32 C
Mumbai
March 7, 2026
Mumbai News Kannada
ಲೇಖನ

ಬಲೀಂದ್ರ ದೇವರು ತಮ್ಮ ರಾಜ್ಯಕ್ಕೆ ತಾವೇ ಬಂದ್ರು ಹೊಲಿಯೇ‌ ಬಾ… ಕೂ…ಕೂ…ಕೂ….





ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಎಲ್ಲೆಡೆ ಸಾಲು ಸಾಲು ದೀಪಗಳರಂಗು , ಹೊಂಬಣ್ಣದ ‌ಬೆಳಕು ಅಜ್ಞಾನದ ಅಂದಕಾರವ ತೊಳೆದು ಸುಜ್ಞಾನದ ದೀವಿಗೆಯನ್ನು ಬೆಳಗುವ ಬೆಳಕಿನ ಹಬ್ಬ ದೀಪಾವಳಿ ಹಲವು ವೈವಿಧ್ಯತೆಗಳಿಂದ‌ ಗಮನ ಸೆಳೆಯಲು ಮತ್ತೆ ಬಂದಿದೆ ಮನೆ ಮನಗಳ ಬೆಳಗಿಸುವ ಸಂಭ್ರಮದ ಹಬ್ಬ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ವರೂಪದ ಬೆಳಕಿನ ‌ಹಬ್ಬ ನಮ್ಮ ದೇಶ ಮಾತ್ರವಲ್ಲದೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ.

ಬೆಳಕಿನ ಹಬ್ಬ ದೀಪಾವಳಿ ಖುಷಿ ತರುವ ಹಬ್ಬ. ತಳಿರು ತೋರಣಗಳ ಮೆರಗು,ಸಿಹಿ ತಿಂಡಿ, ಪಟಾಕಿ ಹಾರಿಸುವ ಸಂಭ್ರಮ, ರಂಗೋಲಿಗಳ ಚಿತ್ತಾರ, ಹಣತೆದೀಪದ ಜಗಮಗ ಹೊಂಬೆಳಕಿನಲ್ಲಿ ಅಮಾವಾಸ್ಯೆ ಯ‌‌‌ ಕತ್ತಲು ಕಳೆದು ಜಗವ ಬೆಳಗುವ ಪ್ರಕಾಶದ ಆಗಮನ. ದೀಪಾವಳಿ ಸಮೀಪಿಸುತ್ತಿದ್ದಂತೆ ಮಾರುಕಟ್ಟೆ ರಂಗೇರುತ್ತದೆ. ‌ವೈವಿಧ್ಯಮಯ ದೀಪಗಳು, ಝಗಮಗಿಸುವ ವಿದ್ಯುತ್ ದೀಪ ಅಲಂಕಾರ ಅಷ್ಟೇ ಅಲ್ಲದೆ ಆಕರ್ಷಕ ಗೂಡುದೀಪ (ಆಕಾಶ‌ ಬುಟ್ಟಿ), ಮಣ್ಣಿನ ಹಣತೆಗಳು, ತೋರಣ, ಗೃಹಾಲಂಕಾರದ ವಸ್ತುಗಳ ಸಿರಿ ಸಿಂಗಾರ ಗ್ರಾಹಕರನ್ನು ಆಕರ್ಷಿಸುತ್ತದೆ. ನಲಿವಿನ ಸಂಕೇತದ ಕತ್ತಲೆಯಲ್ಲಿ ‌ಬೆಳಕಿನ‌ ಚಿತ್ತಾರವನ್ನು ಮೂಡಿಸುತ್ತಾ ಸಂಪ್ರದಾಯಿಕ ಉಡುಗೆಗಳ ಸಿಂಗಾರದಲ್ಲಿ ಮನೆ ಮನೆಗಳಲ್ಲಿ ನಲಿದಾಡುವ ಮಕ್ಕಳು ಹಿರಿಯ ಕಿರಿಯರೆಲ್ಲ ಒಂದಾಗಿ ಆಚರಿಸುವ ಹಬ್ಬ. ದೀಪದಲ್ಲಿ ಬೆಂಕಿಯೂ ಇದೆ ಬೆಳಕು ಇದೆ ಆಯ್ಕೆ ನಮ್ಮದು. ಹಬ್ಬದ ಆಚರಣೆಗೆ ಹೇಗೆ ಎಷ್ಟು ಮಹತ್ವ ‌ಕೊಡಬೇಕೆಂದು ಶ್ರದ್ಧೆ, ಭಕ್ತಿ ,ಸಡಗರದಿಂದ ಆಚರಿಸ‌ಬೇಕೆ‌‌‌‌ ಹೊರತು ಅಬ್ಬರದಿಂದ ಅಲ್ಲ.

ಗ್ರಾಮೀಣ ಭಾಗದಲ್ಲಿ ದೀಪಾವಳಿ

ಗ್ರಾಮೀಣ ಭಾಗದಲ್ಲಿ ದೀಪಾವಳಿ ‌ಸೊಗಡೇಬೇರೆ. ಹಳ್ಳಿಗಳಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲು‌ ಬಲೀಂದ್ರನ ಪೂಜಿಸಬೇಕೆಂಬ ನಂಬಿಕೆ‌ ಇದೆ.‌ಕೃಷಿ ಪ್ರಧಾನವಾದ ನಾಡಿನಲ್ಲಿ ‌ಬಲೀಂದ್ರನನ್ನು ಭೂಮಿಯ ಒಡೆಯ ಎನ್ನುವ ‌ನಂಬಿಕೆಯೊಂದಿಗೆ ಪೂಜಿಸುತ್ತಾರೆ. ರಾಜ ಬಲೀಂದ್ರ ‌ತನ್ನ‌ ಸಮೃದ್ಧ ಸಾಮ್ರಾಜ್ಯದ ಸಿರಿ ‌ಸೊಬಗನ್ನು ನೋಡಲು ಬಂದಾಗ . ” ಹೊಲಿ ಕೊಟ್ರೊ ಬಲಿ ತಗೋಂಡ್ರೊ ಬಲೀಂದ್ರ‌ದೇವರು ತಮ್ಮ ರಾಜ್ಯಕ್ಕೆ ತಾವೇ ಬಂದ್ರು‌ ಹೊಲಿಯೆ ಬಾ ಕೂ…ಕೂ…ಕೂ. ಎಂದು ಬಲೀಂದ್ರ ನನ್ನು ಬಣ್ಣಿಸುತ್ತಾ..ದೀಪಾವಳಿಯ ಮುಖ್ಯ ಆಚರಣೆ ಬಲೀಂದ್ರ ‌ಪೂಜೆಯಂದು ಹಳ್ಳಿಗಳಲ್ಲಿ ಕಾಡು ಹೂ, ಕೈತೋಟಗಳಲ್ಲಿ‌ ಸಿಗುವ‌‌ ಕೆಲ‌ ಬಗೆಯ‌ ಹೂ ನಿರ್ದಿಷ್ಟ ವಾದ ಸೊಪ್ಪು ಸಂಗ್ರಹಿಸಿ ತುಂಡರಿಸಿ , ಮನೆಯಲ್ಲಿ ‌ಕುಟ್ಟಿದ ಅವಲಕ್ಕಿ, ಉದ್ದಿನ ಹಿಟ್ಟು ಹಾಗೂ ಅರಶಿನ‌ ಎಲೆಯ‌ ಹಿಟ್ಟುನ್ನು ಬೇಸಾಯ ‌ಮಾಡುವ‌ ಗದ್ದೆಗಳಿಗೆ ಹಾಕಿ ತೆಂಗಿನ ಓಲೆ ಸೂಡಿ ಹಚ್ಚಿ ನೇಣೆ ಕೋಲು ದೀಪಹಚ್ಚಿದ ದೀಪಾಲಂಕಾರದಲ್ಲಿ ಭೂಮಿಗೆ ಇಳಿದು ಬರುತ್ತಾನೆ ಬಲೀಂದ್ರ ಎಂಬ ನಂಬಿಕೆ ಇದೆ. ಮಣ್ಣಿನ ಹಣತೆಯಲ್ಲಿ ಎಣ್ಣೆ ಬತ್ತಿ ಹಾಕಿ ದೇದೀಪ್ಯಮಾನವಾಗಿ ಬೆಳಗಿ ಆಂಧಕಾರವನ್ನು‌ ತೊಲಗಿಸುವ ದೀಪ ಬೆಳಗಿಸಿ‌ ಹಳ್ಳಿಗಳಲ್ಲಿ ಇಂದಿಗೂ ಗೆರಸಿಯಲ್ಲಿ ಧಾನ್ಯವಿರಿಸಿ ಮಣ್ಣು ಹಣತೆ ಹಚ್ಚಿ‌ ದನ‌ ಕರುಗಳಿಗೆ ತೋರಿಸುತ್ತಾರೆ. ಕೃಷಿ ಉಪಕರಣ, ಹೊಲಿರಾಶಿಗೆ ದೀಪತೋರಿಸುವ ಕ್ರಮವಿದ್ದು ಬಲಿ ಚಕ್ರವರ್ತಿಯ‌ ದಾನ, ವೀರಗುಣವನ್ನು ನೆನೆಸುವ ಆಚರಣೆಯ ದಿನವಿದು ವಿಷ್ಣು ವಾಮನ ರೂಪದಲ್ಲಿ ಬಂದು ಭೂದಾನ ರೂಪದಲ್ಲಿ ಮೂರು ಅಡಿ ಜಾಗದಾನವಾಗಿ ಕೇಳಿ ಬಲೀಂದ್ರನನ್ನು ಪಾತಾಳಕ್ಕೆ ತಳ್ಳುವಾಗ ಆಕಾಶಕ್ಕೆ ಒಂದು ಹೆಜ್ಜೆ ,ಭೂಮಿಯೇ ಇನ್ನೊಂದು ಹೆಜ್ಜೆ ಮತ್ತೊಂದು ಹೆಜ್ಜೆಗೆ ಸ್ಥಳವಿಲ್ಲದಾಯಿತು ಆಗ ಮೂರನೇ ಅಡಿ ಎಲ್ಲಿಡಲಿ ಎಂದ ವಾಮನ ರೂಪದ ವಿಷ್ಣುವಿನ ಪ್ರಶ್ನೆಗೆ ಬಲಿಯು ತನ್ನ ತಲೆಯನ್ನು ಒಡ್ಡುವನು. ಹಾಗೂ ಭೂಲೋಕದಲ್ಲಿ ವರ್ಷಕ್ಕೊಮ್ಮೆ ಜನರು ನನ್ನನ್ನು ಸ್ಮರಿಸುವಂತೆ‌ಮಾಡು ಎಂದು ಪ್ರಾರ್ಥಿಸುತ್ತಾನೆ. ಈ‌ ಬಲಿ ದಾನದ ಪ್ರತೀಕವಾಗಿ ಬಲೀಂದ್ರನಿಗೆ ಪೂಜೆ ಎನ್ನುವ ‌ನಂಬಿಕೆ‌.
ಶ್ರೀ ರಾಮಚಂದ್ರ ಹದಿನಾಲ್ಕು ವರ್ಷಗಳ ವನವಾಸಮುಗಿಸಿ ಅಯೋಧ್ಯೆಗೆ ಹಿಂದಿರುಗುವಾಗ ಪ್ರಜೆಗಳು ಬಂಗಾರದ ಕಲಶವನ್ನು ಮುತ್ತು ‌ರತ್ನಗಳಿಂದ ಅಲಂಕರಿಸಿ ಮನೆ ಬೀದಿಗಳಲ್ಲಿ ಇಟ್ಟು ಪೂಜಿಸಿ ದೀಪೋತ್ಸವನ್ನು ಆಚರಿಸಿದರು ಎನ್ನುವ ಇನ್ನೊಂದು ಕಥೆ ಇದೆ . ನರಕ ಚತುರ್ದಶಿ, ಬಲೀಂದ್ರ ಪೂಜೆ, ತುಳಸಿ ಪೂಜೆ, ಅಮಾವಾಸ್ಯೆ ಇರುವ ಸಮಯದಲ್ಲಿ ಸಂಪತ್ತಿನ ಅಧಿದೇವತೆಯಾದ ಧನಲಕ್ಷ್ಮಿ ಪೂಜೆ ನಡೆಯುತ್ತದೆ. ಲಕ್ಷ್ಮಿ ಪೂಜೆಗೆ ದೀಪಾವಳಿಯ ಅಮಾವಾಸ್ಯೆಯೇ ಶ್ರೇಷ್ಠ ‌ಎನ್ನುವ ಶಾಸ್ತ್ರ ವಿದೆ.ಲಕ್ಷ್ಮಿ ಪೂಜೆಗಾಗಿ ಮನೆಯನ್ನು ಒಪ್ಪ ಓರಣವಾಗಿ ಸಿಂಗರಿಸಲಾಗುತ್ತದೆ. ವ್ಯಾಪಾರಸ್ಥರಿಗೆ ಅಂಗಡಿಗಳಲ್ಲಿ ಸಂಭ್ರಮದ ಲಕ್ಷ್ಮಿ ಪೂಜೆ. ದೀಪಾವಳಿ ಸಡಗರಕ್ಕೆ ಮಾರುಕಟ್ಟೆ ಸಜ್ಜಾಗುತ್ತದೆ. ದೀಪಾವಳಿ ಪ್ರಯುಕ್ತ‌ ಗೂಡುದೀಪ, ಬಣ್ಣದದೀಪಗಳು, ಹಣತೆಗಳು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತದೆ‌.

ನರಕ ಚತುರ್ದಶಿಗೆ‌ ಹಿಂದಿನ ದಿನ ರಾತ್ರಿ ‌ಸ್ನಾನದ ಹರಿ, ಹಂಡೆ ಶುದ್ಧ ‌ಮಾಡಿ‌ ಹರಿಯ‌ ಮೇಲೆ ಚಿತ್ತಾರಗಳನ್ನು ‌ಬಿಡಿಸಿ ಅದಕ್ಕೆ ‌ಹೂವಿನ‌ ಮಾಲೆ‌ಹಾಕಿ‌ ಸಿಂಗರಿಸಿ. ತ್ರಿಲೋಕದಲ್ಲಿ ಭಯಂಕರನಾದ ದುರಾಹಂಕಾರಿ‌ ನರಕಾಸುರ ಎಂಬ ಅಸುರನನ್ನು ಶ್ರೀ ಕೃಷ್ಣ ಸಂಹರಿಸಿದ‌ ದಿನವನ್ನು‌ ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ. ಅಂದು ಬೆಳಿಗ್ಗೆ ಎಣ್ಣೆ ಹಚ್ಚಿ ಸ್ನಾನ ಮಾಡುತ್ತಾರೆ. ಸುಮಾರು ‌ಮೂರು‌ದಶಕಗಳ ಹಿಂದಿನ ದೀಪಾವಳಿ ಆಚರಣೆ ಸೊಬಗು ಇಂದು ಮಾಯವಾಗಿದೆ. ಆದರೂ ಧನತ್ರಯೋದಶಿ, ನರಕ ಚತುರ್ದಶಿ, ಲಕ್ಷ್ಮಿ ಪೂಜೆ, ಗೋಪೂಜೆ, ಬಾವುಬೀಜ್ ಹೀಗೆ ದೀಪಾವಳಿ ಸಂಭ್ರಮ ಅವರವರ ಅನುಕೂಲಕ್ಕೆ ತಕ್ಕಂತೆ ಆಚರಿಸಲಾಗುತ್ತದೆ.

ಗೋಪೂಜೆ = ದೀಪಾವಳಿಯಲ್ಲಿ ಗೋಪೂಜೆ ಅಗ್ರಸ್ಥಾನವಿದ್ದು ಬಲಿಪಾಡ್ಯದ ದಿನ ಗೋವುಗಳ ಮೈತೊಳೆದು ಕೊರಳಿಗೆ ಹೂವಿನ ಹಾರಹಾಕಿ ಮೈಗೆ ರಂಗೋಲಿ ಹಚ್ಚಿ ಪೂಜಿಸಲಾಗುತ್ತದೆ. ಗೋಪೂಜೆಗೊಂದು ಪುರಾಣ ಹಿನ್ನೆಲೆಯಿದೆ. ಶ್ರೀ ಕೃಷ್ಣ ಬೃಂದಾವನಕ್ಕೆ ಬರುವ ಮೊದಲು ಅಲ್ಲಿನ ಜನರೆಲ್ಲ ದೇವೇಂದ್ರನನ್ನು ಪೂಜಿಸುತ್ತಿದ್ದರು. ಗೋವರ್ಧನ ಪರ್ವತದಿಂದ ಸಕಲ ಅನುಕೂಲ ಪಡೆಯುತ್ತಿರುವ ಜನರು ಇಂದ್ರನ್ನು ಪೂಜಿಸದೆ ಗೋವರ್ಧನ ಗಿರಿಯನ್ನು ಪೂಜಿಸುವ ವ್ಯವಸ್ಥೆ ‌ಮಾಡಿದ .ಕೋಪಗೊಂಡು ಇಂದ್ರ ಒಂದೇ ಸಮನೆ ಭಾರಿ ಮಳೆ ಸುರಿಸಿ ಜಲಪ್ರಳಯ ಉಂಟು ಮಾಡಿ ಜನರೆಲ್ಲಾ ಕಂಗಲಾದಾಗ ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಗೋವುಗಳಿಗೆ ಹಾಗೂ ಅಲ್ಲಿನ ವಾಸಿಗಳಿಗೆ ಆಶ್ರಯ ನೀಡಿದ . ಗೋವರ್ಧನ ಗಿರಿ ಎತ್ತಿ ಗೋಕುಲವನ್ನು ರಕ್ಷಿಸಿದ ನೆನಪಿಗಾಗಿ ‌ಗೋವುಗಳ‌ ಪೂಜೆ ಇಂದಿಗೂ ನಡೆಯುತ್ತದೆ.

ದೀಪಾವಳಿಯಲ್ಲಿ ತುಳಸಿ ಪೂಜೆಗೂ ಮಹತ್ವವಿದ್ದು ಹೊಸ ಭತ್ತದಲ್ಲಿ ಮಾಡಿದ ಅವಲಕ್ಕಿಯನ್ನು ತುಳಸಿ ಕಟ್ಟೆಗೆ ಪಂಚಕಜಾಯ ಮಾಡಿ ಇಡಲಾಗುತ್ತದೆ. ಹೊಲಿ(ಭತ್ತದ ರಾಶಿ) ಪೂಜೆಯನ್ನು ವಿಶೇಷ ರೀತಿಯಲ್ಲಿ‌ ಪೂಜಿಸುವುದು ರೂಢಿ .ದೀಪಾವಳಿ ಎಂದರೆ ಪಟಾಕಿ ಇದ್ದೆ ಇರುತ್ತದೆ. ವಾಯು ಮಾಲಿನ್ಯ ಕಡಿಮೆಗೊಳಿಸಲು ಪಟಾಕಿ ರಹಿತ ದೀಪಾವಳಿ ಆಚರಣೆಗೆ ಜನರನ್ನು ಸರಕಾರ ವಿನಂತಿಸಿದೆ. ಪಟಾಕಿ ಸಿಡಿಸುವಂತಿಲ್ಲ ಎನ್ನುವ ಸುದ್ದಿ ‌ಚರ್ಚೆಗೂ ಕಾರಣವಾಗಿದೆ. ದೊಡ್ಡ ಹಬ್ಬ ಎಂದು ಕರೆಯುವ ದೀಪಾವಳಿ ಪರಿಸರ ಸ್ನೇಹಿ ಹಬ್ಬವಾಗಿ ನಮ್ಮ ಸಂಪ್ರದಾಯದ ಸಂಸ್ಕೃತಿಯ ‌ಪ್ರತೀಕವಾಗಿ ದೀಪದ ಪವಿತ್ರ ಶಕ್ತಿ ಎಲ್ಲಡೆ ಪಸರಿಸಲಿ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಲತಾ‌ ಸಂತೋಷ್ ಶೆಟ್ಟಿ‌ ಮುದ್ದುಮನೆ



Related posts

ಭಿಕ್ಷುಕ,ಬೀದಿ ಮಗು ಮತ್ತು ಬದುಕು

Mumbai News Desk

ದೀಪಾವಳಿ …….ಬೆಳಕಿನೆಡೆಗೆ ಬದುಕು

Mumbai News Desk

ಬಡತನದ ಬೇಗೆಯಲ್ಲಿ ಹೂವಾಗಿ ಅರಳಿದ ಸುನೀಲ ದಂಗಾಪೂರ

Mumbai News Desk

ಶತಮಾನೋತ್ಸವ ಸಂಭ್ರಮದಲ್ಲಿ ಮುಲ್ಕಿ ಮಾನಂಪಾಡಿ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ.

Mumbai News Desk

ಸಹಸ್ರಾರು ಮಂದಿಯ ಹೃದಯ ದೇವತೆ ಲೀಲಾವತಿ ಜಯ ಸುವರ್ಣ

Mumbai News Desk

ಸಂಘಟಕ, ರಂಗ ನಟ, ಭಾಸ್ಕರ ಸುವರ್ಣ ಸಸಿಹಿತ್ಲುರವರಿಗೆ ವಿಶ್ವೇಶತೀರ್ಥ ಜೀವಮಾನ ಪ್ರಶಸ್ತಿ*

Mumbai News Desk