
ಮುಂಬಯಿ, ಜೂ 23 : ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವನ್ನು ಸಾಧಿಸಲು ಪ್ರಾಚೀನ ಮಾರ್ಗವಾಗಿದೆ. ವ್ಯಕ್ತಿಗೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಆತ್ಮಸ್ಥೈರ್ಯ ಮತ್ತು ಸಕಾರಾತ್ಮಕ ಭಾವನೆ ಬರುವಂತೆ ಮಾಡುತ್ತದೆ . ಹಾಗೂ ಶಿಸ್ತುಬದ್ಧ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಬಂಟರ ಸಂಘ ಮುಂಬಯಿ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಹೇಳಿದರು.

ಅವರು ಜೂ. 21 ರಂದು ಮೀರಾರೋಡ್ ಹೋಟೆಲ್ ಬಾಲಾಜಿ ಇಂಟರ್ ನ್ಯಾಶನಲ್ ಸಭಾಗೃಹದಲ್ಲಿ ಜರಗಿದ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ಆಯೋಜಿಸಿದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚಿನ ಕಲೆಯಾಗಿದೆ. ಇದು ಸಾವಿರಾರು ವರ್ಷಗಳ ಹಿಂದೆ ಭಾರತವು ಜಗತ್ತಿಗೆ ನೀಡಿದ ಒಂದು ದೊಡ್ಡ ಕೊಡುಗೆಯಾಗಿದೆ. ಹಾಗಾಗಿ ಯೋಗವು ಒಂದು ದಿನದ ಆಚರಣೆಗೆ ಸೀಮಿತವಾಗದೆ ಪ್ರತಿ ನಿತ್ಯವೂ ಯೋಗಾಭ್ಯಾಸ ಮಾಡುದರ ಮೂಲಕ ಉತ್ತಮ ಆರೋಗ್ಯಕರ ಜೀವನ ಶೈಲಿಯನ್ನು ನಡೆಸೋಣ ಎಂದರು .

ಈ ಸಂದರ್ಭದಲ್ಲಿ ಯೋಗದ ಬಗ್ಗೆ ಮಾರ್ಗದರ್ಶನ ನೀಡಲು ಚೆನ್ನೈಯಿಂದ ಆಗಮಿಸಿದ ಯೋಗ ಗುರು ರಂಜನಿ ಪ್ರಶಾಂತ್ ಶೆಟ್ಟಿ ಮಾತನಾಡುತ್ತಾ ಜಗತ್ತಿನ ಎಲ್ಲಾ ಜನರಿಗೆ ನಮ್ಮ ದೇಶದ ಯೋಗದ ಬಗ್ಗೆ ತಿಳಿದಿದೆ . ವಿಶ್ವದ ಮನ್ನಣೆ ಪಡೆದಿದೆ , ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ರಾಜಾಶ್ರಯ ನೀಡಿ , ಇಂದು ವಿಶ್ವವ್ಯಾಪಿ ಪ್ರಾಧ್ಯಾನತೆ ನೀಡುವಂತೆ ಮಾಡಿದ್ದಾರೆ . ಪ್ರಧಾನಿಯವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ . ಇಂದಿನ ಈ ಜಂಜಾಟದ ಬದುಕಿನಲ್ಲಿ ಯೋಗ ನಮಗೆ ವರದಾನ ಇದ್ದ ಹಾಗೆ , ಯಾಕೆಂದರೆ ನಮ್ಮ ಮಾನಸಿಕ ಒತ್ತಡ , ತಿನ್ನುವ ಆಹಾರ , ಜೀವನ ಶೈಲಿ ಹೀಗೆ ಬೇರೆ ಬೇರೆ ಕಾರಣದಿಂದ ನಾವು ಬಹಳ ಒತ್ತಡದಲ್ಲಿ ಬದುಕುತ್ತಿದ್ದೇವೆ . ಇವುಗಳಿಂದ ಮುಕ್ತಿ ಪಡೆಯಲು ಯೋಗ ನಮಗೆ ಸಹಕಾರಿಯಾಗಿದೆ. ಯೋಗಕ್ಕಾಗಿ ದಿನದ ಸ್ವಲ್ಪ ಸಮಯವನ್ನು ವಿನಿಯೋಗಿಸಿ. ದಿನದ ಆರಂಭ ಯೋಗದಿಂದ ಶುರುವಾಗಲಿ . ದಿನ ನಿತ್ಯ ಯೋಗ ಮಾಡಿ ಶರೀರದ ಆಂತರಿಕ ಸಮಸ್ಯೆಯಿಂದ ಮುಕ್ತಿ ಪಡೆಯಿರಿ ಹಾಗೂ ಗುರುವಿನ ಮುಖೇನ ಯೋಗಾಭ್ಯಾಸ ಆರಂಭಿಸಿ ಎಂದು ಸಲಹೆ ನೀಡಿ , ಯೋಗಾಭ್ಯಾಸ ಮತ್ತು ಪ್ರಾಣಾಯಾಮವನ್ನು ನಡೆಸಿಕೊಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಮುಂಬಯಿ ಮಾತೃಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರು ಹಾಗೂ ಅರುಣ್ ಕ್ಲಾಸಸ್ ಶಿಕ್ಷಣ ಸಂಸ್ಥೆಯ ಅರುಣ್ ಪಕ್ಕಳ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ಶುಭ ಹಾರೈಸಿದರು .
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ವಸಂತಿ ಎಸ್. ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ , ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಹಾಗೂ ಮಹಿಳಾ ವಿಭಾಗದ ಸಹಕಾರದಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾಯಿತು. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದರು .
ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು , ಯೋಗಾಭಿಮಾನಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಯೋಗ ಗುರು ರಂಜನಿ ಪ್ರಶಾಂತ್ ಶೆಟ್ಟಿ ಹಾಗೂ ಹೋಟೆಲ್ ಬಾಲಾಜಿ ಇಂಟರ್ ನ್ಯಾಶನಲ್ ಮಾಲಿಕರಾದ ಸುಂದರ ಶೆಟ್ಟಿಯವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕುತ್ಯಾರು, ಕೋಶಾಧಿಕಾರಿ ಶಂಕರ್ ಶೆಟ್ಟಿ ಬೋಳ , ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ , ಜೊತೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ , ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದಗುತ್ತು , ಸದಸ್ಯ ನೋಂದಣಿ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ದೇರಳಕಟ್ಟೆ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿ , ಕಾರ್ಯದರ್ಶಿ ಸುಮಂಗಳ ಕಣಂಜಾರ್ , ಕೋಶಾಧಿಕಾರಿ ವಂದನ ಶೆಟ್ಟಿ , ಜೊತೆ ಕಾರ್ಯದರ್ಶಿ ಶಿಲ್ಪಾ ಶೆಟ್ಟಿ, ಜೊತೆ ಕೋಶಾಧಿಕಾರಿ ಅಶ್ವಿನಿ ಶೆಟ್ಟಿ , ಮಾಜಿ ಕಾರ್ಯಾಧ್ಯಕ್ಷೆ ಅಮಿತಾ ಕೆ. ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸುಜಯ ಶೆಟ್ಟಿ ಪ್ರಾರ್ಥನೆಯೋಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕುತ್ಯಾರು ನಿರೂಪಿಸಿದರು , ಮಹಿಳಾ ವಿಭಾಗದ ಕಾರ್ಯದರ್ಶಿ ಸುಮಂಗಳ ಕಣಂಜಾರ್ ವಂದಿಸಿದರು .