ಮಹಾರಾಷ್ಟ್ರದ ರಾಜಧಾನಿಯಾದ ವಾಣಿಜ್ಯ ನಗರಿ ಮುಂಬೈಗೆ ಹೋಗುವ ಕಾರುಗಳು ಇನ್ಮುಂದೆ ಟೋಲ್ ಕಟ್ಟಬೇಕಿಲ್ಲ. ಎಲ್ಲಾ ಹಗುರ ಮೋಟಾರು ವಾಹನಗಳಿಗೆ ಟೋಲ್ನಿಂದ ವಿನಾಯಿತಿ ನೀಡಲಾಗುತ್ತಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದು ಮಧ್ಯ ರಾತ್ರಿಯಿಂದಲೇ ಈ ಕ್ರಮ ಜಾರಿಗೆ ಬರಲಿದೆ. ಮಹಾರಾಷ್ಟ್ರದಲ್ಲಿ ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಅದರ ಹೊಸ್ತಿಲಲ್ಲೇ ಸರ್ಕಾರ ತೆಗೆದುಕೊಂಡಿರುವ ಈ ಟೋಲ್ ವಿನಾಯಿತಿ ನಿರ್ಧಾರವನ್ನು ಎಲೆಕ್ಷನ್ ಗಿಮಿಕ್ ಎಂದು ವಿಪಕ್ಷಗಳು ಟೀಕಿಸಿವೆ.
ಮುಂಬೈ ನಗರವನ್ನು ಪ್ರವೇಶಿಸಲು ಇರುವ ಆರು ರಸ್ತೆಗಳಲ್ಲಿ ಟೋಲ್ ಬೂತ್ಗಳಿವೆ. ದಹಿಸಾರ್, ಆನಂದ್ ನಗರ್, ವೈಶಾಲಿ, ಐರೋಲಿ ಮತ್ತು ಮುಲುಂದ್ನಲ್ಲಿರುವ ಟೋಲ್ಗಳಲ್ಲಿ ನಾಳೆಯಿಂದ ಲೈಟ್ ಮೋಟಾರು ವಾಹನಗಳು ಟೋಲ್ ಕಟ್ಟುವ ಅಗತ್ಯ ಇರುವುದಿಲ್ಲ. ಮುಕ್ತವಾಗಿ ಸಂಚರಿಸಬಹುದಾಗಿದೆ.
2002ರಿಂದಲೂ ಈ ಸ್ಥಳಗಳಲ್ಲಿರುವ ಟೋಲ್ಗಳಲ್ಲಿ 45 ರೂನಿಂದ 75 ರೂವರೆಗೆ ಟೋಲ್ ವಸೂಲಿ ಮಾಡಲಾಗುತ್ತಿದೆ. 2026ರವರೆಗೂ ಈ ಟೋಲ್ ಜಾರಿಯಲ್ಲಿರುತ್ತದೆ. ಈಗ ಭಾರೀ ತೂಕದ ವಾಹನಗಳು ಮಾತ್ರವೇ ಟೋಲ್ ಕಟ್ಟಬೇಕಾಗುತ್ತದೆ. ಮುಂಬೈಗೆ ಸಾಗುವ ಈ ರಸ್ತೆಗಳಲ್ಲಿ ಒಟ್ಟು 3.5 ಲಕ್ಷ ವಾಹನಗಳು ಟೋಲ್ ಬಳಸುತ್ತವೆ. ಇವುಗಳಲ್ಲಿ 2.80 ಲಕ್ಷ ವಾಹನಗಳು ಎಲ್ಎಂವಿಗಳಾಗಿವೆ.
ತಾಂತ್ರಿಕವಾಗಿ 3,500 ಕಿಲೋಗಿಂತ ಕಡಿಮೆ ತೂಕ ಇರುವ ವಾಹನಗಳನ್ನು ಹಗುರ ಮೋಟಾರು ವಾಹನಗಳೆಂದು ಪರಿಗಣಿಸಲಾಗುತ್ತದೆ. ಕಾರುಗಳಿಂದ ಹಿಡಿದು ಸಣ್ಣ ಟ್ರಕ್ಗಳವರೆಗೆ ಎಲ್ಲಾ ರೀತಿಯ ವಾಹನಗಳು ಎಲ್ಎಂವಿಗಳಾಗಿವೆ.
ಈ ಟೋಲ್ ಬೂತ್ಗಳಲ್ಲಿ ವಾಹನಗಳು ಟೋಲ್ ಪಾವತಿಸಲು ಸರದಿಯಲ್ಲಿ ನಿಲ್ಲುತ್ತವೆ. ಕೆಲ ನಿಮಿಷಗಳ ವ್ಯಯವಾಗುತ್ತದೆ. ಈಗ ಟೋಲ್ ಅನ್ನೇ ರದ್ದು ಮಾಡಲಾಗಿರುವುದರಿಂದ ವಾಹನಗಳು ಅಡೆತಡೆಯಿಲ್ಲದೆ ಸಂಚರಿಸಬಹುದು.