊತೆಗೂಡಿ ಪ್ರಯತ್ನ ಮಾಡಿದ್ದರ ಫಲ ಇಂದು ಸುಸಜ್ಜಿತ ಹಾಗು ಭವ್ಯವಾದ ಕಟ್ಟಡ ವಿದ್ಯಾರ್ಥಿಗಳಿಗೆ ಲಭಿಸಿದೆ ಎಂದು ಮೆಲುಕು ಹಾಕಿದರು. ಪದವಿ ಪಡೆದನಂತರ ಉತ್ತಮ ಭವಿಷ್ಯ ರೂಪಿಸಿಕೊಂಡು ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿ ಸುರೇಶ ಧಾಕಪ್ಪಾ ಇವರನ್ನು ಜ್ಞಾನ ವಿಕಾಸ ಮಂಡಳದ ಅಧ್ಯಕ್ಷ ವಿ ಎನ್ ಹೆಗಡೆ ಶಾಲು, ಶ್ರೀಫಲ, ಹೂಗುಚ್ಛ ಹಾಗು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ವಿ ಎನ್ ಹೆಗಡೆ ಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಜೆಪ್ಟೋ ಕಂಪನಿಯ ಉದಾಹರಣೆ ಹೇಳಿ ವಿದ್ಯಾರ್ಥಿಗಳು ಹೊಸ ಹೊಸ ಆವಿಷ್ಕಾರ ಗಳೊಂದಿಗೆ ಹೊಸ ಸ್ಟಾರ್ಟ್ಅಪ್ ಕಂಪನಿಗಳನ್ನು ಪ್ರಾರಂಭಿಸಿ ಯುವಕರಿಗೆ ಉದ್ಯೋಗ ಸೌಲಭ್ಯ ನೀಡಬೇಕೆಂದು ತಿಳಿಸಿದ ಅವರು, ಉನ್ನತ ವ್ಯಾಸಂಗ ಪಡೆದು ಸಮಾಜದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಇರಬೇಕೆಂದು ಹೇಳಿದರು. ಕಾರ್ಯಾಧ್ಯಕ್ಷ ಕೃಷ್ಣಾ ದೇಶಪಾಂಡೆ ಮಾತನಾಡಿ ಪದವಿ ಪಡೆದ ನಂತರ ಉನ್ನತ ಶಿಕ್ಷಣ ಪಡೆದು ಜ್ಞಾನವನ್ನು ವೃದ್ದಿಸಿ ಕೊಳ್ಳಬೇಕೆಂದು ಸಲಹೆ ಇತ್ತರು, ಕಲೆಯುವಿಕೆ ನಿರಂತರವಾಗಿರಬೇಕು ಹಾಗು ಇಂದಿನ ಪೈಪೋಟಿ ಯುಗದಲ್ಲಿ ಸತತ ಪ್ರಯತ್ನದಿಂದ ಯಶಸ್ಸನ್ನು ಪಡೆದು ಸಮಾಜದ ಹೊಣೆಗಾರಿಕೆ ತೀರಿಸಬೇಕೆಂದು ತಿಳಿಹೇಳಿದರು.

ಮೆಹ್ತಾ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಡಾ. ಬಿ ಆರ್ ದೇಶಪಾಂಡೆ ಅತಿಥಿ ಹಾಗು ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು, ಸದಸ್ಯರನ್ನು, ಸಿಬ್ಬಂದಿಯನ್ನು ಹಾಗೂ ವಿದ್ಯಾರ್ಥಿಗಳನ್ನು ಪದವಿ ಪ್ರಮಾಣಪತ್ರ ವಿತರಣಾ ಸಮಾರಂಭಕ್ಕೆ ಸ್ವಾಗತಿಸಿದರು.
ಕೇವಲ ಒಂಬತ್ತು ವಿದ್ಯಾರ್ಥಿಗಳಿಂದ 1974ರಲ್ಲಿ ಪ್ರಾರಂಭಿಸಿದ ಜ್ಞಾನ ವಿಕಾಸ ಮಂಡಳದಲ್ಲಿ ಇಂದು ಒಂಬತ್ತು ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ,ಜ್ಞಾನ ವಿಕಾಸ ಮಂಡಲವು ಎರಡು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಪೂರ್ವ ಪ್ರಾಥಮಿಕ ತರಗತಿಯಿಂದ ಉನ್ನತ ಶಿಕ್ಷಣ ತರಗತಿ ಯವರೆಗೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸುಸಜ್ಜಿತ ಕಟ್ಟಡದೊಂದಿಗೆ ಗ್ರಂಥಾಲಯ, ಹಲವಾರು ಕಂಪ್ಯೂಟರ್ ಲ್ಯಾಭಗಳ ವ್ಯವಸ್ಥೆ, ಒಳಾಂಗಣ ಆಟದ ವ್ಯವಸ್ಥೆ ಇತ್ಯಾದಿ ಸೌಲಭ್ಯಗಳನ್ನು ಜ್ಞಾನ ವಿಕಾಸ ಮಂಡಲವು ಕಲ್ಪಿಸಿದೆ. ಕಲ್ವಾದಲ್ಲಿ ನ್ಯೂ ಇಂಗ್ಲೀಷ ಸ್ಕೂಲ್ ( NES) ಮತ್ತು ಪದ್ಮಶ್ರೀ ಆರ್. ಟಿ.ದೋಷಿ ಜೂನಿಯರ್ ಕಾಲೇಜ್ ಸುಸಜ್ಜಿತ ಕಟ್ಟಡದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಕಲ್ವಾ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ವಾಸಿಸುವ ಜನರು ತಮ್ಮ ತಮ್ಮ ಮಕ್ಕಳನ್ನು ಜ್ಞಾನ ವಿಕಾಸ ಮಂಡಳದ ವಿದ್ಯಾಲಯಗಳಲ್ಲಿ ಸೇರಿಸಲು ಪ್ರಥಮ ಆದ್ಯತೆಯನ್ನು ನೀಡುತ್ತಿದ್ದಾರೆ.

ಇನ್ನೊಂದು ಸಂಸ್ಥೆ ಐರೋಲಿಯಲ್ಲಿ ಜ್ಞಾನ ವಿಕಾಸ ಮಂಡಲ ದ ಮೆಹ್ತಾ ಡಿಗ್ರಿ ಕಾಲೇಜು ಮತ್ತು ಜೂನಿಯರ್ ಕಾಲೇಜ್ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಹೆಸರುವಾಸಿಯಾಗಿದೆ. ಮೆಹ್ತಾ ಕಾಲೇಜು ನ್ಯಾಕ್ A+ ಗ್ರೆಡ್ ಪಡೆದಿದ್ದು ನವಿ ಮುಂಬಯಿ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಜ್ಞಾನ ವಿಕಾಸ ಮಂಡಲವು ಕನ್ನಡ ಭಾಷೆ ಅಲ್ಪಸಂಖ್ಯಾಕ ಮಾನ್ಯತೆ ಸಹ ಪಡೆದಿದೆ ಮತ್ತು ಕನ್ನಡ ಭಾಷೆ ಹಾಗು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಹ ಮೇಲಿಂದ ಮೇಲೆ ಹಮ್ಮಿಕೊಂಡು ಕನ್ನಡ ಸಂಸ್ಕೃತಿ, ಸಾಹಿತ್ಯ, ಕಲೆ ಆಚಾರ ಹಾಗು ವಿಚಾರಗಳ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿದೆ. ಪದವಿ ಪ್ರಮಾಣಪತ್ರ ವಿತರಣಾ ಸಮಾರಂಭದ ಮೊದಲು ಅತಿಥಿ, ಜ್ಞಾನ ವಿಕಾಸ ಮಂಡಳದ ಪದಾಧಿಕಾರಿಗಳು, ಸದಸ್ಯರು ಹಾಗು ವಿದ್ಯಾರ್ಥಿಗಳಿಂದ ಘಟಿಕೋತ್ಸವದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದ ಉದ್ಘಾಟನೆ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭಿಸಲಾಯಿತು. ಮುಂಬಯಿ ವಿಶ್ವವಿದ್ಯಾಲಯದ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸುಮಾರು ನಾಲ್ಕುನೂರು ವಿದ್ಯಾರ್ಥಿಗಳು ಪದವಿಪ್ರಮಾಣ ಪತ್ರವನ್ನು ಸ್ವೀಕರಿಸಿ ಪುಳಕಿತರಾದರು. ಆಡಳಿತ ಮಂಡಳಿಯ ಸದಸ್ಯರಾದ ರಾಹುಲ ಮಾಂಗಲೆ, ಅವಧೂತ ಆಕ್ಲೇಖರ , ಆರ್.ಜೆ.ಪಾಟೀಲ ಹಾಗು ಸಮರ ಟಂಕಸಾಲಿ ಉಪಸ್ಥಿತರಿದ್ದರು. ಅತಿಥಿ ಸುರೇಶ ಧಾಕಪ್ಪಾ ಅವರ ಪತ್ನಿ ನಿವೃತ್ತ ಪ್ರಾಧ್ಯಾಪಕಿ ಉಮಾ ಢಾಕಪ್ಪಾ ಅವರು ಸಹ ವೇದಿಕೆಯಮೇಲೆ ಉಪಸ್ಥಿತರಿದ್ದರು, ಪ್ರಾಧ್ಯಾಪಕಿ ಡಾ.ಅರ್ಚನಾ ಸುತಾರ ಹಾಗು ಪ್ರಾಧ್ಯಾಪಕಿ ಜಾಹ್ನವಿ ಕ್ಷೀರಸಾಗರ ಮಹಾವಿದ್ಯಾಲಯದ ಪ್ರಾರ್ಥನೆಗೈದರು. ಪ್ರಾಧ್ಯಾಪಕಿ ಉಜ್ವಲಾ ಪವಾರ, ಪ್ರಾಧ್ಯಾಪಕಿ ಜಾಹ್ನವಿ ಕ್ಷೀರಸಾಗರ ಹಾಗು ಪ್ರಾಧ್ಯಾಪಕಿ ರಾಜ್ಯಶ್ರೀ ಕಾರ್ಣೆಕರ್ ಪದವಿ ಪ್ರಮಾಣಪತ್ರ ಪಡೆಯುವ ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆದರು. ಡಾ. ರಶ್ಮಿ ಲೆಂಗಾಡೆ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಧ್ಯಾಪಕಿ ಪ್ರೇಮಾ ಬರ್ಧನ್ ವಂದನಾರ್ಪಣೆ ಸಲ್ಲಿಸಿದರು.