April 1, 2025
ಕರಾವಳಿ

ರತ್ನೋತ್ಸವದಲ್ಲಿ ‘ಕವಿ – ಕಾವ್ಯ – ಚಿತ್ತಾರ’

ದೃಶ್ಯ ಕಾವ್ಯವಾದಾಗ ಕವಿತೆ ಚಿರಾಯು: ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ

—————————

ಮಂಗಳೂರು: ‘ಕಾವ್ಯಮಾರ್ಗ ಸುಲಭ ಹಾದಿಯಲ್ಲ. ತನ್ನ ಮನೋಧರ್ಮವನ್ನು ಅನುಸರಿಸಿ ಬರೆಯುವಾತ ಕವಿಯಾಗಲಾರ. ಅದನ್ನು ಜನಮಾನಸಕ್ಕೆ ಹಿತವಾಗುವಂತೆ ಕಟ್ಟಿಕೊಡುವ ಕೌಶಲ್ಯ ಬೇಕಾಗುತ್ತದೆ. ಕವಿತೆ ಚಿರಾಯುವಾಗಬೇಕಾದರೆ ಅದನ್ನು ದೃಶ್ಯಕಾವ್ಯವಾಗಿಸುವ ಸಾಮರ್ಥ್ಯ ಅಗತ್ಯ. ಗೇಯ ಕವನಗಳ ಮೂಲಕ ಇದನ್ನು ಸಾಧಿಸಬಹುದು’ ಎಂದು ಕವಿ – ಕಲಾವಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ದೇರಳಕಟ್ಟೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿದ12ನೇ ವರ್ಷದ ಕನ್ನಡ ನಾಡು ನುಡಿ ವೈಭವದ ‘ರತ್ನೋತ್ಸವ – 2023’ ಕರಾವಳಿ ಕರ್ನಾಟಕ ಸಾಹಿತ್ಯ – ಸಾಂಸ್ಕೃತಿಕ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾದ ‘ಕವಿ – ಕಾವ್ಯ – ಚಿತ್ತಾರ’ ಸರಸ ಕವಿಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿ ಅವರು ಕಿವಿಮಾತು ಹೇಳಿದರು.

    ‘ತೊಂಭತ್ತರ ದಶಕದಲ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಂದರ್ಭ ಪ್ರಾಯೋಗಿಕವಾಗಿ ನಡೆಸಿದ ಕವಿಗೋಷ್ಠಿ – ಕಾವ್ಯ ಗಾಯನ ಇಂದು ದೊಡ್ಡ ಮಟ್ಟದಲ್ಲಿ ಬೆಳೆದು ರಾಜ್ಯ, ರಾಷ್ಟ್ರಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ಕಾವ್ಯ ಪ್ರಕಾರಕ್ಕಿರುವ ಅದ್ಭುತಶಕ್ತಿ’ ಎಂದವರು ನುಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕೆ.ಚಿನ್ನಪ್ಪ ಗೌಡ ಉಪಸ್ಥಿತರಿದ್ದರು.

ಕವಿತೆ ಹಾವಿನ ನಡೆಯಂತೆ : ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಹಿರಿಯ ಗಜಲ್ ಕವಿ ಡಾ. ಸುರೇಶ್ ನೆಗಳಗುಳಿ ಮಾತನಾಡಿ ‘ಕವಿತೆಗಳು ಹಾವಿನ ನಡೆಯಂತೆ ಸುಲಲಿತವಾಗಿ ಓದುವಂತಿರಬೇಕು. ಹೆಚ್ಚು ಒತ್ತಕ್ಷರಗಳಿಲ್ಲದ ಭಾವವ್ಯಂಜಕವಾದ ಕವನಗಳು ಕೇಳುಗರನ್ನುಬಹಳ ಬೇಗ ತಲುಪುವುದು’ ಎಂದರು.

     ಕವಿಗಳಾದ ಚಂದ್ರಹಾಸ ಕೋಟೆಕಾರ್, ಕರುಣಾಕರ ಬಳ್ಕೂರು, ಶಾಂತಪ್ಪ ಬಾಬು, ಸಂಶೀರ್ ಬುಡೋಳಿ, ನಾರಾಯಣ ಕುಂಬ್ರ, ವಸಂತಿ ನೆಡ್ಲೆ, ಜೋಯ್ಸ್ ಪಿಂಟೋ ಕಿನ್ನಿಗೋಳಿ ಸ್ವರಚಿತ ಕವಿತೆಗಳನ್ನು ಓದಿದರು. ಗಾಯಕರಾದ ತೋನ್ಸೆ ಪುಷ್ಕಳ ಕುಮಾರ್ ಮತ್ತು ಸೌಮ್ಯ ಭಟ್ ಕಟೀಲು ಗೋಷ್ಠಿಯ ಕವಿತೆಗಳನ್ನು ಸ್ವರಬದ್ಧಗೊಳಿಸಿ ಹಾಡಿದರು. ಚಿತ್ರ ಕಲಾವಿದೆ ಆಶ್ರಿತಾ ರೈ ಅವುಗಳ ಭಾವಕ್ಕನುಗುಣವಾಗಿ ಚಿತ್ರಗಳನ್ನು ರಚಿಸಿದರು.

    ಹಿನ್ನೆಲೆಯಲ್ಲಿ ಸತೀಶ್ ಸುರತ್ಕಲ್ (ಕೀಬೋರ್ಡ್), ನವಗಿರಿ ಗಣೇಶ್ (ರಿದಮ್ ಪ್ಯಾಡ್), ಸ್ವರಾಜ್ ಮಂಜೇಶ್ವರ (ತಬ್ಲಾ) ಮತ್ತು ಸಂತೋಷ್ ವಿಟ್ಲ (ಕೊಳಲು) ಸಂಗೀತ ಸಹಕಾರ ನೀಡಿದರು.

       ವಿದ್ಯಾರತ್ನ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿ ಕವಿ – ಕಲಾವಿದರನ್ನು ಗೌರವಿಸಿದರು. ಸಂಚಾಲಕಿ ಸೌಮ್ಯ ಆರ್ ಶೆಟ್ಟಿ ವಂದಿಸಿದರು. ಸಲಹೆಗಾರ ರವೀಂದ್ರ ರೈ ಕಲ್ಲಿಮಾರು, ಉಪಾಧ್ಯಕ್ಷ ಮೋಹನದಾಸ ಶೆಟ್ಟಿ ಉಳಿದೊಟ್ಟು, ಮುಖ್ಯ ಶಿಕ್ಷಕಿ ನಯೀಮ್ ಹಮೀದ್, ರತ್ನ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ಸಲೀನಾ, ಟ್ರಸ್ಟಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿ ಪ್ರಮುಖರು ಉಪಸ್ಥಿತರಿದ್ದರು.

Related posts

ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶದ ಮನವಿ ಬಿಡುಗಡೆ

Mumbai News Desk

ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರ ಅಭಿನಂದನಾ ಕಾರ್ಯಕ್ರಮ – ಸಿರಿತುಪ್ಪೆ

Mumbai News Desk

ಯಕ್ಷಧ್ರುವ ಪಟ್ಲ ಸಂಭ್ರಮದ ಉದ್ಘಾಟನೆ 

Mumbai News Desk

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ‘ಸಂಸ್ಕೃತಿ ಸೌಧದ ಉಗ್ರಾಣ ತುಂಬಲಿ’: ಭಾಸ್ಕರ ರೈ ಕುಕ್ಕುವಳ್ಳಿ

Mumbai News Desk

ಪ್ರಸಾದ್ ಎನ್ ಮೂಲ್ಯ 89.33% ಅಂಕ 

Mumbai News Desk

ಜ 5 ರಂದು ಕೆಲ್ಲಪುತ್ತಿಗೆ ಶ್ರೀ ಧರ್ಮಶಾಸ್ತ ಭಕ್ತವೃಂದ ದ21ನೇ ವರ್ಷದಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಯಕ್ಷಗಾನ ಪ್ರದರ್ಶನ

Mumbai News Desk