
ಐಕ್ಯತೆ ಮತ್ತು ಬಾಂಧವ್ಯದ ಬೆಸುಗೆಗೆ ಕ್ರೀಡಾಕೂಟಗಳು ಸಹಕಾರಿ- ರಂಜನ್ ಎಲ್. ಶೆಟ್ಟಿ
ಭಾಯಂದರ್, ಅ.8:ದಿನವಿಡೀ ನಡೆದ ಕ್ರಿಕೆಟ್ ಟೂರ್ನಮೆಂಟ್ ಬಹು ಸಂಭ್ರಮದಿಂದ ಸಂಪನ್ನಗೊಂಡಿದೆ. ಯಶಸ್ವಿಯಾಗಿ ಟೂರ್ನಮೆಂಟನ್ನು ರೂಪಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು . ಈ ಟೂರ್ನಮೆಂಟನ್ನು ಪ್ರತಿ ವರ್ಷದ ಸ್ನೇಹಸಂಗಮವಾಗಿ ಆಯೋಜಿಸುವ ಕನಸು ನಮ್ಮದಾಗಿದೆ. ಮುಂದೆ ಬರಲಿರುವ ಸಂಘಟನೆಯ ಪದಾಧಿಕಾರಿಗಳು ಇದನ್ನು ಮುಂದುವರಿಸಬೇಕು.
ನಾವೆಲ್ಲರೂ ನಮ್ಮ ದೈನಂದಿನ ಕಾರ್ಯವೈಖರಿಗೆ ವಿರಾಮ ನೀಡಿ, ಮೈದಾನದಲ್ಲಿ ಒಗ್ಗೂಡಿದಾಗ, ಅದು ಕೇವಲ ಆಟವಾಗಿ ಉಳಿಯುವುದಿಲ್ಲ. ಅದು ನಮ್ಮ ನಡುವೆ ಪರಸ್ಪರ ಗಟ್ಟಿಯಾದ ಪರಿಚಯ ಮತ್ತು ಆಳವಾದ ತಿಳುವಳಿಕೆಯನ್ನು ಬೆಸೆಯುವ ಸುವರ್ಣಾವಕಾಶ ವಾಗುತ್ತದೆ . ಹೋಟೆಲಿಗರ ಈ ವಿಶಾಲ ಕುಟುಂಬದಲ್ಲಿ ಐಕ್ಯತೆ ಮತ್ತು ಬಾಂಧವ್ಯದ ಬೆಸುಗೆಗೆ ಇಂತಹ ಕ್ರೀಡಾ ಪಂದ್ಯಾಟಗಳು ಬಲಿಷ್ಠ ಸೇತುವೆಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಸ್ನೇಹ ಮತ್ತು ಉತ್ಸಾಹವನ್ನು ಹಂಚಿಕೊಂಡ ಪ್ರತಿಯೊಬ್ಬ ಆಟಗಾರರಿಗೂ ನನ್ನ ಮನಸಾರೆ ವಂದನೆಗಳು” ಎಂದು ಮೀರಾ-ಭಾಯಂದರ್ ಹೋಟೆಲ್ಸ್ ಎಸೋಸಿಯೇಷನ್ ನ ಅಧ್ಯಕ್ಷ ರಂಜನ್ ಎಲ್. ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮೀರಾಬಾಯಂದರ್ ಹೋಟೆಲ್ಸ್ ಅಸೋಸಿಯೇಶನ್ ವತಿಯಿಂದ ಅ.7ರಂದು ಭಾಯಂದರ್ ಪಶ್ಚಿಮದ ಎಸ್.ವಿ.ರಸ್ತೆಯಲ್ಲಿರುವ ಟರ್ಫೋಲಿಕ್ ಸ್ಪೋರ್ಟ್ಸ್ ಪಿಚ್ ನಲ್ಲಿ ದಿನಪೂರ್ತಿ ಹೋಟೇಲು ಮಾಲೀಕರು ಮತ್ತು ಚಾಲಕರು ಕೂಡಿ ನಡೆಸಿದ “ಎಮ್.ಬಿ.ಎಚ್.ಎ ಬಾಕ್ಸ್ ಕ್ರಿಕೆಟ್ ಪ್ರೀಮಿಯರ್ ಲೀಗ್ 2026” ಸ್ನೇಹಾರ್ಥ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಿಗೆ ಟ್ರೋಪಿ ವಿತರಿಸಿ ಮಾತನಾಡಿದರು.
ಮೀರಾಬಾಯಂದರ್ ಪರಿಸರದ ಹೋಟೆಲು ಮಾಲಕರು ಚಾಲಕರು ಹಾಗೂ ಸಿಬ್ಬಂದಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ ದಾನಿಗಳನ್ನು ಸತ್ಕರಿಸಲಾಯಿತು.
ಆರಂಭದಲ್ಲಿ ಅಸೋಸಿಯೇಶನಿನ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು.ಟರ್ಫ್ ಕಮಿಟಿಯ ಕಾರ್ಯಾಧ್ಯಕ್ಷ ಚಂದ್ರಕಾಂತ್ ಶೆಟ್ಟಿ ಸರ್ವರನ್ನು ಸ್ವಾಗತಿಸಿದರು.
ಪಂದ್ಯಾಟದಲ್ಲಿ ಟೈಟಾನ್ ಟೈಗರ್ಸ್,ಪಿಚ್ ಪ್ಯಾಂತರ್ಸ್, ಥಂಡರ್ ಸ್ಟ್ರೈಕರ್ಸ್, ರೈಸಿಂಗ್ ಸ್ಟಾರ್ಸ್, ದ ಎಲಿಮಿನೇಟರ್ಸ್,ಫೊಯೆನಿಕ್ಸ್ ಫೋರ್ಸ್ ಹಾಗೂ ಗೇಮ್ ಚೇಂಜರ್ಸ್ ಎಂಬ ಏಳು ತಂಡಗಳು ಭಾಗವಹಿಸಿದ್ದವು. ಕೊನೆಗೆ ಟೈಟಾನ್ ಟೈಗರ್ಸ್ ಮತ್ತು ಫೊಯೆನಿಕ್ಸ್ ಫೋರ್ಸ್ ತಂಡಗಳ ನಡುವೆ ಅಂತಿಮ ಸೆಣಸಾಟ ನಡೆದು ಟೈಟಾನ್ ಟೈಗರ್ಸ್ ತಂಡವು ವಿಜೇತ ತಂಡವಾಗಿ ವಿನ್ನರ್ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಅತ್ಯುತ್ತಮ ಬ್ಯಾಟ್ಸ್ ಮ್ಯಾನ್ ಆಗಿ ಜೈನಿಲ್, ವಿನಯ್ ಕರ್ಕೇರ, ಯೂಸುಫ್ ಮುಖಿ, ಅತ್ಯುತ್ತಮ ಬೌಲರ್ ಆಗಿ ವಿನಯ್ ಕರ್ಕೇರ, ಸೊಹೈಲ್ , ಪ್ರಕಾಶ್ ಶೆಟ್ಟಿ, ಅತ್ಯುತ್ತಮ
ಫೀಲ್ಡರ್ ಆಗಿ ಯೂಸುಫ್ ಮುಖಿ, ಪ್ರಿಥ್ವಿ ಭಂಡಾರಿ, ಶಶಾಂಕ್ ಶೆಟ್ಟಿ ಆಯ್ಕೆಯಾದರು. ಅತ್ಯಮೂಲ್ಯ ಆಟಗಾರರ ಪ್ರಶಸ್ತಿಯನ್ನು ವಿನಯ್ ಕರ್ಕೇರ, ಯೂಸುಫ್ ಮುಖಿ ಹಾಗೂ ಸಂದೇಶ್ ಶೆಟ್ಟಿ ಸ್ವೀಕರಿಸಿದರು.
ಪರಿಸರದ ಹಿರಿಯ ಹೋಟೇಲು ಉದ್ಯಮಿಗಳಾದ ಶಿವರಾಮ್ ಶೆಟ್ಟಿ, ಜಯಪ್ರಕಾಶ್ ಭಂಡಾರಿ , ಹರೀಶ್ ಶೆಟ್ಟಿ, ವಿಶು ಪೂಜಾರಿ ಪ್ರಸಾದ್ ಶೆಟ್ಟಿ ನೀರೆ ಮೊದಲಾದವರು ಉಪಸ್ಥಿತರಿದ್ದರು.ಸಂಘಟನೆಯ ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಕೋಶಾಧಿಕಾರಿ ಅನಿಲ್ ಶೆಟ್ಟಿ,ಜೊತೆ ಕೋಶಾಧಿಕಾರಿ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರುಗಳಾದ ವಿನಿತ್ ಶೆಟ್ಟಿ, ಧೀರಜ್ ಶೆಟ್ಟಿ, ನವೀನ್ ಶೆಟ್ಟಿ, ಮೋಹನ್ ಶೆಟ್ಟಿ, ಜೀವನ್ ಶೆಟ್ಟಿ,ಹಸನ್ ನದೇರಿಯಾ , ಪ್ರಕಾಶ್ ಶೆಟ್ಟಿ , ಕಾರ್ಯಕಾರಿ ಸಮಿತಿಯ ಸದಸ್ಯರಾದ ಉದಯ್ ಎಮ್.ಶೆಟ್ಟಿ, ಸೋಹೈಲ್ ಸೇಲಿಯಾ, ಹರೀಶ್ ಶೆಟ್ಟಿ ಕಾಪು, ಸಂತೋಷ್ ಶೆಟ್ಟಿ, ಪ್ರಶಾಂತ್ ಸಮಾನಿ ಹಾಗೂ ಹರೀಶ್ ಶೆಟ್ಟಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು. ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ವಂದಿಸಿದರು.



