
ಕನ್ನಡ ಭಾಷೆ ಶಾಶ್ವತ; ಬೆಳೆಸುವ ಕಾರ್ಯಕ್ಕೆ ಕಂಕಣಬದ್ಧರಾಗೋಣ – ಸುಭೋಧ ಭಂಡಾರಿ
ಚಿತ್ರ: ಧನಂಜಯ ಪೂಜಾರಿ,
ಕಲ್ಯಾಣ 24: ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಅಸ್ತಿತ್ವದ ಬಗ್ಗೆ ಆತಂಕ ಬೇಡ. ಆದರೆ, ಅದನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಕಂಕಣಬದ್ಧನಾಗಬೇಕು ಎಂದು ಬಂಟರ ಸಂಘ ಮುಂಬಯಿಯ ಭಿವಂಡಿ-ಬದ್ಲಾಪೂರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಭೋಧ ಭಂಡಾರಿ ಅವರು ಕರೆ ನೀಡಿದರು.
ಅವರು ನವಂಬರ್ 23ರಂದು ಕಲ್ಯಾಣ ಪಶ್ಚಿಮದ ಗಿರೀಜಾ ಪಯ್ಯಾಡೆ ಸಭಾಗೃಹದಲ್ಲಿ ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ಸಂಘ ಕಲ್ಯಾಣದ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಸಂಘದ 23ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ನಮ್ಮ ಕನ್ನಡ ನಾಡು ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗಳ ಬೀಡಾಗಿದೆ. “ಜನನಿ ಜನ್ಮ ಭೂಮೀಶ್ಚ ಸ್ವರ್ಗಾದಪಿ ಗರಿಯಸಿ” ಎಂಬ ಮಾತಿನಂತೆ, ಹೆತ್ತ ತಾಯಿ, ಜನ್ಮಭೂಮಿ ಹಾಗೂ ಬದುಕು ನೀಡಿದ ಕರ್ಮಭೂಮಿಯನ್ನು ಗೌರವಿಸಬೇಕು. ವಿಶ್ವದ ಮೂಲೆ ಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರು ಸಂಘಟನೆಗಳ ಮೂಲಕ ಕನ್ನಡದ ರಾಯಭಾರಿಯಂತೆ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸುಭೋಧ ಭಂಡಾರಿ ಹೇಳಿದರು. ಅಲ್ಲದೆ, ಇತ್ತೀಚಿನ ಕಾಂತಾರ-2 ಚಲನಚಿತ್ರವು ಇಡೀ ವಿಶ್ವದ ಗಮನ ಸೆಳೆದಿರುವುದಕ್ಕೆ ಅವರು ಹೆಮ್ಮೆ ವ್ಯಕ್ತಪಡಿಸಿದರು. ಮುಂಬಯಿ, ಅದರಲ್ಲೂ ವಿಶೇಷವಾಗಿ ಥಾಣೆ ಜಿಲ್ಲೆಯ ಕನ್ನಡಪರ ಸಂಘಟನೆಗಳ ಶಕ್ತಿ-ಸಾಮರ್ಥ್ಯ ಹೆಚ್ಚಿಸಲು ಬೃಹತ್ ಸಮಾವೇಶವನ್ನು ಆಯೋಜಿಸಲು ತುಳು-ಕನ್ನಡಿಗರ ಸಂಘಟನೆಗಳು ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.
ಸಂಘದ ಕಾರ್ಯಕ್ರಮ ಕಂಡು ಹೃದಯ ತುಂಬಿ ಬಂದಿದೆ ಎಂದ ಅವರು, ತಮಗೆ ನೀಡಿದ ಸನ್ಮಾನವನ್ನು ತಮ್ಮ ಜನ್ಮದಾತೆಗೆ ಅರ್ಪಿಸಿದರು. ರಜತ ಮಹೋತ್ಸವದ ಅಂಚಿನಲ್ಲಿರುವ ಕರ್ನಾಟಕ ಸಂಘ ಕಲ್ಯಾಣ ತನ್ನ ಅಪ್ರತಿಮ ಕಾರ್ಯವೈಖರಿಯ ಮೂಲಕ ಬಾನೆತ್ತರಕ್ಕೆ ಏರಲಿ ಎಂದು ಹಾರೈಸಿದರು.

ಗೌರವ ಅತಿಥಿ, ಖ್ಯಾತ ಶಿಕ್ಷಣ ತಜ್ಞ ಪ್ರೊ. ಅಜೀತ ಉಮರಾಣಿ ಅವರು ಮಾತನಾಡಿ, ಸಾವಿರಾರು ವರ್ಷಗಳ ಉಜ್ವಲ ಇತಿಹಾಸ ಹೊಂದಿರುವ ನಮ್ಮ ನಾಡಿನ ಕನ್ನಡದ ಕಂಪು ವಿಶ್ವದ ಮೂಲೆ ಮೂಲೆಗಳಲ್ಲೂ ಪಸರಿಸಿದೆ. ಹೊರನಾಡ ಕನ್ನಡಿಗರ ಸಾಧನೆ ಪ್ರಶಂಸನೀಯ. ಮುಂಬಯಿ ಹಾಗೂ ಉಪನಗರಗಳಲ್ಲಿನ ಕನ್ನಡಿಗರು ಸಂಘ ಸಂಸ್ಥೆಗಳ ಮುಖಾಂತರ ಕನ್ನಡದ ಕೈಂಕರ್ಯವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಕೆ. ಎನ್. ಸತೀಶ ಅವರು ಮಾತನಾಡಿ, ಭಾಷಾವಾರು ಪ್ರಾಂತುಗಳಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಕರ್ನಾಟಕ ರಾಜ್ಯವಾಗಿ ಉದಯಿಸಿದ ಪರಿಯನ್ನು ವಿವರಿಸಿದರು. ರಾಷ್ಟ್ರಕವಿ ಕುವೆಂಪು, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರಂತಹ ಸಹಸ್ರಾರು ಕನ್ನಡಿಗರ ಅನೇಕ ದಶಕಗಳ ಹೋರಾಟದ ಫಲವಾಗಿ ನಮ್ಮ ಕರ್ನಾಟಕ ರಾಜ್ಯದ ಉದಯವಾಯಿತು. ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ನಿತ್ಯ ನಿರಂತರವಾಗಿರಬೇಕು ಎಂದು ತಿಳಿಸಿದರು.
23 ವರ್ಷಗಳ ಹಿಂದೆ ದಿ. ನಂದಾ ಶೆಟ್ಟಿ, ದಿ. ಟಿ. ಎಸ್. ಉಪಾಧ್ಯಾಯ, ಭಾಸ್ಕರ ಶೆಟ್ಟಿ, ಸುರೇಂದ್ರ ಶೆಟ್ಟಿ ಹಾಗೂ ರಮೇಶ ಶೆಟ್ಟಿ ಅವರ ಸಾರಥ್ಯದಲ್ಲಿ ಬೆರಳೆಣಿಕೆಯಷ್ಟು ಕನ್ನಡ ಮನಸ್ಸುಗಳಿಂದ ಪ್ರಾರಂಭವಾದ ಕಲ್ಯಾಣ ಕರ್ನಾಟಕ ಸಂಘವು ರಜತಮಹೋತ್ಸವ ವರ್ಷದತ್ತ ದಾಪುಗಾಲು ಹಾಕುತ್ತಿದ್ದು, ತಮ್ಮೆಲ್ಲರ ಸಹಾಯ ಸಹಕಾರದ ಶ್ರೀರಕ್ಷೆ ಸದಾ ಸಂಘದ ಜೊತೆಗೆ ಇರಲಿ ಎಂದು ಆಶಿಸಿದರು.
ಸಂಘದ ಅಧ್ಯಕ್ಷ ಜಯಂತ ದೇಶಮುಖ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಕನ್ನಡ ಮನಸ್ಸುಗಳು ಆಗಮಿಸಿರುವುದನ್ನು ಕಂಡು ಹೃದಯ ತುಂಬಿ ಬಂದಿದೆ. ಹಿರಿಯರು ಕಟ್ಟಿದ ಸಂಸ್ಥೆ ಇಂದು 23ರ ಯುವಾವಸ್ಥೆಯಲ್ಲಿದೆ. ಸಂಘದ ಮುಖಾಂತರ ನಡೆಯುವ ಕನ್ನಡದ ಕೈಂಕರ್ಯಕ್ಕೆ ಎಲ್ಲರ ಸಹಕಾರ ಸದಾ ಇರಲಿ ಎಂದು ಶುಭ ಕೋರಿದರು. ಸಂಘದ ಗೌರವ ಕಾರ್ಯದರ್ಶಿ ವಿಜಯ ಹುಣಸವಾಡಕರ ಅವರು ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿದರು.
ಸಂಘದ ಮಾಜಿ ಅಧ್ಯಕ್ಷೆ ಶ್ರೀಮತಿ ದರ್ಶನಾ ಸೋನಕರ್ ಅವರು ಸಂಘದ ಕಾರ್ಯಚಟುವಟಿಕೆಗಳಲ್ಲಿ ಯುವಪೀಳಿಗೆ ಮುಂದೆ ಬರಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಕಲ್ಯಾಣ ಕನ್ನಡಿಗರಾದ ಹೊಟೇಲ್ ಉದ್ಯಮಿ ಸದಾನಂದ ಶೆಟ್ಟಿ, ಸಮಾಜ ಸೇವಕಿ ಶ್ರೀಮತಿ ಪ್ರವೀಣಾ ಹಾಗೂ ಪ್ರಕಾಶ ಶೆಟ್ಟಿ ದಂಪತಿ, ಪತ್ರಕರ್ತ ಗುರುರಾಜ ಪೋತನೀಸ ಹಾಗೂ ರಾಧಾ ಪೋತನೀಸ ಹಾಗೂ ಜೇಷ್ಠ ನಾಗರಿಕ ಹಾಗೂ ಸಂಗೀತ ಕಲಾವಿದೆ ಶ್ರೀಮತಿ ನಳಿನಿ ಕೊಟ್ಟಲಗಿ ಅವರನ್ನು ಗಣ್ಯರು ಶಾಲು, ಶ್ರೀಫಲ, ನೆನಪಿನ ಕಾಣಿಕೆಯ ಜೊತೆಗೆ ಸಾಂಪ್ರದಾಯಿಕ ಪೇಟಾ ಧರಿಸಿ ಸತ್ಕರಿಸಿದರು.

- ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಪ್ರವೀಣಾ ಪ್ರಕಾಶ ಶೆಟ್ಟಿ ಅವರು, ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆದ ತಾನು, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಸದಾ ಬದ್ಧ ಎಂದು ಹೇಳಿದರು.

- ಪತ್ರಕರ್ತ ಗುರುರಾಜ ಪೋತನೀಸ ಅವರು, ಹೊರನಾಡಿನಲ್ಲಿ ಕನ್ನಡ ಭಾಷೆ ಉಳಿದು ಬೆಳೆಯಬೇಕಾದರೆ ಕನ್ನಡವನ್ನು ಬಳಸುವದು ಅವಶ್ಯಕ. ಪಾಲಕರು ಮಕ್ಕಳಿಗೆ ಕನ್ನಡ ಮಾತನಾಡಲು ಪ್ರೇರೇಪಿಸದೆ ಹೋದರೆ, ಮುಂದಿನ ದಿನಗಳಲ್ಲಿ ಹೊರನಾಡಿನಲ್ಲಿ ಕನ್ನಡ ಭಾಷೆ ಇತಿಹಾಸದ ಪುಟ ಸೇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಈ ಸನ್ಮಾನವನ್ನು ತಮ್ಮ ಪತ್ರಿಕಾರಂಗದ ಸಾಧನೆಗೆ ಪ್ರೋತ್ಸಾಹ ನೀಡಿದ ಸಂಯುಕ್ತ ಕರ್ನಾಟಕ ಹಾಗೂ ಉದಯವಾಣಿ ದಿನಪತ್ರಿಕೆಗಳಿಗೆ ಅರ್ಪಿಸುವುದಾಗಿ ಕೃತಜ್ಞತೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸಂಘದ 2025ನೇ ವರ್ಷದ ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು.
ವೇದಿಕೆಯ ಮೇಲೆ ಸುಭೋಧ ಭಂಡಾರಿ, ಪ್ರೊ. ಅಜೀತ ಉಮರಾಣಿ, ಜಯಂತ ದೇಶಮುಖ, ಕೆ. ಎನ್. ಸತೀಶ್, ವೀಣಾ ಕಾಮತ, ವಿಜಯ ಹುಣಸವಾಡಕರ, ಗಣೇಶ ಪೈ, ದರ್ಶನಾ ಸೋನಕರ್, ರಮೇಶ್ ಶೆಟ್ಟಿ, ಉಪಸ್ಥಿತರಿದ್ದರು. ವಿಭಾ ದೇಶಮುಖ, ಜಯಂತಿ ಹೆಗಡೆ, ಪ್ರಣೀತಾ ಭಟ್, ಲಕ್ಷ್ಮೀ ನಾಯ್ಕ, ಇಂದಿರಾ ಕುಲಕರ್ಣಿ ಹಾಗೂ ಹರ್ಷಿತಾ ಶೆಟ್ಟಿ ಅವರ ನಾಡಗೀತೆ ಹಾಗೂ ಪ್ರಾರ್ಥನೆಯೊಂದಿಗೆ ಗಣ್ಯರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಖ್ಯಾತ ನಿರೂಪಕಿ ಶ್ರೀಮತಿ ಸವಿತಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ಗಣ್ಯರನ್ನು ಪರಿಚಯಿಸಿದರೆ, ಗಣೇಶ ಪೈ ವಂದಿಸಿದರು.
ಸಂಘದ ಹಿರಿಯ ಸದಸ್ಯರಾದ ಶ್ರೀಧರ ಕುಲಕರ್ಣಿ, ವಾಮನ್ ಶೆಟ್ಟಿ, ಹಾಗೂ ದಿನೇಶ್ ಶೆಟ್ಟಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.




ಸಂಘದ ಮಹಿಳಾ ವಿಭಾಗದ ಸದಸ್ಯೆಯರ ಕನ್ನಡ ನಾಡು-ನುಡಿ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ವೈವಿಧ್ಯಮಯ ನೃತ್ಯ, ನಾಟಕ ಹಾಗೂ ಮಕ್ಕಳ ನೃತ್ಯಗಳು ಗಮನ ಸೆಳೆದವು. ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಗಣ್ಯರು ಪಾರಿತೋಷಕ ನೀಡಿ ಗೌರವಿಸಿದರು. ಶ್ರೀಮತಿ ವೀಣಾ ಕಾಮತ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು. ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಕ್ಕೆ ನೂರಾರು ಕನ್ನಡ ಮನಸ್ಸುಗಳು ಉಪಸ್ಥಿತರಿದ್ದರು.




