
ಪ್ರಸಿದ್ಧ ಪುಣ್ಯ ಕ್ಷೇತ್ರ ತಿರುಪತಿ ಮತ್ತು ಉಡುಪಿ – ಕುಂದಾಪುರ ನಡುವೆ ನೇರ ರೈಲು ಸೇವೆ ಬೇಕು ಅನ್ನುವ ಈ ಭಾಗದ ಜನರ ಬಹು ದಿನದ ಬೇಡಿಕೆ ಈಡೇರಿದ್ದು, ಉಡುಪಿ – ಕುಂದಾಪುರದಿಂದ ತಿರುಪತಿಗೆ ನೇರ ರೈಲು ಸೇವೆಗೆ ಭಾರತೀಯ ರೈಲ್ವೆ ಸಮ್ಮತಿ ಸೂಚಿಸಿದೆ. ತಿರುಪತಿ ಮತ್ತು ಕುಂದಾಪುರ ಉಡುಪಿ ನಡುವೆ ನೇರ ರೈಲು ಸೇವೆ ಬೇಕು ಎನ್ನುವ ದಶಕಗಳ ಕನಸು ಈ ಮೂಲಕ ಉಡುಪಿ ಸಂಸದರ ಅವಿರತ ಪ್ರಯತ್ನದಿಂದ ನನಸಾಗಿದೆ.
ಹೈದರಾಬಾದಿನ ಕಾಚಿಗುಡದಿಂದ ಹೊರಟು ತಿರುಪತಿಯ ರೇಣುಗುಂಟ ನಿಲ್ದಾಣದ ಮೂಲಕ ಮಂಗಳೂರಿಗೆ ಬರುತ್ತಿದ್ದ ಕಾಚಿಗುಡ – ಮಂಗಳೂರು ವಾರಕ್ಕೆರಡು ದಿನದ ರೈಲನ್ನು ಉಡುಪಿ ಕುಂದಾಪುರದ ಮೂಲಕ ಮುರುಡೇಶ್ವರಕ್ಕೆ ವಿಸ್ತರಣೆ ಮಾಡುವ ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರ ಕೋರಿಕೆಯನ್ನು ಮನ್ನಿಸಿ ಭಾರತೀಯ ರೈಲ್ವೆ ಈ ಆದೇಶ ಹೊರಡಿಸಿದೆ.
ವಿಜಯದಶಮಿಯ ಶುಭ ಸಂದರ್ಭದಲ್ಲಿ ಕರಾವಳಿಗೆ ರೈಲು ಘೋಷಣೆ ಆಗಬೇಕು ಎನ್ನುವ ಕಾರಣಕ್ಕೆ ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ದಿಲ್ಲಿಯ ಅಧಿಕಾರಿಗಳ ಜೊತೆ ಸತತವಾಗಿ ಸಭೆ ನಡೆಸಿದ ಪರಿಣಾಮ
ರೈಲಿನ ವಿಸ್ತರಣೆಗೆ ಅನುಮತಿ ದೊರಕಿದೆ. ಕರಾವಳಿಯಲ್ಲಿ ತಿರುಪತಿಗೆ ತಿಮ್ಮಪನ ದರ್ಶನ ಮಾಡುವ ಅಸಂಖ್ಯಾತ ಭಕ್ತ ವರ್ಗವಿದ್ದು ರೈಲಿನ ಅಲಭ್ಯತೆಯ ಕಾರಣದಿಂದ ಬಸ್ ಅಥವಾ ಬೆಂಗಳೂರು ತಲಪಿ ಅಲ್ಲಿಂದ ಪ್ರಯಾಣ ಮುಂದುವರಿಸುವ ಪರಿಸ್ಥಿತಿ ಇತ್ತು.
ಸ್ವಾತಂತ್ರ್ಯದ 76 ವರ್ಷಗಳ ಬಳಿಕ ದಕ್ಷಿಣದ ಎಲ್ಲಾ ರಾಜ್ಯಗಳ ಜೊತೆ ಕೊಂಕಣ ರೈಲ್ವೆ ಮೂಲಕ ರೈಲು ಸಂಪರ್ಕ ಲಭಿಸಿದ್ದು ಪುಣ್ಯಕ್ಷೇತ್ರ ತಿರುಪತಿಯನ್ನು ಉಡುಪಿ ಶ್ರೀ ಕೃಷ್ಣ, ಕೊಲ್ಲೂರು ಮೂಕಾಂಬಿಕಾ ದೇಗುಲದ ಮೂಲಕ ಮುರುಡೇಶ್ವರದವರೆಗೆ ನಾನಾ ಪುಣ್ಯ ಸ್ಥಳಗಳಿಗೆ ರೈಲು ಸಿಕ್ಕಂತಾಗಿದೆ ಎಂದು ಸಂಸದ ಕೊಟ್ಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಕಾಚಿಗುಡ – ಮಂಗಳೂರು (12789/12790) ಬುಧವಾರ ಮತ್ತು ಶನಿವಾರ ಮುರುಡೇಶ್ವರದಿಂದ ಮಧ್ಯಾಹ್ನ 3.20ಕ್ಕೆ ಹೊರಡಲಿದ್ದು ಕುಂದಾಪುರಕ್ಕೆ ಸಂಜೆ 4:40, ಮಂಗಳೂರು ರಾತ್ರಿ 8 ಗಂಟೆ, ಮರುದಿನ ಬೆಳಿಗ್ಗೆ 1145 ಗಂಟೆಗೆ ತಿರುಪತಿ ಬಳಿಯ ರೇಣಿಕುಂಟ, ಸಂಜೆ 6 ಗಂಟೆಗೆ ಕಾಚಿಗುಡ ತಲಪಲಿದೆ. ಬಳಿಕ ಮರಳಿ ಕಾಚಿಗುಡದಿಂದ ಬೆಳ್ಳಿಗೆ 6ಗಂಟೆಗೆ ಹೊರಡಲಿದ್ದು ರೇಣಿ ಗುಂಟಕ್ಕೆ ಸಂಜೆ 5:00 ಮಂಗಳೂರಿಗೆ ಮರುದಿನ ಬೆಳಿಗ್ಗೆ 9:30 ಕುಂದಾಪುರಕ್ಕೆ 11 59, ಹಾಗೂ ಮುರುಡೇಶ್ವರಕ್ಕೆ ಮಧ್ಯಾಹ್ನ 2 ಗಂಟೆಗೆ ತಲುಪಲಿದೆ.