
“ಅರಸಿನ ಕುಂಕುಮವು ಕೇವಲ ಒಂದು ಕಾರ್ಯಕ್ರಮ ಮಾತ್ರವಲ್ಲ, ಬದಲಾಗಿ ನಮ್ಮೆಲ್ಲರನ್ನೂ ಬೆಸೆಯುವ ಸಾಧನವಾಗಿದೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ನನಗೆ ಅತೀವ ಆನಂದವಾಗುತ್ತಿದೆ, ಇಲ್ಲಿನ ಮಹಿಳೆಯರ ಉತ್ಸಾಹವನ್ನು ಕಂಡು ಅವರ ಬಗ್ಗೆ ನನಗೆ ಅಭಿಮಾನವಾಗುತ್ತಿದೆ . ಇಂತಹ ಇನ್ನೂ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಜರಗಿಸುವ ಮೂಲಕ ಶಾಖೆಯ ಸದಸ್ಯರು ತಮ್ಮ ಒಗ್ಗಟ್ಟನ್ನು ಬಲಪಡಿಸಿಕೊಳ್ಳಬೇಕು” ಹೀಗಂದವರು ನವಿ ಮುಂಬಯಿ ಪರಿಸರದ ಹೆಸರಾಂತ ದಂತ ವೈದ್ಯೆ ಡಾ.ಸುಷ್ಮಾ ಮೆಂಡನ್. ಅವರು ಶನಿವಾರ ಫೆಬ್ರವರಿ 10 ರಂದು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ನವಿ ಮುಂಬಯಿ ಶಾಖೆಯ ಮಹಿಳಾ ವಿಭಾಗದ ವತಿಯಿಂದ ನ್ಯೂ ಪನ್ವೇಲ್‌ನ ಸೆಕ್ಟರ್ 2 ರಲ್ಲಿರುವ ಪನ್ವೇಲ್ ಕರ್ನಾಟಕ ಸಂಘದ ಸಭಾಗೃಹದಲ್ಲಿ ಏರ್ಪಡಿಸಲಾದ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು. ಮುಂಬಯಿ ಕವಿ, ಲೇಖಕ ಮತ್ತು ಮಾಟುಂಗಾ [ಪೂರ್ವ]ದ ಮುಂಬಯಿ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್. ಕರ್ಕೇರರು ಅಧ್ಯಕ್ಷತೆ ವಹಿಸಿದ್ದರು.




ಸೋಮನಾಥ ಎಸ್.ಕರ್ಕೇರರು ಮಾತನಾಡುತ್ತಾ ಹಿಂದೂ ಸಂಸ್ಕೃತಿಯ ಪ್ರತೀಕವಾಗಿರುವ ಅರಸಿನ ಕುಂಕುಮದಂತಹ ಕಾರ್ಯಕ್ರಮಗಳನ್ನು ಇಂದಿನ ದಿನಗಳಲ್ಲಿ ತುಳು ಕನ್ನಡಿಗರ ಹೆಚ್ಚಿನ ಸಂಸ್ಥೆಗಳಲ್ಲಿ ಏರ್ಪಡಿಸಲಾಗುತ್ತಿದ್ದು ಇದರಿಂದ ನಮ್ಮ ಈ ಸಂಸ್ಕೃತಿ ಹಾಗೂ ಪರಂಪರೆಯನ್ನು ಕಾಪಾಡಿಕೊಳ್ಳುವ ಜೊತೆಗೆ ನಮ್ಮ ಮುಂದಿನ ಜನಾಂಗಕ್ಕೂ ದಾಟಿಸಲು ಸಾಧ್ಯವೆಂದರು.
ತೇಜಸ್ವಿ ಮಲ್ಪೆ, ಉಷಾ ಕರ್ಕೇರ ಮತ್ತು ಹೇಮಲತಾ ಕೊಟ್ಯಾನರಿಂದ ಪ್ರಾರ್ಥನೆಯಾದ ಬಳಿಕ ಮುಖ್ಯ ಅತಿಥಿ ಡಾ.ಸುಷ್ಮಾ ಮೆಂಡನ್ ಮತ್ತು ಇತರರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಸೇರಿದ ಮಹಿಳೆಯರು ಪರಸ್ಪರ ಕುಂಕುಮವನ್ನು ಹಚ್ಚಿಕೊಳ್ಳುವ ಮೂಲಕ ಶುಭ ಹಾರೈಸಿದರು.
ಆರಂಭದಲ್ಲಿ ಎಲ್ಲರಿಗೂ ಸ್ವಾಗತ ಬಯಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಾಖೆಯ ಮಹಿಳಾ ವಿಭಾಗದ ಅಧ್ಯಕ್ಷೆ ಜಾನಕಿ ಆರ್. ಬಂಗೇರರು ಅರಸಿನ ಕುಂಕುಮಕ್ಕೆ ಪವಿತ್ರ ಸ್ಥಾನವಿದೆ , ಅರಸಿನವು ಕೇವಲ ಒಂದು ಅಲಂಕಾರಿಕ ಸಾಮಾಗ್ರಿ ಮಾತ್ರಾ ಆಗಿರದೆ ನಮ್ಮ ಆರೋಗ್ಯ ವರ್ಧಕವೂ ಆಗಿದೆ ಎಂದು ಅದರ ಮಹತ್ವದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತಾ ಕಾರ್ಯಕ್ರವನ್ನು ಆಯೋಜಿಸುವಲ್ಲಿ ಮಹಿಳಾ ವಿಭಾಗದ ಸದಸ್ಯರು ತುಂಬಾ ಶ್ರಮವಹಿಸಿದ್ದಾರೆ ಎಂದರು. ಶಾಖೆಯ ಅಧ್ಯಕ್ಷರಾದ ಪುಷ್ಪರಾಜ್ ಮೆಂಡನ್‌ರು ತಮ್ಮ ಭಾಷಣದಲ್ಲಿ ಇದು ನವಿ ಮುಂಬಯಿ ಶಾಖೆಯ ವತಿಯಿಂದ ಜರಗಿಸಲಾದ ಹೊಸ ವರ್ಷದ ಮೊತ್ತ ಮೊದಲನೆಯ ಕಾರ್ಯಕ್ರಮವಾಗಿದ್ದು ಮುಂಬರುವ ದಿನಗಳಲ್ಲಿ ಇಂತಹ ಇನ್ನೂ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಜರಗಿಸುವ ಉದ್ದೇಶವಿದೆ ಎಂದರು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಅಂಧೇರಿ ಪ್ರಧಾನ ಕಛೇರಿಯ ಮಹಿಳಾ ವಿಭಾಗದ ಅಧ್ಯಕ್ಷೆ ರಾಜೇಶ್ವರಿ ಉಪ್ಪೂರ್, ನಯ್‌ಗಾಂವ್ ವಿರಾರ್ ಶಾಖೆಯ ಮಹಿಳಾ ವಿಭಾಗದ ಅಧ್ಯಕ್ಷೆ ವೇದಾವತಿ ಸಾಲ್ಯಾನ್, ಮೀರಾ ಭಾಯಿಂದರ್ ಶಾಖೆಯ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಕಲಾವತಿ ತಿಂಗಳಾಯ ಇವರು ಕೂಡಾ ಸಮಯೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಂಧೇರಿ ಮುಖ್ಯ ಕಛೇರಿಯ ರೇಖಾ ಕಾಂಚನ್, ಯುವ ವಿಭಾಗದ ವೈಶಾಲಿ ಯೊಗೇಶ್ ಹಾಗೂ ಮೀರಾ ಭಾಯಿಂದರ್ ಶಾಖೆಯ ಕವಿತಾ ಶ್ರೀಯಾನ್ ಇವರು ಕೂಡಾ ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಭಾರತಿ ಮೊಗವೀರರು ಅತಿಥಿಗಳನ್ನು ಪರಿಚಯಿಸಿ ಕೊನೆಯಲ್ಲಿ ವಂದನಾರ್ಪಣೆಗೈದರು. ಅಶ್ವಿನಿ ಕೋಟ್ಯಾನ್ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಳಿಕ ಸದಸ್ಯರು ಹೌಸಿ ಹೌಸಿ ಮತ್ತು ನೃತ್ಯ, ಸಂಗೀತದಲ್ಲಿ ತೊಡಗಿಕೊಂಡು ಸಂಭ್ರಮಿಸಿದರು. . ಲಘು ಉಪಾಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.