
ಇತಿಹಾಸ ಪ್ರಸಿದ್ಧ ಕಾಪು ಮಾರಿಯಮ್ಮನ ಕ್ಷೇತ್ರವಾದ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಭಕ್ತಾದಿಗಳ ಶಿಲಾಸೇವೆಯಿಂದಲೇ ಈ ದೇವಸ್ಥಾನ ನಿರ್ಮಾಣಗೊಳ್ಳುತ್ತಿದ್ದು ಮಾರ್ಚ್ 5ರ ಮಂಗಳವಾರದಂದು ಕಾಪು ಪುರಸಭೆಯ ಪೌರಕಾರ್ಮಿಕರು ಮತ್ತು ವಾಹನ ಚಾಲಕರು ಸಾಮೂಹಿಕವಾಗಿ ದೇವಸ್ಥಾನಕ್ಕೆ ಆಗಮಿಸಿ ಶಿಲಾಸೇವೆಯನ್ನು ನೀಡುವ ಮೂಲಕ ಶಿಲಾಪುಷ್ಪವನ್ನು ಅರ್ಪಿಸಿ, ಕಾಪುವಿನ ಅಮ್ಮನ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು.

ಪುರಸಭಾ ವಾಹನ ಚಾಲಕರಾದ ಉಮೇಶ್ ಪೂಜಾರಿ ಅವರು ಮಾತನಾಡಿ ಜೀರ್ಣೋದ್ಧಾರದ ಅಂಗವಾಗಿ ನಾವೆಲ್ಲರೂ ಒಟ್ಟಾಗಿ ಅಮ್ಮನಿಗೆ ಶಿಲಾಸೇವೆಯನ್ನು ಅರ್ಪಣೆ ಮಾಡಿದ್ದೇವೆ, ಮಹಾಮಾರಿ ಕೊರೋನ ಸಂದರ್ಭದಲ್ಲಿ ಕಾಪುವಿನಲ್ಲಿ ಸ್ವಚ್ಛತೆ ಮಾಡುವಾಗ ನಮಗೆ ಯಾವುದೇ ರೀತಿಯ ತೊಂದರೆಯಾಗದೆ ಒಳ್ಳೆಯ ರೀತಿಯಲ್ಲಿ ತಾಯಿ ಅನುಗ್ರಹಿಸಿದ್ದಾಳೆ, ಆದ್ದರಿಂದ ನಾವು 10 ಶಿಲಾಸೇವೆಯನ್ನು ನೀಡುವುದೆಂದು ನಿರ್ಧರಿಸಿದ್ದೆವು, ಇದೀಗ ಅಮ್ಮನ ದಯೆಯಿಂದ ಎಲ್ಲರಿಗೂ ಸರಕಾರಿ ಉದ್ಯೋಗ ಶಾಶ್ವತವಾಗಿದೆ.
ಆದ್ದರಿಂದ 40 ಶಿಲೆ ನೀಡುವಂತಾಗಿದೆ, ಅಮ್ಮ ತುಂಬಾ ಅನುಗ್ರಹ ನೀಡಿದ್ದಾಳೆ, ಅಮ್ಮನಿಗಾಗಿ ಇನ್ನು ಹೆಚ್ಚಿನ ಸೇವೆಯನ್ನು ನಾವು ಮಾಡಲಿದ್ದೇವೆ, ಅಮ್ಮನ ಹಲವಾರು ಪವಾಡಗಳ ಅನುಭವ ನಮಗಾಗಿದೆ ಎಂದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಕ್ಷೇತ್ರದ ಪ್ರಧಾನ ತಂತ್ರಿಗಳಾದ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿ, ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ, ಕಾಪು ಪುರಸಭೆಯ ಮುಖ್ಯಧಿಕಾರಿ ಸಂತೋಷ್ ಕುಮಾರ್, ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ರಮೇಶ್ ಶೆಟ್ಟಿ ಕಾಪು ಕೊಲ್ಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಚಂದ್ರಶೇಖರ ಅಮೀನ್, ಜಗದೀಶ್ ಬಂಗೇರ, ರವೀಂದ್ರ ಎಂ, ಬಾಬು ಮಲ್ಲಾರ್ ಮತ್ತು ಪ್ರಚಾರ ಸಮಿತಿಯ ಸಂಚಾಲಕರಾದ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಉಪಸ್ಥಿತರಿದ್ದರು.