
ಬೊಯಿಸರ್ : ತಾ.08 ಆಗಸ್ಟ್ 2024 ರಂದು ಬೊಯಿಸರ್ ಪಶ್ಚಿಮದಲ್ಲಿಯ ನಾವಾಪುರ ರೋಡ್ ನ ಪ್ರಸಿದ್ಧ ಸದ್ಗುರು ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಅವಧೂತ ಶ್ರೀ ನಿತ್ಯಾನಂದ ಸ್ವಾಮೀಜಿಯವರ 63ನೇ ಪುಣ್ಯತಿಥಿಯನ್ನು ಆಚರಿಸಲಾಯಿತು.
ಪ್ರಾತಃಕಾಲ 6 ಗಂಟೆಗೆ ಗಣಹೋಮವನ್ನು ಶ್ರೀಮತಿ ಪದ್ಮಾವತೀ ಮತ್ತು ಸತ್ಯಾ ಕೋಟ್ಯಾನ್ ನೆರವೇರಿಸಿದರು. ಬಳಿಕ 7 ಕ್ಕೆ ಪಂಚಾಮೃತ ಕಲಶ ಅಭಿಷೇಕ ಹಾಗೂ ಭಕ್ತಾಭಿಮಾನಿಗಳಿಂದ ಸೀಯಾಳಾಭಿಷೇಕ ಕಾರ್ಯಕ್ರಮ ಜರಗಿತು.

9.30 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಜರಗಿತು. ಮಂದಿರದ ವಿಶ್ವಸ್ಥ ಮಂಡಳಿಯ ಶ್ರೀನಿವಾಸ್ ಕೋಟ್ಯಾನ್ ” 13 ವರ್ಷಗಳ ಹಿಂದೆ ಸ್ಥಾಪನೆ ಆಗಿ ಲೋಕಾರ್ಪಣೆಗೊಂಡ ಬಳಿಕ ಶೃದ್ಧಾಳು ಭಕ್ತಾದಿಗಳ ಸತತ ಧಾರ್ಮಿಕ ಚಟುವಟಿಕೆಗಳಿಂದ ಈ ಮಂದಿರದ ಸ್ಥಳಕ್ಕೊಂದು ಪವಿತ್ರ ಕ್ಷೇತ್ರದ ಕಳೆ ಬಂದಿದೆ. ಪರಮಪೂಜ್ಯ ಸ್ವಾಮಿ ನಿತ್ಯಾನಂದರ 63 ನೆಯ ಪುಣ್ಯತಿಥಿಯ ಸಂದರ್ಭದಲ್ಲಿ ಮಂದಿರದ ಸರ್ವತೋಮುಖ ಅಭಿವೃದ್ಧಿ ಹಾಗೂ ಸರ್ವಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಪವಿತ್ರ ಶ್ರಾವಣ ಮಾಸದಲ್ಲಿ ಜರಗಿದ ಈ ಸಾಮೂಹಿಕ ಸತ್ಯನಾರಾಯಣ ಮಹಾಪೂಜೆಯು ಸರ್ವಮಂಗಳವನ್ನುಂಟು ಮಾಡಲಿ ” ಎಂದು ನುಡಿದು ಭಕ್ತಾಭಿಮಾನಿಗಳ ಪರವಾಗಿ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ವಿಧಿ ವಿಧಾನಗಳನ್ನು ಹರೀಶ್ ಶಾಂತಿ ಹೆಜಮಾಡಿ ಮತ್ತು ರಾಜೇಶ್ ಶಾಂತಿ ಇವರು ಜರಗಿಸಿದರು.
ಈ ಕಾರ್ಯಕ್ರಮದಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರು , ಸ್ಥಳೀಯ ಹಾಗೂ ವಿವಿಧ ಊರುಗಳಿಂದ ಆಗಮಿಸಿದ ಉದ್ಯಮಿಗಳು , ವಿವಿಧ ಸಂಸ್ಥೆಯ ಪದಾಧಿಕಾರಿಗಳು , ಸದ್ಗುರು ನಿತ್ಯಾನಂದ ಭಜನಾ ಮಂಡಳಿ ಮತ್ತು ಶ್ರೀ ಸ್ವಾಮಿ ನಿತ್ಯಾನಂದ ಭಕ್ತ ಮಂಡಳಿಯ ಸದಸ್ಯರು ಹಾಗೂ ತುಳು ಕನ್ನಡಿಗ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಉಸ್ತುವಾರಿಯಲ್ಲಿ ರಮಾನಂದ ಪೂಜಾರಿ ಮತ್ತು ಸೇವಾ ಬಳಗದ ಸದಸ್ಯರು ಸಹಕರಿಸಿದರು.
ಮದ್ಯಾಹ್ನದ ಮಹಾ ಮಂಗಳಾರತಿಯ ಬಳಿಕ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆಯು ಜರಗಿತು.
ಚಿತ್ರ ಹಾಗೂ ವರದಿ : ಪಿ.ಆರ್.ರವಿಶಂಕರ್ ಡಹಾಣೂ ರೋಡ್
8483980035