ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ, “ಗಾನ ಕೋಗಿಲೆ” ಲತಾ ಮಂಗೇಶ್ಕರ್ ಅವರ ಸಹೋದರಿ ಆಶಾ ಭೋಂಸ್ಲೆ ಅವರು ತಮ್ಮ 92ನೇ ವಯಸ್ಸಿನಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹೃದಯ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಕೊನೆಯುಸಿರೆಳೆದರು. ಈ ದುಃಖದ ಸುದ್ದಿಯನ್ನು ಅವರ ಪುತ್ರ ಆನಂದ್ ಅವರು ಖಚಿತಪಡಿಸಿದ್ದು, ಸಂಗೀತ ಲೋಕದ ಒಂದು ಸುದೀರ್ಘ ಯುಗ ಅಂತ್ಯಗೊಂಡಂತಾಗಿದೆ.
.1933 ರಲ್ಲಿ ಜನಿಸಿದ ಆಶಾ ಅವರು ಕೇವಲ 9ನೇ ವಯಸ್ಸಿನಲ್ಲಿಯೇ ವೃತ್ತಿಪರ ಗಾಯಕಿಯಾಗಿ ಪಯಣ ಆರಂಭಿಸಿದ್ದರು. ಸುಮಾರು ಎಂಟು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, 1943 ರಲ್ಲಿ ಮೊದಲ ಹಾಡನ್ನು ರೆಕಾರ್ಡ್ ಮಾಡಿದರು. ಆರಂಭದಲ್ಲಿ ಕ್ಯಾಬರೆ ಮತ್ತು ನೃತ್ಯದ ಹಾಡುಗಳಿಗೆ ಮಾತ್ರ ಸೀಮಿತವಾಗಿದ್ದ ಅವರು, ನಂತರ ‘ಉಮ್ರಾವ್ ಜಾನ್’ ಅಂತಹ ಚಿತ್ರಗಳ ಮೂಲಕ ಗಜಲ್ ಮತ್ತು ಶಾಸ್ತ್ರೀಯ ಶೈಲಿಯ ಹಾಡುಗಳಲ್ಲೂ ತಮ್ಮ ಅಪ್ರತಿಮ ಪಾಂಡಿತ್ಯವನ್ನು ಮೆರೆದರು.ತಮ್ಮ ಅದ್ಭುತ ಗಾಯನಕ್ಕಾಗಿ ಅವರು ಏಳು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಮಕಾಲೀನ ಸಂಗೀತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಹಳೆಯ ಗೀತೆಗಳು ಮತ್ತು ಶಾಸ್ತ್ರೀಯ ಸಂಗೀತದ ಮೇಲೆಯೇ ತಮ್ಮ ಒಲವನ್ನು ಉಳಿಸಿಕೊಂಡಿದ್ದರು. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡರೂ, ಸಂಗೀತದ ಮೇಲಿನ ಅವರ ಶ್ರದ್ಧೆ ಕುಂದಿರಲಿಲ್ಲ. ಮೊಮ್ಮಗಳು ಜನೈ ಭೋಂಸ್ಲೆ ಅವರ ಕೊನೆಯ ದಿನಗಳಲ್ಲಿ ನೆರಳಾಗಿ ಜೊತೆಗಿದ್ದರು. ಆಶಾ ಅವರ ನಿಧನದಿಂದಾಗಿ ಭಾರತೀಯ ಸಂಗೀತ ಕಲೆ ಒಬ್ಬ ಶ್ರೇಷ್ಠ ಸಾಧಕಿಯನ್ನು ಕಳೆದುಕೊಂಡಿದೆ.




