ನಮ್ಮ ಯಕ್ಷಗಾನ ಸಾಂಸ್ಕೃತಿಕ ಜಗತ್ತು ವಿಶಾಲವಾದದ್ದು : ಪಾಂಡು ಎಲ್ ಶೆಟ್ಟಿ
ಚಿತ್ರ, ವರದಿ: ರಮೇಶ್ ಉದ್ಯಾವರ
ವಸಯಿ, ಆ 18: ಕಲಾವಿದರ ಬದುಕಿಗೆ ಬಣ್ಣ ನೀಡುವ ಆಧ್ಯಾತ್ಮಿಕ ಗುರುಗಳ ಆದರ್ಶ ಅನುಭವಗಳು ನಮ್ಮ ಸಿರಿವಂತ ಭಾಷೆ ಕಲೆ ಸಂಸ್ಕೃತಿಗೆ ಮಾನವರನ್ನು ರೂಪಿಸುವ ಶಕ್ತಿ ಇದೆ. ನಮ್ಮ ಯಕ್ಷಗಾನ ಸಾಂಸ್ಕೃತಿಕ ಜಗತ್ತು ವಿಶಾಲವಾದದ್ದು. ಇತ್ತೀಚಿನ ದಿನಗಳಲ್ಲಿ ಯಕ್ಷಗಾನವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಹಲವಾರು ಸಂಘಟನೆಗಳು ಸಾಂಸ್ಕೃತಿಕ ಚೌಕಟ್ಟಿಗೆ ಹೊಸ ಆಯಾಮ ಹೊಳಪು ನೀಡುತ್ತಿದೆ. ಯಕ್ಷಗಾನ ಪುರಾಣ ಪ್ರಸಂಗಗಳು ಧರ್ಮ ಜಾಗೃತಿಯ ಜೊತೆಗೆ ಶಾಂತಿ ಸದ್ಭಾವನೆಯ ಮೈತ್ರಿ ಸಾಮರಸ್ಯವನ್ನು ಬೆಳೆಸುತ್ತದೆ ಎಂದು ಶ್ರೀ ಕಟೀಲು ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ಪಾಂಡು ಎಲ್. ಶೆಟ್ಟಿ ಅಭಿಪ್ರಾಯಪಟ್ಟರು.
ವಸಾಯಿ ಪಶ್ಚಿಮದ ದತ್ತಾನಿ ಮಾಲ್ ನ ಆರ್ನಸ್ವರ್ಣ ಬ್ಯಾಂಕ್ವೆಟ್ ಹಾಲ್ ವಿನೀತ್ ಕೆಮಿಕಲ್ಸ್ ವೇದಿಕೆಯಲ್ಲಿ ಜರುಗಿದ ಶ್ರೀ ಕಟೀಲು ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ಆ. 17 ರಂದು ಆಯೋಜಿಸಿದ್ದ ಆರನೇ ವಾರ್ಷಿಕೋತ್ಸವ ಯಕ್ಷ ಸಂಭ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಸ್ಕಾರ ಸಂಪ್ರದಾಯದಲ್ಲಿ ಕಲಿತ ಕಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸಲು ಸಾಧ್ಯ. ದಿ. ಶ್ರೀಧರ್ ಶೆಟ್ಟಿ ಅವರ ಯಕ್ಷಗಾನ ಕಲೆಯ ಅಭಿಮಾನ ಮಕ್ಕಳಲ್ಲಿ ಆತ್ಮ ಪ್ರಜ್ಞೆ ಜಾಗೃತಿ ಮೂಡಿಸಿದೆ. ಜೊತೆಗೆ ದಾನಿಗಳ ಧನಾತ್ಮಕ ಕೊಡುಗೆಯ ಮೂಲಕ ಮಕ್ಕಳಲ್ಲಿ ಕಲೆಯ ಆತ್ಮ ಅಭಿಮಾನ ಬೆಳೆಯಲು ಸಹಕಾರಿಯಾಗಿದ್ದಾರೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಉಪಸ್ಥಿತರಿದ್ದ ನಲ್ಲಸೋಪಾರ ಸ್ವಾಮಿ ಅಯ್ಯಪ್ಪ ಭಕ್ತವೃಂದದ ಗೌರವಾಧ್ಯಕ್ಷ ಜಗನಾಥ ರೈ ಪರಿಸರ ಪರಂಪರೆ ಸಂಸ್ಕಾರ ಪ್ರಭಾವಶಾಲಿಯಾಗಿದ್ದರೆ ಪ್ರತಿಭೆಗಳಲ್ಲಿ ಪಾಂಡಿತ್ಯ ಮೆರೆಯಲು ಸಾಧ್ಯ. ಪರಿಶ್ರಮ ಹೋರಾಟ ತ್ಯಾಗ ಬದ್ದತೆಗಳಿಂದ ಓರ್ವ ರಚನಾತ್ಮಕ ಕಲಾವಿದನಾಗಲು ಸಾಧ್ಯ. ಸಾಂಸ್ಕೃತಿಯ ಬದುಕಿನ ಸಕಾರಾತ್ಮಕ ಚಿಂತನೆಗಳು ಪಾಲಕರು ಪೋಷಕರು ಪ್ರೋತ್ಸಾಹ ನೀಡಬೇಕು ಎಂದರು.
ಗಣ್ಯರ ಅನಿಸಿಕೆ : ಯಕ್ಷಗಾನ ಕಲೆ ಇಂದು ಬರೆ ಕರ್ನಾಟಕ ಕರಾವಳಿಯ ಕಲೆಯಾಗಿ ಉಳಿಯದೆ ಸಾಧನೆ ಮನ್ನಣೆಯ ಕಲೆಯಾಗಿ ಪರಿವರ್ತನೆಗೊಂಡಿದೆ. ಸಾಂಸ್ಕೃತಿಕ ಜೊತೆಗೆ ಮಕ್ಕಳು ಕ್ರೀಡಾ ಮನೋಭಾವವನ್ನು ಹೆಚ್ಚು ಬೆಳೆಸಿಕೊಳ್ಳಬೇಕು – ಮೋಹನ್ ವಿ ಶೆಟ್ಟಿ, ಉದ್ಯಮಿ , ಕಲಾಪೋಷಕರು
ಆಂಗ್ಲ ಮಾಧ್ಯಮ ಮಕ್ಕಳಿಂದ ಪರಿಪೂರ್ಣವಾಗಿ ಯಕ್ಷಗಾನ ಕಲೆಗೆ ಕಲಾಶ್ರೀಮಂತಿಕೆಯ ಸ್ಪರ್ಷ ನೀಡಿದ್ದಾರೆ. ಕ್ರೀಡಾ ಮತ್ತು ಕಲಾಕ್ಷೇತ್ರದಲ್ಲೂ ಹೆಸರುವಾಸಿಯಾದ ಮಕ್ಕಳಿಗೆ ನಗರ ಪಾಲಿಕೆಯ ವತಿಯಿಂದ ಗೌರವಧನ ನೀಡಲಾಗುವುದು.- ಪ್ರವೀಣ್ ಸಿ ಶೆಟ್ಟಿ ಮಾಜಿ ಮೇಯರ್, ವಿವಿಸಿಎಂಸಿ.
ಮಕ್ಕಳಲ್ಲಿ ಯಕ್ಷಗಾನ ಕಲೆಯ ಪ್ರಬುದ್ಧತೆ ಬೆಳೆದರೆ ಭವಿಷ್ಯದಲ್ಲಿ ಮಹಾನಗರದಲ್ಲಿ ಯಕ್ಷಗಾನ ಕಲೆ ಶಾಶ್ವತವಾಗಿ ಉಳಿಯಲಿದೆ. – ಅನಿತಾ ರೈ, ರಾಷ್ಟ್ರೀಯ ಕ್ರೀಡಾಪಟು
ಕಲಾ ಪೋಷಕರ ಸಹಕಾರದಿಂದ ಯಕ್ಷಕಲಾ ವೇದಿಕೆಯಿಂದ ಇನ್ನಷ್ಟು ಯಕ್ಷಕಲಾ ಪ್ರತಿಭೆಗಳು ಅರಳಲಿ – ಸರೇಶ್ ಎಂ ಶೆಟ್ಟಿ ಕೊಪ್ಪ, ಉದ್ಯಮಿ, ಕಲಾಪೋಷಕರು
ಯಕ್ಷಗಾನ ಕಲೆಗೆ ಕಲಾಪೋಷಕರ ಧನಾತ್ಮಕ ಸಹಕಾರ ಅಗತ್ಯ. ಮುಗ್ದ ಮಕ್ಕಳ ಮನಸ್ಸಿನಲ್ಲಿ ಕಲೆ ಶಾಶ್ವತವಾಗಿ ಉಳಿದರೆ ಅದು ಪರಂಪರೆಯಾಗಿ ಬೆಳೆಯುವುದು. – ದೇವೆಂದ್ರ ಬುನ್ನನ್ ಅಧ್ಯಕ್ಷರು ವಸಯಿ ಕರ್ನಾಟಕ ಸಂಘ.
ಸಂಸ್ಥೆಯ ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ, ದಿ. ಕರ್ನಿರೆ ಶ್ರೀಧರ ಶೆಟ್ಟಿ ಅವರ ಸ್ಮರಣಾರ್ಥಕವಾಗಿ ಕಾರ್ಯಕ್ರಮವನ್ನು ಮಕ್ಕಳಿಗಾಗಿ ಆಯೋಜಿಸುತ್ತಿದ್ದೇವೆ. ಮಕ್ಕಳು ಸಾಂಸ್ಕೃತಿಕ ಕಲೆಯನ್ನು ಮೈಗೂಡಿಸಿಕೊಂಡು ಬದುಕಿನಲ್ಲಿ ಸುಸಂಸ್ಕೃತ ನಾಗರಿಕನಾಗಿ ಬೆಳೆಯಲು ಇಂತಹ ಅವಕಾಶವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು. ಅತಿಥಿ ಗಣ್ಯರನ್ನು ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಗೌರವಿಸಿದರು. ಪ್ರಶಸ್ತಿ ಪ್ರದಾನ : ಕರ್ನಿರೆ ಶ್ರೀಧರ ಶೆಟ್ಟಿ ಸ್ಮರಣಾರ್ಥ ಯಕ್ಷಕಲಾ ರತ್ನ ಪ್ರಶಸ್ತಿಯನ್ನು ಮಹಾನಗರದ ಖ್ಯಾತ ಚಂಡೆ ಮದ್ದಳೆ ವಾದಕ ಇನ್ನ ಆನಂದ ಶೆಟ್ಟಿಯವರಿಗೆ ಮತ್ತು ಯಕ್ಷಕಲಾ ಪೋಷಕ ಪ್ರಶಸ್ತಿ ಯನ್ನು ಯಕ್ಷಗಾನ ಕಲಾವಿದೆ ಪೂರ್ಣಿಮಾ ಅನೂಪ್ ಶೆಟ್ಟಿ ಯವರಿಗೆ ಗಣ್ಯರರು ಹಾಗು ದಿ. ಕರ್ನಿರೆ ಶ್ರೀಧರ ಶೆಟ್ಟಿ ಯವರ ಧರ್ಮಪತ್ನಿ ಉಷಾ ಶ್ರೀಧರ ಶೆಟ್ಟಿಯವರ ಉಪಸ್ಥಿತಿಯಲ್ಲಿ ಪೇಟ ಶಾಲು ತೊಡಿಸಿ ಸನ್ಮಾನ ಪತ್ರ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.. ಅಲ್ಲದೇ ಬಾಲ ಕಲಾವಿದರನ್ನು ಯಕ್ಷಕಲಾ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. ಜೊತೆಗೆ ಯಕ್ಷಗುರು ಕಟೀಲು ಸದಾನಂದ ಶೆಟ್ಟಿ ಯವರನ್ನು ಬಾಲಕಲಾವಿದರರೊಂದಿಗೆ ಗೌರವಿಸಲಾಯಿತು. ಲೇಖಕಿ ಸುರೇಖಾ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ದೇವೇಂದ್ರ ಬುನ್ನನ್, ಕಾರ್ಯದರ್ಶಿ ಅನಿತಾ ಡಿ. ಬುನ್ನನ್, ಕೋಶಾಧಿಕಾರಿ ಭಾರತಿ ಎಚ್. ಶೆಟ್ಟಿ, ಸಲಹೆಗಾರ ಓ.ಪಿ. ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಕುಸುಮಾ ಬಿ. ಸುವರ್ಣ, ಜತೆ ಕೋಶಾಧಿಕಾರಿ ಅಮಿತಾ ಎಸ್. ಶೆಟ್ಟಿ, ಸಂಚಾಲಕರಾದ ಹರೀಶ್ ಎನ್. ಶೆಟ್ಟಿ,, ಸದಸ್ಯೆಯರಾದ ಪೂರ್ಣಿಮಾ ಎ. ಶೆಟ್ಟಿ, ಲತಾ ಸಿ. ಆಚಾರ್ಯ, ಸುರೇಖಾ ಎಚ್. ಶೆಟ್ಟಿ, ಮಮತಾ ಶೆಟ್ಟಿ ಸಹಕರಿಸಿದರು. ವಸಾಯಿ ಕರ್ನಾಟಕ ಸಂಘದ ಉಪಾಧ್ಯಕ್ಷ ಕರ್ನೂರು ಶಂಕರ ಆಳ್ವ, ಗೌರವ ಕಾರ್ಯದರ್ಶಿ ರವೀಂದ್ರ ಕೆ. ಶೆಟ್ಟಿ, ಕೋಶಾಧಿಕಾರಿ ವಿಜಯ ಎಂ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಕೆ. ಪ್ರಮೀಳಾ ಎನ್. ಅಮೀನ್, ಯಶೋಧರ ವಿ ಕೋಟ್ಯಾನ್, ಕರ್ನಾಟಕ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶೆಟ್ಟಿ, ನಿರ್ದೇಶಕರಾದ ಮುಕುಂದ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.