ಕಲ್ಯಾಣ (ಮಹಾರಾಷ್ಟ್ರ): ಇಲ್ಲಿನ ಕರ್ನಾಟಕ ಸಂಘದ ವತಿಯಿಂದ 24ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವೆಂಬರ್ 1ರ ಭಾನುವಾರ ಸಂಜೆ 5 ಗಂಟೆಗೆ ಕಲ್ಯಾಣ ಪಶ್ಚಿಮದ ಗಿರಿಜಾ ಪಯ್ಯಾಡೆ ಸಭಾಂಗಣದಲ್ಲಿ ವಿಜ್ರಂಭಣೆಯಿಂದ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಕಲ್ಯಾಣ ಪರಿಸರದ ಪ್ರಸಿದ್ಧ ನ್ಯಾಯವಾದಿ ಶ್ರೀಮತಿ ಸುಧಾ ಜೋಶಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಗೌರವ ಅತಿಥಿಗಳಾಗಿ ಸತ್ಯಧ್ಯಾನ ವಿದ್ಯಾಪೀಠದ ಶ್ರೀ ರಾಮಕೃಷ್ಣ ಆಚಾರ್ ಹಾಗೂ ಶಹಾಡ್‌ನ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಶ್ರೀ ರಾಜೇಶ್ ಶೆಟ್ಟಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಶಹಾಡ್ ಮೂಕಾಂಬಿಕಾ ಮಂದಿರದ ಮಾಜಿ ಅಧ್ಯಕ್ಷ ಶ್ರೀ ಕರುಣಾಕರ ಶೆಟ್ಟಿ, ಬಹುಮುಖ ಪ್ರತಿಭಾವಂತೆ ಶ್ರೀಮತಿ ವಸಂತಾ ಚಂದ್ರಶೇಖರ, ಹೋಟೆಲ್ ಉದ್ಯಮಿ ಶ್ರೀ ನಾಗರಾಜ್ ಶೆಟ್ಟಿ (ಹೋಟೆಲ್ ಸಾಯಿ ಸಾಗರ್) ಹಾಗೂ ಕರ್ನಾಟಕ ಸಂಘದ ಗೌರವ ಕೋಶಾಧಿಕಾರಿ ಶ್ರೀ ಗಣೇಶ ಪೈ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು.
ಸಮಾರಂಭದಲ್ಲಿ ಸಂಘದ ವಾರ್ಷಿಕ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದ್ದು, ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಮಾರಂಭದಲ್ಲಿ ಕಲ್ಯಾಣ ಹಾಗೂ ಸುತ್ತಮುತ್ತಲಿನ ಕನ್ನಡ ಮತ್ತು ತುಳು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಅಧ್ಯಕ್ಷ ಶ್ರೀ ಜಯಂತ ದೇಶಮುಖ್ ಹಾಗೂ ಸಲಹೆಗಾರರು ಮತ್ತು ಪ್ರೋಗ್ರಾಮ್ ಕಮಿಟಿ ಅಧ್ಯಕ್ಷರಾದ ಶ್ರೀ ಭಾಸ್ಕರ ಶೆಟ್ಟಿ ಗುರುದೇವ್ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.



