
ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ನೇತೃತ್ವದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮುಂಬಯಿ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆದಿದ್ದು ಅದರಲ್ಲಿ ಕನ್ನಡಿಗ ಮಹಾದೇವ ಪೂಜಾರಿ ಯವರನ್ನು ಕಾರ್ಯದರ್ಶಿ ಯಾಗಿ ನಿಯುಕ್ತಿಗೊಳಿಸಿ ಮುಂಬಯಿ ವಿಭಾಗದ ಅಧ್ಯಕ್ಷರಾದ ರಾಖೀ ಜಾಧವ್ ನಿಯುಕ್ತಿ ಪತ್ರವನ್ನು ನೀಡಿರುತ್ತಾರೆ.
ಮಹಾದೇವ ಪೂಜಾರಿ ಪರಿಚಯ
ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಊರಿನವರಾದ ಮಹಾದೇವ ಪೂಜಾರಿಯವರು ನಾಲ್ಕು ದಶಕಗಳ ಹಿಂದೆ ಮುಂಬಯಿ ಮಹಾನಗರಕ್ಕೆ ಪಾದಾರ್ಪಣೆಗೈದು ಕ್ಯಾಂಟೀನ್ ಕಾರ್ಮಿಕನಾಗಿ ದುಡಿದು ರಾತ್ರಿ ಶಾಲೆಯಲ್ಲಿ ವ್ಯಾಸಂಗ ಮುಂದುವರೆಸಿದರು.
ಆ ಬಳಿಕ ವಿವಿಧ ಹಂತದಲ್ಲಿ ಮುನ್ನೆಡೆದು ವಿದ್ಯೆ – ಉದ್ಯೋಗ ಎರಡಕ್ಕೂ ಮಹತ್ವ ನೀಡಿ ಯಶಸ್ವಿಯಾಗಿ ತದನಂತರ ಸ್ವಂತ ಉದ್ಯಮದತ್ತ ಒಲವು ತೋರಿ ಓರ್ವ ಉದ್ಯಮಿಯಾಗಿ ರೂಪುಗೊಂಡರು.
ಉದ್ಯಮದ ಜೊತೆ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ಇವರು ಮುಂಬಯಿ ಗಾಂವ್ದೇವಿ ಪ್ರತಿಷ್ಠಾನದ ಅಧ್ಯಕ್ಷರಾಗಿ, ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷರಾಗಿರುವುದಲ್ಲದೆ ಹಲವಾರು ಸಂಘ ಸಂಸ್ಥೆಗಳ ಮೂಲಕ ಸಮಾಜಸೇವೆಗೈಯುತ್ತಿದ್ದಾರೆ. ತನ್ನ ಹುಟ್ಟೂರಿನ ಸಮುದಾಯ ಬಾಂಧವರನ್ನು ಒಗ್ಗೂಡಿಸಿ ಕೊಡೇರಿ ಬಿಲ್ಲವ ಸಮಾಜ ಸೇವಾ ಸಂಘ ಸ್ಥಾಪಿಸಿ ಅದರ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಗಳ ಜೊತೆಗೆ ರಾಜಕೀಯ ಪಯಣ ಆರಂಭಿಸಿದ ಇವರು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಮುಂಬಯಿ ವಿಭಾಗದ ನೂತನ ಕಾರ್ಯದರ್ಶಿಯಾಗಿ ಆಯ್ಕೆ ಆಗಿರುತ್ತಾರೆ.