
ದೈವಾನುಗ್ರಹದಿಂದ ಸಾಧನೆ ಸಾಧ್ಯ – ವಿರಾರ್ ಶಂಕರ್ ಶೆಟ್ಟಿ.
ಮುಂಬಯಿ , 22: ಶ್ರೀ ರಾಜನ್ ದೈವ ಶ್ರೀ ಧೂಮವತಿ ದೈವಸ್ಥಾನ ಬಳ್ಕುಂಜೆ ಅಭಿವೃದ್ಧಿ ಸಮಿತಿ ಮುಂಬಯಿ ಸಮಿತಿಯ 15 ನೇ ವಾರ್ಷಿಕ ಮಹಾಸಭೆಯು ದಹಿಸರ್ ಪೂರ್ವದ ಹೋಟೆಲ್ ಸನ್ ಶೈನ್ ಇನ್ ಸಭಾಗೃಹದಲ್ಲಿ ಸಮಿತಿಯ ಗೌರವ ಅಧ್ಯಕ್ಷರಾದ ವಿರಾರ್ ಶಂಕರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತ್ತು.
ಬಳ್ಕುಂಜೆಯಲ್ಲಿ ದೇವಸ್ಥಾನ ಇಲ್ಲ , ದೈವಸ್ಥಾನ ಮಾತ್ರ ಇರುವುದು . ನಾವು ಯಾವುದೇ ಕಾರ್ಯ ಮಾಡುವ ಮೊದಲು ನಮ್ಮೂರಿನ ಧೂಮವತಿಗೆ ಕರ ಮುಗಿದು ಕಾರ್ಯಾರಂಭ ಮಾಡುತ್ತೇವೆ. ನಮ್ಮ ಪ್ರತಿಯೊಂದು ಕೆಲಸ ಕಾರ್ಯವನ್ನು ಯಶಸ್ವಿಯಾಗಿ ನಾವು ನಂಬಿದ ಜುಮಾದಿ (ಧೂಮವತಿ) ನೆರವೇರಿಸುತ್ತಿದ್ದಾನೆ , ಅಲ್ಲದೇ ನಮ್ಮೂರನ್ನು ರಕ್ಷಿಸಿಕೊಂಡು ಬರುತ್ತಿದ್ದಾನೆ . ಹಾಗಾಗಿ ದೈವದ ಅನುಗ್ರಹ ಇಲ್ಲದೆ ನಮ್ಮ ಬದುಕಿನಲ್ಲಿ ಯಾವುದೇ ಶ್ರೇಯಸ್ಸು ಹೊಂದಲು ಸಾದ್ಯವಿಲ್ಲ. ಊರಿನಲ್ಲಿ ಜರಗುವ ದೈವದ ನೇಮೋತ್ಸವಕ್ಕೆ , ಯಾವುದೇ ಶುಭಕಾರ್ಯಕ್ಕೆ ಕಮಿಟಿಯ ಸದಸ್ಯರು ಮಾತ್ರ ಭಾಗವಹಿಸಿದರೆ ಸಾಲದು , ಮುಂಬಯಿಯಲ್ಲಿ ನೆಲೆಸಿರುವ ಊರಿನ ಪ್ರತಿಯೊಬ್ಬ ಸದಸ್ಯರು ಮತ್ತು ಮಕ್ಕಳು ಭಾಗವಹಿಸಿ , ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯತೆ ಇದೆ . ನಾವು ಉನ್ನತ ಮಟ್ಟಕ್ಕೆ ಏರಿದಂತೆ , ದೈವಸ್ಥಾನದ ಸಾನಿಧ್ಯವನ್ನು ಅಭಿವೃದ್ಧಿಗೊಳಿಸಲು ಪ್ರತಿಯೊಬ್ಬ ಭಕ್ತನ ಮನದಲ್ಲಿ ಮೂಡಿ ಬರಲಿ ಎಂದು ಹೇಳಿದರು.

ಅಧ್ಯಕ್ಷರಾದ ಡಾ. ಕೃಷ್ಣ ಕುಮಾರ್ ಶೆಟ್ಟಿ , ವ್ಯವಸ್ಥಾಪಕ ಸಮಿತಿಯ ಗೌರವ ಅಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ , ಉಪಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ , ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ಎಸ್. ಶೆಟ್ಟಿ , ಗೌರವ ಕೋಶಾಧಿಕಾರಿ ಹರೀಶ್ ಎಸ್. ಶೆಟ್ಟಿ , ಜೊತೆ ಕಾರ್ಯದರ್ಶಿ ಪ್ರಶಾಂತ್ ಅಜಿಲ , ಜೊತೆ ಕೋಶಾಧಿಕಾರಿ ಕರುಣಾಕರ್ ಎಸ್. ಶೆಟ್ಟಿ ಹಾಗೂ ಕೊಟ್ನಾಯಗುತ್ತು ಬಾಲಕೃಷ್ಣ ಹೆಗ್ಡೆ ವೇದಿಕೆಯಲ್ಲಿ ಆಸೀನರಾಗಿದ್ದರು.
ಜೊತೆ ಕೋಶಾಧಿಕಾರಿ ಕರುಣಾಕರ್ ಎಸ್. ಶೆಟ್ಟಿ ಗತ ವಾರ್ಷಿಕ ಮಹಾಸಭೆಯ ವರದಿ ಮತ್ತು ಗತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ ದೈವಸ್ಥಾನದ ಮುಂದೆ ರೂಪಾಯಿ ಹನ್ನೊಂದು ಲಕ್ಷ ಐವತ್ತು ಸಾವಿರ ವೆಚ್ಚದಲ್ಲಿ ಚಪ್ಪರ ಹಾಕುವ ಬಗ್ಗೆ ಸಭಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಪ್ರಸ್ತಾಪವನ್ನು ಮಾಡಿದರು , ಇದಕ್ಕೆ ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ದೈವಸ್ಥಾನಕ್ಕೆ ಸಂಬಂಧಿಸಿದ ಏಳು ಮನೆತನದವರು ಮೊದಲಿಗೆ ರೂಪಾಯಿ ಒಂದೊಂದು ಲಕ್ಷ ನೀಡುವುದಾಗಿ ತಿಳಿಸಿದರು. ಚಪ್ಪರ ನಿರ್ಮಾಣಕ್ಕೆ ವಿರಾರ್ ಶಂಕರ್ ಶೆಟ್ಟಿ ಸಭೆಯಲ್ಲಿ ರೂಪಾಯಿ ಒಂದು ಲಕ್ಷ ನೀಡಿದರು. ಈ ಎಲ್ಲಾ ಕೆಲಸದ ಉಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಜೊತೆ ಕೋಶಾಧಿಕಾರಿ ಕರುಣಾಕರ್ ಎಸ್. ಶೆಟ್ಟಿಯವರನ್ನು ಆಯ್ಕೆ ಮಾಡಲು ಸಭಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿಯವರ ಸೂಚನೆಗೆ ಸಭೆಯು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಜೊತೆ ಕೋಶಾಧಿಕಾರಿಯಾಗಿ ರಾಜೇಂದ್ರ ಶೆಟ್ಟಿಯವರನ್ನು ನೇಮಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕ ಬಳ್ಕುಂಜೆ ಮಿತ್ತಗುತ್ತು ಪ್ರಶಾಂತ್ ಸಂಜೀವ ಅಜಿಲಯವರನ್ನು ಸನ್ಮಾನಿಸಲಾಯಿತು.

ಪ್ರಾರಂಭದಲ್ಲಿ ಮುಂಬಯಿ ಪ್ರಸಿದ್ಧ ಗಾಯಕ ವಿಜಯ ಶೆಟ್ಟಿ ಪ್ರಾರ್ಥನೆಯೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ವಾರ್ಷಿಕ ಮಹಾ ಸಭೆಗೆ ಚಾಲನೆ ನೀಡಿದರು , ಮುಂಬಯಿ ಸಮಿತಿಯ ಅಧ್ಯಕ್ಷ ಡಾ. ಕೃಷ್ಣ ಕುಮಾರ್ ಶೆಟ್ಟಿ ಸ್ವಾಗತಿಸಿದರು. ವ್ಯವಸ್ಥಾಪಕ ಸಮಿತಿಯ ಗೌರವ ಅಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಸಭೆಯನ್ನು ನಿರೂಪಿಸಿ , ವಂದಿಸಿದರು. ಬಳ್ಕುಂಜೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಊಟೋಪಹಾರ ವ್ಯವಸ್ಥೆ ಮಾಡಲಾಗಿತ್ತು.