
ಆಧುನಿಕ ಬದಲಾವಣೆ ಬದುಕಿನಲ್ಲಿ ಸಂಸ್ಕೃತಿ ಅರಿವು ಅಗತ್ಯ : ಸುಪ್ರಿಯಾ ಶೆಟ್ಟಿ
ಚಿತ್ರ, ವರದಿ : ರಮೇಶ್ ಉದ್ಯಾವರ
ಮಲಾಡ್ ಜ, 30: ಅರಸಿನ ಕುಂಕುಮ ಕಾರ್ಯಕ್ರಮದಲ್ಲಿನ ವಿಚಾರ ಚಿಂತನೆ ನಮ್ಮ ಆಧುನಿಕ ಬದಲಾವಣೆ ಬದುಕಿನಲ್ಲಿ ಸಂಸ್ಕೃತಿ ಸಂಸ್ಕಾರ ತಿಳಿಸುವ ಮೂಲಕ ನಮ್ಮ ಆಚಾರ ವಿಚಾರಗಳು ಯುವ ಜನಾಂಗಕ್ಕೆ ಹಸ್ತಾಂತರಿಸುವ ಕೆಲಸ ಪ್ರಮುಖವಾಗಿ ಮಹಿಳೆಯರಿಂದ ಆಗಬೇಕು. ಸಂಸ್ಕೃತಿ, ಸಂಸ್ಕಾರ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಇತರರಿಗೆ ದಿಕ್ಸೂಚಿಯಾಗಬೇಕು ಎಂದು ಕ್ರಿಷೆ ಕೆಮ್ ಕಂಪೆನಿಯ ಪಾಲುದಾರರಾದ ಸುಪ್ರಿಯಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜನವರಿ 28ರಂದು ಮಲಾಡ್ ಕನ್ನಡ ಸಂಘದ ಆಶ್ರಯದಲ್ಲಿ ಮಹಿಳಾ ವಿಭಾಗವು ಮಲಾಡ್ ಜನ ಕಲ್ಯಾಣ ನಗರದ ಭೂಮಿ ಪಾರ್ಕ್ ಕ್ಲಬ್ ಹೌಸ್ ಹಾಲ್ ನಲ್ಲಿ ಆಯೋಜಿಸಿದ ಅರಶಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು ಈ ಸಂಘದ ಮಹಿಳಾ ವಿಭಾಗದ ವತಿಯಿಂದ ಇನ್ನಷ್ಟು ಸಾಮಾಜಿಕ ಒಗ್ಗಟ್ಟಿನ ಕಾರ್ಯಕ್ರಮಗಳು ಜರುಗುತ್ತಿರಲಿ. ಆ ಮೂಲಕ ಕರ್ನಾಟಕ ಪರಂಪರೆಯ ಭಾಷೆ ಸಂಸ್ಕೃತಿಯ ಇನ್ನಷ್ಟು ಕಾರ್ಯಕ್ರಮಗಳು ಹೂರಣವಾಗಿ ಈ ಸಂಘದ ವತಿಯಿಂದ ತುಳು ಕನ್ನಡಿಗರ ಮುಡಿಗೇರಲಿ ಎಂದು ಹಾರೈಸಿದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಉದ್ಯಮಿ ಮೇಕಪ್ ಕಲಾವಿದೆ ಸ್ವಪ್ನಾ ಅಮೀನ್ ಸಹಸ್ರ ಮೈಲು ದೂರದ ಕನ್ನಡ ನಾಡಿನ ಸಂಸ್ಕೃತಿಯ ವೈಭವವನ್ನು ಕಾಪಾಡಿಕೊಂಡು ಅದನ್ನು ಮಹಾನಗರದಲ್ಲಿ ಆಚರಿಸುವ ಮೂಲಕ ಸಂಘದ ಮಹಿಳಾ ಒಗ್ಗಟ್ಟು ಇಲ್ಲಿ ಮೇಳೈಸಿದೆ. ನಮ್ಮಲ್ಲಿ ಸಮಾನ ಪ್ರತಿಭೆ ಇಲ್ಲದಿದ್ದರೂ ಜೀವನದಲ್ಲಿ ಪ್ರತಿಭಾವನ್ವಿತರಾಗಲು ಮುಕ್ತ ಅವಕಾಶಗಳಿವೆ ಎಂದು ಹೇಳಿ ಅಚ್ಚುಕಟ್ಟಾಗಿ ಅಯೋಜಿಸಿದ ಕಾರ್ಯಕ್ರಮಕ್ಕೆ ಮಹಿಳಾ ಸದಸ್ಯರನ್ನು ಅಭಿನಂದಿಸಿದರು.
ದೇವತಾ ಸ್ವರೂಪದಲ್ಲಿ ಇರುವ ಮಹಿಳೆಯರು ನಮ್ಮೆಲ್ಲರ ದೈನಂದಿನ ಕೌಟುಂಬಿಕ ಬದುಕಿನ ಅಂಗವಾಗಿ ಜೊತೆಗೆ ಕ್ಷೇತ್ರ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಹಿಳೆಯರು ಕೈ ಜೋಡಿಸುವ ಮೂಲಕ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ನಮ್ಮ ಸಂಸ್ಥೆಯಲ್ಲಿ ನಾವೆಲ್ಲರೂ ಜಾತ್ಯತೀತ ನೆಲೆಯಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಮಹಿಳೆಯರ ಕಾರ್ಯಕ್ರಮಗಳಿಗೂ ಪ್ರಾಧಾನ್ಯತೆ ನೀಡುತ್ತಾ ಬಂದಿದೆ. ಸಾಮಾಜಿಕವಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವ ಮನೋಭಾವ ಬೆಳೆಸುವ ಮೂಲಕ ಸಂಘದ ಅಭಿವೃದ್ಧಿಗೆ ನಾವೆಲ್ಲ ಶ್ರಮಿಸಬೇಕು. = ನ್ಯಾI. ಜಗದೀಶ್ ಎಸ್ ಹೆಗ್ಡೆ, ಅಧ್ಯಕ್ಷರು; ಮಲಾಡ್ ಕನ್ನಡ ಸಂಘ.
ಕರ್ಕ ಸಂಕ್ರಾಂತಿಯಿಂದ ಮಕರ ಸಂಕ್ರಾಂತಿ ವರೆಗಿನ ದಕ್ಷಿಣಾಯಣ ಮಕರ ಸಂಕ್ರಾಂತಿಯಿಂದ ರಥಸಪ್ತಮಿಯವರೆಗೆ ಪರ್ವಕಾಲದಲ್ಲಿ ದಾನ ಧರ್ಮಗಳಿಗೆ ವಿಶೇಷ ಫಲ ನೀಡುತ್ತದೆ. ಈ ಪುಣ್ಯಕಾಲದಲ್ಲಿ ಮಹಿಳೆಯರು ಅರಿಶಿನ ಕುಂಕುಮ ಇಟ್ಟು ಸೌಹಾರ್ದತೆಯ ಪರಸ್ಪರ ಹಾರೈಕೆ ಇಂದಿನ ಕಾರ್ಯಕ್ರಮದ ವಿಶೇಷವಾಗಿದೆ.= ಲಲಿತಾ ಭಂಡಾರಿ; ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ ಮಲಾಡ್ ಕನ್ನಡ ಸಂಘ.

ಸುಜಾತ ತುಳಸೀದಾಸ್ ಅಮೀನ್ ಅವರ ಗಣೇಶ ಶ್ಲೋಕದೊಂದಿಗೆ ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಗೌರವ ಪ್ರಧಾನ ಕಾರ್ಯದರ್ಶಿ ಆಶಾಲತಾ ಎಸ್ ಕೋಟ್ಯಾನ್ ಅತಿಥಿಗಳನ್ನು ಸ್ವಾಗತಿಸಿ, ಪ್ರಸ್ತಾವನೆಗೈದರು. ಕೋಶಾಧಿಕಾರಿ ವಿಜಯಾ ಸುರೇಂದ್ರ ಪೂಜಾರಿ ಜೊತೆ ಕೋಶಾಧಿಕಾರಿ ವಿಜಯಲಕ್ಷ್ಮಿ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಉಪಕಾರ್ಯಾಧ್ಯಕ್ಷೆ ಸಾರಿಕಾ ಆರ್ ಶೆಟ್ಟಿ, ಅರಸಿನ ಕುಂಕುಮದ ಮಹತ್ವದ ಬಗ್ಗೆ ವಿವರಿಸಿದರು. ಪ್ರಭಾವತಿ ಸಿಎ ಸುರೇಂದ್ರ ಶೆಟ್ಟಿ ರತಿ ಬಾಲಚಂದ್ರ ರಾವ್ ಶರ್ಮಿಳಾ ಜಗದೀಶ್ ಹೆಗ್ಡೆ ಗೋರೆಗಾಂವ್ ಕನ್ನಡ ಸಂಘದ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ದಯಾನಂದ್ ಎಂ. ಶೆಟ್ಟಿ ಜೊತೆ ಕೋಶಾಧಿಕಾರಿ ಸಂತೋಷ್ ಕೆ ಪೂಜಾರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಟ್ರಸ್ಟಿಗಳು ,ಉಪಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಕಾರ್ಯದರ್ಶಿ ಮಲ್ಲಿಕಾ ಡಿ ರೈ ಕಾರ್ಯಕ್ರಮ ನಿರೂಪಣೆಗೈದರು. ಜೊತೆ ಕಾರ್ಯದರ್ಶಿ ಶಾರದಾ ಜಿ ಪೂಜಾರಿ ವಂದಿಸಿದರು. ಸಂಘದ ಗೌರವ ಕೋಶಾಧಿಕಾರಿ ಶಾಂಭವಿ ಬಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.