ಸಾಮಾಜಿಕ ವಾಗಿ ಧಾರ್ಮಿಕ ವಾಗಿ ಸಂಸ್ಥೆಯ ಬಲಿಷ್ಠತೆ ಸದಸ್ಯರ ಕೊಡುಗೆ ಅನನ್ಯ: ಪೊಲ್ಯ ಜಯಪಾಲ್ ಶೆಟ್ಟಿ.
ಚಿತ್ರ, ವರದಿ: ರಮೇಶ್ ಉದ್ಯಾವರ
ಕಾಂದಿವಿಲಿ ಜ . 12: ಸಂಘದಲ್ಲಿ ಸಂಘಟನೆ ಸಮಾಜಕ್ಕೆ ಕಣ್ಣಿದ್ದಂತೆ ಅದು ಸಂಘದ ಅಭಿವೃದ್ಧಿಯ ಕೇಂದ್ರ ಬಿಂದು. ಸ್ತ್ರೀಶಕ್ತಿಯ ಸಂಘಟನೆ ಸಾಮಾಜಿಕ ಸಂಸ್ಥೆಯ ವಿಕಾಸ ಹಾದಿಗೆ ಬೆಳಕು ಇದ್ದಂತೆ. ಕುಟುಂಬದಲ್ಲಿ ಗೃಹಲಕ್ಷ್ಮಿಯಾಗಿ ದೊರೆತ ಅಲ್ಪ ಸಮಯವನ್ನು ಸಮಾಜ ಸೇವೆಯಲ್ಲಿ ತಮ್ಮನ್ನು ತೋರಿಸಿಕೊಳ್ಳುವ ಮೂಲಕ ಮಹಿಳೆ ತಾನು ಅನುಕಂಪದ ಪ್ರತಿರೂಪ ಆಗಿದ್ದಾಳೆ. ಅಲ್ಲದೆ ದಕ್ಷತೆ ನೇರನುಡಿಗಳ ಮೂಲಕ ಸಂಘದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ ಎಂದು ಕಾಂದಿವಿಲಿ ಕನ್ನಡ ಸಂಘದ ಅಧ್ಯಕ್ಷರಾದ ಪೊಲ್ಯ ಜಯಪಾಲ್ ಶೆಟ್ಟಿ ಅಭಿಮತ ವ್ಯಕ್ತಪಡಿಸಿದರು.
ಅವರು ಡಿ. 6ರಂದು ಕಾಂದಿವಲಿ ಮಹಾವೀರ ನಗರದ ಪಂಚೋಲಿಯ ಶಾಲೆಯಲ್ಲಿ ಜರುಗಿದ ಕಾಂದಿವಿಲಿ ಕನ್ನಡ ಸಂಘದ 29ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ಮಕ್ಕಳು ಪ್ರತಿಭೆಯ ಕಾರಂಜಿಗಳು ಅವರ ವ್ಯಕ್ತಿತ್ವ ಬೆಳವಣಿಗೆಗೆ ವೇದಿಕೆಯನ್ನು ಕಲ್ಪಿಸುವುದು ಪಾಲಕರು ಹಾಗೂ ಸಾಮಾಜಿಕ ಸಂಘದ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಧಾರ್ಮಿಕವಾಗಿ ಸಾಮಾಜಿಕವಾಗಿ ಸಂಘದ ಬಲಿಷ್ಠತೆ ತಮ್ಮನ್ನು ತೊಡಗಿಸಿಕೊಂಡು ಸಂಘದ ಬೆಳವಣಿಗೆಗೆ ಸೇವೆ ಸಲ್ಲಿಸಿದ ಸದಸ್ಯರಿಗೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿ, ಸಂಘದ ಭವಿಷ್ಯದ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ವಿನಂತಿಸಿದರು.
ಮಹಾಸಭೆಯ ಪ್ರಾರಂಭದಲ್ಲಿ ಸದಸ್ಯರಾದ ಜಯಲಕ್ಷ್ಮಿ ಶೆಟ್ಟಿ ಶರ್ಮಿಳಾ ಶೆಟ್ಟಿ, ಶುಭ ಸುವರ್ಣ ಪ್ರಾರ್ಥನೆ ಹಾಡಿದರು. ಬಳಿಕ ಸಂಘದ ಅಧ್ಯಕ್ಷರಾದ ಪೊಲ್ಯ ಜಯಪಾಲ್ ಶೆಟ್ಟಿ ಸಭೆಗೆ ಹಾಜರಿದ್ದ ಪದಾಧಿಕಾರಿಗಳು ಸದಸ್ಯರನ್ನು ಸ್ವಾಗತಿಸಿದರು. ಸಂಘದ ಗೌರವ ಪ್ರ. ಕಾರ್ಯದರ್ಶಿ ಯೋಗೇಶ್ ಕೆ ಹೆಜ್ಮಾಡಿ ಸಂಘದ ಗತವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು ಗೌರವ ಕೋಶಾಧಿಕಾರಿ ಜಗನ್ನಾಥ್ ಡಿ ಕುಕ್ಯಾನ್ ವಾರ್ಷಿಕ ಲೆಕ್ಕಪತ್ರವನ್ನು ಸಭೆಯಲ್ಲಿ ಸಾದರ ಪಡಿಸಿದರು. 2023- 24ರ ಅವಧಿಗೆ ಲೆಕ್ಕಪರಿಶೋಧಕರಾಗಿ ಸಿ ಎ ಶೆಟ್ಟಿ ಅವರನ್ನು ಮರು ನೇಮಕ ಮಾಡಲಾಯಿತು. ಸಂಘದ ಮಾಜಿ ಮಹಿಳಾ ಕಾರ್ಯಧ್ಯಕ್ಷೆ ವಿನೋದಾ ಡಿ. ಶೆಟ್ಟಿ , ಜೆ. ಎಂ. ಕೋಟ್ಯಾನ್, ಭೋಜ ಶೆಟ್ಟಿ ಸಂಘದ ಬೆಳವಣಿಗೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು ಹಾಗೂ ಸದಸ್ಯೆ ನೇತ್ರಾವತಿ ಸಂಘದ ವತಿಯಿಂದ ವಿಹಾರಕೂಟವನ್ನು ಆಯೋಜಿಸುವ ಬಗ್ಗೆ ಮಹಾಸಭೆಯಲ್ಲಿ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಖಾರ್ ಶನಿಮಾತ್ಮ ಪೂಜಾ ಸೇವಾ ಸಮಿತಿಯಲ್ಲಿ ಕಳೆದ ಹಲವಾರು ವರ್ಷ ಗಳಿಂದ ಧಾರ್ಮಿಕ ಸೇವೆಯನ್ನು ಸಲ್ಲಿಸುತ್ತಾ ಬಂದ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ ಹೆಜ್ಮಾಡಿ ಹಾಗೂ ಸಂಘದ ಸದಸ್ಯರಾಗಿ ಮುಂಬೈ ಮಹಾನಗರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ ಕೋ ಆಪರೇಟಿವ್ ಬ್ಯಾಂಕಿನ ತೃತೀಯ ಭಾರಿಗೆ ನಿರ್ದೇಶಕರಾಗಿ ಆಯ್ಕೆಯಾದ ಗಂಗಾಧರ್ ಜೆ ಪೂಜಾರಿ, ಕರ್ನಾಟಕ ಫುಡ್ಬಾಲ್ ಟೀಮಿನ ಅಧ್ಯಕ್ಷರಾಗಿ ಆಯ್ಕೆಗೊಂಡ ಸಂಘದ ಉಪಾಧ್ಯಕ್ಷರಾದ ಪ್ರೇಮನಾಥ್ ಪಿ ಕೋಟ್ಯಾನ್ ಅವರನ್ನು ಸಂಘದ ವತಿಯಿಂದ ಮಹಾಸಭೆಯಲ್ಲಿ ಗೌರವಿಸಲಾಯಿತು. ಜೊತೆಗೆ ಮಹಾಸಭೆಗೆ ಸ್ಥಳಾವಕಾಶವನ್ನು ನೀಡಿ ಸಹಕರಿಸಿದ ಪಂಚೋಲಿಯ ಶಾಲೆಯ ಮುಖ್ಯೋಪಾಧ್ಯಾಯರಾದ ವಸಂತ್ ಕುಮಾರ್ ಮತ್ತು ಪದಾಧಿಕಾರಿಗಳನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ವಾರಿಜಾ ಎಸ್ ಕರ್ಕೇರ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಭಿತಾ ಜಿ ಪೂಜಾರಿ ವಂದಿಸಿದರು.