
ಮುಂಬಯಿ : ಗೋರೆಗಾಂವ್ ಕರ್ನಾಟಕ ಸಂಘದ ಪ್ರೇಮ ಬಿಂದು ಕಟ್ಟಡವು ಪುನರ್ ನಿರ್ಮಾಣಗೊಳ್ಳಲಿದ್ದು ಆದಷ್ಟು ಬೇಗನೇ ಕಟ್ಟಡದ ಕೆಲಸ ಪ್ರಾರಂಭಗೊಳ್ಳಲಿದೆ. ಕಟ್ಟಡ ಪುನರ್ ನಿರ್ಮಾಣದ ಬಗ್ಗೆ ಮಾಜಿ ಅಧ್ಯಕ್ಷರುಗಳ ನಿರಂತರವಾಗಿ ಪ್ರಯತ್ನಿಸಿದ್ದು ಒಂದೆರಡು ವರ್ಷಗಳಲ್ಲಿ ಸಂಘವು ವಿಶಾಲವಾದ ಕಾರ್ಯಾಲಯವನ್ನು ಹೊಂದಲಿದೆ. ಇದಕ್ಕೆ ಸಂಘದ ಎಲ್ಲಾ ಸದಸ್ಯರುಗಳ ಹಾಗೂ ಅಭಿಮಾನಿಗಳ ಸಹಾಯ ಅಗತ್ಯ ಎಂದು ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ತಿಳಿಸಿದರು.




ಜು. 7 ರಂದು ಸಂಜೆ 5.30ಕ್ಕೆ ಸಂಘದ 66ನೆಯ ವಾರ್ಷಿಕ ಮಹಾಸಭೆಯು ಗೋರೆಗಾಂವ್ ಪಶ್ಚಿಮ ಕೇಶವ ಗೋರೆ ಸ್ಮಾರಕ ಹಾಲ್ ನಲ್ಲಿ ಜರಗಿದ್ದು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು 1980 ರಿಂದ ಸಂಘದಲ್ಲಿ ವಿವಿಧ ಜವಾಬ್ಧಾರಿಗಳಿಂದ ಕಾರ್ಯ ನಿರ್ವಹಿಸಿ ನಂತರ ಕೆಲವು ವರ್ಷಗಳ ಕಾಲ ಸಂಘದ ಸಂಪರ್ಕವನ್ನು ಕಳೆದರೂ ಕಳೆದ ಮೂರು ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ಕಟ್ಟಡದ ಕಾರ್ಯವು ಸೇರಿ ಸಂಘಕ್ಕಾಗಿ ನನ್ನಿಂದ ಸಾಧ್ಯವಾಗುವ ಎಲ್ಲಾ ಕಾರ್ಯವನ್ನು ನಿರ್ವಹಿಸಿ ಇದೀಗ ಮೂರನೆಯ ಸಲ ಸಂಘದ ಮಹಾಸಭೆಯನ್ನು ನಡೆಸಿರುವೆನು. ಸದ್ಯ ಸಂಘದ ಕಾರ್ಯಾಲಯವನ್ನು ಬಾಡಿಗೆಯ ನಿವೇಷಣಕ್ಕೆ ವರ್ಗಾಹಿಸಲಾಗಿದ್ದು, ಸಂಘದ ಸದಸ್ಯರು ತಮ್ಮ ವಿಳಾಸ ಬದಲಾಗಿದ್ದಲ್ಲಿ ನಮಗೆ ತಿಳಿಸಬೇಕಾಗಿ ವಿನಂತಿ. ಕಟ್ಟಡದ ಪುನರ್ ನಿರ್ಮಾಣದಿಂದಾಗಿ ಸಂಘದ ಚಟುವಟಿಕೆಗಳನ್ನು ಗೌರವ ಪ್ರಧಾನ ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್ ಅವರ ಸಹಾಯದಿಂದ ಕೇಶವ ಗೋರೆ ಸಭಾಗೃಹದಲ್ಲಿ ನಡೆಸುತ್ತಿದ್ದೇವೆ ಎನ್ನುತ್ತಾ ತನ್ನ ಕಾರ್ಯಾವಧಿಯಲ್ಲಿ ಸಹಕರಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಂಘದ ನೂತನ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾದ ವಿಶಾಲಾಕ್ಷಿ ಊಳುವಾರ ಅವರು ನನ್ನಲ್ಲಿ ಪ್ರೀತಿ ವಿಶ್ವಾಸವನ್ನಿಟ್ಟು ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ನನ್ನಾಗಿ ಆಯ್ಕೆ ಮಾಡಿದಕ್ಕೆ ಸಂಘದ ಎಲ್ಲಾ ಸದಸ್ಯರಿಗೂ ಆಭಾರಿಯಾಗಿದ್ದೇನೆ ಎಂದರು.
ವಿದ್ಯಾ ಆಚಾರ್ಯ ಇವರ ಪ್ರಾರ್ಥನೆಯೊಂದಿಗೆ ಸಭೆಯು ಆರಂಭಗೊಂಡಿತು. ಗತ ವರ್ಷದಲ್ಲಿ ಸ್ವರ್ಗಸ್ಥರಾದ ಸಂಘದ ಸದಸ್ಯರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್ ಉಪಸ್ಥಿತರಿದ್ದ ಸಂಘದ ಸರ್ವ ಸದಸ್ಯರನ್ನು ಸ್ವಾಗತಿಸಿದರು.
ಗತ ವರ್ಷದ ಮಹಾಸಭೆಯ ವರದಿಯನ್ನು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಮಂಡಿಸಿದ್ದು, ಲೆಕ್ಕ ಪತ್ರವನ್ನು ಸಂಘದ ಕೋಶಾಧಿಕಾರಿ ಎಂ. ಆನಂದ ಶೆಟ್ಟಿ ಸಭೆಯ ಮುಂದಿಟ್ಟರು. ಕಾರ್ಯಸೂಚಿ ಪ್ರಕಾರ ಸಂಘದ ನೂತನ ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಮತ್ತು ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಸಂಘದ ಪಾರುಪತ್ಯಗಾರರಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ದೇವಲ್ಕುಂದ ಭಾಸ್ಕರ ಶೆಟ್ಟಿ, ಸಂಘದ ಸದಸ್ಯರುಗಳಾದ ಮೋಹನ್ ಮಾರ್ನಾಡ್, ಕೆ ವಿ ಆರ್ ಐತಾಳ್, ಕೆ. ಎಂ. ಕೋಟ್ಯಾನ್, ಹರಿಶ್ಚಂದ್ರ ಆಚಾರ್ಯ, ರಮೇಶ್ ಶೆಟ್ಟಿ ಪಯ್ಯಾರ್, ಸುಧಾಕರ ಎಲ್ಲೂರ್, ನಾರಾಯಣ ಮೆಂಡನ್ ಮತ್ತು ಮೀನಾ ಕಾಳಾವರ್ ಮಾತನಾಡಿ ಸೂಕ್ತ ಸಲಹೆ ಸೂಚನೆಯಿತ್ತರು. ಸಂಘದ ಜೊತೆ ಕಾರ್ಯದರ್ಶಿ ಶಾಂತಾ ಎನ್ ಶೆಟ್ಟಿ ವಂದನಾರ್ಪಣೆ ಮಾಡಿದರು