
ವರದಿ : ವಾಣಿ ಪ್ರಸಾದ್, ಚಿತ್ರ: ಭಾಸ್ಕರ್ ಕಾಂಚನ್
ಮುಂಬೈ: ಜಯ ಸಿ. ಸುವರ್ಣ ಅಭಿಮಾನಿಗಳು, ಮುಂಬೈ ಬಿಲ್ಲವರು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಮುಂಬೈ ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ವೈಬ್ ಫೆಸ್ಟ್ 2026’ ಬೃಹತ್ ಸಮಾವೇಶ ಮತ್ತು ಸಾಂಸ್ಕೃತಿಕ ವೈಭವವು 2026ರ ಅಕ್ಟೋಬರ್ 2ರ ಶುಕ್ರವಾರದಂದು ಕುರ್ಲಾ (ಪೂರ್ವ)ದಲ್ಲಿರುವ ಬಂಟರ ಭವನದಲ್ಲಿ ಅದ್ದೂರಿಯಾಗಿ ಚಾಲನೆಗೊಂಡಿತು.

ಭಾರತ್ ಕೋ-ಆಪ್. ಬ್ಯಾಂಕ್ (ಮುಂಬೈ) ಲಿಮಿಟೆಡ್‌ನ ಕಾರ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ (ಆರ್) ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪವಾಯಿಯ ಶ್ರೀ ಮಹಾಶೇಷ ರುಂಡಮಾಲಿನಿ ಕ್ಷೇತ್ರದ ಶ್ರೀ ಶ್ರೀ ಶ್ರೀ ಸುವರ್ಣ ಬಾಬಾ, ಗೌರವ ಅತಿಥಿಗಳಾಗಿ ನವಿ ಮುಂಬೈ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಡಾ. ಅನುರಾಧ ಬಾಬರ್, ‘ಕರ್ನಾಟಕ ಮಲ್ಲ’ದ ಪ್ರಧಾನ ಸಂಪಾದಕರಾದ ಚಂದ್ರಶೇಖರ್ ಪಾಲೇತ್ತಾಡಿ, ಆಸಲ್ಫಾದ ಗೀತಾಂಬಿಕ ಯಕ್ಷಗಾನ ಮಂಡಳಿಯ ಉಪಾಧ್ಯಕ್ಷರಾದ ಸತೀಶ್ ಕೆ. ಶೆಟ್ಟಿ, ಭಾರತ್ ಬ್ಯಾಂಕ್‌ನ ಬಿಒಎಮ್ ಕಾರ್ಯಾಧ್ಯಕ್ಷರಾದ ಸಿ.ಎ. ಪ್ರಜ್ವಲ್ ಪೂಜಾರಿ, ನಿಶಿ ಹಾಸ್ಪಿಟಾಲಿಟಿಯ ಸಿಇಒ ಶ್ರೀ ದಿವಾಕರ್ ಟಿ. ಮಾಬಿಯನ್, ಉದ್ಯಮಿ ಉಮೇಶ್ ಪಿ. ಕಾಪು, ಭಾರತ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ವಿದ್ಯಾನಂದ್ ಎಸ್. ಕರ್ಕೇರ, ನಿರ್ದೇಶಕ ಗೌರೀಶ್ ಕೋಟ್ಯಾನ್, ಬಾಲಾಜಿ ಗ್ರೂಪ್ ಆಫ್ ಕಂಪನೀಸ್‌ನ ಎಂಡಿ ಶಿವರಾಮ್ ಪೂಜಾರಿ, ಉದ್ಯಮಿ ಸಚಿನ್ ರಘು ಪೂಜಾರಿ ಹಾಗೂ ಉದ್ಯಮಿ ಶ್ರೀಮತಿ ದೀಪ್ತಿ ಯೋಗೇಶ್ ಸುವರ್ಣ ಉಪಸ್ಥಿತರಿದ್ದರು. ಗಣ್ಯರು ದೀಪ ಬೆಳಗಿಸುವ ಮೂಲಕ ‘ವೈಬ್ ಫೆಸ್ಟ್ 2026’ಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ಸುವರ್ಣ ಬಾಬಾ ಆಶೀರ್ವಚನ ನೀಡಿದರು. ಚಂದ್ರಶೇಖರ್ ಪಾಲೇತ್ತಾಡಿ, ವಿದ್ಯಾನಂದ್ ಕರ್ಕೇರ ಹಾಗೂ ಡಾ. ಅನುರಾಧ ಬಾಬರ್ ಸಮಾರಂಭಕ್ಕೆ ಶುಭ ಹಾರೈಸಿದರು.
ಅಧ್ಯಕ್ಷತೆಯ ಮಾತುಗಳನ್ನಾಡಿದ ಸೂರ್ಯಕಾಂತ್ ಸುವರ್ಣ ಅವರು, “ಇಂದು ಕಿಕ್ಕಿರಿದು ಸೇರಿದ್ದ ಜಯ ಸಿ. ಸುವರ್ಣ ಯುವ ಅಭಿಮಾನಿಗಳನ್ನು ಕಂಡು ಅತೀವ ಸಂತಸವಾಯಿತು. ಇದು ಜಯ ಸುವರ್ಣ ಅವರು ಮಾಡಿದ ಸೇವೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯ ಫಲ. ಯುವ ಜನತೆ ಸಮಾಜದ ಶಕ್ತಿ. ವೈಬ್ ಫೆಸ್ಟ್ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆಯೋಜಿಸುವಲ್ಲಿ ಗಣೇಶ್ ಡಿ. ಪೂಜಾರಿ ಮತ್ತವರ ತಂಡ ಬಹಳಷ್ಟು ಶ್ರಮಿಸಿದ್ದಾರೆ. ಎಲ್ಲರಿಗೂ ಅಭಿನಂದನೆಗಳು” ಎಂದರು.

ಸಮಾರಂಭದಲ್ಲಿ ಭಾರತ್ ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷ ಸೋಮನಾಥ್ ಅಮೀನ್, ಜಯ ಸಿ. ಸುವರ್ಣ ಯುವ ಅಭಿಮಾನಿಗಳ ಅಧ್ಯಕ್ಷ ಗಣೇಶ್ ಡಿ. ಪೂಜಾರಿ, ಕಾರ್ಯದರ್ಶಿ ಗಣೇಶ್ ಎಸ್. ಪೂಜಾರಿ, ಜಯ ಸಿ. ಸುವರ್ಣ ಅಭಿಮಾನಿಗಳ ಗೌರವ ಕಾರ್ಯದರ್ಶಿ ಮೋಹನ್‌ದಾಸ್ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ಶಿವರಾಮ ಎಸ್. ಪೂಜಾರಿ, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಮುಂಬೈ ಅಧ್ಯಕ್ಷ ಅಶೋಕ್ ಕುಕ್ಯಾನ್ ಸಸಿಹಿತ್ಲು, ಗೌರವ ಪ್ರಧಾನ ಕಾರ್ಯದರ್ಶಿ ಕೇಶವ್ ಎಸ್. ಪೂಜಾರಿ ಹಾಗೂ ಗೌರವ ಪ್ರಧಾನ ಕೋಶಾಧಿಕಾರಿ ಸಬಿತಾ ಜಿ. ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಯಶೋಧರ ಪೂಜಾರಿ ಪ್ರಾರ್ಥಿಸಿದರು. ಧನಂಜಯ್ ಶಾಂತಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಚಿನ್ ಪೂಜಾರಿ ಭಿವಂಡಿ ಕಾರ್ಯಕ್ರಮ ನಿರೂಪಿಸಿದರು. ಶಶಿಧರ್ ಬಂಗೇರ ಧನ್ಯವಾದ ಸಮರ್ಪಿಸಿದರು. ಭಾಸ್ಕರ್ ಸಸಿಹಿತ್ಲು ಸಹಕರಿಸಿದರು.
ಬಳಿಕ ಸಮಾಜದ ಮಕ್ಕಳು ಹಾಗೂ ಯುವಕರು ವೈವಿಧ್ಯಮಯ ನೃತ್ಯ ಪ್ರದರ್ಶನಗಳ ಮೂಲಕ ಸಾಂಸ್ಕೃತಿಕ ವೈಭವವನ್ನು ಮೆರೆದರು. ಯುವ ಪ್ರತಿಭೆಗಳ ಕಲಾ ಪ್ರದರ್ಶನಕ್ಕೆ ನೆರೆದಿದ್ದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವ ಬಿಲ್ಲವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ‘ಅಚೀವರ್ಸ್ ಅವಾರ್ಡ್’ ಅಡಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷವಾಗಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು
ಜಯ ಸಿ. ಸುವರ್ಣ ಅಭಿಮಾನಿಗಳ ಪರವಾಗಿ ಗೌರವ ಕಾರ್ಯದರ್ಶಿ ಮೋಹನ್‌ದಾಸ್ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ಶಿವರಾಮ ಎಸ್. ಪೂಜಾರಿ, ಶ್ರೀ ನಾರಾಯಣ ಗುರು ಭಜನಾ ಮಂಡಳಿ (ಆರ್) ಮುಂಬೈ ಪರವಾಗಿ ಅಧ್ಯಕ್ಷ ಅಶೋಕ್ ಕುಕ್ಯಾನ್ ಸಸಿಹಿತ್ಲು, ಗೌರವ ಪ್ರಧಾನ ಕಾರ್ಯದರ್ಶಿ ಕೇಶವ್ ಎಸ್. ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿ ಸಬಿತಾ ಜಿ. ಪೂಜಾರಿ ಹಾಗೂ ಜಯ ಸಿ. ಸುವರ್ಣ ಯುವ ಅಭಿಮಾನಿಗಳ ಪರವಾಗಿ ಅಧ್ಯಕ್ಷ ಗಣೇಶ್ ಡಿ. ಪೂಜಾರಿ ಮತ್ತು ಕಾರ್ಯದರ್ಶಿ ಗಣೇಶ್ ಎಸ್. ಪೂಜಾರಿ ಅವರ ನೇತೃತ್ವದಲ್ಲಿ ಸಾಧಕರನ್ನು ಆದರದಿಂದ ಸನ್ಮಾನಿಸಲಾಯಿತು.
ಜಯ ಸಿ. ಸುವರ್ಣ ಅಭಿಮಾನಿಗಳು, ಮುಂಬೈ ಬಿಲ್ಲವರು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಮುಂಬೈ ಇದರ ಜಂಟಿ ಆಶ್ರಯದಲ್ಲಿ ಪ್ರಥಮ ಬಾರಿಗೆ ನಡೆದ ‘ವೈಬ್ ಫೆಸ್ಟ್ 2026’ ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಜನತೆ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.



