ಮುಂಬಯಿ: ಮೊಗವೀರ ಮಹಾಜನ ಸೇವಾ ಸಂಘ (ರಿ.) ಬಗ್ವಾಡಿ ಹೋಬಳಿ ಮುಂಬಯಿ ಘಟಕದ 84ನೇ ವಾರ್ಷಿಕ ಮಹಾಸಭೆಯು ಅಕ್ಟೋಬರ್ 24ರ ಶನಿವಾರ ಸಂಜೆ 4:30ಕ್ಕೆ ಥಾಣೆ ಪಶ್ಚಿಮದ ಘೋಡ್‌ಬಂದರ್ ರಸ್ತೆಯಲ್ಲಿರುವ ಆರ್ ಮಾಲ್ ಎದುರಿನ ಸಿಲ್ವರ್‌ಡೋರ್ ಬೋಟಿಕ್ ಹೋಟೆಲ್‌ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಕೆ. ಪುತ್ರನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸಭೆಯಲ್ಲಿ 2025–26ನೇ ಸಾಲಿನ ವಾರ್ಷಿಕ ವರದಿ ಮಂಡನೆ, ಲೆಕ್ಕಪರಿಶೋಧಕರು ಪರಿಶೀಲಿಸಿದ ಲೆಕ್ಕಪತ್ರಗಳ ಅನುಮೋದನೆ ಹಾಗೂ ಹಿಂದಿನ ಮಹಾಸಭೆಯ ನಡಾವಳಿಗಳ ಅಂಗೀಕಾರ ಸೇರಿದಂತೆ ಸಂಘದ ಆಡಳಿತಾತ್ಮಕ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಅಲ್ಲದೆ, ಸಂಘದ ಪ್ರಸ್ತುತ ಚಟುವಟಿಕೆಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆಯೂ ಸಮಾಲೋಚನೆ ನಡೆಯಲಿದೆ.
ಸಮಾಜದ ಏಳಿಗೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘದ ಈ ಮಹತ್ವದ ಸಭೆಯಲ್ಲಿ ವಿವಿಧ ಶಾಖೆಗಳ ಪದಾಧಿಕಾರಿಗಳು, ಮಹಿಳಾ ವಿಭಾಗದ ಪ್ರತಿನಿಧಿಗಳು ಹಾಗೂ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡುವ ಮೂಲಕ ಸಂಘದ ಮುಂದಿನ ಅಭಿವೃದ್ಧಿಗೆ ಸಹಕರಿಸಬೇಕೆಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಸಭೆಯಲ್ಲಿ ಭಾಗವಹಿಸುವಂತೆ ಗೌರವಾಧ್ಯಕ್ಷ ಸುರೇಶ್ ಆರ್. ಕಾಂಚನ್, ಅಧ್ಯಕ್ಷ ಸಂತೋಷ್ ಕೆ. ಪುತ್ರನ್, ಉಪಾಧ್ಯಕ್ಷರಾದ ಮಹಾಬಲ ಕುಂದರ್ ಮತ್ತು ರಮೇಶ್ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ್ ಮೆಂಡನ್, ಗೌರವ ಕೋಶಾಧಿಕಾರಿ ನಾಗರಾಜ್ ಶ್ರೀಯಾನ್, ಜೊತೆ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ನಾಯ್ಕ್, ಅಶೋಕ್ ಮೆಂಡನ್, ಜೊತೆ ಕೋಶಾಧಿಕಾರಿ ಪ್ರವೀಣ್ ನಾಯ್ಕ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಘದ ಪದಾಧಿಕಾರಿಗಳು ಅಥವಾ ಆಡಳಿತ ಮಂಡಳಿಯ ಸದಸ್ಯರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.



