30.9 C
Mumbai
June 8, 2026
Mumbai News Kannada
ಮುಂಬಯಿ

ಕರ್ನಾಟಕ ಸಂಘ ಡೊಂಬಿವಲಿ: ‘ಪುರಂದರದಾಸರ ಆರಾಧನೋತ್ಸವ ಮತ್ತು ಭಜನಾ ಸ್ಪರ್ಧೆ’





ಭಜನೆಯಿಂದ ಮನದ ವೇದನೆ ದೂರ, ಮನೆ ಶಾಂತಿಯ ತಾಣ: ಡಾ. ದಿವಾಕರ ಶೆಟ್ಟಿ ಇಂದ್ರಾಳಿ

ಚಿತ್ರ: ಸತೀಶ್ ಶೆಟ್ಟಿ, ವರದಿ: ಇನ್ನಂಜೆ ಜಯರಾಮ್

ಡೊಂಬಿವಲಿ: “ಭಜನೆಯನ್ನು ಶಾಂತಚಿತ್ತದಿಂದ ಆಲಿಸಿದಾಗ ಮನಸ್ಸಿನ ವೇದನೆಗಳು ದೂರವಾಗಿ ಮನಸ್ಸು ಪುಳಕಿತಗೊಳ್ಳುತ್ತದೆ. ಭಜನೆಯಿಂದ ಮನೆ-ಮನಗಳು ಶುದ್ಧವಾಗುತ್ತವೆ,” ಎಂದು ಕರ್ನಾಟಕ ಸಂಘ ಡೊಂಬಿವಲಿಯ ಕಾರ್ಯಾಧ್ಯಕ್ಷರಾದ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು.

​ಇಲ್ಲಿನ ಎಂ.ಐ.ಡಿ.ಸಿ ಪರಿಸರದ ಹೋಟೆಲ್ ಶಿವಂ ಸಭಾಗೃಹದಲ್ಲಿ ಕರ್ನಾಟಕ ಸಂಘ ಡೊಂಬಿವಲಿ ಇದರ ಲಲಿತಾ ಕಲಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಪುರಂದರದಾಸರ ಆರಾಧನೋತ್ಸವ ಮತ್ತು ಭಜನಾ ಸ್ಪರ್ಧೆ’ಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಂಘದ ಸಾಧನೆ ಮತ್ತು ಭವಿಷ್ಯದ ಯೋಜನೆ:

ಕರ್ನಾಟಕ ಸಂಘವು ಹೊರನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರವಾಗಿದೆ. ಡೊಂಬಿವಲಿ ಪರಿಸರದ ಕನ್ನಡಿಗರು ಶಿಕ್ಷಣದಿಂದ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಮಂಜುನಾಥ ವಿದ್ಯಾಲಯ ಹಾಗೂ ಮಹಾವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಮುಂದಿನ ವರ್ಷ ಸಂಘವು ವಜ್ರ ಮಹೋತ್ಸವಕ್ಕೆ ಕಾಲಿಡಲಿದ್ದು, ವಿವಿಧ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಇದೆ ಎಂದು ನಂತರ ನಡೆದ ಬಹುಮಾನ ವಿತರಣ ಕಾರ್ಯಕ್ರಮದಲ್ಲಿ ಡಾ. ಇಂದ್ರಾಳಿ ತಿಳಿಸಿದರು.

ಭಜನೆಯಿಂದ ಮಕ್ಕಳಲ್ಲಿ ಭಕ್ತಿ ಭಾವ ಮೂಡುತ್ತದೆ,”: ಅಧ್ಯಕ್ಷ ಸುಕುಮಾರ್ ಶೆಟ್ಟಿ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಕುಮಾರ್ ಶೆಟ್ಟಿ ಮಾತನಾಡಿ, “ಪುರಂದರದಾಸರು 4.75 ಲಕ್ಷಕ್ಕೂ ಹೆಚ್ಚು ಕೀರ್ತನೆಗಳ ಮೂಲಕ ಭಕ್ತಿ ಮತ್ತು ಜ್ಞಾನವನ್ನು ಜನಸಾಮಾನ್ಯರ ಮನೆಗೆ ತಲುಪಿಸಿದ್ದಾರೆ. ಸಮಾಜ ಸುಧಾರಣೆ ಹಾಗೂ ಶಾಸ್ತ್ರೀಯ ಸಂಗೀತಕ್ಕೆ ಚೌಕಟ್ಟು ನೀಡಿದ ಅವರು ಸಂಗೀತ ಲೋಕದ ಪಿತಾಮಹ ಭೀಷ್ಮರಾಗಿದ್ದಾರೆ. ಭಜನೆಯಿಂದ ಮಕ್ಕಳಲ್ಲಿ ಭಕ್ತಿ ಭಾವ ಮೂಡುತ್ತದೆ,” ಎಂದರು. ಅಲ್ಲದೆ, ಭಜನಾ ತಂಡಗಳು ಹಿಮ್ಮೇಳದ ಶಬ್ದಕ್ಕಿಂತ ಗಾಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

ಸ್ಪರ್ಧೆಯ ಫಲಿತಾಂಶ:

ಒಟ್ಟು 8 ಮಕ್ಕಳ ಕುಣಿತ ಭಜನಾ ತಂಡಗಳು ಹಾಗೂ 11 ಹಿರಿಯರ ಕುಳಿತು ಹಾಡುವ ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

  • ಮಕ್ಕಳ ಕುಣಿತ ಭಜನೆ: ಪ್ರಥಮ: ಶ್ರೀ ಮಹಾ ವಿಷ್ಣು ಮಂದಿರ ಡೊಂಬಿವಲಿ (₹15,000), ದ್ವಿತೀಯ: ಶ್ರೀ ದುರ್ಗಾಂಬಿಕಾ ಮಕ್ಕಳ ಭಜನಾ ತಂಡ ಅಸಲಫಾ ಘಾಟ್‌ಕೋಪರ್ (₹12,500), ತೃತೀಯ: ₹10,000 ನಗದು ಪ್ರಶಸ್ತಿ. ಸಮಾಧಾನಕರ ಬಹುಮಾನ: ಬಂಟರ ಸಂಘ ಮುಂಬಯಿ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ (₹5,000).
  • ಹಿರಿಯರ ತಂಡ: ಪ್ರಥಮ: ಶ್ರೀ ನಿತ್ಯಾನಂದ ಚಾಮುಂಡೇಶ್ವರಿ ಭಜನಾ ತಂಡ ಸಾಕಿನಾಕಾ (₹20,000), ದ್ವಿತೀಯ: ನವೋದಯ ಕನ್ನಡ ಸೇವಾ ಸಂಘ ಥಾಣೆ (₹17,000), ತೃತೀಯ: ಭ್ರಮರಾಂಭಿಕಾ ಭಜನಾ ಮಂಡಳಿ ಡೊಂಬಿವಲಿ (₹14,000), ಸಮಾಧಾನಕರ ಬಹುಮಾನ: ಶ್ರೀ ಜಗದಂಬಾ ಮಂದಿರ ಡೊಂಬಿವಲಿ (₹5,000).

ಗೌರವ ಸತ್ಕಾರ:

ಇದೇ ಸಂದರ್ಭದಲ್ಲಿ ಕಂಪನಿ ಸೆಕ್ರೆಟರಿ (CS) ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರಥಮೇಶ್ ಶೆಟ್ಟಿ ಮತ್ತು ಅವರ ತಾಯಿ ಪ್ರಫುಲ್ಲಾ ಶೆಟ್ಟಿ ಅವರನ್ನು ಸತ್ಕರಿಸಲಾಯಿತು. ಎಲ್ಲಾ ಭಜನಾ ತಂಡಗಳಿಗೆ ಗೌರವ ಧನ ನೀಡಿ ಗೌರವಿಸಲಾಯಿತು.

ತೀರ್ಪುಗಾರರ ಅನಿಸಿಕೆ:

ತೀರ್ಪುಗಾರರಾದ ಸಚಿನ್ ಸುವರ್ಣ ಸಸಿಹಿತ್ತು, ಚಂದ್ರಶೇಖರ ಸುವರ್ಣ ಮತ್ತು ಪ್ರಕಾಶ್ ಕುಲಾಲ್ ಅವರು ಮಾತನಾಡಿ, ಮುಂಬಯಿಯಂತಹ ಮಹಾನಗರದಲ್ಲಿ ಕನ್ನಡ ಭಜನಾ ಪರಂಪರೆಯನ್ನು ಉಳಿಸುತ್ತಿರುವುದು ಶ್ಲಾಘನೀಯ. ಗಾಯನದೊಂದಿಗೆ ಹಿಮ್ಮೇಳದ ಶ್ರುತಿ ಮತ್ತು ತಾಳಬದ್ಧತೆ ಮುಖ್ಯ ಎಂದು ಕಿವಿಮಾತು ಹೇಳಿದರು.

​ಲಲಿತಾ ಕಲಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಲೋಕನಾಥ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ದೇವದಾಸ ಕುಲಾಲ್, ಗೌರವ ಪ್ರಧಾನ ಕಾರ್ಯದರ್ಶಿ ಅಜಿತ್ ಉಮ್ರಾಣಿ, ಕೋಶಾಧಿಕಾರಿ ತಾರಾನಾಥ ಅಮೀನ್, ಜೊತೆ ಕೋಶಾಧಿಕಾರಿ ವಿಮಲಾ ವಿ. ಶೆಟ್ಟಿ, ಲಲಿತಾ ಕಲಾ ವಿಭಾಗದ ಕಾರ್ಯದರ್ಶಿ ರಮೇಶ್ ಅಚ್ಚಣ್ಣ ಶೆಟ್ಟಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

​ರಮೇಶ್ ಶೆಟ್ಟಿ, ಆಶಾ ಶೆಟ್ಟಿ ಮತ್ತು ಮೈನಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ದೇವದಾಸ್ ಕುಲಾಲ್ ವಿಜೇತರ ಪಟ್ಟಿ ವಾಚಿಸಿದರು. ಸಂಘಟಕ ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



Related posts

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ – ಕರುಣಾಕರ ಎಂ. ಶೆಟ್ಟಿ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷರಾಗಿ ಹರೀಶ್ ಜಿ ಅಮೀನ್ ಆಯ್ಕೆ

Mumbai News Desk

“ಜ್ಞಾನ ವಿಕಾಸ ಮಂಡಲದ ಮೆಹತಾ ಕಾಲೇಜಿನಲ್ಲಿ ಎರಡು ದಿನ ಪಾರಿತೋಷಕ ವಿತರಣಾ ಸಮಾರಂಭ, ಅಧ್ಯಕ್ಷ ಶ್ರೀ ವಿ. ಎನ್ ಹೆಗಡೆ ಅವರಿಂದ ಕಾಲೇಜಿನ ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ”

Mumbai News Desk

ಎಚ್ ಎಸ್ ಸಿ ಪರೀಕ್ಷೆಯಲ್ಲಿ ಅನನ್ಯ ಎನ್ ಬಂಗೇರಗೆ ಶೇ.92.40 ಅಂಕ.

Mumbai News Desk

ದುರಂತದಲ್ಲಿ ಮಡಿದ ಸಂಸ್ಕೃತಿ ಅಮೀನ್ ಅವರ ಮನೆಗೆ ಮಹೇಶ್ ಶೆಟ್ಟಿ ತೆಳ್ಳಾರ್, ಎರ್ಮಳ್ ಹರೀಶ್ ಶೆಟ್ಟಿ ಭೇಟಿ: ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ

Mumbai News Desk

ಡಿಸೆಂಬರ್ 8, 9 ರಂದು ಮುಂಬೈನ ಅರ್ಧಕ್ಕಿಂತ ಹೆಚ್ಚು ಭಾಗಕ್ಕೆ ಶೇ 15ರಷ್ಟು ನೀರಿನ ಕಡಿತ

Mumbai News Desk