
ಒಗ್ಗಟ್ಟಿನಿಂದ ಸಂಘಟನೆಯನ್ನು ಬಲಪಡಿಸೋಣ… ಚಂದ್ರಹಾಸ್ ಕೆ.ಶೆಟ್ಟಿ ಇನ್ನ.

.

ಚಿತ್ರ, ವರದಿ : ಉಮೇಶ್ ಕೆ.ಅಂಚನ್.
ಮುಂಬಯಿ ನ.26: ಸಂಘಟನೆಯನ್ನು ಬಲಪಡಿಸಲು ಸದಸ್ಯರ ಸಹಕಾರ ಹಾಗೂ ಒಗ್ಗಟ್ಟು ಅಗತ್ಯ. ತಮ್ಮೆಲ್ಲರ ಸಹಕಾರದಿಂದ ಬಂಟ್ಸ್ ಫೋರಮ್ ಮೀರಾಭಾಯಂದರ್ ಸಮಾಜದಲ್ಲಿ ಗುರುತಿಸಿ ಕೊಂಡಿದೆ. ಸಮಾಜಪರ ಸೇವೆಯಲ್ಲಿ ಯಶಸ್ಸು ಕಂಡಿದೆ. ನನ್ನ ಕಾಲಾವಧಿಯಲ್ಲಿ ಎಲ್ಲಾ ಸದಸ್ಯರು ತುಂಬು ಹೃದಯದಿಂದ ಸಹಕರಿಸಿದ್ದಾರೆ . ನಮ್ಮ ಸದಸ್ಯತ್ವವನ್ನು ವೃದ್ದಿಸಬೇಕು. ಸಂಸ್ಥೆಯ ಅಭಿವೃದ್ಧಿಗೆ ಯುವ ಸದಸ್ಯರ ಅಗತ್ಯ ಇದೆ. ಸಂಘಟನೆಯಲ್ಲಿ ಬಿನ್ನಾಭಿಪ್ರಾಯಗಳು ಬಂದಲ್ಲಿ ಅದನ್ನು ಕೂಡಲೇ ಬಗೆಹರಿಸಿಕೊಂಡು ನಾವೆಲ್ಲ ಒಂದೇ ಕುಟುಂಬದ ಸದಸ್ಯರೆಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಮುಂದಿನ ನೂತನ ಕಾರ್ಯಕಾರಿ ಸಮಿತಿಯು ಯಶಸ್ವಿಯಾಗಿ ಜನಪರ ಸೇವೆಯೊಂದಿಗೆ ಬಂಟ ಸಮುದಾಯದ ಉತ್ತಮ ಸಂಸ್ಥೆ ಎಂಬ ಹೆಸರುಗಳಿಸಲಿ ಎಂದು ಬಂಟ್ಸ್ ಫೋರಮ್ ಮೀರಾಭಾಯಂದರಿನ ಅದ್ಯಕ್ಷ ಚಂದ್ರಹಾಸ್ ಕೆ.ಶೆಟ್ಟಿ ಹೇಳಿದರು .ಅವರು ನ.26ರಂದು ಮೀರಾರೋಡ್ ಸುರಭಿ ಹೋಟೇಲಿನ ಸಭಾಂಗಣದಲ್ಲಿನಡೆದ ಸಂಸ್ಥೆಯ 16ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಸಂಸ್ಥೆಯ ಗೌರವಾಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 16 ವರ್ಷಗಳಿಂದ ಸಂಸ್ಥೆಯ ಏಳಿಗೆಗಾಗಿ ಸಹಕರಿಸಿದ ಸರ್ವ ಸದಸ್ಯರನ್ನು ಅಭಿನಂದಿಸಿದರು.ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಸುಮತಿ ಆರ್.ಶೆಟ್ಟಿಯವರು ತನ್ನ ಕಾರ್ಯಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಅಭಾರ ಮನ್ನಿಸಿದರು.
ಆರಂಭದಲ್ಲಿ ಪ್ರಾರ್ಥನೆಯೊಂದಿಗೆ ಮಹಾಸಭೆಯು ಆರಂಭವಾಯಿತು. ಗೌರವ ಕಾರ್ಯದರ್ಶಿ ಹರ್ಷಕುಮಾರ್ ಡಿ.ಶೆಟ್ಟಿ ಸರ್ವರನ್ನೂ ಸ್ವಾಗತಿಸಿ ಗತ ವರ್ಷದ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ರಮೇಶ್ ಎ.ಶೆಟ್ಟಿ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.ಮುಂದಿನ ಎರಡು ವರ್ಷಗಳ ಕಾಲಾವಧಿಗೆ 20 ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆರಿಸಲಾಯಿತು ಹಾಗೂ ಉದಯ ಎಮ್. ಶೆಟ್ಟಿ ಮಲಾರ್ ಬೀಡುರವರನ್ನು ನೂತನ ಅದ್ಯಕ್ಷ ರನ್ನಾಗಿ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಮಹಾಸಭೆಯಲ್ಲಿ ನಿರ್ಗಮನ ಅದ್ಯಕ್ಷ ಇನ್ನ ಚಂದ್ರಹಾಸ್ ಕೆ.ಶೆಟ್ಟಿ ಹಾಗೂ ನೂತನ ಅದ್ಯಕ್ಷ ಉದಯ ಎಮ್.ಶೆಟ್ಟಿಯವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಜತೆ ಕಾರ್ಯದರ್ಶಿ ಅನಿಲ್ ಆರ್. ಶೆಟ್ಟಿ, ಜತೆ ಕೋಶಾಧಿಕಾರಿ ಸತೀಶ್ ಪಿ. ಶೆಟ್ಟಿ ಉಪಸ್ಥಿತರಿದ್ದರು..
ಬಂಟ್ಸ್ ಫೋರಮಿನ ನೂತನ ಅದ್ಯಕ್ಷ….
ಉದಯ ಎಮ್. ಶೆಟ್ಟಿ, ಮಲಾರ್ ಬೀಡು.
ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಮಲಾರ್ ಬೀಡು ಮನೆತನದ ದಿ. ಯಜಮಾನ ಮಹಾಬಲ ಶೆಟ್ಟಿ ಮತ್ತು ಅಗರಿ ಬಾಳಿಕೆ ಇಂದಿರಾ ಶೆಟ್ಟಿ ದಂಪತಿಗಳ ಸುಪುತ್ರ ಉದಯ ಶೆಟ್ಟಿಯವರು ತಮ್ಮ ಪ್ರೌಡ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪಡೆದು ನಂತರ ಕರ್ಮಭೂಮಿ ಮುಂಬಯಿಗೆ ಆಗಮಿಸಿದರು. ಫೋರ್ಟ್ ಪರಿಸರದ ಸಿದ್ದಾರ್ಥ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಪಡೆದು ನಂತರ ಚರ್ಚ್ ಗೇಟಿನ ಕೆ.ಸಿ.ಕಾಲೇಜಿನಲ್ಲಿ ಹೋಟೇಲ್ ಮೇನೇಜ್ಮೆಂಟ್ ಪದವಿ ಪಡೆದರು. 2000 ದಿಂದ ಮುಂಬಯಿಯ ಹೆಸರಾಂತ ಖಾರ್ ಜಿಮ್ ಕಾನಾ ಲಿಮಿಟೆಡ್ ಸಂಸ್ಥೆಯಲ್ಲಿ ಕೆಲಸ ಪಡೆದು ಇಂದೂ ಹಿರಿಯ ಪ್ರಭಂಧಕರಾಗಿ ಕಾರ್ಯವೆಸಗುತ್ತಿದ್ದಾರೆ. ಮೀರಾರೋಡ್ ಪರಿಸರದ ಓರ್ವ ನಾಮಾಂಕಿತ ಸಮಾಜ ಸೇವಕನಾಗಿ, ಯಶಸ್ವೀ ಹೋಟೇಲು ಉದ್ಯಮಿಯಾದ ಶೆಟ್ಟಿಯವರು ಬಂಟ್ಸ್ ಫೋರಮಿನ ಸಕ್ರಿಯ ಸದಸ್ಯನಾಗಿ, ಯುವ ವಿಭಾಗದ ಕಾರ್ಯಾದ್ಯಕ್ಷನಾಗಿ ಅನುಭವ ಪಡೆದು ಇದೀಗ ಅದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಭಾಶಯಗಳು.
