32 C
Mumbai
March 7, 2026
Mumbai News Kannada
ಮುಂಬಯಿ

ಬಿಲ್ಲವರ ಎಸೋಸಿಯೇಷನ್ ಮುಂಬಯಿ: ಶಿಕ್ಷಣ ಮತ್ತು ಪ್ರಗತಿಯ ಸಂಭ್ರಮ – ವಿದ್ಯಾರ್ಥಿ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಹಾಗೂ ನೂತನ ವೆಬ್‌ಸೈಟ್ ಲೋಕಾರ್ಪಣಾ ಸಮಾರಂಭ





ಚಿತ್ರ ವರದಿ: ಸುಭಾಷ್ ಶಿರಿಯ

ಮುಂಬಯಿ: ಶಿಕ್ಷಣದ ಮಹತ್ವವನ್ನು ಸಾರುವ ಮತ್ತು ಸಮಾಜದ ಯುವ ಪ್ರತಿಭೆಗಳನ್ನು ಗೌರವಿಸುವ ಭವ್ಯ ಸಮಾರಂಭಕ್ಕೆ ಸೆಪ್ಟೆಂಬರ್ 28 ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನ ಸಾಕ್ಷಿಯಾಯಿತು. ಬಿಲ್ಲವರ ಅಸೋಸಿಯೇಷನ್ ಮುಂಬಯಿ ವತಿಯಿಂದ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ವಿತರಣೆ ಹಾಗೂ ಸಂಸ್ಥೆಯ ನೂತನ ವೆಬ್‌ಸೈಟ್ ಲೋಕಾರ್ಪಣೆಯ ತ್ರಿವೇಣಿ ಸಂಗಮ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

​”ಸಂಘದ ಉನ್ನತ ಶಿಕ್ಷಣದ ಮಹತ್ವಾಕಾಂಕ್ಷೆಯ ಯೋಜನೆಗೆ ಎಲ್ಲರೂ ಸಹಕಾರ ನೀಡಬೇಕು” – ಹರೀಶ್ ಜಿ ಅಮೀನ್

​ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಲ್ಲವರ ಅಸೋಸಿಯೇಷನ್‌ನ ಅಧ್ಯಕ್ಷರಾದ ಶ್ರೀ ಹರೀಶ್ ಜಿ ಅಮೀನ್ ಅವರು ತಮ್ಮ ಆಶಯದ ಮಾತುಗಳಲ್ಲಿ, “ನಮ್ಮ ಕನಸಿನ ಯೋಜನೆಗಳು ಯಶಸ್ವಿಯಾಗಲು ಎಲ್ಲರ ಸಹಕಾರ, ಪ್ರೋತ್ಸಾಹದ ಅಗತ್ಯವಿದೆ” ಎಂದು ಪ್ರತಿಪಾದಿಸಿದರು. ಶ್ರೀ ನಾರಾಯಣ ಗುರುಗಳ ಸಂದೇಶವನ್ನು ಸ್ಮರಿಸಿದ ಅವರು, ಗುರುಗಳು ಶಿಕ್ಷಣಕ್ಕೆ ನೀಡಿದ ಮಹತ್ವದಂತೆ ಸಂಘವು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಪರ ಕಾರ್ಯಗಳಲ್ಲಿ ಭಾಗವಹಿಸಬೇಕು, ಸಂಘದ ಉನ್ನತ ಶಿಕ್ಷಣದ ಮಹತ್ವಾಕಾಂಕ್ಷೆಯ ಯೋಜನೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಉತ್ಸಾಹದಿಂದ ಕರೆ ನೀಡಿದರು. ಯುವಜನರ ಹೆಚ್ಚಿನ ಉಪಸ್ಥಿತಿಯು ಸಂತಸ ತಂದಿದೆ ಎಂದು ಅವರು ಉಲ್ಲೇಖಿಸಿದರು.

​ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಮುಂಬಯಿಯ ಬಂಟರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹೆಸರಾಂತ ಉದ್ಯಮಿ ಮತ್ತು ಸಮಾಜ ಸೇವಕರಾದ ಶ್ರೀ ವಿವೇಕ್ ಬಿ ಶೆಟ್ಟಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು. “ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಅಡಿಪಾಯ. ಸಮಾಜಪರ ಸಂಘಟನೆಗಳು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಬೆಳೆಯಲು ಸಾಧ್ಯ. ಜನ್ಮಭೂಮಿಯ ಶ್ರೀಮಂತ ಸಂಸ್ಕೃತಿಯನ್ನು ಕರ್ಮಭೂಮಿ ಮುಂಬಯಿಗೆ ತಂದು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿರುವುದರಿಂದಲೇ ತುಳುನಾಡಿನ ಜನರು ಮುಂಬಯಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ” ಎಂದು ಹೆಮ್ಮೆಯಿಂದ ನುಡಿದರು.

​ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ, ಬಂಟರ ಸಂಘ ಸಂಚಾಲಿತ ಪೂವಾಯಿ ಎಸ್.ಎಂ. ಶೆಟ್ಟಿ ಶಿಕ್ಷಣ ಸಂಕುಲದ ಕಾರ್ಯಧ್ಯಕ್ಷರಾದ ಶ್ರೀ ಮುನ್ಕೂರ್ ರತ್ನಾಕರ್ ಶೆಟ್ಟಿ ಅವರು ಮಾತನಾಡಿ, ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಸಮಾಜಪರ ಸಂಘಟನೆಗಳು ಉತ್ತಮವಾಗಿ ಬೆಳೆಯುವುದರೊಂದಿಗೆ ಸಮಾಜದ ಅಭಿವೃದ್ಧಿಯಾಗುತ್ತದೆ ಎಂದರು. ಎಸ್.ಎಂ. ಶೆಟ್ಟಿ ಶಾಲೆ ಮತ್ತು ಬಂಟರ ಸಂಘದ ಸಂಸ್ಥೆಗಳಲ್ಲಿ ತುಳು-ಕನ್ನಡಿಗರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆಯಲು ಅವರು ವಿನಂತಿಸಿದರು.

​ಇನ್ನೋರ್ವ ಗೌರವ ಅತಿಥಿಗಳಾದ ಸಿಎ. ಗಂಗಾಧರ್ ಎಸ್ ಪೂಜಾರಿ ಅವರು, “ಶಿಕ್ಷಣಕ್ಕಿಂತ ದೊಡ್ಡ ಸಂಪತ್ತು ಬೇರಿಲ್ಲ. ಸಮಾಜದ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆಧುನಿಕ ಕಾಲಘಟ್ಟದ ಬದಲಾಗುವ ವ್ಯವಸ್ಥೆಗೆ ಅನುಗುಣವಾಗಿ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ವಿದ್ಯಾರ್ಥಿಗಳು, ಆಧುನಿಕ ಯುಗದಲ್ಲಿ ವ್ಯಾಪಕವಾಗುತ್ತಿರುವ ಎಐ ತಂತ್ರಜ್ಞಾನದ (ಕೃತಕ ಬುದ್ಧಿಮತ್ತೆ) ಬಗ್ಗೆ ಗಮನ ಹರಿಸಿ ಕಲಿಯಬೇಕು” ಎಂದು ಸಲಹೆ ನೀಡಿದರು.

​ಇದೇ ಸಂದರ್ಭದಲ್ಲಿ, ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ನೂತನ ವೆಬ್‌ಸೈಟ್‌ಗೆ ಲೋಕಾರ್ಪಣೆ ಮಾಡಿದ ಬಿಲ್ಲವ ಚೇಂಬರ್ ಆಫ್ ಕಾಮರ್ಸ್‌ನ ಕಾರ್ಯಾಧ್ಯಕ್ಷರಾದ ಶ್ರೀ ಎನ್.ಟಿ. ಪೂಜಾರಿ ಅವರು ಮಾತನಾಡಿ, “ನಾವೆಲ್ಲರೂ ಸಂಘಟಿತರಾಗಿದ್ದರೆ ಯಾವುದೇ ಸಾಧನೆ ಮಾಡಿ ಯಶಸ್ಸು ಪಡೆಯಲು ಸಾಧ್ಯ. ಆಧುನಿಕ ತಂತ್ರಜ್ಞಾನಗಳ ಬಳಕೆಯು ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕು ಮತ್ತು ಜನರು ಸಮಾಜಪರ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು” ಎಂದು ಅಭಿಪ್ರಾಯಪಟ್ಟರು.

​ಸಂಘದ ಗೌರವ ಅಧ್ಯಕ್ಷರಾದ ಶ್ರೀ ಎಲ್.ವಿ. ಅಮೀನ್ ಅವರು, ನಾರಾಯಣ ಗುರುಗಳ ತತ್ವದಂತೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಉದ್ದೇಶದಿಂದ ಹಲವು ವರ್ಷಗಳಿಂದ ಕೆಲಸ ಮಾಡಲಾಗುತ್ತಿದೆ. ಸಮಾಜ ಬಾಂಧವರಿಗೆ ಉತ್ತಮ ವಿದ್ಯಾಭ್ಯಾಸ ದೊರೆಯುವುದೇ ನಮ್ಮೆಲ್ಲರ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

​ಕಾರ್ಯಕ್ರಮದ ವಿಶೇಷ ಘಟ್ಟವಾಗಿ, ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಅಲ್ಲದೆ, 2024-25ನೇ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಪದವಿ, ಇಂಜಿನಿಯರಿಂಗ್, ಸಿಎ ಸೇರಿದಂತೆ ಇನ್ನಿತರ ಉನ್ನತ ಪದವಿಗಳನ್ನು ಪಡೆದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಆದರಪೂರ್ವಕವಾಗಿ ಸನ್ಮಾನಿಸಲಾಯಿತು.

​ಕರ್ನಾಟಕ ಬೀದರ್‌ನ ಮಾಜಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕಿ ಶ್ರೀಮತಿ ಶುಭಾವತಿ ಎಸ್. ಸಹ ಅತಿಥಿಯಾಗಿ ಉಪಸ್ಥಿತರಿದ್ದರು.

​ಪ್ರಾರಂಭದಲ್ಲಿ ಅಧ್ಯಕ್ಷರು, ಅತಿಥಿ ಗಣ್ಯರು ಹಾಗೂ ವೇದಿಕೆಯಲ್ಲಿದ್ದ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾ ಉಪ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ವಿಶ್ವನಾಥ್ ತೋನ್ಸೆ ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯದರ್ಶಿ ಶ್ರೀ ಹರೀಶ್ ಜಿ ಪೂಜಾರಿ ಕೊಕ್ಕರ್ಣೆ ಅವರು ಪರಿಚಯಿಸಿದರು. ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಹರೀಶ್ ಜಿ ಸಾಲ್ಯಾನ್ ಅವರು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು. ಜೊತೆ ಕಾರ್ಯದರ್ಶಿ ಶ್ರೀ ಕೇಶವ ಕೋಟ್ಯಾನ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

​ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಶ್ರೀ ಸುರೇಶ್ ಕುಮಾರ್, ಶ್ರೀ ಪುರುಷೋತ್ತಮ್ ಕೋಟ್ಯನ್, ಶ್ರೀಮತಿ ಜಯಂತಿ ವರದ ಉಳ್ಳಾಲ್, ಶ್ರೀ ಮೋಹನ್ ಸಿ ಕೋಟ್ಯನ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಶಾಕುಂತಲಾ ಕೋಟ್ಯಾನ್, ಗೌರವ ಕೋಶಾಧಿಕಾರಿ ಶ್ರೀ ರವಿ ಎಸ್ ಸನಿಲ್, ಸಾಮಾಜಿಕ ಜಾಲತಾಣ ಉಪಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಸುರೇಶ ಅಂಚನ್, ಕಾರ್ಯದರ್ಶಿ ಶ್ರೀ ನವೀನ್ ಚಂದ್ರ ಆರ್ ಅಮೀನ್ ಮೊದಲಾದ ಹಿರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.



Related posts

ಬಿಲ್ಲವರ ಅಸೋಸಿಯೇಶನ್, ಜೋಗೇಶ್ವರಿ ಸ್ಥಳೀಯ ಕಚೇರಿಯಲ್ಲಿ, ಸಂಭ್ರಮದ “ಆಟಿದ ಒಂಜಿ ದಿನ” ಆಚರಣೆ.

Mumbai News Desk

ಕುಲಾಲ ಸಂಘ ಮುಂಬಯಿ ಥಾಣೆ, ಕಸಾರ,ಕರ್ಜತ್ ಮತ್ತು ಭಿವಂಡಿ ಸ್ಥಳೀಯ ಸಮಿತಿಯ ವತಿಯಿಂದ ವಿಹಾರ ಕೂಟ.

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಉನ್ನತ ಶಿಕ್ಷಣ ಸಂಸ್ಥೆಯ 11 ನೇ ವಾರ್ಷಿಕೋತ್ಸವ ಸಂಭ್ರಮ.

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) 25ನೇ ಸಂಸ್ಥಾಪನಾ ದಿನಾಚರಣೆ, 25 ಸಂಘ – ಸಂಸ್ಥೆಗಳಿಗೆ ವಿಶೇಷ ಪುರಸ್ಕಾರ ಸಮಾರಂಭಕ್ಕೆ ಚಾಲನೆ

Mumbai News Desk

ಬಂಟರ ಸಂಘ ಮುಂಬಯಿ, ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯಿಂದ ವಿದ್ಯಾರ್ಥಿವೇತನ,   ಆರ್ಥಿಕ ನೆರವು ವಿತರಣೆ,

Mumbai News Desk

“ಕೃಷ್ಣ ರಾಜಿ ಪ್ರಸಂಗೊ – ಅಂಕೊದ ಬೂಲ್ಯ” ಯಕ್ಷಗಾನ ತಾಳಮದ್ದಳೆ ಪ್ರದರ್ಶನ: ಮುಂಬೈ ತುಳು ಸಮುದಾಯದ ಸಾಂಸ್ಕೃತಿಕ ಸೊಬಗು

Mumbai News Desk