
ಸಾಹಿತ್ಯದ ಅಂತಿಮ ಸತ್ಯವೇ ಮನಸ್ಸಿಗೆ ಶಾಂತಿಯನ್ನು ನೀಡುವಂತದ್ದು : ಡಾ.ಭರತ್ ಕುಮಾರ್ ಪೊಲಿಪು
ಚಿತ್ರ, ವರದಿ : ರಮೇಶ್ ಉದ್ಯಾವರ
ಮಾಟುಂಗ ಡಿ. 30 : ಒಂದು ಕೃತಿಯನ್ನು ಸಮಾಜ ವಿವಿಧ ದೃಷ್ಟಿಕೋನದಿಂದ ಗ್ರಹಿಸುವ ಮೂಲಕ ವಿವಿಧ ಜ್ಞಾನ ಶಾಖೆಗಳ ಮೂಲಕ ಅದರ ಅಧ್ಯಯನ ಮಾಡುವಂತಾಗಬೇಕು. ಆಗ ನಮ್ಮ ಅನುಭವಗಳ ಸಾಧ್ಯತೆಗಳು ತೆರೆದುಕೊಳ್ಳುತ್ತದೆ. ಒಬ್ಬ ಪ್ರಭುತ್ವ ಲೇಖಕ ಬರೆದ ಕೃತಿಗಳು ನಮ್ಮ ಅನುಭವದ ನೆಲೆಯಲ್ಲಿ ಸಾಕಷ್ಟು ಅರ್ಥವಾಗದೇ ಇರುವಂತ ಸಾಧ್ಯತೆ ಇರುತ್ತದೆ. ಆವಾಗ ನಮ್ಮ ಅನುಭವ ವಿಚಾರವಾಗಿ ಪರಿವರ್ತನೆಗೊಂಡಾಗ ಅಂತ ಲೇಖನಗಳು ಅರ್ಥವಾಗಲು ಸಾಧ್ಯವಾಗುತ್ತದೆ. ನಮ್ಮ ತಿಳುವಳಿಕೆಯ ಅನುಭವ ಪಡೆಯಲು ಸ್ವಂತ ನೆಲೆಯಲ್ಲಿ ಓದುವ ಹವ್ಯಾಸ ಬೆಳೆಯಬೇಕು. ಸಾಹಿತ್ಯದ ಅಂತಿಮ ಸತ್ಯವೇ ನಮ್ಮ ಮನಸ್ಸಿಗೆ ಶಾಂತಿಯನ್ನು ನೀಡುವಂತದ್ದು. ನಮ್ಮ ಅನುಭವ ಅರಿವು ಸಂವೇದನೆ ವಿಸ್ತರಿಸುವಂತ ಈ ಸಾಹಿತ್ಯದ ಮೂಲಕ ಆನೇಕ ಅನುಭವಗಳನ್ನು ಕಂಡುಕೊಳ್ಳಬಹುದು. ಎಂದು ಕರ್ನಾಟಕ ಸಂಘ ಮುಂಬಯಿ ಇದರ ಅಧ್ಯಕ್ಷ ರಾದ ಡಾ.ಭರತ್ ಕುಮಾರ್ ಪೊಲಿಪು ಅಭಿಪ್ರಾಯ ಪಟ್ಟರು.
ಡಿ. 30ರಂದು ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಷನ್ ನಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಆಯೋಜಿಸಿದ ಡಾ. ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ ಪ್ರದಾನ ಮತ್ತು ಡಾ.ಈಶ್ವರ್ ಅಲೆವೂರು,ಮನೋಹರ್ ತೋನ್ಸೆ ಅವರ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತ್ಯ ಎಷ್ಟು ಸೃಜನಶೀಲವೋ ಸಾಂಸ್ಕೃತಿಕ ಅಧ್ಯಯನಗಳು ಕೂಡ ಅಷ್ಟೇ ಮುಖ್ಯವಾದುದು. ಕಾರ್ಯಕ್ರಮಗಳ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಮಗೆ ಸಂಬಂಧಪಟ್ಟದಲ್ಲ ಎಂಬ ಭಾವನೆಯಿಂದ ಹೊರ ಬರಲು ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ಪ್ರಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಳವಡಿಸಲಾಯಿತು. ಅದು ನಾವು ಕಲಾವಿದರಿಗೆ ಕೊಡುವ ಗೌರವ ಎಂದು ಹೇಳಿದ ಪೊಲಿಪು ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಹಿತ್ಯ ಪ್ರೇಮಿಗಳಿಗೆ ಅಭಿನಂದನೆ ಸಲ್ಲಿಸಿದರು.




ಲೇಖಕ ಮನೋಹರ್ ತೋನ್ಸೆಯವರ ಸಾಹಿತ್ಯ ಲೇಖನ ಸಂಗ್ರಹ ‘ಬಹುಮುಖಿ’ ಮತ್ತು ಲೇಖಕ ಡಾ.ಈಶ್ವರ ಅಲೆವೂರುರವರ ವಿಮರ್ಶ ಲೇಖನ ‘ಒಲವು ನಿಲುವು’ ಕೃತಿಗಳನ್ನು ಬಿಡುಗಡೆಗೊಳಿಸಿ ಪುಸ್ತಕ ಕೃತಿಕಾರರಿಗೆ ಹಾಗೂ ಪ್ರಶಸ್ತಿ ಸ್ವೀಕರಿಸುವ ಅಭಿನಂದನೆ ಸಲ್ಲಿಸಿ ಮಾತನಾಡಿದ ಸಾಹಿತಿ ವಿಜ್ಞಾನಿ ಡಾ. ವ್ಯಾಸರಾವ್ ನಿಂಜೂರು ಪುಸ್ತಕ ಬಿಡುಗಡೆಗೆಯ ಸೀಮಿತ ಕಾರ್ಯಕ್ರಮದಲ್ಲಿ ಇಷ್ಟೊಂದು ಸಾಹಿತ್ಯ ಪ್ರಿಯರು ಬಂದಿರುವುದು ನೋಡಿದರೆ ಮಹಾನಗರದಲ್ಲಿ ಸಾಹಿತ್ಯ ಪ್ರೇಮಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಸಾಂಸ್ಕೃತಿಕವಾಗಿ ಅನಾವರಣಗೊಳಿಸುವ ಮೂಲಕ ಕರ್ನಾಟಕ ಸಂಘದ ಒಂದು ವಿನೂತನ ಅಧ್ಯಾಯವೆಂದು ಹೇಳಬೇಕು. ಜೊತೆಗೆ ಸದಾ ಬಂಧುತ್ವ ಪ್ರೀತಿಗೆ ಮಹತ್ವ ನೀಡುವಂತಹ ಮುಂಬೈಯ ಹಿರಿಯ ಸಾಹಿತಿ ಡಾ. ಸುನೀತಾ ಶೆಟ್ಟಿ ಅವರ ಹೆಸರಿನ ಪ್ರಶಸ್ತಿ ಕರ್ನಾಟಕ ಸಂಘದ ಒಂದು ಮಹತ್ವದ ಕಾರ್ಯಕ್ರಮವಾಗಿದೆ.ಇದರಲ್ಲಿ ಭಾಗವಹಿಸುವ ಅವಕಾಶ ದೊರೆತಿದ್ದು ಸಂತೋಷ ತಂದಿದೆ ಎಂದು ಹೇಳಿ ಕೃತಿಕಾರರನ್ನು ಅಭಿನಂದಿಸಿದರು.
ಡಾ. ಸುನೀತಾ ಶೆಟ್ಟಿ ಮಾತನಾಡಿ ಮುಂಬೈ ಕನ್ನಡಿಗರು ಸದಾ ಸಾಹಿತ್ಯ ಪ್ರೇಮಿಗಳು. ಕರ್ನಾಟಕ ಸಂಘದ ಇಂದು ಪ್ರಶಸ್ತಿಗೆ ಭಾಜನರಾದ ವ್ಯಕ್ತಿ ಡಾ. ವಿಶ್ವನಾಥ್ ಕಾರ್ನಾಡ್ ಸ್ನಾತಕೋತ್ತರ ಪದವಿಯಲ್ಲಿ ಸಹಪಾಟಿಯಾಗಿದ್ದು ಅಂದಿನಿಂದ ನಮ್ಮ ಬಂಧುತ್ವ ಉಳಿದಿದೆ. ಇಂದಿನ ಎರಡು ಕೃತಿಕಾರರು ಸೃಜನಶೀಲ ಸಂವೇದನಾಶೀಲ ವ್ಯಕ್ತಿಗಳು. ಬರಹಗಾರ ಮನೋಹರ್ ತೋನ್ಸೆ ಅರಬರ ನಾಡಿನಲ್ಲಿ ಕನ್ನಡ ಮಿಡಿತ ಹೊಂದಿರುವವರು ಮತ್ತೋರ್ವರು ಮುಂಬೈ ಕನ್ನಡ ಸಾರಸ್ವತ ಲೋಕದಲ್ಲಿ ಉತ್ತಮ ಬರಹಗಾರರಾಗಿ ಕಾಣಿಸಿಕೊಂಡವರು. ಕೌಟುಂಬಿಕ ಹಾಗೂ ಸಾಮಾಜಿಕ ನೆಲೆಯಲ್ಲಿ ಸಹಬಾಳ್ವೆಯಿಂದ ಬದುಕ ಬೇಕೆಂದು, ಎಲ್ಲವನ್ನು ಕಲಿಸಿ ಕೊಡುವುದು ಸಾಹಿತ್ಯ ಮಾತ್ರ. ವಿಶಿಷ್ಟ ರೀತಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾಲಾನುಕಾಲಕ್ಕೆ ಪ್ರಶಸ್ತಿ ನೀಡುವುದನ್ನು ಪಾಲಿಸಿಕೊಂಡು ಬಂದ ಕರ್ನಾಟಕದ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.

ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಚಿಂತಕ ವಿಶ್ವನಾಥ್ ಕಾರ್ನಾಡ್ ಪ್ರಶಸ್ತಿ ಬಗ್ಗೆ ಮಾತನಾಡಿ ನನ್ನ ಸಾಹಿತ್ಯ ಕ್ಷೇತ್ರ ಪ್ರಚಾರಕ್ಕೆ ಇಡದೆ ನನ್ನ ವೃತ್ತಿ ಜೀವನದಲ್ಲಿ ನಾನು ಸಾಹಿತ್ಯ ಬರವಣಿಗೆಗೆ ಮಹತ್ವ ನೀಡುವ ಮೂಲಕ ಉದ್ಯೋಗ ಸಾಹಿತ್ಯ ಎರಡನ್ನು ಸಮಾನ ದೃಷ್ಟಿಕೋನದಿಂದ ಸ್ವೀಕರಿಸಿದವನು.ನಾನು ಇಂದಿನ ಪ್ರಶಸ್ತಿ ಅದರಲ್ಲೂ ನನ್ನ ಹೆಮ್ಮೆಯ ತರಗತಿಯ ಸಹಪಾಠಿ ಹೆಸರಿನಲ್ಲಿ ದೊರೆತ ಪ್ರಶಸ್ತಿ ನನಗೆ ಅತೀವ ಸಂತೃಪ್ತಿ ನೀಡಿದೆ. ಇದು ಡಾ. ಸುನೀತಾ ಶೆಟ್ಟಿಯವರ ಆಶೀರ್ವಾದ. ಪ್ರಶಸ್ತಿ ಎಂಬುದು ಸಂಚಲನ ಮೂಡಿಸುವ ಮತ್ತು ಬರಹಗಾರಿಗೆ ನೀಡುವ ಪ್ರೋತ್ಸಾಹ ಎಂದು ಹೇಳಿದರು.
ಕೃತಿ ಲೇಖಕರನ್ನು ಪರಿಚಯಿಸಿ ಮಾತನಾಡಿದ ಅಕ್ಷಯ ಪತ್ರಿಕೆಯ ಸಂಪಾದಕ ಹರೀಶ್ ಹೆಜ್ಮಾಡಿಯವರು,ಸಾಹಿತ್ಯ ಸಂಸ್ಕೃತಿ ಸಮೀಕ್ಷೆ ಯು ಸಂಸ್ಕೃತಿ ಸೊಬಗು ಮತ್ತು ಕೊಲ್ಲಿಯಲ್ಲಿ ಕನ್ನಡದ ಕಲರವ. 80ರ ದಶಕದಲ್ಲಿ ಕೊಲ್ಲಿ ರಾಷ್ಟ್ರದ ಕನ್ನಡದ ಕಟ್ಟಾಳಾಗಿ ಅಬುದಾಭಿ ಕನ್ನಡ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸೃಜನಶೀಲತೆಯ ತುಂಬಿದ ಅವರ ಮಾತುಗಳು ಆಲೋಚನೆಗಳು ಅವರ ಕೃತಿಯು ಪರಿಚಯಿಸುತ್ತಿದೆ. ಮತ್ತೋರ್ವ ಬರಹಗಾರ ಈಶ್ವರ ಕನ್ನಡ ಪತ್ರಿಕೆಯ ರಂಗದಲ್ಲಿ ಅವರದು ಮೊಣಚಾಗಿ ನಿಖರ ಬರೆಯುವವರು ಅಪರೂಪದ ವ್ಯಕ್ತಿತ್ವ .ಒಳ್ಳೆಯ ಸಂಪಾದಕರಾದ ಕನ್ನಡ ಸಾರಸ್ವತಲೋಕದಲ್ಲಿ ಎಲ್ಲಾ ಕೃತಿಗಳು ನಾಟಕ ಕಥೆ ಬರಹಗಳು ವಿಮರ್ಶಗಳ ಮಾಡಿದವರು ಯಾವುದೇ ವಿವಾದಕ್ಕೆ ಒಳಗಾಗದ ಬರಹಗಾರರಾಗಿದ್ದು ಡಾಕ್ಟರೇಟ್ ಪದವೀಧರ ಮುತ್ಸದ್ಧಿ ಸಾಹಿತಿ ಪ್ರೇಮಿ ಗಳ ನಡುವೆ ಈ ಕೃತಿ ಬಿಡುಗಡೆಗೊಳ್ಳುವ ಮೂಲಕ ಕೃತಿಕಾರರ ಹುರುಪು ಹುಮ್ಮಸ್ಸು ಹೆಚ್ಚಿಸಿದೆ. ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಇನ್ನಷ್ಟು ಸಿಗಲಿ ಎಂದು ಹಾರೈಸಿದರು.
ಸಾಹಿತಿ ಹಾಗೂ ಸದಸ್ಯರನ್ನು ಸ್ವಾಗತಿಸಿ ಮಾತನಾಡಿದ ಸಂಘದ ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಕರ್ನಾಟಕ ಸಂಘವು ಸಾಹಿತ್ಯ ಕಾರ್ಯಕ್ರಮಗಳು ಕಡಿಮೆಯಾದರೂ ಸಂಧರ್ಭಾನುಸಾರವಾಗಿ ಆಯ್ದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಡಾ. ಸುನಿತಾ ಶೆಟ್ಟಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಂಘದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು ಹಿರಿಯ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡುವ ಕಾರ್ಯಕ್ರಮವಾಗಿದೆ.
ಕರ್ನಾಟಕ ಸಂಘದ ಕಲಾಭಾರತಿ ತಂಡದವರಿಂದ, ರಂಗ ಗೀತೆಗಳು ನಾಟಕದ ದೃಶ್ಯಗಳು ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಐಲೇಸಾ ತಂಡದ ಸುರೇಂದ್ರ ಕುಮಾರ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.