ಕರಾವಳಿಯ ನಾಟಕ ತಂಡಗಳು ಆಗಾಗ ಮುಂಬಯಿಗಾಗಮಿಸಿ ಮುಂಬಯಿಯಲ್ಲಿ ಮಾತ್ರವಲ್ಲ ದೇಶ ವಿದೇಶಗಳಲ್ಲಿ ಹೊಸ ಹೊಸ ನಾಟಕಗಳಿಂದ ಕಲಾವಿದರ ಮೆಚ್ಚುಗೆ ಗಳಿಸಿ ರಂಗಭೂಮಿಯಲ್ಲಿ ಇತಿಹಾಸ ನಿರ್ಮಿಸುತ್ತಿರುದನ್ನು ಕಾಣಬಹುದು. ಆದರೆ ಅರಬ್ ಸಂಯುಕ್ತ ಸಂಸ್ತಾನದ ದುಬಾಯಿಯಲ್ಲಿ ನೆಲೆಸಿರುವ ತುಳುನಾಡಿನ ಕಲಾವಿದರು ಅಲ್ಲಿ ನಾಟಕ ತಂಡವನ್ನು ರಚಿಸಿ ದಶಕಗಳಿಂದ ಯು.ಎ.ಇ. ಮಾತ್ರವಲ್ಲದೆ ಮಂಗಳೂರಿನ ಪುರಭವನದಲ್ಲಿ “ಬಯ್ಯ ಮಲ್ಲಿಗೆ” ಹೌಸ್ ಫುಲ್ ಪ್ರದರ್ಶನ ನೀಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಸುತ್ತಿದ್ದು ಇದರ ಕೀರ್ತಿಯು ಖ್ಯಾತ ಕಲಾವಿದ ನಿರ್ದೇಶಕ ರಂಗ ಸಾರಥಿ ವಿಶ್ವನಾಥ್ ಶೆಟ್ಟಿ, ದುಬೈ ಮತ್ತವರ ತಂಡಕ್ಕೆ ಸಲ್ಲುತ್ತದೆ. ಈಗಾಗಲೇ ಯುಎಇ, ಮಂಗಳೂರು ಮಾತ್ರವಲ್ಲ, ಕುವೈತ್, ಕತಾರ್, ಓಮಾನ್ ನಲ್ಲಿ ಯಶಸ್ವೀ ಪ್ರದರ್ಶನ ನೀಡಿದನ್ ನಾಟಕ ತಂಡ “ಗಮ್ಮತ್ ಕಲಾವಿದೆರ್” ದುಬಾಯಿಯಿಂದ ಆಗಮಿಸಿ ಈ ತಿಂಗಳ 27 ರಂದು ಮಧ್ಯಾಹ್ನ 1 ಗಂಟೆಗೆ ಕುರ್ಲಾ ಪೂರ್ವ ಬಂಟರ ಭವನದಲ್ಲಿ ಪ್ರದರ್ಶನ ನೀಡೆಲಿದೆ.
ಬಹುಶ: ಮುಂಬಯಿಯ ತುಳು ಕನ್ನಡಿಗರ ಇತಿಹಾಸದಲ್ಲೇ ಪ್ರಥಮ ಬಾರಿ ದುಬಾಯಿ ಯಿಂದ ನಾಟಕ ತಂಡವೊಂದು ಮುಂಬಯಿಗಾಗಮಿಸಿ ಪ್ರದರ್ಶನ ನೀಡುತ್ತಿದ್ದು ಇದು ಕನ್ನಡ ಸಂಘ ಸಾಯಾನ್ ನ ಕಾರ್ಯಕ್ರಮವೊಂದರಲ್ಲಿ ಸಂಘದ ಅಧ್ಯಕ್ಷ ಅಂತರಾಷ್ಟ್ರೀಯ ಮಟ್ಟದ ಖ್ಯಾತ ಜ್ಯೋತಿಷ್ಯರೂ ಆದ ಡಾ. ಎಂ. ಜೆ. ಪ್ರವೀಣ್ ಭಟ್ ನೇತೃತ್ವದಲ್ಲಿ ನಡೆಯಲಿದೆ.
ಈ ನಾಟಕದಲ್ಲಿ ದುಬಾಯಿಯಲ್ಲೇ ನೆಲೆಸಿರುವ, ದುಬಾಯಿಯ ವಿವಿಧ ಸಂಘ ಸಂಸ್ಥೆಗಳಲ್ಲಿ ಉನ್ನತ ಜವಾಬ್ಧಾರಿಯೊಂದಿಗೆ ಕ್ರೀಯಾಶೀಲರಾಗಿರುವ ವ್ಯಕ್ತಿಗಳು ಅಭಿನಯಿಸುತ್ತಿರುವುದು ಒಂದು ವಿಶೇಷತೆಯಾಗಿದ್ದರೆ ಕೆಲವರು ಈಗಾಗಲೇ ಚಲನಚಿತ್ರದಲ್ಲಿ ಅಭಿನಯಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಂದೀಪ್ ಶೆಟ್ಟಿ ರಾಯಿ ರಚಿಸಿದ, ರಂಗ ಸಾರಥಿ ವಿಶ್ವನಾಥ್ ಶೆಟ್ಟಿ, ದುಬೈ ನಿರ್ದೇಶಿಸಿ ಅಭಿನಯಿಸುತ್ತಿರುವ ಈ ನಾಟಕ ಮುಂಬಯಿಯ ಹಿರಿಯ ಕಲಾವಿದ ಜಗದೀಶ ಶೆಟ್ಟಿ ಕೆಂಚನಕೆರೆ ಯವರ ಸಂಪೂರ್ಣ ಸಹಕಾರದೊಂದಿಗೆ, ದುಬಾಯಿಯ ಹವ್ಯಾಸಿ ಕಲಾವಿದರಾದ ಸುವರ್ಣ ಸತೀಷ್ ಪೂಜಾರಿ, ಐರಿನ್ ಸಿಂಥಿಯಾ ಮೆಂಡೋನ್ಸಾ, ದೀಪ್ತಿ ಶೆಟ್ಟಿ, ದೀಕ್ಷ ರೈ, ಗೌತಮ್ ಬಂಗೇರ, ಗಿರೀಶ್ ನಾರಾಯಣ್, ಜಸ್ಮಿತಾ ವಿವೇಕ್, ಜೆಸ್ ಬಾಯಾರ್, ಜೆನಿತ್ ಸಿಕ್ವೇರಾ, ಮೋನಪ್ಪ ಪೂಜಾರಿ, ರಮೆಶ್ ಸುವರ್ಣ, ರೂಪೇಶ್ ಶೆಟ್ಟಿ, ಸಮಂತಾ ಗಿರೀಶ್, ಸಂದೀಪ್ ಬರ್ಕೆ, ಸನ್ನಿಧಿ ವಿಶ್ವನಾಥ ಶೆಟ್ಟಿ, ವಾಸು ಕುಮಾರ್ ಶೆಟ್ಟಿ ಅಭಿನಯಿಸಲಿರುವರು. ಶುಭಕರ್ ಬೆಳಪು ಸಂಗೀತ ನೀಡಲಿರುವರು.
ರಂಗ ಸಾರಥಿ ವಿಶ್ವನಾಥ್ ಶೆಟ್ಟಿ : ರಂಗ ನಟ, ನಿರ್ದೇಶಕ, ಕಾರ್ಯಕ್ರಮ ಸಂಯೋಜಕ, ಸಮಾಜ ಸೇವಕ ವಿಶ್ವನಾಥ್ ಶೆಟ್ಟಿ ತನ್ನ ಬಾಲ್ಯವನ್ನು ತಂದೆಯೊಂದಿಗೆ ಮುಂಬಯಿಯಲ್ಲಿ ಕಳೆದಿದ್ದರು. ನಂತರ ಊರಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ 1995 ರಂದು ದುಬಾಯಿ ಸೇರಿದರು. ದುಡಿಮೆಯೊಂದಿಗೆ ಸಮಾಜ ಸೇವೆ ಹಾಗೂ ಕಲಾಸೇವೆಯನ್ನು ಮುಂದುವರಿಸಿ “ಗಮ್ಮತ್ ಕಲಾವಿದೆರ್” ಮೂಲಕ ಉದಯೋನ್ಮುಖ ಪ್ರತಿಭಾವಂತ ಕಲಾವಿದರಿಗೆ ಅವಕಾಶ ನೀಡುತ್ತಾ ದುಬಾಯಿಯಲ್ಲಿ ಒರಿಯಾರ್ದೋರಿ ಅಸಲ್, ಕಾಸ್ ಒಲ್ಡಿಪರ್, ಕೋಟಿ ಚೆನ್ನಯ, ಗಂಗುನ ಗಮ್ಮತ್, ಬೆನ್ಪಿನೋರಿ ತಿನ್ಪಿನೋರಿ, ಎಡ್ಡೆಡುಪ್ಪುಗ ಇತ್ಯಾದಿ ನಾಟಕದಲ್ಲಿ ಅಭಿನಯಿಸಿದ್ದಾರೆ. ಇವರು ನಿರ್ದೇಶನ ಮಾಡಿದ ಕೆಲವು ತುಳು ನಾಟಕಗಳು ಗಂಗುನ ಗಮ್ಮತ್, ಬಿತ್ತಿಲ್ದು ಉಲ್ಲ ಕೆಲವು ಸೊತ್ತುಲು, ಮಾಸ್ಟ್ರು ಮನಿಪೂಜೆರು, ಬೆನ್ಪಿನೋರಿ ತಿನ್ಪಿನೋರಿ, ಈ ಪೊರ್ಲುದಾಯೆ ಪೊರ್ಲುತೂವಡೆ, ಪೊರ್ಲುತೂಪೆರ್, ಎಡ್ಡೆಡುಪ್ಪುಗ, ನಂಕ್ ಮಾತೆರ್ಲ ಬೋಡು, ತೆಲಿಕೆದ ಬರ್ಸೊಲು, ಬಯ್ಯಮಲ್ಲಿಗೆ, ದಾದ ಮಲ್ಪೆರೆ ಆಪುಂಡು, ಕುಟುಂಬ, ವಾ ಗಳಿಗೆ ಪುಟ್ಟುದನಾ. ನಿರ್ದೇಶಿಸಿದ ಕೊಂಕಣಿ ನಾಟಕಗಳು ಚಿಂತುನ್ ಪೊಲೆ, ಪೌರಾಣಿಕ ನಾಟಕ ನಿರ್ದೇಶನ ಬೊಕ್ಕ ನಟನೆ ದೇವುಪೂಂಜೆ, ಸತ್ಯದಪ್ಪೆ ಸಿರಿ, ನಟಿಸಿದ ಕನ್ನಡ ನಾಟಕ ನಾಗಮಂಡಲ, ತವರೂರಲ್ಲಿ ಮಾಮುಗೊಂಜಿ ಮರ್ಮಲ್, ಮದುಮಾಲತಿ, ಊಡಾಲ್ಡ ಉರಿ, ಇಂಚಂಡ ಎಂಚ, ಸತ್ಯ ತೆರಿನಗ, ಸೈತಿಬೊಕ್ಕ ಬರುವೆರ್, ಆರತಿ, ಕುಂಟೆ ರಾಮೆ, ಕಡಿಯಂದಿ ಕರಿಮಣಿ, ಏರ್ ತುಯಿನಿ, ಅನ್ನು ಬೈದೆನ, ಜಾರು ಜಾಗ್ರತೆ ಈ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಯಕ್ಷಗಾನದಲ್ಲಿ ಕೋಟಿ ಚೆನ್ನಯ, ದೇವಿಮಹಾತ್ಮೆ, ಕಟೀಲು ಕ್ಷೇತ್ರ ಮಹಿಮೆ ಯಶಸ್ವಿಯಾಗಿ ಮಿಂಚಿದ್ದಾರೆ. ಅಲ್ಲದೆ ಪಿಲಿ ವೇಷ ತುಳು , ಕನ್ನಡ ಸ್ಕಿಟ್ ಹೀಗೇ ಬಹುಮುಖ ಪ್ರತಿಭೆಯ ಕಲಾವಿದರಾದ ವಿಶ್ವನಾಥ ಶೆಟ್ಟಿಯವರು ಹೆಚ್ಚಿನ ಪ್ರಚಾರದಲ್ಲಿಲ್ಲದ ಎಲೆಮರೆಯ ಕಲಾವಿದರಾಗಿದ್ದರೂ ಮಂಗಳೂರಿನ ರಂಗಚಾವಡಿ/ಲಕುಮಿ ತಂಡದವರಿಂದ ರಂಗ ಸಾರಥಿ ಬಿರುದು ಗಳಿಸಿದ್ದಾರೆ. ಇವರು ಕಲಾ ಸೇವೆಯೊಂದಿಗೆ ಸಮಾಜ ಸೇವೆ ಮಾಡುತ್ತಿದ್ದು ಬಂಟರ ಸಂಘ ದುಬಾಯಿಯ, ಯಕ್ಷ ಮಿತ್ರರು, ಪಟ್ಲ ಫೌಂಡೇಶನ್ ಯುಎಇ ಘಟಕ, ಕರ್ನಾಟಕ ಸಂಘ ಶಾರ್ಜಾ ಸೇರಿ ಹಲವಾರು ಧಾರ್ಮಿಕ ಹಾಗೂ ಸಮಾಜಿಕ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿದ್ದಾರೆ. ತನ್ನ ಬಾಲ್ಯವನ್ನು ಕಳೆದ ಮುಂಬಯಿ ಮಹಾನಗರದಲ್ಲಿ ಪ್ರದರ್ಶನ ನೀಡುವ ಕನಸು ನನಸಾಗಿಸುದರೊಂದಿಗೆ, ತನ್ನ ಸಂಸ್ಥೆಯ ಮೂಲಕ ಸಾಗರೋತ್ತರದಲ್ಲಿ ಇನ್ನೂ ಹಲವಾರು ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಅವಕಾಶ ನೀಡುವಂತಾಗಲಿ.