31 C
Mumbai
June 8, 2026
Mumbai News Kannada
ಸುದ್ದಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣಕ್ಕೆ ಶಶಿಧರ ಶೆಟ್ಟಿ ಬರೋಡಾ ಅವರಿಂದ 1.25 ಕೋಟಿ ರೂ. ದೇಣಿಗೆ: ದ್ವಿತೀಯ ಹಂತದ ಕಾಮಗಾರಿಗೆ ಚಾಲನೆ: ವಿಶೇಷ ಸಭೆ





ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮುಲ್ಕಿಯ ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಿರ್ಮಾಣವಾಗುತ್ತಿರುವ ‘ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ’ವು ಡಿಸೆಂಬರ್‌ನಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ. ಈ ಸಂಕೀರ್ಣಕ್ಕೆ 1.25 ಕೋಟಿ ರೂಪಾಯಿ ನೆರವು ನೀಡುವುದಾಗಿ ಘೋಷಿಸಿದ ಒಕ್ಕೂಟದ ಮಹಾನಿರ್ದೇಶಕ ಹಾಗೂ ಉದ್ಯಮಿ ಶಶಿಧರ ಶೆಟ್ಟಿ ಬರೋಡಾ, ಸಭಾಭವನ ಪೂರ್ಣಗೊಳ್ಳಲು ಎಲ್ಲಾ ಬಂಟ ಬಂಧುಗಳ ಸಹಕಾರ ಅಗತ್ಯ ಎಂದು ತಿಳಿಸಿದರು.

​ಅವರು ಮಾರ್ಚ್ 23ರಂದು ಮುಲ್ಕಿಯಲ್ಲಿರುವ ಪ್ರವೀಣ್ ಭೋಜ ಶೆಟ್ಟಿ ಸಂಕೀರ್ಣದಲ್ಲಿ ನಡೆದ ‘ಸದಾಶಿವ ಶೆಟ್ಟಿ ಸಂಕೀರ್ಣ’ದ ದ್ವಿತೀಯ ಹಂತದ ಕಾಮಗಾರಿ ಕುರಿತ ವಿಶೇಷ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

​ಇನ್ನು ಏಳೆಂಟು ತಿಂಗಳ ಒಳಗೆ ಸಭಾಭವನದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಮಾಜದ ದಾನಿಗಳು ನೆರವಿನ ಹಸ್ತ ನೀಡಬೇಕು ಹಾಗೂ ಪ್ರತಿಯೊಬ್ಬರೂ ಈ ಸಮಾಜಮುಖಿ ಕಾರ್ಯದಲ್ಲಿ ಕೈಜೋಡಿಸಬೇಕು. ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿಯವರ ಆಶಯದಂತೆ, ಈ ಹವಾನಿಯಂತ್ರಿತ ಸಭಾಭವನದ ಪ್ರಯೋಜನವು ಸಮಾಜದ ಮಧ್ಯಮ ವರ್ಗದವರು ಸೇರಿದಂತೆ ಎಲ್ಲಾ ಜನರಿಗೂ ದೊರೆಯುವಂತಾಗಲಿ ಎಂದು ಅವರು ಆಶಿಸಿದರು.

​ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, “ಸಂಕೀರ್ಣದ ಕೆಲಸ ಪ್ರಗತಿಯಲ್ಲಿದೆ. ಇಲ್ಲಿ ಶಶಿರೇಖಾ ಆನಂದ ಶೆಟ್ಟಿ ಹೆಸರಿನಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದೆ. ಇದರ ಜೊತೆಗೆ ಇನ್ನೊಂದು ಸಭಾಂಗಣ, ಧರ್ಮಚಾವಡಿ ಹಾಗೂ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿ ಇರಲಿದೆ. ಸಭಾಭವನ ನಿರ್ಮಾಣಕ್ಕೆ ಹಲವು ದಾನಿಗಳು ನೆರವಿನ ಭರವಸೆ ನೀಡಿದ್ದು, ಅವರೆಲ್ಲರನ್ನು ಸಂಪರ್ಕಿಸಲಾಗುವುದು,” ಎಂದರು. ಅಲ್ಲದೆ, ಸಭಾಭವನಕ್ಕೆ ಐದು ಲಕ್ಷ ರೂಪಾಯಿಗಿಂತ ಹೆಚ್ಚು ಧನಸಹಾಯ ನೀಡಿದ ದಾನಿಗಳ ಭಾವಚಿತ್ರವನ್ನು ಆಡಳಿತ ಕಚೇರಿಯಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು.

​ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಒಕ್ಕೂಟಕ್ಕೆ ಒಂದು ಎಕರೆ ಜಾಗ ನೀಡುವ ಬದಲು, ಸಭಾಭವನದ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಈ ಸಂದರ್ಭದಲ್ಲಿ ಪ್ರಕಟಿಸಿದರು.

​ಸಮಾರಂಭದಲ್ಲಿ ರಾಕ್ಷಿ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಕಟ್ಟಡ ವಿನ್ಯಾಸಕಾರ ಎ. ಜಿ. ಭಟ್, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಉದ್ಯಮಿ ಹರೀಶ್ ಶೆಟ್ಟಿ ಮುಂಬೈ, ಸಂಚಾಲಕ ಕೊಲ್ಲಾಡಿ ಬಾಲಕೃಷ್ಣ ರೈ ಹಾಗೂ ವಿವಿಧ ಬಂಟರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

​ಅನೂಪ್ ಶೆಟ್ಟಿ ಸುರತ್ಕಲ್ ಪ್ರಾರ್ಥಿಸಿದರು, ಚಂದ್ರಹಾಸ ಶೆಟ್ಟಿ ವಂದಿಸಿದರು. ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು.



Related posts

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ವತಿಯಿಂದ ಶ್ರೀ ಶನಿಶಿಂಗ್ನಪುರದಲ್ಲಿ ಶ್ರೀ ಶನಿಗ್ರಂಥ ಪಾರಾಯಣ ಪೂಜೆ

Mumbai News Desk

ಡಹಾಣೂವಿನ ಸಮಾಜ ಸೇವಕ ಅಶೋಕ್  ಎಸ್. ಶೆಟ್ಟಿ ಉಳೆಪಾಡಿ ಇವರಿಗೆ ಸನ್ಮಾನ.

Mumbai News Desk

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ.ಎಸ್‌ ಉಮೇಶ್‌ ವಿಧಿವಶ

Mumbai News Desk

ಛತ್ರಪತಿ ಶಿವಾಜಿ ಮಹಾರಾಜರ ಭೂಮಿಯಲ್ಲಿ ಡ್ಯಾನ್ಸ್ ಬಾರ್‌ಗಳಿಗೆ ನಿಷೇಧ ಹೇರಿದ ರಾಜ್ ಠಾಕ್ರೆ ಹೇಳಿಕೆಯ ಬೆನ್ನಲ್ಲೆ ಪನ್ವೇಲ್ ಬಾರ್ ಧ್ವಂಸಗೊಳಿಸಿದ ಎಂಎನ್‌ಎಸ್ ಕಾರ್ಯಕರ್ತರು

Mumbai News Desk

​ತಿರುವನಂತಪುರದಲ್ಲಿ ಜ್ಞಾನದೀಪ ‘ಗುರುದರ್ಶನ’ ಕೃತಿ ಬಿಡುಗಡೆ: ಗಡಿನಾಡಲ್ಲಿ ಕನ್ನಡ ಸಾಹಿತ್ಯದ ಬೆಳಕು!

Mumbai News Desk

ಭಾಷೆಗಳು ಸ್ನೇಹ ಸೌಹಾರ್ದತೆಯ ಸಂಕೇತ’ -ಆಶಿಶ್ ಶೇಲಾರ್

Mumbai News Desk