
ಭವ್ಯ ಶನಿ ಮಂದಿರ ನಿರ್ಮಾಣದ ಆಶಯವನ್ನು ಸಮಿತಿಯು ಹೊಂದಿದೆ. – ರವಿ ಎಲ್ ಬಂಗೇರ.
ಚಿತ್ರ, ವರದಿ : ಧನಂಜಯ ಪೂಜಾರಿ.
ಈ ವರ್ಷದ ವಾರ್ಷಿಕ ಪೂಜೆಯು ನಿಮ್ಮೆಲ್ಲರ ಸಹಕಾರದಿಂದ ವೈಭವದಿಂದ ಜರಗಿದೆ. ಆ ಶನಿಶ್ವರ ದೇವರು ಎಲ್ಲಾ ಭಕ್ತರ ಕಷ್ಟ ಕಾರ್ಪಣ್ಯ ಗಳನ್ನು ನಿವಾರಿಸಿ ಇಷ್ಟಾರ್ಥಗಳನ್ನು ಈಡೇರಿಸಲಿ. ನಮ್ಮ ಸಮಿತಿಯು ಒಂದು ಭವ್ಯವಾದ ದೇವಸ್ಥಾನದ ನಿರ್ಮಾಣ ಮಾಡಬೇಕೆಂಬ ಸಂಕಲ್ಪವನ್ನು ಹೊಂದಿದೆ. ಅದಕ್ಕಾಗಿ ನಾವು ಡೊಂಬಿವಲಿ ಪರಿಸರದಲ್ಲಿ ಜಾಗಕ್ಕಾಗಿ ಪ್ರಯತ್ನಿಸುತ್ತಿದ್ದೇವೆ, ನಿಮ್ಮೆಲ್ಲರ ಸಹಕಾರ ಇದೇ ರೀತಿ ಇದ್ದರೆ ಆದಷ್ಟು ಬೇಗನೆ ನಮ್ಮ ಈ ಕನಸು ನನಸಾಗ ಬಹುದು. ಆ ಶನೀಶ್ವರನ ಕೃಪೆಯಿಂದ ಮಂದಿರ ನಿರ್ಮಾಣದ ಆಸೆಯು ಬೇಗನೆ ಈಡೇರಬಹುದೆಂಬ ವಿಶ್ವಾಸ ನಮಗಿದೆ ಎಂದು ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಅಧ್ಯಕ್ಷರಾದ ರವಿ ಎಲ್ ಬಂಗೇರ ಅವರು ಡಿ.16 ರಂದು ಪೋರ್ಟ್ ಖಾಂಜಿ ಖೇತ್ಸಿ ಸಭಾಗೃಹದಲ್ಲಿ ಮುಂಬಯಿ ಮಹಾ ನಗರದ ಹಿರಿಯ ಧಾರ್ಮಿಕ ಸಂಸ್ಥೆಗಳಲ್ಲೊಂದಾದ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ 79ನೇ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿ ಮಹಾಪೂಜೆಯ ನಿಮಿತ್ತ ಜರಗಿದ ಧಾರ್ಮಿಕ ಸಭೆಯಲ್ಲಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.

ಶ್ರೀ ಉಮಾ ಮಹೇಶ್ವರೀ ದೇವಸ್ಥಾನ ಜೆರಿಮೆರಿಯ ಪ್ರಧಾನ ಅರ್ಚಕರಾದ ಎಸ್. ಎನ್. ಉಡುಪ ಅವರು ಆಶೀರ್ವಚನ ನೀಡುತ್ತಾ ನೀವೆಲ್ಲಾ 79 ವರ್ಷಗಳಿಂದ ಶ್ರದ್ಧಾ- ಭಕ್ತಿ ಶನಿ ದೇವರ ಸೇವೆಯನ್ನು ಮಾಡುತ್ತಾ ಬಂದಿರುವಿರಿ. ಧಾರ್ಮಿಕ ದೊಂದಿಗೆ ಹೆಚ್ಚಿನ ಸಮಾಜಮುಖಿ ಸೇವೆಯೂ ನಿಮ್ಮಿಂದ ಸದಾನಡೆಯುತ್ತಿರಲಿ. ಭಗವಂತನ ಅನುಗ್ರಹವಿದ್ದಲ್ಲಿ ಮಾತ್ರ ಜೀವನದಲ್ಲಿ ನಾವು ಅಮೂಲ್ಯ ಕ್ಷಣಗಳನ್ನು ಅನುಭವಿಸಲು ಸಾಧ್ಯ. ಇದಕ್ಕೆ ತಂದೆ- ತಾಯಿಯಂದಿರ ಆಶೀರ್ವಾದವೂ ಮುಖ್ಯವಾಗುತ್ತದೆ. ಶನಿ ದೇವರ ಬಗ್ಗೆ ಎಲ್ಲರೂ ಭಯಪಡುತ್ತಾರೆ. ಆದರೆ ಶನಿ ದೇವರು ನಮ್ಮಲ್ಲಿನ ಭಯವನ್ನು ದೂರಿಕರಿಸುವವರು. ಭಕ್ತಿ ಪೂರ್ವಕವಾಗಿ ನಾವು ಮಾಡುವ ತಂದೆ- ತಾಯಿಯರ ಸೇವೆಯೇ ಶನಿ ದೇವರಿಗೆ ಸಲ್ಲುವ ದೊಡ್ಡ ಸೇವೆಯಾಗಿದೆ. ಅಹಂಕಾರ, ಅಧರ್ಮದಲ್ಲಿ ನಡೆಯುವವರನ್ನು ಸನ್ಮಾರ್ಗದಲ್ಲಿ ತರುವವರೇ ಶನಿ ದೇವರು. ಶನಿ ದೇವರ ಅನುಗ್ರಹದಿಂದ ನಾವು ಸನ್ಮಾರ್ಗದಲ್ಲಿ ನಡೆಯಲುಸಾಧ್ಯ. ಮಾನವೀಯತೆಯೊಂದಿಗೆ ಧರ್ಮಕಾರ್ಯ, ಸತ್ಕಾರ್ಯವನ್ನು ಮಾಡಿದರೆ ಶನಿದೇವರು ಅನುಗ್ರಹಿಸುತ್ತಾರೆ. ನಮ್ಮನ್ನು ರಕ್ಷಣೆ ಮಾಡುತ್ತಾರೆ. ಶಾಂತಿ,ನೆಮ್ಮದಿ, ಸಮೃದ್ಧಿ, ಆರೋಗ್ಯವನ್ನು ಶನಿ ದೇವರು ಅನುಗ್ರಹಿಸಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಶ್ರೀ ನಾರಾಯಣ ಬಿ. ಸಾಲಿಯನ್ ಸ್ಮರಣಾರ್ಥ ಪ್ರಶಸ್ತಿಯನ್ನು ಶ್ರೀ ಶನಿಮಹಾತ್ಮ ಸೇವಾ ಸಮಿತಿ ಖಾರ್ ಗೌರವ ಕಾರ್ಯದರ್ಶಿ ಯೊಗೀಶ್ ಕೆ. ಹೆಜ್ಮಾಡಿ ಇವರಿಗೆ ಪ್ರಧಾನಿಸಲಾಯಿತು.

ಪ್ರಶಸ್ತಿಯನ್ನು ಸ್ವೀಕರಿಸಿ ಯೋಗೀಶ್ ಹೆಜಮಾಡಿಯವರು ಮಾತನಾಡಿ ಕಳೆದ 56 ವರ್ಷಗಳಿಂದ ಶ್ರೀ ಶನಿ ದೇವರ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಶನಿ ದೇವರ ಅನುಗ್ರಹ, ನನ್ನ ಸಮಿತಿಯ ಎಲ್ಲಾ ಪದಾಧಿಕಾರಿಗಳ, ಮಹಿಳಾ ಸದಸ್ಯೆಯರ ಪ್ರೀತಿ ಪ್ರೋತ್ಸಾಹದಿಂದ ನನಗೆ ಕಳೆದ ಐದು ದಶಕದಿಂದ ಧಾರ್ಮಿಕ, ಸಾಮಾಜಿಕ ಸೇವೆಯನ್ನು ಗೈಯಲು ಸಾಧ್ಯವಾಗಿದೆ. ನೀವಿತ್ತ ಸನ್ಮಾನವನ್ನು ಶನಿ ದೇವರ ಪ್ರಸಾದವೆಂದು ಸ್ವೀಕರಿಸಿ ಅದನ್ನು ನನ್ನ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಖಾರ್ ಇದಕ್ಕೆ ಅರ್ಪಿಸುತ್ತೇನೆ ಎಂದರು.

ಸಮಿತಿಯ ಹಿರಿಯ ಸದಸ್ಯ ತಾರಾನಾಥ್ ಶೆಟ್ಟಿ ಮತ್ತು ನವಿಮುಂಬಯಿ ಗಿರಿಜಾ ವೆಲ್ಫೇರ್ ಅಸೋಸಿಯೇಷನ್ ನ ವಸಂತ್ ಸಾಫಲ್ಯ ಕುಂಜಾರು ದಂಪತಿಯನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ತಾರಾನಾಥ್ ಶೆಟ್ಟಿಯವರು ಮಾತನಾಡಿ
ನಾನು ಚಿಕ್ಕಂದಿನಿಂದಲೇ ಶನಿ ದೇವರ ಭಕ್ತನಾಗಿ ಸಮಿತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇನೆ. ಜೀವನದಲ್ಲಿ ಅತ್ಯಂತ ಸಂತಸದ ಕ್ಷಣ ಇದಾಗಿದೆ. ಇಂತಹ ಧಾರ್ಮಿಕ ಸಂಸ್ಥೆಗಳಿಂದ ಮಾತ್ರ ಜೀವನದಲ್ಲಿ ಶಾಂತಿ, ಮಾನಸಿಕ ನೆಮ್ಮದಿ ಸಿಗಲು ಸಾಧ್ಯ ಎಂದರು.

ಸನ್ಮಾನಿತ ವಸಂತ್ ಸಾಫಲ್ಯ ಕುಂಜಾರುರವರು ಮಾತನಾಡಿ ಸಮಾಜ ಸೇವೆಯಲ್ಲಿ ಗಿರಿಜಾ ವೆಲ್ಫೇರ್ ಅಸೋಸಿಯೇಷನ್ 20ನೇ ವರ್ಷಕ್ಕೆ ಹೆಜ್ಜೆಯನ್ನು ಇಟ್ಟಿದೆ. ಈ ಸಂದರ್ಭದಲ್ಲಿ ಈ ಸನ್ಮಾನ ನನ್ನ ಅಸೋಸಿಯೇಷನ್‌ಗೆ ಸಂದ ಶನಿ ದೇವರ ಅನುಗ್ರಹ ಪ್ರಸಾದವೆಂದು ಸ್ವೀಕರಿಸುತ್ತೇನೆ. ನಮ್ಮ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಸಮಿತಿಯ ಧಾರ್ಮಿಕ ಸಲಹೆಗಾರ ಜಗದೀಶ್ ಜೆ. ಕೋಟ್ಯಾನ್ ದಂಪತಿಗಳ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ನಿಮಿತ್ತ ಅವರನ್ನು ಅತಿಥಿಗಳು ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸೇರಿ ಗೌರವಿಸಿ ಅಭಿನಂದನೆಯನ್ನು ಸಲ್ಲಿಸಿದರು.

ಮುಖ್ಯ ಅತಿಥಿಯಗಿ ಉಪಸ್ಥಿತರಿದ್ದ ಪುಣೆ ಬಂಟರ ಸಂಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರುರವರು ಮಾತನಾಡಿ ನಾವು ನಮ್ಮ ನಾಡಿನ ಸಂಸ್ಕೃತಿ , ಸಂಸ್ಕಾರ, ಕಲೆ ಆರಾಧನೆಯನ್ನು ಈ ಮಹಾರಾಷ್ಟ್ರ ದ ಮಣ್ಣಿನಲ್ಲಿಯು ಮರೆತಿಲ್ಲ. ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯಂತಹ ಧಾರ್ಮಿಕ- ಸಾಮಾಜಿಕ ಸಂಸ್ಥೆಗಳ ಮುಖಾಂತರ ನಮ್ಮ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಜೊತೆಗೆ ನಮ್ಮ ಸಂಸ್ಕೃತಿ, ಕಲೆ, ಧಾರ್ಮಿಕ ಆಚರಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವು ಆಗುತ್ತಿದೆ. ಇಂದಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಕಲೆ, ಆರಾಧನೆಯ ಬಗ್ಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಬಿಲ್ಲವರ ಅಸೋಸಿಯೇಷನ್ ಮುಂಬಯಿ ಉಪಾಧ್ಯಕ್ಷ ಕೆ. ಸುರೇಶ್ ಕುಮಾರ್ ರವರು ಮಾತನಾಡುತ್ತ ಹಿರಿಯರ ಮಾರ್ಗದರ್ಶನದಲ್ಲಿ ನಿಷ್ಠೆ, ಶ್ರದ್ಧಾ ಭಕ್ತಿಯಿಂದ ಶನಿ ದೇವರನ್ನು ಆರಾಧಿಸಿಕೊಂಡು ಸೇವೆಯನ್ನು ಸಲ್ಲಿಸುತ್ತಾ ಬಂದಿರುವುದರಿಂದ ಮುಂಬಯಿ ಮಹಾನಗರದಲ್ಲಿ ತುಂಬಾ ಹಿರಿಯ ಸಂಸ್ಥೆಯಾಗಿ ಬೆಳೆದು ಪ್ರಸಿದ್ಧಿಯನ್ನು ಪಡೆದಿದೆ. ಸಮಿತಿಯು ಯಶಸ್ವಿಯಾಗಿ ಮುನ್ನಡೆದು ಶತಮಾನೋತ್ಸವವನ್ನು ಆಚರಿಸಲಿ ಎಂದರು.
ಬೆಂಗಳೂರು ಕೆನರಾ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ದಿನೇಶ್ ಕುಮಾರ್ ಕೋಟ್ಯಾನ್ ರವರು ಮಾತನಾಡಿ ಶನಿ ಗ್ರಂಥ ಪಾರಾಯಣದ ಖ್ಯಾತ ಅರ್ಥ ದಾರಿಯಾಗಿ ಸೇವೆಯನ್ನು ಸಲ್ಲಿಸಿರುವ ದಿವಂಗತ ನಾರಾಯಣ ಸಾಲಿಯಾನ್ ರವರು ಶನಿ ದೇವರ ಅಪಾರಭಕ್ತರಾಗಿದ್ದರು. ಅವರ ಆಶೀರ್ವಾದದಿಂದಲೂ ಹಾಗೂ ಶ್ರೀ ಶನಿದೇವರ ಅನುಗ್ರಹದಿಂದಲೂ ಮುಂಬಯಿ ಮಹಾನಗರದಲ್ಲಿ ಸಮಿತಿಯು ಧಾರ್ಮಿಕ ಸೇವೆಯಲ್ಲಿ ಬಹು ಪ್ರಸಿದ್ಧಿಯನ್ನು ಪಡೆದಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಸಮಿತಿಯ ಆಶಯದಂತೆ ಶೀಘ್ರದಲ್ಲೇ ಜಾಗ ದೊರೆತು ಭವ್ಯ ಶನಿಮಂದಿರ ನಿರ್ಮಾಣವಾಗಲಿ ಎಂದರು.
ಮಹಾಪೂಜೆಯಂದು ಸೇವೆ ಸಲ್ಲಿಸಿರುವ ವಿದ್ಯಾದಾಹಿನಿ ಸಭಾದ ಸೇವಾದಳದ ಸದಸ್ಯರನ್ನು ಹಾಗೂ ಪೂಜೆಯಲ್ಲಿ ಪಾಲ್ಗೊಂಡ ವಿವಿಧ ಧಾರ್ಮಿಕ ಸಾಮಾಜಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು.
79ನೇ ವಾರ್ಷಿಕೋತ್ಸವದ ನಿಮಿತ್ತ ಗರಿಷ್ಠ ಧನ ಸಂಗ್ರಹವನ್ನು ಮಾಡಿರುವ ಜಗದೀಶ್ ಜೆ. ಕೋಟ್ಯಾನ್, ಸುಭಾಷ್ ಪೂಜಾರಿ, ಮಧುಕರ್ ಕೋಟ್ಯಾನ್ ಇವರನ್ನು ಬಹುಮಾನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಓಲಾ ಕ್ಯಾಬ್ಸ್ ಇದರ ಫೈನಾನ್ಸ್ ಡೈರೆಕ್ಟರ್ ಧಯಾರಾಜ್ ಕುಂದರ್, ಬದ್ಲಾಪುರ್ ಹೋಟೆಲ್ ಉದ್ಯಮಿ ಸುರೇಶ್ ಸಿ. ಪೂಜಾರಿ, ಶ್ರೀ ದುರ್ಗಾಪರಮೇಶ್ವರಿ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ರವೀಂದ್ರ ಎಸ್. ಕರ್ಕೇರ ಉಪಸ್ಥಿತರಿದ್ದರು.
ಧಾರ್ಮಿಕ ಸಲಹೆಗಾರ ಜಗದೀಶ್ ಜೆ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರೆ. ಗೌರವ ಪ್ರಧಾನ ಕಾರ್ಯದರ್ಶಿ, ಶರತ್ ಜಿ. ಪೂಜಾರಿ ಧನ್ಯವಾದಗೈದರು.
ಹರೀಶ್ ಶಾಂತಿ ಹೆಜಮಾಡಿ, ತಾರಾನಾಥ್ ಶೆಟ್ಟಿ ಜಗದೀಶ್ ಕೋಟ್ಯಾನ್ ಸನ್ಮಾನ ಪತ್ರವನ್ನು ವಾಚಿಸಿದರು. ಉಪಾಧ್ಯಕ್ಷ ವಿಶ್ವನಾಥ್ ಭಂಡಾರಿ, ಗೌರವ ಕೋಶಾಧಿಕಾರಿ ಪ್ರಸಾದ್ ಎಸ್ ಕರ್ಕೇರಾ , ಕಾನೂನು ಸಲಹೆಗಾರ ನ್ಯಾಯವಾದಿ ಸುದೇಶ್ ಪೂಜಾರಿ ಹಾಗೂ ಸಮಿತಿಯ ಸದಸ್ಯರು ಸಹಕರಿಸಿದರು.

ನಂತರ ಮಹಾ ಮಂಗಳಾರತಿ ನಡೆದು, ತೀರ್ಥ ಪ್ರಸಾದ, ಮಹಾ ಪ್ರಸಾದ ನಡೆಯಿತು.
ಬೆಳಿಗ್ಗೆ ಪುರೋಹಿತರಾದ ಹರೀಶ್ ಶಾಂತಿ ಅವರ ಪೌರೋಹಿತ್ಯದಲ್ಲಿ ಗಣ ಹೋಮ ನಡೆದು, ಶ್ರೀ ಸತ್ಯನಾರಾಯಣ ಮಹಾಪೂಜೆ ಜರಗಿತು.

ಬಳಿಕ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಮತ್ತು ವಿದ್ಯಾದಾಯಿನಿ ಭಜನಾ ಮಂಡಳಿ ಫೋರ್ಟ್, ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರದ ಭಜನಾ ಮಂಡಳಿ ಡೊಂಬಿವಲಿ ಇವರಿಂದ ಭಜನೆ ನಡೆಯಿತು.




ನಂತರ ಸಮಿತಿಯ ಅಧ್ಯಕ್ಷರಾದ ರವಿ ಎಲ್ ಬಂಗೇರ, ಶ್ರೀ ಭುವನೇಶ್ವರಿ ಸೇವಾ ಸಮಿತಿ ಫೋರ್ಟ್ ಧರ್ಮದರ್ಶಿ ರಾಜೇಶ್ ಭಟ್, ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಗೌರವಾಧ್ಯಕ್ಷರಾದ ನಿತಿನ್ ಪುತ್ರನ್, ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್ ಕಾಮೋಟೆ ಇದರ ಅಧ್ಯಕ್ಷರಾದ ಸುಜಿತ್ ವಿ ಪೂಜಾರಿ, ದೀಪವನ್ನು ಪ್ರಜ್ವಲಿಸಿ ಶನೀಶ್ವರ ಗ್ರಂಥ ಪರಾಯಣಕ್ಕೆ ಚಾಲನೆ ನೀಡಿದರು.



ಅರ್ಚಕರಾದ ಸತೀಶ್ ಎನ್. ಸಾಲ್ಯಾನ್ ರವರಿಂದ ಶನಿ ದೇವರ ಕಲಶ ಪ್ರತಿಷ್ಟಾಪನೆ ನೆರವೇರಿ ಬಳಿಕ ಮುಂಬಯಿಯ ನುರಿತ ಕಲಾವಿದರಿಂದ ‘ಶ್ರೀ ಶನೀಶ್ವರ ಮಹಾತ್ಮೆ’ ಯಕ್ಷಗಾನ ತಾಳಮದ್ದಳೆ ನಡೆಯಿತು.

ತಾಳಮದ್ದಳೆ ಯಲ್ಲಿ ನಗರದ ಸುಪ್ರಸಿದ್ಧ ಅರ್ಥದಾರಿಗಳು, ಭಾಗವತರು, ಹಿಮ್ಮೇಳ ಕಲಾವಿದರು ಪಾಲ್ಗೊಂಡರು.






ಸಾವಿರಾರು ಭಕ್ತರು, ರಾಜಕೀಯ, ಧಾರ್ಮಿಕ ಮುಖಂಡರು ಸಮಾಜ ಸೇವಕರು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಅನ್ನಸಂತರ್ಪಣೆ ಯಲ್ಲಿ ಪಾಲ್ಗೊಂಡರು.


ಅಧ್ಯಕ್ಷ ರವಿ ಎಲ್ ಬಂಗೇರ ಅವರ ಅಧ್ಯಕ್ಷತೆಯಲ್ಲಿ
ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ 79 ನೇ ವಾರ್ಷಿಕ ಪೂಜೆಯು ಎಲ್ಲಾ ಪದಾಧಿಕಾರಿಗಳ, ಸರ್ವ ಸದಸ್ಯರ, ಭಕ್ತರ ಸಹಕಾರದಿಂದ ವಿಜೃಂಭಣೆಯಿಂದ ಜರುಗಿತು. ಸಮಿತಿಯು ಭವ್ಯ ಶನಿ ಮಂದಿರ ನಿರ್ಮಾಣದ ಆಶಯವನ್ನು ಹೊಂದಿದ್ದು, ಡೊಂಬಿವಲಿ ಪರಿಸರದಲ್ಲಿ ಮಂದಿರ ನಿರ್ಮಾಣಕ್ಕಾಗಿ ಜಾಗವನ್ನು ಪಡೆಯುವುದಕ್ಕಾಗಿ ಪ್ರಯತ್ನ ಶೀಲರಾಗಿದ್ದಾರೆ, ನಿಮ್ಮ ನೆಲ್ಮೆಯ ಒಲುಮೆಯು ಈ ಸಮಿತಿಯ ಮೇಲಿದ್ದು, ಶ್ರೀ ಶನಿಶ್ವರ ದೇವರ ಕೃಪೆಯಿಂದ ಮಂದಿರ ನಿರ್ಮಾಣದ ಕನಸು ಆದಷ್ಟು ಬೇಗನೆ ನನಸಗಲಿ ಎಂಬ ಆಶಯ ನಮ್ಮದು.