
ಸನ್ನಿಧಾನದ ಧಾರ್ಮಿಕ ಕಾರ್ಯಕ್ರಮಗಳ ಯಶಸ್ವಿಗೆ ಭಕ್ತಾಧಿಗಳೇ ಶ್ರೀರಕ್ಷೆ : ಪ್ರದೀಪ್ ಸಿ ಶೆಟ್ಟಿ
ಚಿತ್ರ,ವರದಿ: ರಮೇಶ್ ಉದ್ಯಾವರ
ಶ್ರೀ ಮಹಿಷ ಮರ್ದಿನಿ ದೇವಸ್ಥಾನ ಟ್ರಸ್ಟ್ ಜಯರಾಜ್ ನಗರ ಬೊರಿವಿಲಿ ಪಶ್ಚಿಮ ಇಂದು ಮಹಿಳೆಯರಿಗಾಗಿ ವರಲಕ್ಷ್ಮಿ ವೃತ ಮಹಾಪೂಜೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಜರುಗಿತು.
ಈ ಸಂದರ್ಭದಲ್ಲಿ ಸಧ್ಭಕ್ತರನ್ನು ಉದ್ದೇಶಿಸಿ ಮಾತನಾಡಿದ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಣಂಜಾರು ಕೊಳಕ್ಕೆ ಬೈಲು ಪ್ರದೀಪ್ ಸಿ ಶೆಟ್ಟಿ ಬದಲಾವಣೆಯ ಕಾಲ ಘಟ್ಟದಲ್ಲಿ ನಾವು ನಮ್ಮ ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿದ್ದೇವೆ ಎನ್ನುವುದಕ್ಕೆ ಇಂದಿನ ಶ್ರೀ ವರ ಮಹಾಲಕ್ಷ್ಮೀಯ ಪೂಜೆಯ ಸೇವಾರ್ಥಿಗಳೇ ಸಾಕ್ಷಿಯಾಗಿದೆ. ಸನ್ನಿಧಾನದ ಪ್ರತಿಯೊಂದು ಧಾರ್ಮಿಕ, ಅಧ್ಯಾತ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿಗೆ ಭಕ್ತಾದಿಗಳ ಸಂಕಲ್ಪವೇ ಶ್ರೀರಕ್ಷೆಯಾಗಿದೆ. ಸಂಪತ್ತು, ಅದೃಷ್ಟ, ಸಮೃದ್ದಿ ಆರೋಗ್ಯ ದಯಪಾಲಿಸುವ ಶ್ರೀಲಕ್ಷ್ಮಿನಾರಾಯಣ ತಮಗೆಲ್ಲ ಮೈ ಮನಸ್ಸಿಗೆ ಶಾಂತಿ ಆರೋಗ್ಯ ನೀಡಲಿ ಎಂದರು.



ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ಪುರೋಹಿತರಾದ ದೇವರಾಜ್ ನೆಲ್ಲಿಕಾರು ಮಹಾಲಕ್ಷ್ಮಿ ವ್ರತದ ಬಗ್ಗೆ ಮಾತನಾಡಿದ ಅವರು ಲೌಕಿಕ ಮತ್ತು ಅಲೌಕಿಕ ಬದುಕಿನಲ್ಲಿ ತನು ಮನ ಮನೆ ಶುದ್ಧೀಕರಣಗೊಳ್ಳಲು ಭಕ್ತಿ ಮತ್ತು ಅಂತರಂಗದ ಭಕ್ತಿಯ ಸಂಪತ್ತನ್ನು ಹೆಚ್ಚಿಸಬೇಕು. ಆವಾಗ ನಮ್ಮ ಮನೋ ಇಚ್ಛೆಯ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆಯು ಸಾರ್ಥಕವಾಗುತ್ತದೆ ಎಂದು ಹೇಳಿದರು. ಬಳಿಕ ಪುರೋಹಿತರಿಂದ ಮಹಾಮಂಗಳಾರತಿ ನೆರವೇರಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆರಾಧ್ಯ ದೇವತೆ ಮಹಿಷಮರ್ದಿನಿ ದೇವಿಗೆ ವಿಶೇಷ ಪೂಜೆ ನೆರವೇರಿತು. ಸೇವಾರ್ಥಿಗಳಿಗೆ ವಿಶೇಷ ಪೂಜಾ ಪ್ರಸಾದ ವಿತರಿಸಲಾಯಿತು ಮಹಿಳೆಯರಿಂದ ಮಹಾಲಕ್ಷ್ಮಿ ಸ್ತೋತ್ರ ಭಜನೆ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮದಲ್ಲಿ ದೇವಸ್ಥಾನದ ವಂಶಸ್ಥ ಸ್ಥಾಪಕ ಮೊಕ್ತೇಸರರಾದ ಶ್ರೀಮತಿ ಮತ್ತು ಶ್ರೀ ಕಲ್ಲಮುಂಡ್ಕೂರು ಹರಿಯಾಳಗುತ್ತು ಜಯರಾಜ್ ಶ್ರೀಧರ್ ಶೆಟ್ಟಿ ದಂಪತಿಗಳು ಮೊಕ್ತೇಸರರಾದ ಜಯಪಾಲಿ ಅಶೋಕ್ ಶೆಟ್ಟಿ ದೇವಸ್ಥಾನದ ವಿಶ್ವಸ್ಥ ಕುಟುಂಬದ ಸದಸ್ಯರು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಬೆಳ್ಮಣ್ಣು ವೆಂಕಟರಮಣ ತಂತ್ರಿ ಅರ್ಚಕವೃಂದ ಮತ್ತು ಮಹಿಷಮರ್ದಿನಿ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ದಾನಿಗಳು, ದೇವಸ್ಥಾನದ ಹಿತೈಷಿಗಳು ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಭಕ್ತಾಧಿಗಳು ತೀರ್ಥ ಪ್ರಸಾದ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.