April 1, 2025
ಲೇಖನ

ಉಡುಪಿ ಜಿಲ್ಲೆಯಲ್ಲಿದೆ ಮಹಿಷಾಸುರ ದೇವಾಲಯ,ಮಹಿಷನಿಗೆ ನಡೆಯುತ್ತಿದೆ ಪೂಜೆ

ಕರ್ನಾಟಕದ ಕರಾವಳಿ ಜಿಲ್ಲೆಗಳು ರಾಜ್ಯದಲ್ಲಿಯೇ ವಿಶಿಷ್ಟ ಆಚರಣೆ, ಪದ್ಧತಿ, ಸಂಸ್ಕೃತಿಯ ಮೂಲಕ ಗುರುತಿಸಿಕೊಂಡಂಥ ಪ್ರದೇಶಗಳು. ದೈವ ದೇವರುಗಳ ಆಗರವಾಗಿರುವ ಕರಾವಳಿಯಲ್ಲಿ ಇಂದಿಗೂ ನಾಗನನ್ನು ಜೀವಂತ ದೈವ ಎಂದೇ ಪೂಜಿಸುವ ಪರಿಪಾಠವಿದೆ. ಪ್ರಕೃತಿಯನ್ನು ಪೂಜಿಸುವ ಪರಿಪಾಠವಿರುವ ಕರಾವಳಿಯಲ್ಲಿ ಮಹಿಷನಿಗೂ ಪೂಜೆ ನಡೆಯುತ್ತಿದೆ ಎಂದರೆ ನೀವು ನಂಬಲೇಬೇಕು! ಕಳೆದು ಕಳೆದ ಕೆಲವು ವರ್ಷಗಳಿಂದ ಮಹಿಷ ದಸರಾ ಎನ್ನುವ ವಿಚಾರ ರಾಜ್ಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಒಂದು ಪಂಥ ಮಹಿಷ ಅಸುರ, ಅವನನ್ನು ಪೂಜಿಸಬಾರದು ಎಂದರೆ, ಇನ್ನೊಂದು ಪಂಥ ಮಹಿಷ ಎಂದರೆ ನಮ್ಮ ರಾಜ, ಅವನನ್ನ ನಾವು ಪೂಜಿಸುತ್ತೇವೆ ಎಂದು ಪ್ರತಿಪಾದಿಸುತ್ತಿದೆ. ಈ ಮಧ್ಯೆ, ಉಡುಪಿ ಜಿಲ್ಲೆಯ ಐತಿಹಾಸಿಕ ಪಟ್ಟಣ ಬಾರ್ಕೂರಿನಲ್ಲಿ ಮಹಿಷಾಸುರನ ಹೆಸರಿನ ದೇವಾಲಯವಿದೆ. ಅದಕ್ಕೆ ನಿತ್ಯವೂ ಪೂಜೆ ನಡೆಯುತ್ತಿದೆ.

ಇಲ್ಲಿ ಮಹಿಷ ಎನ್ನುವ ಹೆಸರಿನ ಶಿವಗಣಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಶಿವನ ಪ್ರಥಮ ಗಣ ಎಂದು ಇಲ್ಲಿ ನಿತ್ಯವೂ ಮಹಿಷನಿಗೆ ಪೂಜೆಯ ಜೊತೆ ವರ್ಷಕ್ಕೆ ಒಮ್ಮೆ ತೊಟ್ಟಿಲು ಸೇವೆ ನಡೆಯುತ್ತದೆ.
ಇನ್ನು ಕರಾವಳಿ ಕರ್ನಾಟಕ ಈ ಹಿಂದೆ ಮಹಿಷ ಮಂಡಲ ಎಂದು ಗುರುತಿಸಿಕೊಳ್ಳುತ್ತಿದ್ದು, ಇಲ್ಲಿಗೆ ಮಹೀಷ ಎನ್ನುವ ರಾಜನಿದ್ದ ಎನ್ನುವ ಪ್ರತೀತಿಯೂ ಇದೆ. ಮಹಿ ಅಂದರೆ ಭೂಮಿ, ಈಶ ಎಂದರೆ ಒಡೆಯ ಅರ್ಥಾತ್ ಚಕ್ರವರ್ತಿ ಎನ್ನುವ ಕಾರಣಕ್ಕೆ ಇಲ್ಲಿ ಮಹಿಷನಿಗೆ ನಿತ್ಯ ಪೂಜೆ ನಡೆಯುತ್ತದೆ ಎನ್ನುವುದು ಇತಿಹಾಸ ತಜ್ಞರ ಮಾತು.

ಕ್ರಿಸ್ತ ಶಕ ನಾಲ್ಕನೇ ಶತಮಾನಕ್ಕೆ ಸೇರಿದ ಇಲ್ಲಿನ ಮಹಿಷನ ವಿಗ್ರಹದಲ್ಲಿ ಕೋಣದ ತಲೆ ಮಾನವನ ದೇಹದಲ್ಲಿ ಇತ್ತು ಎನ್ನಲಾಗಿದೆ. ಆನಂತರ 1971ರಲ್ಲಿ ದೇವಳದ ಜೀರ್ಣೋದ್ಧಾರ ಸಂದರ್ಭ ಬೇರೆಯ ವಿಗ್ರಹ ತಂದು ಪ್ರತಿಷ್ಠಾಪನೆ ಮಾಡಿ ಕೋಣದ ತಲೆಯ ಮಾನವ ದೇಹದ ಮತ್ತೊಂದು ವಿಗ್ರಹವನ್ನು ಕೂಡ ಪ್ರತಿಷ್ಠಾಪಿಸಿ ಇದರ ಜೊತೆಗೆ ಉಳಿದ ಉಳಿದ ದೈವಗಳನ್ನು ತಂದು ಪ್ರತಿಷ್ಠಾಪಿಸಿ ಇಲ್ಲಿ ನಿತ್ಯ ಪೂಜೆ ಮಾಡಲಾಗುತ್ತಿದೆ ಎಂದು ಇತಿಹಾಸ ತಜ್ಞ ಮುರುಗೇಶ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕರಾವಳಿ ತನ್ನ ವಿಶಿಷ್ಟ ಸಂಪ್ರದಾಯಗಳ ಮೂಲಕ ರಾಜ್ಯದಲ್ಲಿ ಗುರುತಿಸಿಕೊಂಡಿದೆ ಎನ್ನುವುದಕ್ಕೆ ಈ ದೇವಾಲಯ ಒಂದು ಸ್ಪಷ್ಟ ಉದಾಹರಣೆ. ನಂಬಿಕೆ ಮತ್ತು ಭಕ್ತಿಗಿಂಥ ದೊಡ್ಡದು ಯಾವುದೂ ಇಲ್ಲ ಎನ್ನುವುದಕ್ಕೆ ಇಲ್ಲಿನ ಈ ದೇವಸ್ಥಾನವೇ ಸಾಕ್ಷಿ ಎಂದರೆ ತಪ್ಪಾಗಲಾರದು.

Related posts

ದೀಪಾವಳಿ …….ಬೆಳಕಿನೆಡೆಗೆ ಬದುಕು

Mumbai News Desk

ಬಲೀಂದ್ರ ದೇವರು ತಮ್ಮ ರಾಜ್ಯಕ್ಕೆ ತಾವೇ ಬಂದ್ರು ಹೊಲಿಯೇ‌ ಬಾ… ಕೂ…ಕೂ…ಕೂ….

Mumbai News Desk

ಮನೆ ಮನಗಳ ಬೆಳಗಿಸುವ ದೀಪಾವಳಿ

Mumbai News Desk

“ಜ್ಞಾನ ವಿಕಾಸ ಮಂಡಳದ ಮೆಹತಾ ಕಾಲೇಜಿನ ನಲ್ಲಿ ಕನ್ನಡ ನಾಟಕ ಚಾಮ ಚಲುವೆ ಮತ್ತು ಸೋಲಿಗರ ಬಾಲೆ ಯಶಸ್ವಿ ಪ್ರದರ್ಶನ.”

Mumbai News Desk

ಜನಪದ ಲೋಕದ ಕಲಾ ದಿಗ್ಗಜ – ಬಹುಮುಖ ಪ್ರತಿಭೆಯ ಗುರುಚರಣ್ ಪೊಲಿಪು

Mumbai News Desk

ಮೇರು ವ್ಯಕ್ತಿತ್ವದ ಸಾಧಕನ ಸಾಧನೆಯನ್ನು ತೆರೆದಿಟ್ಟ ಸುವರ್ಣಯುಗ

Mumbai News Desk