ಮುಂಬೈನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕೆರೆಮನೆ ಶಿವಾನಂದ ಹೆಗಡೆಯವರಿಂದ ಸರಣಿ ಯಕ್ಷಗಾನ ಪ್ರದರ್ಶನ
ಮುಂಬೈ, ಅ.2: ಕರ್ನಾಟಕದ ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನ ರಂಗದಲ್ಲಿ ರಾಷ್ಟ್ರ ಪ್ರಶಸ್ತಿ ಗೆದ್ದಿರುವ ಕೆರೆಮನೆ ಶಿವಾನಂದ ಹೆಗಡೆಯವರ ಮೇಳದಿಂದ ಮುಂಬೈ ಹಾಗೂ ನವೀ ಮುಂಬೈನ ವಿವಿಧೆಡೆ ಅ.3ರಿಂದ ಸರಣಿ ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ.
ಇತ್ತೀಚೆಗೆ ಭಾರತ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಸಂಗೀತ ನಾಟಕ ಅಕಾಡೆಮಿಯ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಕೆರೆಮನೆ ಶಿವಾನಂದ ಹೆಗಡೆಯವರನ್ನು ಗೌರವಿಸಲಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ವಿಶಿಷ್ಟ ಸೇವೆ ಹಾಗೂ ಕಲಾ ಪರಂಪರೆಯ ಸಂರಕ್ಷಣೆಗೆ ನೀಡಿರುವ ಕೊಡುಗೆಗೆ ಸಂದಿರುವ ಈ ಗೌರವವು ಯಕ್ಷಗಾನ ಕಲಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಅಷ್ಟಲ್ಲದೇ, ಯಕ್ಷಗಾನದ ಪವಿತ್ರ ಪರಂಪರೆ ಮತ್ತು ವೈಭವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಡಗುಂಜಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ, ಯಕ್ಷಗಾನಕ್ಕೆ ಹೊಸ ಆಯಾಮ ಮತ್ತು ಮೆರಗು ಸಿಗುವಂತೆ ಮಾಡಿದ ಅಗ್ರಗಣ್ಯರ ಸಾಲಿನಲ್ಲಿ ಕೆರೆಮನೆ ಶಿವಾನಂದ ಹೆಗಡೆಯವರು ಮೊದಲಿಗರಾಗುತ್ತಾರೆ. ಯಕ್ಷಗಾನದ ಪರಂಪರೆಯನ್ನು ಉಳಿಸಿಕೊಂಡು, ಅದನ್ನು ಹೊಸ ತಲೆಮಾರಿಗೆ ಪರಿಚಯಿಸುವಲ್ಲಿ ಇಡಗುಂಜಿ ಯಕ್ಷಗಾನ ಮಂಡಳಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಯಕ್ಷಗಾನದ ಮಂಡಳಿಗೆ ಯುನೆಸ್ಕೋ ಮಾನ್ಯತೆ ದೊರೆತಿರುವುದು ಅಸಾಮಾನ್ಯ ಸಾಧನೆಯಾಗಿದೆ.
ಇಂತಹ ಅಪರೂಪದ ಕಲಾವಿದರಿಂದ ಮುಂಬೈ ಮತ್ತು ನವೀ ಮುಂಬೈನಲ್ಲಿ ನಡೆಯಲಿರುವ ಸರಣಿ ಯಕ್ಷಗಾನ ಪ್ರದರ್ಶನಗಳು ಕರಾವಳಿಯ ಈ ಸಾಂಪ್ರದಾಯಿಕ ಕಲೆಯ ವೈಭವವನ್ನು ಮುಂಬೈ ಮಹಾನಗರದ ಕಲಾಭಿಮಾನಿಗಳಿಗೆ ಮತ್ತೊಮ್ಮೆ ಪರಿಚಯಿಸಲಿವೆ. ವಿವಿಧ ಪ್ರಸಂಗಗಳ ಮೂಲಕ ಯಕ್ಷಗಾನದ ಕಥಾ ವೈಭವ, ಪಾತ್ರಗಳ ನಿರೂಪಣೆ, ಸಂಗೀತ, ನೃತ್ಯ ಹಾಗೂ ವೇಷಭೂಷಣಗಳ ಸೊಬಗನ್ನು ಪ್ರೇಕ್ಷಕರು ಆಸ್ವಾದಿಸುವ ಅವಕಾಶ ದೊರೆಯಲಿದೆ.
ತಾ. 3/10/2026ರಂದು ನವೀ ಮುಂಬೈನ ಐರೋಳಿ ಮೆಹತಾ ಕಾಲೇಜಿನ ಸಭಾಗೃಹದಲ್ಲಿ ಸಂಜೆ 6 ಗಂಟೆಗೆ ‘ಸೀತಾಪಹರಣ’ ಪ್ರಸಂಗ ಪ್ರದರ್ಶನಗೊಳ್ಳಲಿದೆ. ತಾ. 5/10/2026ರಂದು ಸಂಜೆ 6 ಗಂಟೆಗೆ ಗೋಕುಲ ಸೈನನಲ್ಲಿ ‘ಪಂಚವಟಿ’ ಪ್ರಸಂಗ ಹಾಗೂ ತಾ. 6/10/2026ರಂದು ಸಂಜೆ 6 ಗಂಟೆಗೆ ಸಾಂತಾಕ್ರೂಜಿನ ಪೇಜಾವರ ಮಠದಲ್ಲಿ ‘ಸೀತಾಪಹರಣ’ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೆರೆಮನೆ ಶಿವಾನಂದ ಹೆಗಡೆಯವರ ಮೇಳದಿಂದ ನಡೆಯಲಿರುವ ಈ ಸರಣಿ ಯಕ್ಷಗಾನ ಪ್ರದರ್ಶನಗಳು ಮುಂಬೈ ಹಾಗೂ ನವೀ ಮುಂಬೈನ ಯಕ್ಷಗಾನ ಪ್ರೇಕ್ಷಕರು ಮತ್ತು ಕಲಾಭಿಮಾನಿಗಳಿಗೆ ವಿಶೇಷ ಆಕರ್ಷಣೆಯಾಗಲಿವೆ. ಕರಾವಳಿಯ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಯಕ್ಷಗಾನವನ್ನು ಮುಂಬೈ ನೆಲದಲ್ಲಿ ಆಸ್ವಾದಿಸುವ ಈ ಅವಕಾಶವನ್ನು ಕಲಾಭಿಮಾನಿಗಳು ಸದುಪಯೋಗಪಡಿಸಿಕೊಳ್ಳುವ ನಿರೀಕ್ಷೆ ಇದೆ.
ಯಕ್ಷಗಾನದ ಪ್ರೇಕ್ಷಕರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವಿರಾಗಿ ಅಪೇಕ್ಷಿಸಲಾಗಿದೆ ಎಂದು ವಿ.ಎನ್. ಹೆಗಡೆ, ಅಧ್ಯಕ್ಷರು, ಮೆಹ್ತಾ ಕಾಲೇಜು, ಐರೋಳಿ ಅವರು ತಿಳಿಸಿದ್ದಾರೆ.



