
ಯುವ ಪೀಳಿಗೆ ನಮ್ಮ ಸಂಘವನ್ನು ಮುನ್ನಡೆಸಿ ಕೊಂಡು ಹೋಗಬೇಕು : ಮುನಿರಾಜ್ ಜೈನ್ ಅಜಿಲ
ಚಿತ್ರ : ಹರಿ ಪಿಲೈ , ವರದಿ : ಇನ್ನಂಜೆ ಜಯರಾಮ್.
ಮುಂಬಯಿ ಮಹಾನಗರದಲ್ಲಿ ನಮಗೂ ಒಂದು ಸಂಘ ಬೇಕು ಎಂಬ ಉದ್ದೇಶದಿಂದ ನಾವು ಕೆಲವು ಮಂದಿ ಸಮಾನ ಮನಸ್ಕರು ಒಟ್ಟಾಗಿ 25 ವರ್ಷಗಳ ಹಿಂದೆ ಈ ಸಂಘವನ್ನು ಸ್ಥಾಪಿಸಿ, ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಅಯೋಜಿಸುತ್ತ, ಸಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ರಂಗದಲ್ಲಿ ವಿಶಿಷ್ಟರೀತಿಯಲ್ಲಿ ಸೇವೆಗೈದಿದ್ದೇವೆ, ಹಲವಾರು ದಾರ್ಮಿಕ ಸಾಂಸ್ಕೃತಿಕ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದೇವೆ, ಪ್ರತಿವರ್ಷ ಮಹಾವೀರ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತೇದ್ದೇವೆ. ಈಗ ನಾವು ಒಬ್ಬೊಬ್ಬರ ಮನೆಗಳಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ಸಭೆಗಳನ್ನು ನಡೆಸುತ್ತಿದ್ದೇವೆ, ನಮಗೆ ಸ್ವಂತ ಕಚೇರಿಯ ಅವಶ್ಯಕತೆ ಇದ್ದು ನಿಮ್ಮೆಲ್ಲರ ಸಹಕಾರದಿಂದ ಆದಷ್ಟು ಬೇಗ ಸ್ವಂತ ಕಚೇರಿ ಆಗುವಂತಗಲಿ, ಯುವ ಪೀಳಿಗೆ ನಮ್ಮ ಸಂಘವನ್ನು ಮುನ್ನಡೆಸಿ ಕೊಂಡು ಹೋಗಬೇಕು ಎಂದು ಅಖಿಲ ಕರ್ನಾಟಕ ಜೈನ ಸಂಘದ ಅಧ್ಯಕ್ಷರಾದ ಮುನಿರಾಜ್ ಜೈನ್ ಅಜಿಲ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು. ಇವರು ನವಂಬರ್ 26 ರ ಆದಿತ್ಯವಾರ ದಿನವಿಡಿ ಐರೋಲಿಯ ಹೆಗ್ಗಡೆ ಭವನದಲ್ಲಿ ನಡೆದ ಮುಂಬೈಯ ಪ್ರತಿಷ್ಠಿತ ಸಮಾಜಿಕ ಸಂಘಟನೆ ಅಖಿಲ ಕರ್ನಾಟಕ ಜೈನ ಸಂಘದ ರಜತ ಮಹೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಸಭಾ ಕಾರ್ಯಕ್ರಮಕ್ಕೆ ವೇದಿಕೆಯ ಗಣ್ಯರೊಂದಿಗೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ, ಮಾತನಾಡಿದರು.



ಜೊತೆ ಕಾರ್ಯದರ್ಶಿ ರಘುವೀರ್ ಹೆಗ್ಡೆ ಸ್ವಾಗತಿಸಿದರೆ, ಕಾರ್ಯದರ್ಶಿ ಪವನಂಜಯ್ ಬಲ್ಲಾಳ್ ಪ್ರಾಸ್ತಾವಿಕ ನುಡಿಗಳನ್ನಡಿದರು.




ಈ ಶುಭ ಅವಸರದಲ್ಲಿ ನವಿ ಮುಂಬಯಿ ಜಿ ಎಸ್ ಟಿ ವಿಭಾಗದ ಸಹಾಯಕ ಆಯುಕ್ತ ಶ್ರೀ ಮಹಾವೀರ್ ಬಿ. ಜೈನ್, ಮತ್ತು ಸಂಘದ ಸ್ಥಾಪಕ ಸದಸ್ಯರು ಹಾಗೂ ಕೋಶಾಧಿಕಾರಿಯಾದ ಪಿ. ಅನಂತ ರಾಜ್ ಜೈನ್ ಅವರನ್ನು ಸನ್ಮಾನಿಸಲಾಯಿತು.
ಸಂಘಕ್ಕಾಗಿ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದವರನ್ನು ಗೌರವಿಸಲಾಯಿತು.


ದೀಪ್ತಿ ರಾಜವರ್ಮ ಜೈನ್ ಕಾರ್ಯಕ್ರಮ ನಿರೂಪಿಸಿದರೆ, ಜಯಶ್ರೀ ಸಂಪತ್ ಜೈನ್, ಸಂಭ್ರಮ್ ಸಂಪತ್ ಜೈನ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ವಾಣಿ ವೈದ್ಯ ವಂದಿಸಿದರು. ವಿನಯ ಬಂಗ ಜೈನ್ ,
ಪವನಂಜಯ್ ಬಲ್ಲಾಳ್, ರಘುವೀರ್ ಹೆಗ್ಡೆ, ಸಹಕರಿಸಿದರು.
ಸ್ಥಾಪಕ ಸದಸ್ಯರು, ಮಾಜಿ ಹಾಗೂ ಹಾಲಿ ಅಧ್ಯಕ್ಷರಾದ ಮುನಿರಾಜ್ ಜೈನ್ ಅಜಿಲ, ಮಾಜಿ ಅದ್ಯಕ್ಷರುಗಳಾದ ವೈ ಆರ್ ಕೋರಿ, ಶಿಶುಪಾಲ್ ಜೈನ್, ಸ್ಥಾಪಕ ಸದಸ್ಯರುಗಳಾದ ಶ್ರೀಮತಿ ವಾಣಿ ವೈದ್ಯ, ಪಿ ಅನಂತ್ ರಾಜ್ ಜೈನ್ ಹಾಗೂ ಸಂಘದ ಪದಾಧಿಕಾರಿಗಳು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಜತ ಮಹೋತ್ಸವ ಕಾರ್ಯಕ್ರಮವು ದಿನವಿಡಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಸಂಭ್ರಮ ದಿಂದ ಜರುಗಿತು.
ಮೊದಲಿಗೆ ಸಂಘದ ಅಧ್ಯಕ್ಷರಾದ ಮುನಿರಾಜ್ ಜೈನ್ ಅಜಿಲ ಹಾಗೂ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.




ನಂತರ ಸಂಘದ ಸದಸ್ಯರು ಮತ್ತು ಮಕ್ಕಳಿಂದ ಜಿನ ಭಜನೆ ನಡೆಯಿತು.

ಅ ಬಳಿಕ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನಿರ್ದೇಶನದಲ್ಲಿ ಸಂಘದ ಸದಸ್ಯರಿಂದ ಮಹಿಷಾ ಮರ್ಧಿನಿ ಯಕ್ಷಗಾನ ನಡೆದು ಎಲ್ಲರ ಮೆಚ್ಚಿಗೆ ಗಳಿಸಿತು.




ಉತ್ತಮ ಯಕ್ಷನೃತ್ಯ ಹಾಗೂ ಸಂಭಾಷಣೆಯ ಮೂಲಕ ಸಂಘದ ಸದಸ್ಯರು ನೆರೆದಿದ್ದ ಯಕ್ಷಪ್ರೇಮಿಗಳನ್ನು ರಂಜಿಸಿದರು.




ತದ ನಂತರ ಸದಸ್ಯರಿಂದ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.




ನಂತರ ಕನ್ನಡ ವೆಲ್ಫಾರ್ ಸೊಸೈಟಿ ಪ್ರಸ್ತುತ ಪಡಿಸಿ, ನಾರಾಯಣ್ ಶೆಟ್ಟಿ ನಂದಳಿಕೆ ರಚಿಸಿ, ಮನೋಹರ್ ಶೆಟ್ಟಿ ನಂದಳಿಕೆ ನಿರ್ದೇಶಿಸಿದ ಐತಿಹಾಸಿಕ ತುಳು ನಾಟಕ ” ತುಳುನಾಡ ರಾಣಿ ಅಬ್ಬಕ್ಕ” ಪ್ರದರ್ಶನ ಗೊಂಡಿತು.
ದಿನಿವಿಡಿ ನಡೆದ ರಜತ ಸಂಭ್ರಮ ಯಶಸ್ವಿಯಾಗಿ ಜರಗುವಲ್ಲಿ ಸಂಘದ ಅಧ್ಯಕ್ಷರಾದ ಬಿ. ಮುನಿರಾಜ್ ಜೈನ್, ಉಪಾಧ್ಯಕ್ಷ ರಾದ ಉದಯ್ ಅಥಿಕಾರಿ, ಕಾರ್ಯದರ್ಶಿ ಪವನಂಜಯ್ ಬಲ್ಲಾಳ್, ಜತೆ ಕಾರ್ಯದರ್ಶಿ ರಘುವೀರ್ ಹೆಗ್ಡೆ, ಹಾಗೂ ಮನೀಶ್ ಹೆಗ್ಡೆ, ಗೌರವ ಕೋಶಾಧಿಕಾರಿ ಜಿನೇಶ್ ಜೈನ್, ಜತೆ ಕೋಶಾಧಿಕಾರಿ ಸಂಪತ್ ಕುಮಾರ್ ಜೈನ್, ಎಲ್ಲಾ ಕಾರ್ಯಕರ್ತರು, ಮಹಿಳಾ ವಿಭಾಗ, ಹಾಗೂ ಯುವ ವಿಭಾಗದ ಸರ್ವ ಸದಸ್ಯರು ಶ್ರಮಿಸಿದರು.
ಮುಂಬೈ ಮಹಾನಗರದಲ್ಲಿ ಸಮಾಜ ಭಾಂದವರ ಒಗ್ಗಟ್ಟು ಮತ್ತು ಏಳಿಗೆಗಾಗಿ ಸ್ಥಾಪನೆಯಾದ ಅಖಿಲ ಕರ್ನಾಟಕ ಜೈನ ಸಂಘವು ಕಳೆದ 25 ವರ್ಷಗಳಿಂದ ಸಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ರಂಗದಲ್ಲಿ ವಿಶಿಷ್ಟರೀತಿಯಲ್ಲಿ ಸೇವೆಗೈದಿದೆ. ಸಂಘದ ರಜತ ಸಂಭ್ರಮದಲ್ಲಿ ಸಮಾಜ ಭಾಂದವರು ಕಿಕ್ಕಿರಿದು ಸೇರಿದ್ದು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಸಂತಸಗೊಂಡರು. ಸಮಾರಂಭ ಅವಿಸ್ಮರಣೀಯವಾಗಿ ನಡೆಯುವಲ್ಲಿ ಶ್ರಮಿಸಿದ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಅಭಿನಂದನಾರ್ಹರು.