
ಅಖಿಲ ಕರ್ನಾಟಕ ಜೈನ ಸಂಘ, ಮುಂಬಯಿ 29-09-2024ರಂದು ಗೋರೆಗಾವ್ ನ 1008 ಭಗವಾನ್ ಶ್ರೀ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಆಯೋಜಿಸಿದ್ದ “ಕರ್ಮ ದಹನಾ” ಆರಾಧನಾ ಮಹೋತ್ಸವವು ಅತಿ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಶಾಂತಿದೂತ, ಪುಷ್ಪಗಿರಿ ಪ್ರಣೇತ, ವಾತ್ಸಲ್ಯ ದಿವಾಕರ, ಗಣಾಧಿಪತಿ ಪರಮ ಪೂಜ್ಯ 108 ಗಣಾಚಾರ್ಯ ಶ್ರೀ ಪುಷ್ಪದಂತ ಸಾಗರ ಮಹಾರಾಜರ ಪರಮ ಶಿಷ್ಯರಾದ ಕರ್ನಾಟಕ ಗೌರವಾನ್ವಿತ ದಿಗಂಬರ ಜೈನ ಕ್ರಾಂತಿಕಾರಿ ಸಂತ, ಧರ್ಮಪ್ರಭಾವನಾ ಸಿಂಧು ಪರಮ ಪೂಜ್ಯ 108 ಮುನಿಶ್ರೀ ಪ್ರಸಂಗ ಸಾಗರಜೀ ಮಹಾರಾಜರ ದಿವ್ಯ ಸಾನಿದ್ದ್ಯ ಸಾನಿಧ್ಯ ಹಾಗೂ ಮಾರ್ಗದಶನದಲ್ಲಿ ಮತ್ತು ಜಗದ್ಗುರು ಪರಮ ಪೂಜ್ಯ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಮೂಡಬಿದಿರೆ ಇವರ ದಿವ್ಯ ಉಪಸ್ಥಿತಿಯಲ್ಲಿ ಆತ್ಮ ಕಲ್ಯಾಣ ಮತ್ತು ಕರ್ಮ ನಿರ್ಜರಕ್ಕಾಗಿ ನಡೆದ ಈ ವಿಶೇಷ ಆರಾಧನಾ ಮಹೋತ್ಸವದಲ್ಲಿ ಅಖಿಲಕರ್ನಾಟಕ ಜೈನ ಸಂಘ ಮುಂಬಯಿ ಇದರ ಸದಸ್ಯರೊಂದಿಗೆ ಮುಂಬಯಿ ಮತ್ತು ದಕ್ಷಿಣ ಕನ್ನಡದ ಅನೇಕ ಶ್ರಾವಕ ಬಂಧುಗಳು ಭಾಗವಹಿಸಿ ಧರ್ಮಲಾಭವನ್ನು ಪಡೆದುಕೊಂಡರು.
ಆರಂಭದಲ್ಲಿ ೧೦೦೮ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಸುಂದರ ಪ್ರತಿಮೆಯನ್ನು ಗುರುಗಳು ಮತ್ತು ಜಿನವಾಣಿಯೊಂದಿಗೆ ಚೆಂಡೆ, ವಾದ್ಯ, ಕಹಳೆಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆಯಲ್ಲಿ ತಂದು ತೋರಣ ಮುಹೂರ್ತ ಹಾಗೂ ಧರ್ಮ ಧ್ವಜಾರೋಹಣ ನೆರವೇರಿಸಿ ಪಾಂಡುಕಶಿಲೆಯಲ್ಲಿ ವಿರಾಜಿಸಲಾಯಿತು. ಅಖಿಲ ಕರ್ನಾಟಕ ಜೈನ ಸಂಘದ ಪದಾಧಿಕಾರಿಗಳು ಗೋರೆಗಾವ್ ಜಿನಮಂದಿರದ ಟ್ರಸ್ಟೀಗಳೊಡನೆ ದೀಪ ಪ್ರಜ್ವಲನೆ ನಡೆಸಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತದರ ೧೦೦೮ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಸಂಘದ ಸದಸ್ಯರುಗಳಾದ ಶ್ರೀಯುತರುಗಳಾದ ಉದಯ ಅತಿಕಾರಿ, ವೈ ಆರ್ ಕೋರಿ, ಪವನಂಜಯ ಬಲ್ಲಾಳ್, ಅಜಿತ್ ಜೈನ್, ರಘುವೀರ್ ಹೆಗ್ಡೆ, ಮನೀಶ್ ಹೆಗ್ಡೆ, ಪದ್ಮರಾಜ್ ಎಸ್ ಜೈನ್, ಸನತ್ ಕುಮಾರ್ ಜೈನ್ , ರಾಜೇಂದ್ರ ಹೆಗ್ಡೆ ಇವರು ತಮ್ಮ ತಮ್ಮ ಪರಿವಾರದೊಂದಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ ನೆರವೇರಿಸಿದರು. ಶ್ರೀ ರಾಜವರ್ಮ ಜೈನ್ ಮತ್ತು ಚೇತನ್ ಶಾಹ ಭಗವಾನರಿಗೆ ಪುಷ್ಪವೃಷ್ಟಿಗೈದರೆ ಶ್ರೀ ಪದ್ಮಜಾ ಹೆಗ್ಡೆ ಯವರು ತಮ್ಮ ಪರಿವಾರದೊಂದಿಗೆ ಶಾಂತಿಧಾರೆಯನ್ನು ಮಾಡುವ ಸೌಭಾಗ್ಯವನ್ನು ಪಡೆದರು. ಸಂಘದ ಅಧ್ಯಕ್ಷರಾದ ಶ್ರೀ ಉದಯ್ ಅತಿಕಾರಿ ಮತ್ತು ಅವರ ಧರ್ಮ ಪತ್ನಿ ಶ್ರೀಮತಿ ಕಾಂಚನ ಅತಿಕಾರಿಯವರು ಸೌದ್ಧರ್ಮ ಇಂದ್ರ ಹಾಗೂ ಶಚಿದೇವಿಯಾಗಿ ಪೂಜಾ ಕಾರ್ಯಕ್ರಮಾವನ್ನು ನೆರವೇರಿಸಿದರು. ತದನಂತರ ಪರಮ ಪೂಜ್ಯ 108 ಮುನಿಶ್ರೀ ಪ್ರಸಂಗ ಸಾಗರಜೀ ಮಹಾರಾಜರ ದಿವ್ಯ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಮತ್ತು ಜಗದ್ಗುರು ಪರಮ ಪೂಜ್ಯ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸುಮಾರು 135 ಶ್ರಾವಕರು ಕರ್ಮದಹನ ಆರಾಧನಾ ಮಹೋತ್ಸವದ ಪೂಜಾ ವಿಧಿ ವಿಧಾನಗಳನ್ನು ಶ್ರೀ ಭರತ್ ರಾಜ್ ಇಂದ್ರ ಕಾರ್ಕಳ, ಪ್ರಶಾಂತ ಇಂದ್ರ ವರಂಗ, ಅಭಿಜಿನ್ ಇಂದ್ರ ಕರ್ವಾಶೆ ಮತ್ತು ಪದ್ಮಪ್ರಸಾದ್ ಇಂದ್ರ ಕುಪ್ಪೆಪದವು ಇವರ ಪೌರೋಹಿತ್ಯದಲ್ಲಿ ನೆರವೇರಿಸಿದರು. ಈ ಸಂಧರ್ಭದಲ್ಲಿ ಮುನಿಶ್ರೀಯರಿಗೆ ಮತ್ತು ಭಟ್ಟಾರಕ ಸ್ವಾಮೀಜಿಯವರಿಗೆ ಸಂಘದ ಸದಸ್ಯರು ಪಾದಪೂಜೆ ನಡೆಸಿ ಭಕ್ತಿ ನಮನಗಳನ್ನು ಸಲ್ಲಿಸಿದರು. ಹೊರನಾಡಿನ ಶ್ರೀಮತಿ ಜಯಶ್ರೀ ಧರಣೇಂದ್ರ ಜೈನ್ರವರ ಮತ್ತು ಬಳಗದವರ ಸುಮಧುರ ಸಂಗೀತಾಷ್ಟಕ ಸಂಪೂರ್ಣ ವಿಧಾನಾ ಮಹೋತ್ಸವಕ್ಕೆ ಮೆರಗನ್ನು ನೀಡಿತ್ತು.
















ಅಪರಾಹ್ನ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಪರಮ ಪೂಜ್ಯ ೧೦೮ ಮುನಿಶ್ರೀ ಪ್ರಸಂಗ ಸಾಗರಜೀ ಮಹಾರಾಜರು ತಮ್ಮ ಆಶೀರ್ವಚನದಲ್ಲಿ ಕರ್ಮ ದಹನ ಆರಾಧನೆಯಿಂದ ನಮ್ಮ ಕರ್ಮದ ನಿರ್ಜರ ಹೇಗೆ ಆಗುತ್ತದೆ ಎಂದು ವಿವರಣೆಯನ್ನು ನೀಡಿ ಮಕ್ಕಳಿಗೆ ಯಾವರೀತಿಯಲ್ಲಿ ನಾವು ಲೌಕಿಕ ವಿದ್ಯಾಭಾಸವನ್ನು ನೀಡುತ್ತೇವೆಯೋ ಅದೇರೀತಿಯಲ್ಲಿ ಅವರ ಕೈಯಲ್ಲಿ ಜಿನವಾಣಿಯನ್ನು ನೀಡಿ ಅವರಿಗೆ ಧಾರ್ಮಿಕ ಶಿಕ್ಷಣವನ್ನು ನೀಡಬೇಕು. ಆಗ ಮಾತ್ರ ಅವರು ಜೀವನದಲ್ಲಿ ಸುಸಂಸ್ಕ್ರತರಾಗಿರಲು ಸಾಧ್ಯ ಎಂದು ನೆರೆದಿದ್ದ ಶ್ರಾವಕರನ್ನು ಆಶೀರ್ವದಿಸಿದರು. ಜಗದ್ಗುರು ಪರಮ ಪೂಜ್ಯ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ತಮ್ಮ ಪ್ರವಚನದಲ್ಲಿ ಸಮಾಜಕ್ಕೆ ಸಾಧು ಸಂತರ ಸಾನಿಧ್ಯದ ಮಹತ್ವವನ್ನು ತಿಳಿಸುತ್ತಾ ಪೂಜಾ ಕಾರ್ಯಕ್ರಮಗಲ್ಲಿ ತೋರಣ ಮುಹೂರ್ತದ ಮಹತ್ವದ ಬಗ್ಗೆ ವಿವರಣೆಯನ್ನು ನೀಡಿದರು. ಈ ಸಂದರ್ಭದಲ್ಲಿ ಆಚಾರ್ಯ ಶ್ರೀ ಉಮಾಸ್ವಾಮಿ ವಿರಚಿತ “ತತ್ವಾರ್ಥ ಸೂತ್ರ”ದ ಮೇಲೆ ೧೦೮ ಆಚಾರ್ಯ ಶ್ರೀ ಪುಲಕ್ ಸಾಗರಜೀ ಮಹಾರಾಜರ ಪ್ರವಚನ “ಸರ್ವಜ್ಞ ವಾಣಿ” ಇದರ ಪ್ರೊ. ಡಾ. ಜೀವಂಧರ ಹೊತಪೇಟಿ ಇವರಿಂದ ಅನುವಾದಿಸಲ್ಪಟ್ಟ ಕನ್ನಡಾನುವಾದ ಗ್ರಂಥ ಮತ್ತು ನಮೋಸ್ತು ಶಾಸನ ಸೇವಾ ಸಮಿತಿಯ ಪ್ರಕಾಶನದ ಆಚಾರ್ಯ ಶ್ರೀ ಪೂಜ್ಯಪಾದ ಸ್ವಾಮಿ ವಿರಚಿತ “ಸಮಾಧಿ ತಂತ್ರ” ಗ್ರಂಥದ ಮೇಲೆ ೧೦೮ ಆಚಾರ್ಯ ಶ್ರೀ ವಿಶುದ್ಧ ಸಾಗರಜೀ ಮಹಾರಾಜರ ಪ್ರಚನಸಾರವುಳ್ಳ ಗ್ರಂಥ “ಸಮಾಧಿ ತಂತ್ರ- ಅನುಶೀಲನೆ ” ಇದರ ಡಾ. ಎಸ್. ಪಿ. ವಿದ್ಯಾಕುಮಾರ್ ಇವರಿಂದ ಅನುವಾದಿಸಲ್ಪಟ್ಟ ಕನ್ನಡಾನುವಾದ ಗ್ರಂಥಗಳ ಮರುಬಿಡುಗಡೆ ಮಾಡಲಾಯಿತು.. ತದನಂತರ ಮುಂಬಯಿಯ ಶ್ರೀಯುತ ಚೇತನ್ ಶಹಾ, ಮಾಯಾಂಕ್ ಜೈನ್, ಡಾ. ಎಸ್. ಕೆ. ಜೈನ್, ಮಯೂರ್ ಜೈನ್ ,ಶ್ರೀಮತಿ ಶಕುಂತಲ ಜೈನ್ ಬೆಳುವಾಯಿ, ಶ್ರೀ ಭರತ್ ರಾಜ್ ಇಂದ್ರ ಕಾರ್ಕಳ, ಶ್ರೀಮತಿ ಜಯಶ್ರೀ ಮತ್ತು ಶ್ರೀ ಧರಣೇಂದ್ರ ಜೈನ್ ಹೊರನಾಡು, ಶ್ರೀಯುತರುಗಳಾದ ಪ್ರೇಮ್ ಕುಮಾರ್ ಜೈನ್ ಹೊಸ್ಮಾರು, ಸುಧೀರ್ ಜೈನ್ ವೇಣೂರು, ನಾಭಿರಾಜ್ ಮುದ್ಯ ವರಂಗ, ಧನಂಜಯ ಜೈನ್ ಅಳಿಯೂರು ಮಾಂಟ್ರಾಡಿ, ಅಖಿಲ ಕರ್ನಾಟಕ ಜೈನ್ ಸಂಘ ಮುಂಬಯಿ ಇದರ ಸದಸ್ಯರಾದ ಶ್ರೀಯುತ ಅಜಿತ್ ಜೈನ್ , ರತ್ನಾಕರ್ ಅಜ್ರಿ, ರಾಜವರ್ಮ ಜೈನ್, ಜೀವನ್ ಹೆಗ್ಡೆ, ಸನತ್ ಕುಮಾರ್ ಜೈನ್ ಮತ್ತು ವೇಣೂರಿನ ಬಾಹುಬಲಿ ಯುವಜನ ಸಂಘದ ಸದಸ್ಯರನ್ನು ಸತ್ಕರಿಸಲಾಯಿತು. ಪರಮ ಪೂಜ್ಯ 108 ಮುನಿಶ್ರೀ ಪ್ರಸಂಗ ಸಾಗರಜೀ ಮಹಾರಾಜರು ಅಖಿಲ ಕರ್ನಾಟಕ ಜೈನ ಸಂಘ, ಮುಂಬಯಿ ಇದರ ಚಟುವಟಿಕೆಗಳನ್ನು ಶ್ಲಾಘಿಸಿ ಪ್ರಶಂಸಾ ಪತ್ರವನ್ನು ನೀಡಿ ಆಶೀರ್ವದಿಸಿದರು ಮತ್ತು ಮುಡಾರು ಶ್ರೀ ಭರತ್ ರಾಜ್ ಜೈನ್ ಅವರಿಗೆ ” ಜಿನವಾಣಿ ಪುತ್ರ ” ಎಂಬ ಬಿರುದನ್ನು ನೀಡಿ ಗೌರವಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ಉದಯ ಅತಿಕಾರಿ ಯವರು ಪರಮ ಪೂಜ್ಯ ಮುನಿಶ್ರೀ ಯವರ ಸಾನಿಧ್ಯ ಮತ್ತು ಪರಮ ಪೂಜ್ಯ ಸ್ವಾಮೀಜಿ ಯವರ ಸಾನಿಧ್ಯದಲ್ಲಿ ಈ ಆರಾಧನೆ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು..
ಸಭಾ ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಪ್ರತ್ಯುಷಾ ಬಲ್ಲಾಳ್ ಮಂಗಳಾಚರಣೆಯನ್ನು ಹಾಡಿ ಪ್ರಾರ್ಥಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಪವನಂಜಯ ಬಲ್ಲಾಳ್ ಸ್ವಾಗತಿಸಿದರು ಮತ್ತು ಜತೆ ಕಾರ್ಯದರ್ಶಿ ರಘುವೀರ್ ಹೆಗ್ಡೆಯವರು ಧನ್ಯವಾದಗೈದರು. ಧಾರ್ಮಿಕ ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಭರತ್ ರಾಜ್ ಜೈನ್ ಮುಡಾರು ಇವರು ನೆರವೇರಿಸಿದರು.