



ಸಮಿತಿಯ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯು ಶ್ಲಾಘನೀಯವಾದುದು-ಬೊಳ್ನಾಡ್ ಗುತ್ತು ಚಂದ್ರಹಾಸ್ ರೈ
ಚಿತ್ರ, ವರದಿ:ಉಮೇಶ್ ಕೆ. ಅಂಚನ್
ಮುಂಬಯಿ, ನ.14: ಕಳೆದ ಐದು ದಶಕಗಳಿಂದ ಸಾಯಿಬಾಬಾ ಪೂಜಾ ಸಮಿತಿಯು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರ್ಥಿಕವಾಗಿ ತೊಂದರೆಯಲ್ಲಿರುವವರಿಗೆ ವೈದ್ಯಕೀಯ ನೆರವು, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಪ್ರತಿಭಾ ಪುರಸ್ಕಾರ, ಅಬಲೆಯರಿಗೆ ಉಚಿತ ಹೊಲಿಗೆ ತರಬೇತಿ ಮುಂತಾದ ಜನಪರ ಸೇವೆಯಿಂದ ಸಮಾಜದಲ್ಲಿ ಗುರುತಿಸಿಕೊಂಡಿದೆ. ಪ್ರತೀ ವರ್ಷ ದೀಪಾವಳಿಯ ಶುಭದಿನದಂದು ಸಾಯಿಬಾಬಾ ಮಹಾಪೂಜೆಯನ್ನು ಅನ್ನಸಂತರ್ಪಣೆಯೊಂದಿಗೆ ವಿಜ್ರಂಭಣೆಯಿಂದ ಆಚರಿಸುತ್ತಿದೆ. ಸಮಿತಿಯ ಸಮಾಜಸೇವೆ ಶ್ಲಾಘನೀಯ. ಸರಕಾರದ ಧೋರಣೆಯಿಂದ ಮಂದಿರವನ್ನು ನಗರಪಾಲಿಕೆ ಕೆಡವಿದರೂ ಆ ಜಾಗದಲ್ಲಿ ಪ್ರತೀ ಗುರುವಾರ ಸಾಯಿಪೂಜೆ ನಡೆಯುತ್ತಿರುವುದು ಸಂತಸದ ವಿಷಯ. ಸಮಿತಿಯ ವತಿಯಿಂದ ಶೀಘ್ರದಲ್ಲೇ ಸಾಯಿಗೊಂದು ನೂತನ ಮಂದಿರ ನಿರ್ಮಾಣವಾಗಲಿ. ಇದಕ್ಕೆ ಸಾಯಿಭಕ್ತರಾದ ನಾವೆಲ್ಲರೂ ಸಹಕರಿಸುವ ಎಂದು ಸುಪರ್ ಕ್ಯಾರ್ ಹಾಸ್ಪಿಟ್ಯಾಲಿಟಿಯ ಮುಖ್ಯ ಆಡಳಿತ ನಿರ್ದೇಶಕ ಬೊಳ್ನಾಡ್ ಗುತ್ತು ಚಂದ್ರಹಾಸ್ ಎಮ್. ರೈ ಹೇಳಿದರು ಅವರು ನ.12ರಂದು ಕಾಲಘೋಡಾ ಎಕ್ಸ್ಪನೇಡ್ ಮ್ಯಾನ್ಶನ್ ವಠಾರದಲ್ಲಿ ಸಾಯಿಬಾಬಾ ಪೂಜಾ ಸಮಿತಿಯ 53ನೇ ವಾರ್ಷಿಕ ಮಹಾಪೂಜೆಯ ನಡುವೆ ನಡೆದ ಧಾರ್ಮಿಕ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಹಾಗೂ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು
ಸಮಿತಿಯ ಅದ್ಯಕ್ಷ ಮಾಧವ ಎಸ್. ಶೆಟ್ಟಿ ಮಾತನಾಡಿ ಸಮಿತಿಯ ಧಾರ್ಮಿಕ ಹಾಗೂ ಸಮಾಜಪರ ಸೇವೆಗೆ ತುಂಬು ಹೃದಯದ ಸಹಕಾರ ನೀಡಿದ ಎಲ್ಲಾ ಸಾಯಿಭಕ್ತರು ಮತ್ತು ದಾನಿಗಳಿಗೆ ಅಭಾರ ಮನ್ನಿಸಿದರು ಹಾಗೂ ಮುಂದಿಗೂ ಇದೇ ರೀತಿ ಸಹಕರಿಸಬೇಕೆಂದು ವಿನಂತಿಸಿದರು.
ಆರಂಭದಲ್ಲಿ ಕಲಶ ಪ್ರತಿಷ್ಠೆ, ವಿದ್ಯಾದಾಯಿನಿ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಭುವಾಜಿ ರಮೇಶ್ ಪೂಜಾರಿಯವರಿಂದ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಸಮಿತಿಯ ಗೌರವ ಕಾರ್ಯದರ್ಶಿ ಫ್ರೊ.ಕೆ.ಎಚ್. ಕರ್ಕೇರ ಸಮಿತಿಯ ಕಾರ್ಯಕಲಾಪಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು.ಅತಿಥಗಳನ್ನು, ದಾನಿಗಳನ್ನು ಸತ್ಕರಿಸಲಾಯಿತು. ಗೌ.ಕೋಶಾಧಿಕಾರಿ ಆರ್. ಡಿ.ಶೇಣವ ವಂದಿಸಿದರು.
ಸಮಿತಿಯ ಉಪಾಧ್ಯಕ್ಷ ಅಡ್ವೆ ಜಯ ಎಸ್. ಶೆಟ್ಟಿ, ಜತೆ ಕಾರ್ಯದರ್ಶಿ ರಮೇಶ್ ಬಿ.ಶೆಟ್ಟಿ ಮಿಜಾರು, ಜತೆ ಕೋಶಾಧಿಕಾರಿ ಭಾಸ್ಕರ್ ಎಮ್ ಶೆಟ್ಟಿ ಅತ್ತೂರು ಕಾರ್ಯಕಾರಿ ಸಮಿತಿಯ ಸದಸ್ಯರಾದ ಸತೀಶ್ ಜಿ.ಭಂಡಾರಿ, ಸುಧಾಕರ್ ಎಮ್. ಶೆಟ್ಟಿ, ರವಿ. ಎಸ್. ಶೆಟ್ಟಿ, ಪ್ರದೀಪ್ ಸುವರ್ಣ, ಕಮಲಾ ಎಸ್. ಶೆಟ್ಟಿ,ಅಬೂಬಕರ್, ಪರೀಕ್ಷಿತ್ ಎನ್.ರೈ ಹಾಗೂ ರವಿ ಎಮ್. ಶೆಟ್ಟಿ ಕೃಷ್ಣ ದೇವಾಡಿಗ, ಪ್ರಸಾದ್ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದ್ದರು.