
ಮಂಗಳೂರು : ಕರ್ಮದಿಂದಲೇ ವ್ಯಕ್ತಿಯ ಪರಿಚಯ ಆಗುತ್ತದೆ ಮತ್ತು ಖ್ಯಾತಿ ಉಳಿಯುತ್ತದೆ. ಅಹಂ ಮತ್ತು ಆಸೆಯಿಂದ ಕೇಡು ಉಂಟಾಗುತ್ತದೆ ಎಂದು ಛತ್ತೀಸಗಢ ರಾಜನಂದಗಾವ್‌ನ ಸಾಮಾಜಿಕ ಕಾರ್ಯಕರ್ತೆ ಫೂಲ್‌ಬಸನ್ ಬಾಯಿ ಯಾದವ್ ಅಭಿಪ್ರಾಯಪಟ್ಟರು.
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರಿನ ಶಾರದಾ ವಿದ್ಯಾಲಯದ ಆವರಣದಲ್ಲಿ ಡಿ.24. ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮೂಲತ್ವ ವಿಶ್ವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ವೈಯಕ್ತಿಕ ಬದುಕಿನ ಎಲ್ಲರೂ ಕಾಳಜಿ ವಹಿಸುತ್ತಾರೆ. ಅದರ ಜೊತೆ ಪರರ ಕಾಳಜಿ ವಹಿಸುವುದೂ ಮುಖ್ಯ ಎಂದರು.
‘ನಮ್ಮ ಮೇಲೆಯೇ ನಮಗೆ ಪೂರ್ಣ ನಂಬಿಕೆ ಇರಬೇಕು. ಮನುಷ್ಯತ್ವ ಬಿಟ್ಟು ಬದುಕಿ ಪ್ರಯೋಜನ ಇಲ್ಲ. ಸಮಾಜಕ್ಕಾಗಿ ಬದುಕಲು ಪ್ರಯತ್ನಿಸಬೇಕು. ಹೆತ್ತ ತಾಯಿ, ಸಲಹಿದ ತಂದೆ, ಹೊತ್ತುಕೊಂಡಿರುವ ಭೂಮಿ ಮತ್ತು ಬದುಕು ನೀಡುತ್ತಿರುವ ದೇಶದ ಮೇಲೆ ಪ್ರೀತಿ ಇರಲಿ’ ಎಂದ ಅವರು ‘ಗೌರವ ಪಡೆಯುವುದು ಸುಲಭ, ಅದನ್ನು ಉಳಿಸಿಕೊಳ್ಳುವುದು ಸವಾಲು. ಆ ಸವಾಲು ಈಗ ನನಗಿದೆ’ ಎಂದರು.
ಪ್ರಾಣ ಕಳೆದುಕೊಳ್ಳಬೇಡಿ : ಸನ್ಮಾನ ಸ್ವೀಕರಿಸಿದ ಮುಳುಗು ತಜ್ಞ ಮತ್ತು ಸಮಾಜಸೇವಕ ಈಶ್ವರ್ ಮಲ್ಪೆ ಮಾತನಾಡಿ ನೀರಿನೊಂದಿಗೆ ಆಟವಾಡುವಾಗ ಜಾಗ್ರತೆ ವಹಿಸಬೇಕು. ಹೆಚ್ಚು ನೀರು ಮತ್ತು ಸುಳಿ ಇರುವಂಥ ಪ್ರದೇಶದಲ್ಲಿ ಸೆಲ್ಫಿ, ರೀಲ್ಸ್ ಮಾಡುವಾಗ ಮೈಮರೆಯಬಾರದು ಎಂದರು.
ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವವರು ಇದ್ದಾರೆ. ಈ ರೀತಿ ಪ್ರಾಣ ಕಳೆದುಕೊಳ್ಳಲು ಯಾರೂ ಮುಂದಾಗಬೇಡಿ. ಆತ್ಮಹತ್ಯೆಯ ಯೋಚನೆ ಬಂದಾಗ ಮತ್ತೆ ಮತ್ತೆ ಯೋಚಿಸಬೇಕು. ಸಮಾಜದಲ್ಲಿ ಅನೇಕ ತೊಂದರೆಗಳಿಂದ ಬಳಲುವವರು ಇದ್ದಾರೆ. ಸಮಸ್ಯೆ ತಲೆದೋರಿದಾಗ ಬದುಕಿನ ಬಗ್ಗೆ ಜಿಗುಪ್ಸೆ ಹೊಂದಬಾರದು ಎಂದು ಅವರು ಕಿವಿಮಾತು ಹೇಳಿದರು.
ಮೂಲತ್ವ ಫೌಂಡೇಶನ್ ಸ್ಥಾಪಕ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಶೈನಿ ಮತ್ತು ಅಕ್ಷತಾ ಕದ್ರಿ, ಗೋವಿಂದ ದಾಸ್ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯದರ್ಶಿ ಹಿತಾ ಉಮೇಶ್, ನವೋದಯ ಟ್ರಸ್ಟ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಶೆಟ್ಟಿ, ಮಂಗಳೂರು ವಿಶ್ವವಿದ್ಯಾಲಯದ ಎನ್‌ಸಿಸಿ ಕೆಡೆಟ್‌ಗಳಾದ ಪ್ರಜ್ವಲ್ ಶೆಟ್ಟಿ, ಗೌತಮಿ ಪೂಜಾರಿ, ಶ್ರೀ ಗೋಕರ್ಣನಾಥ ಕಾಲೇಜಿನ ಕಾಮರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಪ್ರೀತಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.