ಮಹಾನಗರದ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಒಂದಾದ ಶ್ರೀ ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನವು ಸದಾ ಸಮಾಜಸೇವೆಯಲ್ಲಿ ನಿರತವಾಗಿದ್ದು ಎಲೆ ಮರೆಯ ಕಾಯಿಯಂತೆ ಯಾವುದೇ ಪ್ರಚಾರ ಪ್ರಶಂಸೆ ಬಯಸದೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡೆ, ಕಲೆ ಮತ್ತು ಆರೋಗ್ಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಾಮಾಣಿಕವಾಗಿ ತನ್ನ ಸೇವೆ ಸಲ್ಲಿಸುತ್ತಾ ಬಂದಿದೆ. ಇದೀಗ ಸಮಾಜದ ಜನತೆಗೆ ಸದುಪಯೋಗವಾಗಲಿ ಎಂಬ ನಿಟ್ಟಿನಲ್ಲಿ ಶ್ರೀ ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನವು ಶ್ರೀ ದುರ್ಗಾಪರಮೇಶ್ವರಿ ಅಯ್ಯಪ್ಪ ಟ್ರಸ್ಟ್ ಸಹಯೋಗದೊಂದಿಗೆ ಅಕ್ಟೋಬರ್ 2 ರಂದು ಥಾಣೆ ಪಶ್ಚಿಮದ ನವೋದಯ ಶಾಲಾ ಸಭಾಂಗಣದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಸಭಾಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳು ದೀಪ ಪ್ರಜ್ವಲಿಸಿ ಶಿಬಿರವನ್ನು ಉದ್ಘಾಟಿಸಿ ಆರೋಗ್ಯ ಸಂರಕ್ಷಣೆ ಮತ್ತು ಮುಂಜಾಗ್ರತೆಯ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರು ತದನಂತರ ತಪಾಸಣೆಗೆ ಅರ್ಜಿ ಸಲ್ಲಿಸಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲರ ಆರೋಗ್ಯ ತಪಾಸಣೆಯನ್ನು ಡಾ. ಸತ್ಯಪ್ರಕಾಶ ಶೆಟ್ಟಿ ಮತ್ತು ತಂಡದವರು ನೆಡೆಸಿ ಸೂಕ್ತ ಮಾರ್ಗದರ್ಶನ ನೀಡಿದರು.

ಇದೊಂದು ವಿಶೇಷ ತಪಾಸಣಾ ಶಿಬಿರವಾಗಿದ್ದು ಇದರಲ್ಲಿ ಮಹಿಳೆಯರ ಗರ್ಭಾಶಯದ ಕ್ಯಾನ್ಸರ್ ಪರೀಕ್ಷೆ, ಡಯಾಬಿಟಿಸ್ ಪರೀಕ್ಷೆ ಮತ್ತು ಔಷಧ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಫ್ಲೂ ಜ್ವರ ಬರದ ಹಾಗೆ ಲಸಿಕೆ ನೀಡುವ ಯೋಜನೆ ಈ ಶಿಬಿರದಲ್ಲಿ ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯ ತುಳು-ಕನ್ನಡಿಗರು ಶಿಬಿರದಲ್ಲಿ ಭಾಗವಹಿಸಿದ್ದರು.
ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನದ ಅಧ್ಯಕ್ಷ ಜಯರಾಮ ಶೆಟ್ಟಿ ಇಡೂರು ವಹಿಸಿದ್ದರೆ ಮುಖ್ಯ ಅತಿಥಿ ನವೋದಯ ಕನ್ನಡ ಸಂಘದ ಅಧ್ಯಕ್ಷ ದಯಾನಂದ ಶೆಟ್ಟಿ, ಗೌರವ ಅತಿಥಿಗಳಾದ ಗಿರೀಶ್ ಶೆಟ್ಟಿ ಇನ್ನ, ಡಾ. ಸತ್ಯಪ್ರಕಾಶ ಶೆಟ್ಟಿ, ಡಾ. ರಷ್ಮಾ ಮತ್ತು ಸ್ಥಾಪಕಾಧ್ಯಕ್ಷ ರಾಜು ಮೆಂಡನ್ ವಂಡ್ಸೆ, ಗೌರವಾಧ್ಯಕ್ಷ ಅಶೋಕ ಮೊಗವೀರ ಮರತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಉಪಾಧ್ಯಕ್ಷ ನಿತೀಶ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಬಗ್ವಾಡಿ, ಕೋಶಾಧಿಕಾರಿ ಮಹೇಂದ್ರ ಶೆಟ್ಟಿ ನಂದ್ರೋಳ್ಳಿ ಜೊತೆ ಕಾರ್ಯದರ್ಶಿ ರಮೇಶ್ ಬಿರ್ತಿ, ಜೊತೆ ಕೋಶಾಧಿಕಾರಿ ಡಾ. ಸೌಜನ್ಯ ಬಿಲ್ಲವ ಮತ್ತು ಪ್ರತಿಷ್ಠಾನದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶಿಬಿರ ಯಶಸ್ವಿಯಾಗಲು ಸಹಕರಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷೆ ಅಮೃತಾ ಶೆಟ್ಟಿ ಸರ್ವರನ್ನು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ನಂದ್ರೋಳ್ಳಿ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.
ವರದಿ : ಲಕ್ಷ್ಮಣ ಪೂಜಾರಿ ಕೊಡೇರಿ



