ಜಯ ಸಿ. ಪೂಜಾರಿ, ಕೆಳಾರ್ಕಳ ಬೆಟ್ಟು
ಉಡುಪಿ: ಬನ್ನಂಜೆ ಎಂಬ ಪುಟ್ಟ ಊರಿನಲ್ಲಿ ಕೃಷಿ ಕೂಲಿ ಕುಟುಂಬದಲ್ಲಿ ತೋಮ ಪೂಜಾರಿ ಮತ್ತು ಧಾರಮ್ಮ ಪೂಜಾರಿ ದಂಪತಿಯ ಒಂಬತ್ತು ಮಕ್ಕಳಲ್ಲಿ ಕಿರಿಯ ಮಗನಾಗಿ 1944ರ ಆಗಸ್ಟ್ 4ರಂದು ಜನಿಸಿದವರು ಬನ್ನಂಜೆ ಬಾಬು ಅಮೀನ್.
ತನ್ನ ಕಿರಿಯ ಮಗನನ್ನು ಅಪಾರ ಪ್ರೀತಿಯಿಂದ ಬೆಳೆಸಿದ ತಾಯಿ ಧಾರಮ್ಮ, ಆತನಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಕನಸು ಕಂಡಿದ್ದರು. ಕುಟುಂಬದ ತೀವ್ರ ಬಡತನದ ನಡುವೆಯೂ ಮಗನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ತಮ್ಮ ಕಿವಿಯೋಲೆಗಳನ್ನೇ ಮಾರಿ, ಅಂದಿನ ಹನ್ನೊಂದನೇ ತರಗತಿಯವರೆಗಿನ ಶಿಕ್ಷಣವನ್ನು ಕೊಡಿಸಿದರು. ಮಗ ಒಳ್ಳೆಯ ಶಿಕ್ಷಣ ಪಡೆದು ಉತ್ತಮ ಅಧಿಕಾರಿಯಾಗಬೇಕೆಂಬುದು ತಾಯಿಯ ಆಶಯವಾಗಿತ್ತು. ಆದರೆ ವಿಧಿಯ ಬರಹವೇ ಬೇರೆಯಾಗಿತ್ತು. ಅಧಿಕಾರಿಯಾಗಬೇಕಿದ್ದ ಮಗ ತುಳುನಾಡಿನ ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿಯ ವಿದ್ವಾಂಸರಾಗಿ ರೂಪುಗೊಂಡರು.
ಮನುಷ್ಯ ಜೀವನದಲ್ಲಿ ಯಶಸ್ಸು, ನೀತಿ, ದಕ್ಷತೆ, ಉತ್ತಮ ನಡವಳಿಕೆ, ಸಹನೆ, ತಾಳ್ಮೆ, ಮಾನವೀಯತೆ ಹಾಗೂ ಸೌಜನ್ಯದ ಮಾತುಗಳನ್ನು ಮೈಗೂಡಿಸಿಕೊಂಡು ಬದುಕಿದಾಗ ಜೀವನ ಸಾರ್ಥಕವಾಗುತ್ತದೆ. ಉತ್ತಮ ಆರೋಗ್ಯ, ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿ ಇವು ಸಂತೋಷದ ಮೂಲಗಳಾಗಿವೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಮೂಲ ಸಂಸ್ಕೃತಿಯನ್ನು ಮರೆಯಬಾರದು. ಇಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಸೇವೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದಿರುವ 83ರ ಹರೆಯದ ಬನ್ನಂಜೆ ಬಾಬು ಅಮೀನ್ ಅವರ ಹೆಸರು ತುಳುನಾಡಿನಲ್ಲಿ ಚಿರಪರಿಚಿತವಾಗಿದೆ.
ಕೃಷಿ ಕೂಲಿ ಕುಟುಂಬದಿಂದ ಬೆಳೆದು ಬಂದ ಬಾಬು ಅಮೀನ್ ಅವರು ಚುರುಕಿನ, ನೇರ ನಡೆ-ನುಡಿಯ ಹಾಗೂ ಸ್ವಾಭಿಮಾನಿ ವ್ಯಕ್ತಿತ್ವದವರು. ಸಮಯೋಚಿತ ಹೊಂದಾಣಿಕೆ ಮತ್ತು ತತ್ವಗಳ ವಿಚಾರದಲ್ಲಿ ರಾಜಿಯಾಗದ ನಿಲುವಿನಿಂದಾಗಿ ನಿಷ್ಠುರವಾದಿ ಎಂಬ ಹೆಸರೂ ಅವರಿಗೆ ಬಂದಿದೆ. ಅನ್ಯಾಯ ಮತ್ತು ತಪ್ಪುಗಳನ್ನು ಕಂಡಾಗ ನಿರ್ಭೀತಿಯಿಂದ ಖಂಡಿಸುವ ಅವರ ದಿಟ್ಟತನದಿಂದ ವೈಯಕ್ತಿಕವಾಗಿ ಹಲವು ಅವಕಾಶಗಳಿಂದ ವಂಚಿತರಾದರೂ, ತಮ್ಮ ತತ್ವಾದರ್ಶಗಳನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ಅವರ ಸಾಹಿತ್ಯಿಕ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ 2021ರಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು.
1963ರಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಬಳಿಕ, ಉದ್ಯೋಗ ಅರಸಿ 1974ರಲ್ಲಿ ಮುಂಬಯಿಗೆ ತೆರಳಿದರು. ಮುಂಬಯಿಯಲ್ಲಿ ನೆಲೆಸಿದ್ದ ಅವಧಿಯಲ್ಲಿ ಚೆoಬೂರು ಅಯೋಧ್ಯ ನಗರದಲ್ಲಿ ಅಲ್ಲಿ ಸ್ಥಾಪನೆಯಾಗಿರುವ ಶ್ರೀ ಶನಿಶ್ವರ ದೇವಸ್ಥಾನದ ಸಂಸ್ತಾಪಕರಲ್ಲಿ ಓರ್ವರಾದ ಬನ್ನಂಜೆಯವರು ಪಾರಪ್ರಾಂತಿಯವರನ್ನು ಸೇರಿಸಿ ಕೊಂಡು ಮಾನಸಿಕ ನೆಮ್ಮದಿ ಶಾಂತಿ ಸಮಾಧಾನಗಳನ್ನು ಗಳಿಸುವ ಉದ್ದೇಶದಿಂದ ಭಕ್ತಾ ಬೀಷ್ಮ ಫಲಪ್ರದಾಯಕನಾದ ಶನಿಶ್ವರ ದೇವರ ಆರಾಧನೆಯನ್ನು ಭಜನೆ ಪೂಜಾದಿಗಳು ಆರಂಭಿಸಿ ಶನಿಗ್ರಂಥ ಪಾರಾಯಣದ ಅರ್ಥಗಾರಿಕೆಯ ಮಾರ್ಗದರ್ಶನ ವಿತ್ತು ಅನೇಕ ಮುಂಬಯಿಯ ಯುವ ಪ್ರತಿಭೆಗಳನ್ನು ಧಾರ್ಮಿಕ ರಂಗಕ್ಕೆ ಪರಿಚಯಿಸಿದ ಕೀರ್ತಿಗೆ ಭಾಜನರಾಗಿರುವರು. ಮುಂಬಯಿಯಲ್ಲಿ ಪ್ರಕಟವಾಗುತ್ತಿದ್ದ ‘ಕರ್ನಾಟಕ ಮಲ್ಲ’ ಸೇರಿದಂತೆ ಹಲವು ಕನ್ನಡ ಪತ್ರಿಕೆಗಳಲ್ಲಿ ಸ್ವತಂತ್ರ ಪತ್ರಕರ್ತರಾಗಿ ಹಾಗೂ ಬರಹಗಾರರಾಗಿ ಸೇವೆ ಸಲ್ಲಿಸಿದರು. ಮುಂಬಯಿ ಬಿಲ್ಲವರ ಅಸೋಸಿಯೇಷನ್ನ ಜಂಟಿ ಕಾರ್ಯದರ್ಶಿಯಾಗಿ ಮತ್ತು ‘ಅಕ್ಷಯ’ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು.
ಬನ್ನಂಜೆಯಂತಹ ಪುಟ್ಟ ಊರಿನ ಹೆಸರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಬಾಬು ಅಮೀನ್ ಅವರ ಸಾಹಿತ್ಯಿಕ ಕೊಡುಗೆ ಮಹತ್ವದ್ದಾಗಿದೆ. ತುಳುನಾಡಿನ ಜಾನಪದ ಸಾಹಿತ್ಯ, ಸಂಸ್ಕೃತಿ, ಆರಾಧನಾ ಪದ್ಧತಿ ಹಾಗೂ ಗರೋಡಿಗಳ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅವರು, ಈ ಕ್ಷೇತ್ರಗಳ ಸಂಶೋಧನೆ ಮತ್ತು ದಾಖಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ತಮ್ಮ ನಿರಂತರ ಅಧ್ಯಯನ, ಬರವಣಿಗೆ ಮತ್ತು ಸಂಶೋಧನೆಯ ಮೂಲಕ ಒಟ್ಟು 22 ಗ್ರಂಥಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಸಾಹಿತ್ಯ ಮತ್ತು ಸಮಾಜಸೇವೆಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಹಲವಾರು ಪ್ರಶಸ್ತಿ ಹಾಗೂ ಗೌರವಗಳನ್ನು ಸ್ವೀಕರಿಸಿದ್ದಾರೆ.
ಇತ್ತೀಚೆಗೆ 2026ರ ನವೆಂಬರ್ 1ರಂದು ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವ ದಿನದಂದು ಬನ್ನಂಜೆ ಬಾಬು ಅಮೀನ್ ಅವರಿಗೆ ಪ್ರತಿಷ್ಠಿತ ‘ವಿಶುಕುಮಾರ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆ ಹಾಗೂ ವಿಶುಕುಮಾರ್ ದತ್ತಿನಿಧಿ ಸಮಿತಿಯ ಸಹಯೋಗದಲ್ಲಿ ಈ ಕಾರ್ಯಕ್ರಮವು ಯಕ್ಷಗಾನ ಕಲಾ ರಂಗ ಕುಂಜಿಬೆಟ್ಟು ಶಾರದ ಕಲ್ಯಾಣಮಂಟಪ ಹತ್ತಿರ ಇಲ್ಲಿ ಆಯೋಜಿಸಲಾಗಿತ್ತು.
ಆಳ್ವಾಸ್ ಎಜುಕೇಶನ್ ಫೌಂಡೇಶನ್ನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಬಿಪಿನ್ ಚಂದ್ರಪಾಲ್, ಅಶೋಕ್ ಕುಮಾರ್ ಪಡ್ಪು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ, ಗೋವಾ ಬಿಲ್ಲವ ಸಂಘದ ಗೌರವಾಧ್ಯಕ್ಷ ಚಂದ್ರಹಾಸ ಅಮೀನ್, ವಕೀಲರಾದ ವಿಜಯಲಕ್ಷ್ಮಿ ವಿಶುಕುಮಾರ್, ಯುವವಾಹಿನಿ ಯುವ ಸಾಹಿತಿ ಪ್ರಶಸ್ತಿ ಪುರಸ್ಕೃತ ಡಾ. ಪ್ರಭಾಕರ ನೀರುಮಾರ್ಗ, ಉದಯೋನ್ಮುಖ ಸಾಹಿತಿ ಕು. ತಜ್ಞ ಆರ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ವಿನೋದ್ ಮಂಚಿ ಗೌರವ ಉಪಸ್ಥಿತರಿದ್ದರು.
ತನ್ನ ಮಗ ಉತ್ತಮ ಅಧಿಕಾರಿಯಾಗಬೇಕೆಂದು ಕನಸು ಕಂಡ ತಾಯಿಯ ಆಶಯಕ್ಕೆ ವಿಭಿನ್ನವಾದ ರೀತಿಯಲ್ಲಿ ನ್ಯಾಯ ಒದಗಿಸಿದ ಬಾಬು ಅಮೀನ್, ಇಂದು ತುಳುನಾಡಿನ ಜಾನಪದ ಪರಂಪರೆಯ ಅಧ್ಯಯನ ಮತ್ತು ಸಂರಕ್ಷಣೆಯಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ. ಅವರ ಪತ್ನಿ ಇಂದಿರಾ, ಮಕ್ಕಳಾದ ಭಾರತಿ ಅಳಿಯ ಮನೋಹರ ಮತ್ತು ಪುತ್ರ ರಾಘವೇಂದ್ರ ಸೊಸೆ ಅವರ ಮೊಮ್ಮಕ್ಕಳು ಅವರ ಕುಟುಂಬ ಜೀವನ ಸದಾ ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಸಾಗಲಿ. ಬಾಬು ಅಮೀನ್ ಅವರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸೇವೆ ಇನ್ನಷ್ಟು ವಿಸ್ತಾರಗೊಳ್ಳಲಿ ಎಂದು ಹಾರೈಸೋಣ.





























































