
ಸಮಾಜ ಬಾಂಧವರಿಗೆ ಸಹಾಯ ಮಾಡುವುದು ನಮ್ಮ ಮುಖ್ಯ ಧ್ಯೇಯೋದ್ದೇಶವಾಗಬೇಕು- ಪ್ರವೀಣ ಭೋಜ ಶೆಟ್ಟಿ
ಮುಂಬೈ ಅ14. ಆಟಿ ತಿಂಗಳು ತುಳುನಾಡಿನ ಸಂಪ್ರದಾಯದಲ್ಲಿ ನೋಡಿದರೆ ಯಾವುದೇ ಆಚರಣೆ ಇಲ್ಲದೆ ಇರುವಂತಹ ತಿಂಗಳು . ಆದರೆ ಮುಂಬೈಯಲ್ಲಿ ನಾವು ಅದನ್ನು ಬಹಳ ವಿಜ್ರಂಭಣೆಯಿಂದ ಆಚರಿಸುತ್ತಿರುವುದು ಅದು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಪ್ರತೀಕವಾಗಿದೆ. ಎಲ್ಲರೂ ಒಟ್ಟಾಗಿ ವಿವಿಧ ರೀತಿಯ ಅಡುಗೆಗಳನ್ನು ಮನೆಯಲ್ಲಿಯೇ ತಯಾರಿಸಿ ಎಲ್ಲರೂ ಜೊತೆಯಾಗಿ ಒಂದು ಮನೆಯವರಂತೆ ಕೂಡಿ ತಿನ್ನುವ ಸಂಭ್ರಮವೇ ಈ ಆಟಿದ ಪೊರ್ಲು ಕಾರ್ಯಕ್ರಮ. ಹಿಂದಿನಿಂದಲೂ ನಡೆದು ಬಂದಂತಹ ಆಟಿ ತಿಂಗಳ ಮಹತ್ವವನ್ನು ನಮ್ಮ ಮಕ್ಕಳಿಗೂ ತಿಳಿಸಬೇಕು ಎನ್ನುವ ಕಾರಣದಿಂದ ಬಹಳ ಉತ್ತಮ ರೀತಿಯಲ್ಲಿ ಇಂದು ಮಕ್ಕಳಿಗಾಗಿ ‘ಆಟಿದ ತಿರ್ಲ್’ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿರುವುದು ಎಲ್ಲಕ್ಕಿಂತಲೂ ವಿಶೇಷವಾಗಿದೆ. ಇದು ನಮ್ಮ ಕರ್ತವ್ಯವೂ ಹೌದು.
ಇವೆಲ್ಲವೂ ಸಂಘ ಸಂಸ್ಥೆಗಳ ಒಂದು ಅಂಗವಾದರೆ ನಾವು ನಮ್ಮ ಸಮಾಜದಲ್ಲಿರುವ ಬಡವರ್ಗದವರನ್ನು ಗುರುತಿಸಿ ಅವರಿಗೆ ಸಹಾಯ ಹಸ್ತವನ್ನು ನೀಡಬೇಕು. ಬಂಟರಲ್ಲಿ ಯಾರೂ ಕೂಡಾ ತೊಂದರೆಯಲ್ಲಿ, ಕಷ್ಟದಲ್ಲಿ ಇರಬಾರದು ಎನ್ನುವ ಕಾರಣದಿಂದ ಇಂದು ಡಾ.ಆರ್. ಕೆ ಶೆಟ್ಟಿಯವರ ಸಂಜೀವಿನಿ ಎನ್ನುವಂತಹ ಹೊಸ ಯೋಜನೆ ಲೋಕಾರ್ಪಣೆಗೊಂಡಿದೆ. ಸಮಾಜ ಸೇವೆಗಾಗಿ ನಮ್ಮವರಲ್ಲಿ ಆರೋಗ್ಯ ಪೂರ್ಣ ಸ್ಪರ್ಧೆ ಇರಬೇಕು ಅದರಿಂದ ನಮ್ಮ ಜನರಿಗೆ ಪ್ರಯೋಜನವಾಗಬೇಕು. ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಈ ನಿಟ್ಟಿನಲ್ಲಿ ಹಿಂದಿನಿಂದಲೂ ಕಾರ್ಯನಿರತವಾಗಿದ್ದು ಈ ಸಂಸ್ಥೆಯ ಎಲ್ಲರೂ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿನ ಮಹಿಳಾ ವಿಭಾಗವು ಕ್ರಿಯಾಶೀಲವಾಗಿದ್ದು ಸದಾ ಸಮಾಜ ಪರ ಕಾರ್ಯವನ್ನು ಮಾಡುವುದರಲ್ಲಿ ಮುಂಚೂಣಿಯಲ್ಲಿದೆ. ಈಗ ಕಾರ್ಯಧ್ಯಕ್ಷರಾಗಿರುವ ಸೂರಜ್ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಕಾರ್ಯದರ್ಶಿಯಾಗಿರುವ ಶೋಭಾ ಅಮರನಾಥ್ ಶೆಟ್ಟಿ ಇವರ ನೇತೃತ್ವದಲ್ಲಿ ಇಲ್ಲಿ ಉತ್ತಮ ಸಮಾಜಮುಖಿ ಕಾರ್ಯಗಳು ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ ಬೋಜ ಶೆಟ್ಟಿಯವರು ನುಡಿದರು. ಅವರು ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯವರು ಆಗಸ್ಟ್ 10ರ ಶನಿವಾರ ಪೊವಾಯಿ ಹೀರಾನಂದಾನಿಯ ಮಂತ್ರ ಡೈನಿಂಗ್ ಬಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿದ್ದ ಆಟಿದ ಪೊರ್ಲು-ತಿರ್ಲ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಅಂದು ಬಂಟರ ಸಂಘದ ಗೌ.ಪ್ರ ಕಾರ್ಯದರ್ಶಿ ಡಾ.ಆರ್.ಕೆ ಶೆಟ್ಟಿ ಅವರ ಸಂಜೀವಿನಿ- ಆರೋಗ್ಯ ಶಿಕ್ಷಣ ಮತ್ತು ಕುಟುಂಬ ದತ್ತು ಸ್ವೀಕಾರದ ಯೋಜನೆಯನ್ನು ಉದ್ಘಾಟಿಸಲಾಯಿತು.




ನಾನು ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷನಾಗಿದ್ದ ಸಮಯದಲ್ಲಿ ಮನೆ ಮನೆಗೆ ಭೇಟಿ ಇತ್ತು ಬಡವರ ಕಷ್ಟವನ್ನು ಅರಿತು ಆ ಸಂದರ್ಭದಲ್ಲಿ ಕುಟುಂಬ ದತ್ತು ಸ್ವೀಕಾರದ ಯೋಜನೆಯನ್ನು ಆರಂಭಿಸಿದ್ದೆವು. ಅದರ ಮುಂದುವರಿದ ಭಾಗವೆಂಬಂತೆ ಈಗ ಒಂಬತ್ತು ಪ್ರಾದೇಶಿಕ ಸಮಿತಿಗಳಲ್ಲಿ ಇರುವ ಸಮಾಜ ಬಾಂಧವರ ಕಷ್ಟಕ್ಕೆ ಸ್ಪಂದಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಕಷ್ಟದಲ್ಲಿ ಇರುವವರಿಗೆ ಯಥಾ ಸಾಧ್ಯ
ಆರೋಗ್ಯ, ಶಿಕ್ಷಣದ ಖರ್ಚು ವೆಚ್ಚಗಳನ್ನು ಭರಿಸುವುದರೊಂದಿಗೆ ಕುಟುಂಬ ದತ್ತು ಸ್ವೀಕಾರ ದಂತಹ ಕಾರ್ಯವನ್ನು ಮಾಡಬೇಕೆಂಬ ಇಚ್ಛೆಯಿಂದ ಈ ಯೋಜನೆಗೆ ಚಾಲನೆ ನೀಡಿದ್ದೇವೆ. ಇನ್ನು ಮುಂದೆ ಇದಕ್ಕೆ ನಿರ್ದಿಷ್ಟವಾದ ರೂಪುರೇಷೆಗಳನ್ನು ನೀಡಬೇಕಾಗಿದೆ. ಎಲ್ಲರ ಸಲಹೆ ಸೂಚನೆಗಳೊಂದಿಗೆ ಒಂದು ಉತ್ತಮ ಯೋಜನೆಯಾಗಿ ರೂಪಗೊಳ್ಳಬೇಕು ಎಂಬ ಅಭಿಲಾಷೆ ಇದೆ. ಇದಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದು ಬಂಟರ ಸಂಘದ ಗೌ. ಪ್ರ ಡಾ. ಆರ್. ಕೆ ಶೆಟ್ಟಿಯವರು ಅಭಿಪ್ರಾಯ ಪಟ್ಟರು.
ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆಯಾಗಿರುವ ಚಿತ್ರಾ. ಅರ್ .ಶೆಟ್ಟಿಯವರು ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯಲ್ಲಿ ಪ್ರತಿಭಾವಂತರು ಇದ್ದಾರೆ. ಹಿಂದಿನಿಂದಲೂ ಇಲ್ಲಿ ಒಳ್ಳೊಳ್ಳೆಯ ಸಮಾಜಪರ ಕೆಲಸಗಳು ನಡೆಯುತ್ತಾ ಬಂದಿದೆ. ಬಂಟರ ಸಂಘದಲ್ಲಿ ಇರುವ ದೊಡ್ಡ ಹುದ್ದೆಗಳನ್ನು ಅಲಂಕರಿಸಿದವರು, ಪದಾಧಿಕಾರಿಗಳು ಹೆಚ್ಚಿನವರು ಅಂಧೇರಿ- ಬಾಂದ್ರಾ ಪ್ರಾದೇಶಿಕ ಸಮಿತಿಯವರು ಎನ್ನುವುದು ಹೆಮ್ಮೆಯ ಸಂಗತಿ. ಸರಳ ಸುಂದರವಾದ ಇಂದಿನ ಈ ಕಾರ್ಯಕ್ರಮ ತುಂಬಾ ಆಪ್ತವಾಗಿತ್ತು.ಇನ್ನು ಮುಂದೆಯೂ ಮಹಿಳಾ ವಿಭಾಗದಿಂದ ಉತ್ತಮ ಕಾರ್ಯಗಳು ನಡೆಯಲಿ ಎಂದು ಸಂತೋಷ ವ್ಯಕ್ತಪಡಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಬಂಟರ ಸಂಘ, ಮುಂಬಯಿ ಇದರ ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ, ಕೋಶಾಧಿಕಾರಿ ಸಿ.ಎ ರಮೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಉಪಾಧ್ಯಕ್ಷರಾದ ಯಶವಂತ್ ಶೆಟ್ಟಿ, ರಮೇಶ್ ರೈ, ಸಂಚಾಲಕರಾದ ರವೀಂದ್ರ ಶೆಟ್ಟಿ , ಕಾರ್ಯದರ್ಶಿ ತಾರಾನಾಥ್ ಶೆಟ್ಟಿ, ಕೋಶಾಧಿಕಾರಿ ಮೋಹನದಾಸ ಶೆಟ್ಟಿ, ಯುವ ವಿಭಾಗದ ಅದ್ವಿತ್ ಪೂಂಜಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದಂತಹ ಸಮೀಕ್ಷಾ ಶೋಭಾ ಅಮರನಾಥ ಶೆಟ್ಟಿ ಹಾಗೂ ತುಡರ್ ತುಳು ಚಿತ್ರದ ನಟ ಸಿದ್ದಾರ್ಥ್ ಶೆಟ್ಟಿ ಇವರನ್ನು ಗೌರವಿಸಲಾಯಿತು.
ಬಂಟರ ಸಂಘದ ಮಹಿಳಾ ವಿಭಾಗದ ಆಶಾ ಸುಧೀರ್ ಶೆಟ್ಟಿ , ವನಿತಾ ನೋಂಡ, ಸರೋಜಾ ಶೆಟ್ಟಿ, ವಜ್ರಾ ಪೂಂಜಾ ಇವರನ್ನು ಹಾಗೂ ಆಗಮಿಸಿದ ಅಹ್ವಾನಿತ ಅತಿಥಿಗಳಾದ ಉದ್ಯಮಿಗಳಾದ ರಾಜೇಂದ್ರ ಶೆಟ್ಟಿ, ಶಂಕರ್ ಶೆಟ್ಟಿ, ಎಸ್.ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಸೆಂಟ್ರಲ್ ಕಮಿಟಿಯ ಕಾರ್ಯಾಧ್ಯಕ್ಷರಾದ ಬಿ.ಆರ್ ಶೆಟ್ಟಿ, ಅಡ್ವೋಕೇಟ್ ಪ್ರಭಾಕರ ಶೆಟ್ಟಿ , ಅಡ್ವೋಕೇಟ್ ಆರ್.ಜಿ.ಶೆಟ್ಟಿ ಇವರನ್ನು,
ಇತರ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳನ್ನು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು , ಪದಾಧಿಕಾರಿಗಳನ್ನು, ಗೌರವಿಸಲಾಯಿತು.
ಸುಮಾರು 60ಕ್ಕಿಂತಲೂ ಹೆಚ್ಚು ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರು ಮಾಡಿದವರ ಹೆಸರಿನ ಯಾದಿಯನ್ನು ಪ್ರಮೀಳಾ ಶೆಟ್ಟಿಯವರು ವಾಚಿಸಿದರು.
ಮಹಿಳೆಯರಿಗಾಗಿ ಕೊಟ್ಟಿಗೆ ಕಟ್ಟುವ ಸ್ಪರ್ಧೆ ಹಾಗೂ ಹೂ ಕಟ್ಟುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಹೂ ಕಟ್ಟುವ ಸ್ಪರ್ಧೆಯಲ್ಲಿ ಅನಿತಾ ಯು ಶೆಟ್ಟಿ(ಪ್ರಥಮ) ಪ್ರಶಾಂತಿ ದಿವಾಕರ ಶೆಟ್ಟಿ(ದ್ವಿತೀಯ) ಹಾಗೂ ಅನಿತಾ.ಎಸ್ ಶೆಟ್ಟಿ(ತೃತೀಯ) ವಿಜೇತರಾದರು.ಕೊಟ್ಟಿಗೆ ಕಟ್ಟುವ ಸ್ಪರ್ಧೆಯಲ್ಲಿ ವೃಕ್ಷಾ ಭಂಡಾರಿ( ಪ್ರಥಮ)ಉಷಾ ಶೆಟ್ಟಿ(ದ್ವಿತೀಯ) ಅರುಣ ಶೆಟ್ಟಿ (ತೃತೀಯ) ಬಹುಮಾನಗಳನ್ನು ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಮರೆತು ಹೋಗುತ್ತಿರುವ ಹಳೆಯ ಸಂಗತಿಗಳನ್ನು ನೆನಪಿಸುವಂತಹ ವಿವಿಧ ಸ್ಪರ್ಧೆಗಳು, ಪ್ರಶ್ನೋತ್ತರ, ಒಗಟುಗಳು, ಗಾದೆಗಳು ಮೊದಲಾದ ಸ್ಪರ್ಧೆಗಳನ್ನು ಸಮಿತಿಯ ಸದಸ್ಯರಿಗಾಗಿ ಆಯೋಜಿಸಲಾಗಿದ್ದು ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.
ವಿವಿಧ ಖಾದ್ಯಗಳನ್ನು ತಯಾರಿಸಿದ ಎಲ್ಲರಿಗೂ ಕಿರು ಕೊಡುಗೆಗಳನ್ನು ನೀಡಿ ಕೃತಜ್ಞತೆ ಸಲ್ಲಿಸಲಾಯಿತು.
ಭವ್ಯ ಶೆಟ್ಟಿ ಭಾಷಣ ಸ್ಪರ್ಧೆಯನ್ನು ಹಾಗೂ ವೃಕ್ಷಾ ಭಂಡಾರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು. ಮಕ್ಕಳ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಅನ್ವಿ ಶೆಟ್ಟಿ, ದ್ವಿತೀಯ ವಂಶ್ ಶೆಟ್ಟಿ ಹಾಗೂ ತೃತೀಯ ಬಹುಮಾನ ತನಿಷ್ ಶೆಟ್ಟಿ ಪಡೆದುಕೊಂಡರು. ತೀರ್ಪುಗಾರರಾಗಿ ನಂದಳಿಕೆ ನಾರಾಯಣ ಶೆಟ್ಟಿ, ಶ್ರೀಮತಿ ಸುಜಾತ ಗುಣಪಾಲ ಶೆಟ್ಟಿ ಇವರು ಸಹಕರಿಸಿದರು.
ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಕಾರ್ಯಕ್ರಮ ನಿರೂಪಿಸಿದರು.
ಪುಷ್ಪಲತಾ ಸೂರಜ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಮಮತಾ ಶೆಟ್ಟಿ ಪ್ರಾರ್ಥನೆಗೈದರು.
ಮಂತ್ರ ಡೈನಿಂಗ್ ನ ಮಾಲಕರಾದ ಅಪ್ಪಣ್ಣ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ ಪದಾಧಿಕಾರಿಗಳಾದ ಲಕ್ಷ್ಮಣ್ ಶೆಟ್ಟಿ ಸಂತೋಷ ಶೆಟ್ಟಿ, ಶರತ್ ಶೆಟ್ಟಿ,ಮನೀಷ್ ಶೆಟ್ಟಿ, ಪ್ರಶಾಂತಿ ಶೆಟ್ಟಿ, ಅನಿತಾ ಯು ಶೆಟ್ಟಿ, ಪ್ರೇಮಾ ಶೆಟ್ಟಿ, ವಜ್ರಾ ಪೂಂಜಾ, ಸುಲತಾ ಶೆಟ್ಟಿ, ಸುಚಿತ್ರಾ ಶೆಟ್ಟಿ, ಸವಿತಾ ಶೆಟ್ಟಿ, ಆಶಾ ಶೆಟ್ಟಿ, ಅರುಣ ಶೆಟ್ಟಿ, ಅಂಧೇರಿ ಬಾಂದ್ರಾ ಸಮಿತಿಯ ಸರ್ವ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
———
ಯುವ ಸಮುದಾಯಕ್ಕೆ ನಮ್ಮ ಆಚಾರ-ವಿಚಾರ ಸಂಸ್ಕೃತಿ ಸಂಸ್ಕಾರವನ್ನು ತಿಳಿಸುವ ಅಗತ್ಯವಿದೆ: ಸೂರಜ್ ಶೆಟ್ಟಿ
ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಸೂರಜ್ ಶೆಟ್ಟಿ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ನಮ್ಮ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಗೆ ಬೇಗನೆ ಒಗ್ಗಿಕೊಳ್ಳುತ್ತಾರೆ. ಅವರಿಗೆ ಈ ವಯಸ್ಸಿನಲ್ಲಿ ನಮ್ಮ ಆಚಾರ-ವಿಚಾರ ಸಂಸ್ಕೃತಿ ಸಂಸ್ಕಾರವನ್ನು ತಿಳಿಸುವ ಅಗತ್ಯವಿದೆ ಎಂದು ಅರಿತು ನಮ್ಮ ಸಮಿತಿಯ ಮಕ್ಕಳಿಗೆ ವಿಶೇಷವಾದಂತಹ ಆದ್ಯತೆಯನ್ನು ಇಂದಿನ ಕಾರ್ಯಕ್ರಮದಲ್ಲಿ ನೀಡಲಾಗಿದೆ. ಅದೇ ರೀತಿ ಡಾ. ಆರ್. ಕೆ ಶೆಟ್ಟಿ ಅವರ ಸಂಜೀವಿನಿ ಈ ವೇದಿಕೆಯಲ್ಲಿ ಲೋಕಾರ್ಪಣೆಗೊಂಡಿದೆ. ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳುವಂತಾಗಬೇಕು. ನಮ್ಮ ಸಮಿತಿಯಿಂದ ಎಲ್ಲ ರೀತಿಯ ಸಹಕಾರ ಇರುತ್ತದೆ ಎಂದರು.
———–
ಆಟಿ ತಿಂಗಳ ವಿಶೇಷತೆಯನ್ನು ತಿಳಿಸುವಂತಹ ಪ್ರಯತ್ನವನ್ನು ಮಾಡಿದ್ದೇವೆ: ಶೋಭಾ ಅಮರ ಶೆಟ್ಟಿ
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಇಂದು ನಮ್ಮ ಮಹಿಳಾ ವಿಭಾಗದಿಂದ ಆಯೋಜಿಸಿದಂತಹ ಆಟಿದ ಪೊರ್ಲು-ತಿರ್ಲ್ ಕಾರ್ಯಕ್ರಮ ನಮ್ಮ ಪಾಲಿಗೆ ವಿಶೇಷವಾಗಿದೆ. ಯಾಕೆಂದರೆ ನಾವು ಈ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಆಟಿ ತಿಂಗಳ ವಿಶೇಷತೆಯನ್ನು ತಿಳಿಸುವಂತಹ ಒಂದು ಪ್ರಯತ್ನವನ್ನು ಮಾಡಿದ್ದೇವೆ. ಮಕ್ಕಳಿಗಾಗಿ ಭಾಷಣ ಸ್ಪರ್ಧೆ, ತುಳುನಾಡಿನ ವಿವಿಧ ವಸ್ತುಗಳನ್ನು ಪರಿಚಯಿಸುವ ಕೆಲಸವನ್ನು ಮಾಡಿದ್ದೇವೆ. ಇದು ನಮ್ಮ ಸಮಿತಿಯ ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಇದೇ ವೇದಿಕೆಯಲ್ಲಿ ಡಾ. ಆರ್. ಕೆ ಶೆಟ್ಟಿಯವರ ಕಲ್ಪನೆಯ ಸಂಜೀವಿನಿ ಕಾರ್ಯಕ್ರಮ ಉದ್ಘಾಟನೆಗೊಂಡಿರುವುದು ನಮಗೆ ಅತ್ಯಂತ ಸಂತೋಷವನ್ನು ನೀಡಿದೆ ಎಂದು ನುಡಿದರು.