ಮುಂಬಯಿ, ಅ.7: ಹಲವಾರು ತಲೆಮಾರುಗಳಿಂದ ಆರಾಧಿಸಿಕೊಂಡು ಬರುತ್ತಿರುವ ಬಿಜೂರಿನಲ್ಲಿರುವ ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿಯು ಕಾರಣಿಕ ಸ್ಥಳವಾಗಿದ್ದು, ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ಶಕ್ತಿಪೀಠವಾಗಿದೆ. ಇಲ್ಲಿಯ ಮಹಿಮೆ ಅಪಾರವಾಗಿದ್ದು, ನಂಬಿದ ಭಕ್ತರ ಪಾಲಿನ ಭರವಸೆಯ ಪ್ರತಿರೂಪದಂತೆ ಹಲವಾರು ದೈವಗಳು ಇಲ್ಲಿ ನೆಲೆನಿಂತಿವೆ. ಬೇಡಿ ಬಂದ ಭಕ್ತರ ಪಾಲಿನ ಆಶಾಕಿರಣವಾಗಿ ಅವರ ಸಂಕಷ್ಟಗಳನ್ನು ದೂರ ಮಾಡಿದ ಅದೆಷ್ಟೋ ನಿದರ್ಶನಗಳಿವೆ. ದೂರದ ಊರುಗಳಲ್ಲೂ ಈ ಗರಡಿಯನ್ನು ನಂಬಿದ ಅನೇಕ ಭಕ್ತಾದಿಗಳಿದ್ದಾರೆ ಎಂದು ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿ ಬಿಜೂರು ಇದರ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಎನ್. ಟಿ. ಪೂಜಾರಿ ತಿಳಿಸಿದರು.
ಅವರು ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿ ಬಿಜೂರು ಇದರ ಜೀರ್ಣೋದ್ಧಾರದ ಕುರಿತು ಅ. 4ರಂದು ಸಾಂತಾಕ್ರೂಜ್ ಪೂರ್ವದಲ್ಲಿರುವ ಬಿಲ್ಲವ ಭವನದಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಕಾರಣಿಕ ಸ್ಥಳವಾದ ನಮ್ಮ ಗರಡಿಯ ಜೀರ್ಣೋದ್ಧಾರ ಮಾಡುವುದೆಂದು ಭಕ್ತರೆಲ್ಲರೂ ಸೇರಿ ಸಂಕಲ್ಪ ಮಾಡಿ ಈ ಮಹತ್ಕಾರ್ಯಕ್ಕೆ ಮುಂದಾಗಿದ್ದೇವೆ. ಅದೇ ರೀತಿ ಮುಂಬಯಿಯ ದಾನಿಗಳಿಂದ ಹೆಚ್ಚಿನ ನೆರವು ಸಿಗುವ ಭರವಸೆಯಿಂದ ಧನ ಸಂಗ್ರಹಿಸುವ ನಿಟ್ಟಿನಲ್ಲಿ ಈ ಸಮಾಲೋಚನಾ ಸಭೆ ಆಯೋಜಿಸಲಾಗಿದೆ. ಮುಂಬಯಿ ಮಹಾನಗರ ಮತ್ತು ಉಪನಗರಗಳಲ್ಲಿ ನೆಲೆಸಿರುವ ಭಕ್ತಾದಿಗಳೆಲ್ಲರೂ ಉದಾರ ದೇಣಿಗೆ ನೀಡಿ ಗರಡಿಯ ಜೀರ್ಣೋದ್ಧಾರ ಕಾರ್ಯ ಸಕಾಲದಲ್ಲಿ ನೆರವೇರುವಂತೆ ಸಹಕರಿಸಬೇಕು. ಯಾವುದೇ ಒಂದು ಮಹತ್ಕಾರ್ಯಕ್ಕೆ ಸಮಸ್ತ ಜನರ ಸಹಕಾರದ ಅಗತ್ಯವಿದೆ. ದೈವದ ಸೇವೆಗೆ ನೀಡಿದ ದಾನದ ಫಲವು ದೈವಾನುಗ್ರಹವಾಗಿ ನಮ್ಮ ಬದುಕಿನಲ್ಲಿ ಉಳಿಯುತ್ತದೆ” ಎಂದರು.
ಗೌರವ ಅತಿಥಿಗಳಾದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ಹರೀಶ್ ಅಮೀನ್ ಮಾತನಾಡಿ, “ಈ ಪುಣ್ಯ ಕಾರ್ಯವನ್ನು ನಾವೆಲ್ಲರೂ ಒಟ್ಟಾಗಿ ಮಾಡೋಣ. ನಮ್ಮ ತುಳುನಾಡಿನ ಮಣ್ಣಿನಲ್ಲಿ ದೈವಾರಾಧನೆ ಎನ್ನುವುದು ಕೇವಲ ಆಚರಣೆಯಲ್ಲ; ಅದು ನಮ್ಮ ಜೀವನ ಪದ್ಧತಿ, ನಂಬಿಕೆ, ಸಂಸ್ಕೃತಿ ಹಾಗೂ ಹಿರಿಯರಿಂದ ಬಂದ ಪರಂಪರೆ. ಅದಕ್ಕಾಗಿ ನಮ್ಮ ಸಂಪೂರ್ಣ ಸಹಕಾರವನ್ನು ನಾವು ನೀಡಲಿದ್ದೇವೆ” ಎಂದು ಹೇಳಿದರು.
ಉದ್ಯಮಿ ಭಾಸ್ಕರ ಪೂಜಾರಿ ಗರಡಿಮನೆ ಮಾತನಾಡುತ್ತಾ, “ಎಲ್ಲರೂ ಜೊತೆ ಸೇರಿ ಈ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗವಹಿಸುವುದರೊಂದಿಗೆ, ತಮ್ಮ ಶಕ್ತ್ಯಾನುಸಾರ ದೇಣಿಗೆ ನೀಡಿ ಸಹಕರಿಸಿದರೆ ನಾವು ನಿಗದಿತ ಗುರಿ ತಲುಪುವುದು ಅಸಾಧ್ಯವೇನಲ್ಲ” ಎಂದು ಸರ್ವರ ಸಹಕಾರ ಕೋರಿದರು. ಗರಡಿಯ ಬಲ್ಲಾಳರಾದ ಸೀತಾರಾಮ್ ಶೆಟ್ಟಿ, ಪಾತ್ರಿ ರಾಮ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಲೋಚನಾ ಸಭೆಯಲ್ಲಿ ಉಪಸ್ಥಿತರಿದ್ದ ಬಿಲ್ಲವರ ಅಸೋಸಿಯೇಶನ್ ಗೌರವಾಧ್ಯಕ್ಷ ಎಲ್. ವಿ. ಅಮೀನ್, ಉಪಾಧ್ಯಕ್ಷ ಪುರುಷೋತ್ತಮ ಕೋಟ್ಯಾನ್, ಗಂಗಾಧರ ಅಮೀನ್, ನಿಲೇಶ್ ಪೂಜಾರಿ ಪಲಿಮಾರು ಸೂಕ್ತ ಸಲಹೆ ನೀಡಿ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾ, ಗರಡಿಯ ಜೀರ್ಣೋದ್ಧಾರಕ್ಕೆ ತಮ್ಮಿಂದಾದ ಸಹಕಾರ ನೀಡುವುದಾಗಿ ಸಭೆಗೆ ತಿಳಿಸಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, “ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 66ನೇ ಗರಡಿ ಹಾಗೂ ಉತ್ತರ ತುದಿಯ ಕೊನೆಯ ಗರಡಿಯಾಗಿರುವ ನಮ್ಮ ಬಿಜೂರಿನ ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿಯು ಶತಮಾನಗಳ ಇತಿಹಾಸ ಹೊಂದಿದೆ. 800 ವರ್ಷಗಳ ಹಿಂದೆ ಪಂಜುರ್ಲಿ ಗರಡಿಯಾಗಿದ್ದ ಈ ಕ್ಷೇತ್ರವು, ನಂತರ ಸುಮಾರು 450 ವರ್ಷಗಳ ಹಿಂದೆ ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿಯಾಗಿ ಪ್ರಸಿದ್ಧಿ ಪಡೆದಿದೆ. ಇತ್ತೀಚೆಗೆ ಭಕ್ತಾದಿಗಳೆಲ್ಲ ಸೇರಿ ಅಷ್ಟಮಂಗಲ ಪ್ರಶ್ನೆಯ ಮೂಲಕ ಚಿಂತನೆ ನಡೆಸಿ, ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡು ಗರಡಿಯ ಜೀರ್ಣೋದ್ಧಾರ ಮಾಡುವ ಮಹತ್ಕಾರ್ಯದ ಸಂಕಲ್ಪ ಮಾಡಿದ್ದೇವೆ. ಈಗ ಗರಡಿಯ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು, ಆದಷ್ಟು ಬೇಗ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಇರುವುದರಿಂದ ನಿಧಿ ಸಂಗ್ರಹಿಸುವ ಸಲುವಾಗಿ ಮತ್ತು ಕಾರ್ಯದ ಮಾಹಿತಿ ಹಂಚಿಕೊಳ್ಳಲು ಇಂದು ಈ ಸಭೆಯನ್ನು ಆಯೋಜಿಸಿದ್ದೇವೆ” ಎಂದು ಹೇಳುತ್ತಾ ಜೀರ್ಣೋದ್ಧಾರದ ಸಮಗ್ರ ಮಾಹಿತಿಯನ್ನು ಸಭೆಯ ಮುಂದಿಟ್ಟರು.
ಐತಿಹಾಸಿಕ ಪರಂಪರೆಯುಳ್ಳ ಗರಡಿಯ ಜೀರ್ಣೋದ್ಧಾರ ಕಾರ್ಯದ ಪ್ರಗತಿ, ಲೋಕಾರ್ಪಣೆ, ತಗಲುವ ವೆಚ್ಚ ಹಾಗೂ ಮುಂಬಯಿಯ ದಾನಿಗಳ ಮೇಲೆ ಇಟ್ಟಿರುವ ನಿರೀಕ್ಷೆಯನ್ನು ಬಹಿರಂಗಪಡಿಸಿ ಎಲ್ಲರ ಸಹಕಾರ ಕೋರಿದರು.
ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಸೂರ್ಯ ಎಸ್. ಪೂಜಾರಿ, ಉದ್ಯಮಿಗಳಾದ ಯಶೋದಾ ಎನ್. ಟಿ. ಪೂಜಾರಿ, ಗೋವಿಂದ ಪೂಜಾರಿ ಗರಡಿ, ನಾಗೇಶ ಬಿಲ್ಲವ, ಎನ್. ಜಿ. ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರು ಹಾಗೂ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಲಕ್ಷ್ಮಣ ಪೂಜಾರಿ ಕೊಡೇರಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
(ವರದಿ: ಲಕ್ಷ್ಮಣ ಪೂಜಾರಿ ಕೊಡೇರಿ)



