
ಸಮಾಜಪರ ಕಾರ್ಯಕ್ರಮಗಳೊಂದಿಗೆ ಸಿರಿನಾಡ ವೆಲ್ಫೇರ್ ಅಸೋಷಿಯೇಶನ್ ರಜತ ಮಹೋತ್ಸವ ಆಚರಣೆ: ಆರ್. ಕೆ. ಸುವರ್ಣ
ಮುಂಬೈ/ಡೊಂಬಿವಲಿ: “ಕಳೆದ 24 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಜನಮಾನಸದಲ್ಲಿ ನೆಲೆಯೂರಿರುವ ಸಿರಿನಾಡ ಸಂಘವು ಇದೀಗ ರಜತ ಮಹೋತ್ಸವದ ಹೊಸ್ತಿಲಲ್ಲಿದೆ. ಸದಸ್ಯರ, ಪದಾಧಿಕಾರಿಗಳ, ಕಾರ್ಯಕಾರಿ ಸಮಿತಿಯ ಹಾಗೂ ದಾನಿಗಳ ಸಹಕಾರದಿಂದ ಈ ಹಂತ ತಲುಪಲು ಸಾಧ್ಯವಾಗಿದ್ದು, ಮುಂಬರುವ ರಜತ ಮಹೋತ್ಸವವನ್ನೂ ಎಲ್ಲರ ಬೆಂಬಲದೊಂದಿಗೆ ಅರ್ಥಪೂರ್ಣ ಸಮಾಜಪರ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುವುದು,” ಎಂದು ಸಿರಿನಾಡ ವೆಲ್ಫೇರ್ ಅಸೋಷಿಯೇಶನ್ನ ಅಧ್ಯಕ್ಷ ಆರ್. ಕೆ. ಸುವರ್ಣ ಹೇಳಿದರು.
ಇಲ್ಲಿನ ಡೊಂಬಿವಲಿ ಪಶ್ಚಿಮದ ಕ್ಷಿತಿಜ ಮತಿಮಂದ ಶಾಲೆಯಲ್ಲಿ ಭಾನುವಾರ ಬೆಳಿಗ್ಗೆ 10:30ಕ್ಕೆ ಆಯೋಜಿಸಲಾಗಿದ್ದ ಸಂಸ್ಥೆಯ 24ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಸ್ಥೆಯ ಪ್ರಧಾನ ಸಮಿತಿಗೆ ಮಹಿಳಾ ಮತ್ತು ಯುವ ವಿಭಾಗಗಳು ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ರಜತ ಮಹೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಗೌರವ ಪ್ರಧಾನ ಕಾರ್ಯದರ್ಶಿ ಅಜೆಕಾರು ಜಯ ಶೆಟ್ಟಿ ಸಭೆಯಲ್ಲಿ ಪ್ರಕಟಿಸಿದರು. ಸಂಸ್ಥೆಯ ಸಲಹೆಗಾರರಾದ ಡಾ. ಇಂದ್ರಾಳಿ ದಿವಾಕರ ಶೆಟ್ಟಿ ಅವರನ್ನು ರಜತ ಮಹೋತ್ಸವದ ಕಾರ್ಯಾಧ್ಯಕ್ಷರನ್ನಾಗಿ ಹಾಗೂ ರಾಜೀವ ಭಂಡಾರಿ ಮತ್ತು ವಸಂತ ಸುವರ್ಣ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಬಳಿಕ ಮಾತನಾಡಿದ ನೂತನ ಕಾರ್ಯಾಧ್ಯಕ್ಷ ಡಾ. ಇಂದ್ರಾಳಿ ದಿವಾಕರ ಶೆಟ್ಟಿ, “ಉದರನಿಮಿತ್ತ ಮುಂಬೈಗೆ ಬಂದು ನೆಲೆಸಿದ ನಾವು ಸಂಘಟನೆಯ ಮೂಲಕ ಸಮಾಜ ಸೇವೆ ಮಾಡುತ್ತಿದ್ದೇವೆ. ಹುಟ್ಟು-ಸಾವಿನ ನಡುವೆ ಸಮಾಜಕ್ಕೆ ಶಾಶ್ವತ ಕೊಡುಗೆ ನೀಡುವುದು ಮುಖ್ಯ. ಆರ್. ಕೆ. ಸುವರ್ಣ ಹಾಗೂ ಪದಾಧಿಕಾರಿಗಳ ನಿಸ್ವಾರ್ಥ ಸೇವೆ ಶ್ಲಾಘನೀಯವಾಗಿದ್ದು, ರಜತ ಮಹೋತ್ಸವಕ್ಕೆ ಸಮಾಜಮುಖಿ ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು,” ಎಂದರು. ರಜತ ಮಹೋತ್ಸವದ ಉಪಾಧ್ಯಕ್ಷ ರಾಜೀವ ಭಂಡಾರಿ ಮಾತನಾಡಿ, ಸಂಘಟಿತ ಪ್ರಯತ್ನದಿಂದ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ಶುಭ ಹಾರೈಸಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಉದಯ ಶೆಟ್ಟಿ ಮಾತನಾಡಿ, “ಮಹಿಳಾ ಘಟಕವು ಇತ್ತೀಚೆಗೆ ‘ಆಟಿಡೊಂಜಿ ದಿನ’ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದು, ಮುಂದೆಯೂ ಹಿರಿಯರ ಮಾರ್ಗದರ್ಶನದಲ್ಲಿ ರಜತ ಮಹೋತ್ಸವಕ್ಕೆ ಪೂರ್ಣ ಬೆಂಬಲ ನೀಡಲಿದೆ,” ಎಂದು ತಿಳಿಸಿದರು.
ಸಾಧಕಿ ಪ್ರಪುಲ್ಲ ಶೆಟ್ಟಿ ಅವರಿಗೆ ಸನ್ಮಾನ: ತುಳುವೆರೆ ಕಲಾಮಂಗಳೂರು (ರಿ.) ಇದರ ಮುಂಬೈ ವಲಯದ ಕಾರ್ಯಾಧ್ಯಕ್ಷೆ ಹಾಗೂ ಸಂಸ್ಥೆಯ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪ್ರಪುಲ್ಲ ಡಿ. ಶೆಟ್ಟಿ ಅವರನ್ನು ಸಭೆಯಲ್ಲಿ ಗೌರವಿಸಲಾಯಿತು. ಊರಿನ 23 ಮಂದಿ ಹಾಗೂ ಮುಂಬೈನ ಕವಿಗಳು ಸೇರಿದಂತೆ ಒಟ್ಟು 40 ಕವಿಗಳನ್ನು ಒಗ್ಗೂಡಿಸಿ ‘ತುಳು ಕಲಾತೋಚ್ಚಯ’ ಕಾರ್ಯಕ್ರಮ ಆಯೋಜಿಸಿದ ಹಾಗೂ ತಮ್ಮ ತುಳು ಕೃತಿ ‘ಪೊಲ್ಲಕ್ಕನ ಅಜಕೆ’ ಲೋಕಾರ್ಪಣೆಗೊಳಿಸಿದ ಇವರ ಸಾಹಿತ್ಯಿಕ ಸಾಧನೆಯನ್ನು ಗುರುತಿಸಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸನ್ಮಾನಿಸಿದರು.
ಕಾರ್ಯಕ್ರಮವು ಶ್ರೀಮತಿ ಜಯಶೀಲ ಶೆಟ್ಟಿ ಮತ್ತು ಶ್ರೀಮತಿ ಸುನೀತ ಪಾಲನ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಉಪಾಧ್ಯಕ್ಷ ಅಶೋಕ್ ಅಮೀನ್ ಸ್ವಾಗತಿಸಿದರು. ಗತವರ್ಷದ ಮಹಾಸಭೆಯ ವರದಿಯನ್ನು ಪ್ರಧಾನ ಕಾರ್ಯದರ್ಶಿ ಅಜೆಕಾರು ಜಯ ಶೆಟ್ಟಿ ಮಂಡಿಸಿದರು; ಇದಕ್ಕೆ ರಾಜೇಂದ್ರ ಶೆಟ್ಟಿ ಸೂಚನೆ ನೀಡಿ, ವಿಠಲ ಶೆಟ್ಟಿ ಅನುಮೋದಿಸಿದರು.
ಕೋಶಾಧಿಕಾರಿ ಸದಾಶಿವ ಸಾಲಿಯಾನ್ ಅವರು 2025–2026ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು; ಸದಾನಂದ ಆಚಾರ್ಯ ಸೂಚಿಸಿ, ಕುಟ್ಟಿ ಶೆಟ್ಟಿ ಅನುಮೋದಿಸಿದರು. ನವೀನ್ ದೇಡಿಯಾ & ಕಂಪೆನಿಯನ್ನು ಲೆಕ್ಕಪರಿಶೋಧಕರನ್ನಾಗಿ ಸರ್ವಾನುಮತದಿಂದ ನೇಮಿಸಲಾಯಿತು. ಶ್ರೀಮತಿ ಪ್ರಪುಲ್ಲ ಶೆಟ್ಟಿ ಅವರ ಸೂಚನೆಯಂತೆ ವಿಠ್ಠಲ್ ಅಮೀನ್ ಅವರನ್ನು ಆಂತರಿಕ ಲೆಕ್ಕಪರಿಶೋಧಕರನ್ನಾಗಿ ಆಯ್ಕೆ ಮಾಡಲಾಯಿತು.
ಸಮಾರಂಭದಲ್ಲಿ ರಜತ ಮಹೋತ್ಸವ ಕಾರ್ಯಾಧ್ಯಕ್ಷ ಡಾ. ಇಂದ್ರಾಳಿ ದಿವಾಕರ ಶೆಟ್ಟಿ, ಉಪಾಧ್ಯಕ್ಷ ರಾಜೀವ ಭಂಡಾರಿ ಹಾಗೂ ಆಂತರಿಕ ಲೆಕ್ಕಪರಿಶೋಧಕ ವಿಠ್ಠಲ್ ಅಮೀನ್ ಅವರ ಪರವಾಗಿ ಅವರ ಧರ್ಮಪತ್ನಿ ಸುಜಾತ ಅಮೀನ್ ಅವರನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಸಭಿಕರ ಪರವಾಗಿ ರಾಜೇಂದ್ರ ಶೆಟ್ಟಿ, ಉದಯಾನಂದ ಕರುಣಾಕರ್ ಮತ್ತು ಶ್ರೀಮತಿ ಪ್ರಪುಲ್ಲ ಶೆಟ್ಟಿ ಮಾತನಾಡಿದರು.
ವೇದಿಕೆಯಲ್ಲಿ ಜೊತೆ ಕೋಶಾಧಿಕಾರಿ ಕೆ. ಕೆ. ಸಾಲಿಯಾನ್, ಯುವ ವಿಭಾಗದ ಉಪಾಧ್ಯಕ್ಷ ಗುರುರಾಜ್ ಸುವರ್ಣ ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಯಶೋದ ಕೋಟ್ಯಾನ್, ಜಯ ಹಂಡ ಮತ್ತು ಯಜ್ಞೇಶ್ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿನೋದ್ ಕರ್ಕೆರ ಕಾರ್ಯಕ್ರಮ ನಿರೂಪಿಸಿದರು. ಅಜೆಕಾರು ಜಯ ಶೆಟ್ಟಿ ವಂದಿಸಿದರು.



