April 2, 2025
ಸುದ್ದಿ

ಮುಡಾ ಹಗರಣ, ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ: ಹೈಕೋರ್ಟ್ ಮಹತ್ವದ ತೀರ್ಪು


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಕರ್ನಾಟಕ ಹೈಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ. ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

ಸಿಎಂ ವಿರುದ್ಧ ಖಾಸಗಿ ದೂರುದಾರರೇ ಅನುಮತಿ ಕೋರಬಹುದು. ಸಂವಿಧಾನದ ವಿಧಿ ‘17 ಎ’ ಅಡಿ ಅನುಮತಿ ಕೋರಿದ್ದು ಸರಿಯಾಗಿದೆ. ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಸರಿಯಾಗಿದೆ. ರಾಜ್ಯಪಾಲರು ವಿವೇಚನೆ ಬಳಸಿದ್ದಾರೆ. ‘17 ಎ’ ಅಡಿಯ ಆದೇಶ ಸಮರ್ಪಕವಾಗಿದೆ ಎಂದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಸಿಎಂ ಸಿದ್ದರಾಮಯ್ಯ ಅರ್ಜಿಯನ್ನು ವಜಾಗೊಳಿಸಿದರು.

ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್​​, ಸಿಎಂ ಕುಟುಂಬಸ್ಥರು ಫಲಾನುಭವಿಗಳಾಗಿದ್ದಾರೆ. ಹೀಗಾಗಿ ರಾಜ್ಯಪಾಲರ ಕ್ರಮ ಸೂಕ್ತವಾಗಿದೆ. ಸಿಎಂ ಎತ್ತಿದ್ದ ಎಲ್ಲಾ ಕಾನೂನಿನ ಪ್ರಶ್ನೆಗಳನ್ನು ತಿರಸ್ಕರಿಸಲಾಗಿದೆ ಎಂದಿದೆ.

ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ಬಗ್ಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ 6 ದಿನಗಳ ಸುದೀರ್ಘ ವಾದ ಮಂಡನೆ ಆಲಿಸಿತ್ತು. ಸಿಎಂ ಸಿದ್ದರಾಮಯ್ಯ ಪರ ವಕೀಲರು, ಸಾಲಿಸಿಟರ್ ಜನರಲ್ ಹಾಗೂ ದೂರುದಾರರ ಪರ ವಕೀಲರು ಸುದೀರ್ಘ ವಾದ ಮಂಡನೆ ಮಾಡಿದ್ದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರವೇನಿತ್ತೆಂಬುದನ್ನು ರಾಜ್ಯಪಾಲರು ತಿಳಿಸಿಲ್ಲ ಎಂದು ಸಿಎಂ ಪರ ವಕೀಲರು ವಾದ ಮಂಡನೆ ಮಾಡಿದ್ದರು. ಯಾವುದಾದರೂ ಕಡತಕ್ಕೆ ಸಿಎಂ ಸಹಿ ಹಾಕಿದ್ದಾರೆಯೇ ಎಂದು ಹೇಳಿಲ್ಲ. ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ವಿಶೇಷ ಸಂದರ್ಭದಲ್ಲಷ್ಟೇ ಬಳಸಬೇಕು. ಹಾಗೆ ಬಳಸಿದಾಗ ಅದಕ್ಕೆ ಕಾರಣಗಳನ್ನು ನೀಡಬೇಕು. ಆದರೆ ಪ್ರಕ್ರಿಯೆ ಪಾಲಿಸದೇ ತರಾತುರಿಯಲ್ಲಿ ಆದೇಶ ನೀಡಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ಅಡಿಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಅನುಮತಿ ನೀಡಬಹುದೇ ಹೊರತು, ಖಾಸಗಿ ವ್ಯಕ್ತಿಗಳಿಗೆ ನೀಡುವಂತಿಲ್ಲ. ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ಒಪ್ಪಬೇಕಿತ್ತು. ಏಕೆ ಒಪ್ಪಿಲ್ಲವೆಂಬುದಕ್ಕೆ ರಾಜ್ಯಪಾಲರು ಸೂಕ್ತ ಕಾರಣ ನೀಡಿಲ್ಲ. ಬಿಜೆಪಿ, ಜೆಡಿಎಸ್ ನಾಯಕ ವಿರುದ್ಧದ ದೂರಿಗೆ ಅನುಮತಿ ನೀಡದೇ ಸಿದ್ದರಾಮಯ್ಯ ವಿರುದ್ಧ ಮಾತ್ರ ಅನುಮತಿ ನೀಡಿ ತಾರತಮ್ಯ ನೀತಿ ಅನುಸರಿಸಿದ್ದಾರೆ. ದೂರುದಾರರ ಹಿನ್ನೆಲೆ ಪರಿಗಣಿಸದೇ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಕಾನೂನುಬಾಹಿರ. ವಿಪಕ್ಷಗಳ ಸರ್ಕಾರಗಳನ್ನು ರಾಜ್ಯಪಾಲರ ಮೂಲಕ ಅಸ್ಥಿರಗೊಳಿಸಲಾಗುತ್ತಿದೆ. ಹೀಗೆಂದು ಸಿಎಂ ಪರ ವಕೀಲರಾದ ಅಬಿಷೇಕ್ ಮನು ಸಿಂಘ್ವಿ ವಾದ ಮಂಡನೆ ಮಾಡಿದ್ದರು.

ಸಿಎಂ ಪರ ವಕೀಲರ ವಾದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿವಾದ ಮಂಡಿಸಿದ್ದರು. ರಾಜ್ಯಪಾಲರು ಮೇಲ್ನೋಟಕ್ಕೆ ಅಪರಾಧದ ಅಂಶಗಳಿವೆಯೇ ಎಂಬುದನ್ನಷ್ಟೇ ಸೆಕ್ಷನ್ 17 ಎ ಅಡಿಯಲ್ಲಿ ನೋಡಬೇಕು. ರಾಜ್ಯಪಾಲರು ತೀರ್ಪು ನೀಡಿಲ್ಲ ಮತ್ತು ನೀಡುತ್ತಿಲ್ಲ. ತನಿಖೆಗೆ ಅನುಮತಿಯಷ್ಟೇ ನೀಡುತ್ತಿದ್ದಾರೆ. ಹೀಗಾಗಿ ಅವರು ವಿವರವಾದ ಕಾರಣಗಳನ್ನು ಕೊಡಬೇಕಿಲ್ಲ. ಕೊಟ್ಟರೆ ತನಿಖಾಧಿಕಾರಿ ಮೇಲೆ ಪ್ರಭಾವ ಬೀರಿದಂತೆ ಆಗುವ ಸಾಧ್ಯತೆ ಇರುತ್ತದೆ ಎಂದು ತುಷಾರ್ ಮೆಹ್ತಾ ಪ್ರತಿವಾದ ಮಂಡಿಸಿದ್ದರು.

Related posts

ಪೆ 4:   ಮಲಾಡ್ ಶ್ರೀ   ಮಹತೋಭಾರ ಶನೀಶ್ವರ ದೇವಸ್ಥಾನ  ದಸುವರ್ಣ ಸಂಭ್ರಮದ  ಕಾರ್ಯಕ್ರಮ ಸಮಾಲೋಚನಾ ಸಭೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಡಿ. ಆರ್. ರಾಜು ನಿಧನಕ್ಕೆ ಶ್ರದ್ದಾಂಜಲಿ ಸಭೆ

Mumbai News Desk

ಫರಂಗಿಪೇಟೆ : ಬಾಲಕ ನಾಪತ್ತೆ ಪ್ರಕರಣ, ನಾಳೆ (ಶನಿವಾರ ) ಫರಂಗಿಪೇಟೆ ಬಂದ್

Mumbai News Desk

ಮೊದಲ ಮಳೆಗೆ ತತ್ತರಿಸಿದ ಮುಂಬಯಿ, ತಲ್ಲಣಗೊಂಡ ಜನತೆ,ಅಪಾರ ಹಾನಿ.

Mumbai News Desk

ಚಿತ್ರರಂಗದ ಮಿನುಗು ತಾರೆ ರೀಟಾ ಆರ್. ಅಂಚನ್ ವಿಧಿವಶ

Mumbai News Desk

ಯಕ್ಷಗಾನ ತಾಳಮದ್ದಳೆ ಸಪ್ತಾಹ ಉದ್ಘಾಟನೆ –  ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಪ್ರದಾನ

Mumbai News Desk